ಬಲ್ಕಿಸ್ ಬಾನು ತೀರ್ಪಿನಿಂದ ನ್ಯಾಯಾಂಗದ ಮೇಲೆ ಹೆಚ್ಚು ವಿಶ್ವಾಸ

| Published : Jan 28 2024, 01:18 AM IST

ಬಲ್ಕಿಸ್ ಬಾನು ತೀರ್ಪಿನಿಂದ ನ್ಯಾಯಾಂಗದ ಮೇಲೆ ಹೆಚ್ಚು ವಿಶ್ವಾಸ
Share this Article
  • FB
  • TW
  • Linkdin
  • Email

ಸಾರಾಂಶ

ಬಲ್ಕಿಸ್ ಬಾನು ಪ್ರಕರಣದ ತೀರ್ಪು ನ್ಯಾಯಾಂಗದ ಮೇಲೆ ಹೆಚ್ಚು ವಿಶ್ವಾಸ ಮೂಡುವಂತೆ ಮಾಡಿದೆ.

ಚಿತ್ರದುರ್ಗ: ಬಲ್ಕಿಸ್ ಬಾನು ಪ್ರಕರಣದ ತೀರ್ಪು ನ್ಯಾಯಾಂಗದ ಮೇಲೆ ಹೆಚ್ಚು ವಿಶ್ವಾಸ ಮೂಡುವಂತೆ ಮಾಡಿದೆ ಎಂದು ಹಿರಿಯ ನ್ಯಾಯವಾದಿ ಹಾಗೂ ಚಿನ್ಮುಲಾದ್ರಿ ಸಾಹಿತ್ಯ ವೇದಿಕೆ ಗೌರವಾಧ್ಯಕ್ಷ ಬಿ.ಕೆ.ರಹಮತ್‍ವುಲ್ಲಾ ಹೇಳಿದರು.

ಕನ್ನಡ ಸಾಹಿತ್ಯ ಸಂಸ್ಕೃತಿ ಅಭಿವೃದ್ಧಿ ಟ್ರಸ್ಟ್, ಚಿನ್ಮುಲಾದ್ರಿ ಸಾಹಿತ್ಯ ವೇದಿಕೆ ಸಹಯೋಗದೊಂದಿಗೆ ಪತ್ರಕರ್ತರ ಭವನದಲ್ಲಿ ಶನಿವಾರ ನಡೆದ ಅಖಿಲ ಕರ್ನಾಟಕ 7ನೇ ಚುಟುಕು ಸಾಹಿತ್ಯೋತ್ಸವ, ವಿಚಾರ ಸಂಕಿರಣ, ಕವಿಗೋಷ್ಠಿ, ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಶಾಸಕಾಂಗ, ಕಾರ್ಯಾಂಗದ ಮೇಲೆ ಜನ ನಂಬಿಕೆ ಕಳೆದುಕೊಳ್ಳಿತ್ತಿರುವ ಇಂದಿನ ದಿನಮಾನಗಳಲ್ಲಿ ನ್ಯಾಯಾಲಯ ಅತ್ಯುತ್ತಮ ತೀರ್ಪುಗಳನ್ನು ನೀಡುತ್ತಿದೆ ಎಂದರು.

ಕಲೆ, ಸಾಹಿತ್ಯ, ನೃತ್ಯ, ಜಾನಪದ ಚಟುವಟಿಕೆ ಕಡಿಮೆಯಾಗುತ್ತಿರುವುದರಿಂದ ಸರ್ಕಾರ ಪ್ರೋತ್ಸಾಹ ನೀಡಬೇಕು. ಪ್ರಪಂಚದಲ್ಲಿ ಮೊದಲು ಮನುಷ್ಯ ಜನ್ಮತಾಳಿದಾಗ ವ್ಯಾಜ್ಯ, ಅರಾಜಕತೆ ಉಂಟಾಯಿತು. ಆಗ ಮುಖಂಡರು, ಧರ್ಮಗುರುಗಳು ಪೂಜೆ, ಪುನಸ್ಕಾರದ ಮೂಲಕ ಸಮಾಜ ಸುಧಾರಣಗೆ ಶ್ರಮಿಸಿದರು. ಇತ್ತೀಚಿನ ದಿನಗಳಲ್ಲಿ ಹಿಂದಿನ ಕಾಲದ ಕಲೆಗಳು ನಶಿಸುತ್ತಿವೆ. ಡಾ.ರಾಜ್‍ಕುಮಾರ್‌ ಅವರ ಕಾಲದಲ್ಲಿನ ಚಿತ್ರಗಳು ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಿತ್ತು. ಈಗ ಮುಂಗಾರು ಮಳೆ, ಚೆಲುವಿನ ಚಿತ್ತಾರದಂತ ಚಿತ್ರಗಳು ಮೂಡಿ ಬರುತ್ತಿವೆ. ಪೋಕ್ಸೋ ಕೇಸ್‍ಗಳು ಜಾಸ್ತಿಯಾಗುತ್ತಿದೆ. ಎಲ್ಲರೂ ಮೊಬೈಲ್ ಲೋಕದಲ್ಲಿ ಮುಳುಗಿದ್ದಾರೆಂದು ವಿಷಾದಿಸಿದರು.

ಸಂಶೋಧಕ ಡಾ.ಬಿ.ರಾಜಶೇಖರಪ್ಪ ಮಾತನಾಡಿ, 11ನೇ ಶತಮಾನ ಕಲ್ಯಾಣ ಚಾಲುಕ್ಯರ ಕಾಲದಲ್ಲಿಯೇ ಚಿತ್ರದುರ್ಗದಲ್ಲಿ 7 ಸುತ್ತಿನ ಕೋಟೆಯಿತ್ತು. ಕೋಟೆಯನ್ನು ಬಲಾಢ್ಯಗೊಳಿಸಿದವರು ಪಾಳೆಯಗಾರರು. ಹಿರೇಗುಂಟನೂರು, ಹುಲ್ಲೂರಿನಲ್ಲಿರುವ ಶಾಸನದಲ್ಲಿ ಸುಳಿವು ಸಿಕ್ಕಿದೆ. ಮತ್ತಿ ತಿಮ್ಮಣ್ಣ ನಾಯಕ ಚಿತ್ರದುರ್ಗ ಪಾಳೆಯಗಾರರ ಮೂಲ ಪುರುಷ ಎನ್ನುವ ಮಾಹಿತಿ ನೀಡಿದರು.

ಆರು ಮದಕೇರಿ ನಾಯಕರು ಚಿತ್ರದುರ್ಗದ ಕೋಟೆಯನ್ನು ಆಳಿದ್ದಾರೆ. ಚಿತ್ರದುರ್ಗ ಕೋಟೆಯ ರಚನೆ ನಿರಂತರವಾಗಿ ಸಾಗಿತ್ತು. ಪಾಳೆಯಗಾರರ ಕಾಲದಲ್ಲಿ ಬೇರೆ ಬೇರೆ ಕಡೆ ಅನೇಕ ಕೋಟೆಗಳನ್ನು ಕಟ್ಟಲಾಗಿದೆ. ಆಲಘಟ್ಟದ ಕೋಟೆ, ಸಿದ್ದಯ್ಯನ ಕೋಟೆ ವ್ಯವಸ್ಥಿತವಾಗಿ ನೋಡಿಕೊಳ್ಳಲು ಕಿಲ್ಲೆದಾರರುಗಳನ್ನು ನೇಮಿಸಲಾಗಿತ್ತು. ಚಿತ್ರದುರ್ಗದ ಕೋಟೆ ಅತ್ಯಂತ ಮುಖ್ಯವಾದುದು. ಅದರಂತೆ ಅಂಕಲಿಮಠ, ದವಳಪ್ಪನಗುಡ್ಡ ಕೂಡ ಪ್ರಾಮುಖ್ಯತೆ ಪಡೆದುಕೊಂಡಿದೆ ಎಂದರು.

ಚಿನ್ಮುಲಾದ್ರಿ ಸಾಹಿತ್ಯ ವೇದಿಕೆ ಅಧ್ಯಕ್ಷ ಡಾ.ಎಸ್.ಎಚ್.ಶಫಿವುಲ್ಲಾ(ಕುಟೇಶ) ಹಿರಿಯ ಸಾಹಿತಿ ಸತ್ಯಪ್ರಭಾ ವಸಂತ ಕುಮಾರ್, ಡಾ.ರಾಜ್‍ಕುಮಾರ್ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಪರಶುರಾಮ್ ಗೊರಪ್ಪರ್, ಚಿನ್ಮುಲಾದ್ರಿ ಸಾಹಿತ್ಯ ವೇದಿಕೆ ಸಂಸ್ಥಾಪಕ ಅಧ್ಯಕ್ಷೆ ದಯಾ ಪುತ್ತೂರ್ಕರ್, ರಮೇಶ್ ಸುರ್ವೆ, ಶರಣಪ್ಪ ಕೊಪ್ಪದ, ಎಂ.ಹೆಚ್.ಉಜ್ಜಪ್ಪ, ಎಂ.ಎಸ್.ಕಳ್ಳಿ, ಉಮಾಪತಿ, ಗಜೇಂದ್ರಗಡ ತಳ್ಳಿಹಾಳ ಸಂಸ್ಥಾನ ಕೋಡಿಮಠದ ಡಾ.ಶರಣಬಸವೇಶ್ವರ ಮಹಾಸ್ವಾಮಿ, ಉಡುಪಿ ದೊಡ್ಡನಗುಡ್ಡೆ ಕ್ಷೇತ್ರದ ಪೀಠಾಧ್ಯಕ್ಷ ರಮಾನಂದ ಗುರೂಜಿ ವೇದಿಕೆಯಲ್ಲಿದ್ದರು.ಭಜನೆ, ಜಾನಪದ ಹಾಡು, ಭಾವಗೀತೆ, ತತ್ವಪದ ಗಾಯನ, ವಚನ ಗಾಯನ, ಭರತನಾಟ್ಯ, ಬುಡಕಟ್ಟು ನೃತ್ಯ, ಹಾಸ್ಯ, ಏಕಪಾತ್ರಾಭಿನಯ, ಜನಪದ ನೃತ್ಯ ಪ್ರದರ್ಶನಗೊಂಡಿತು.