ಬಿಜೆಪಿ ಸಂಘಟನೆಗೆ ಹೆಚ್ಚು ಒತ್ತು: ಎನ್.ಎಸ್. ಹೆಗಡೆ

| Published : Feb 23 2024, 01:51 AM IST

ಸಾರಾಂಶ

ಆರ್ಟಿಕಲ್ ೩೭೦ರದ್ದು, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ, ಕಾಶಿ, ಮಥುರಾ ಸೇರಿದಂತೆ ಹಿಂದೂ ಪವಿತ್ರ ಸ್ಥಳಗಳ ಅಭಿವೃದ್ಧಿ ಮಾಡುವುದು ಬಿಜೆಪಿಯ ಅಜೆಂಡಾ ಆಗಿತ್ತು. ಕೇಂದ್ರದಲ್ಲಿ ನಮ್ಮ ಸರ್ಕಾರ ಅಧಿಕಾರದಲ್ಲಿದೆ. ಹೇಳಿದಂತೆ ನಡೆದುಕೊಂಡಿದ್ದೇವೆ.

ಶಿರಸಿ:

ಬಿಜೆಪಿ ಜಿಲ್ಲಾಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ ನಂತರ ಸಂಘಟನೆಗೆ ಹೆಚ್ಚು ಒತ್ತು ನೀಡಿದ್ದೇನೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ ಹೇಳಿದರು.

ನಗರದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ಆಂತರಿಕ ಪ್ರಜಾಪ್ರಭುತ್ವದಂತೆ ಮಹಾಶಕ್ತಿ ಕೇಂದ್ರ, ಶಕ್ತಿ ಕೇಂದ್ರ, ಬೂತ್, ಪೇಜ್ ಪ್ರಮುಖರನ್ನು ರಚಿಸಿ ಲೋಕಸಭಾ ಚುನಾವಣೆಗೆ ಸಿದ್ಧರಾಗಿದ್ದೇವೆ. ಜಿಲ್ಲೆಯ ೧,೪೩೭ ಬೂತ್‌ಗಳಲ್ಲಿ ಗೋಡೆ ಬರಹಕ್ಕೆ ಚಾಲನೆ ನೀಡಲಾಗಿದ್ದು, ಪ್ರತಿ ಬೂತ್‌ನಲ್ಲಿ ೫ ಮೋದಿ ಮತ್ತೊಮ್ಮೆ ಎಂಬ ಬರಹ ಬರೆಯಲು ಸೂಚಿಸಲಾಗಿದೆ. ೪೪೪೬ ಗೋಡೆ ಬರಹ ಆಗಿದ್ದು, ಫೆ. ೨೫ರ ವರೆಗೆ ಈ ಅಭಿಯಾನ ನಡೆಯಲಿದೆ ಎಂದರು.ಗ್ರಾಮ ಚಲೋ ಕಾರ್ಯಕ್ರಮದ ಮೂಲಕ ಮತಗಟ್ಟೆ ಪರಿಶೀಲನೆ ಮತ್ತು ಕಾರ್ಯಕರ್ತರಿಗೆ ಶಕ್ತಿ ತುಂಬುವ ಕೆಲಸ ಮಾಡಲಾಗುತ್ತಿದ್ದು, ಸಮುದಾಯದ ಪ್ರಮುಖರು, ಗಣ್ಯರು, ಕೇಂದ್ರ ಸರ್ಕಾರದ ಫಲಾನುಭವಿಗಳ ಭೇಟಿ ಮಾಡುವುದು ಇದರ ಮುಖ್ಯ ಉದ್ದೇಶವಾಗಿದೆ. ನಾರಿಶಕ್ತಿ ವಂದನ ಕಾರ್ಯಕ್ರಮಕ್ಕೆ ತಂಡ ರಚಿಸಿ ಸ್ವ-ಸಹಾಯ ಗುಂಪು, ಆಶಾ-ಅಂಗನವಾಡಿ, ಸ್ತ್ರೀಶಕ್ತಿ ಸಂಘಗಳ ಜತೆ ಸಭೆ ನಡೆಸಲಾಗುತ್ತದೆ ಎಂದು ತಿಳಿಸಿದರು.ಜಿಲ್ಲಾ ವಕ್ತಾರ ಸದಾನಂದ ಭಟ್ಟ ನಿಡಗೋಡ ಮಾತನಾಡಿ, ರಾಜ್ಯಾಧ್ಯಕ್ಷರ ಸೂಚನೆ ಮೇರೆಗೆ ಸಂಘಟನೆ ಪದ್ಧತಿಯಂತೆ ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳು, ಮಂಡಳದ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ವಿವಿಧ ಮೋರ್ಚಾಗಳಿಗೆ ನಿಯುಕ್ತಿ ಮಾಡಲಾಗಿದೆ. ಸಂಘಟನೆಯನ್ನು ಪ್ರಜಾಪ್ರಭುತ್ವ ಮತ್ತು ಬಿಜೆಪಿ ಸಂವಿಧಾನದಂತೆ ಪ್ರತಿ ೩ ವರ್ಷಕ್ಕೊಮ್ಮೆ ಜವಾಬ್ದಾರಿ ಬದಲಾವಣೆ ಮಾಡಲಾಗುತ್ತದೆ. ಅದೇ ರೀತಿ ನೂತನ ಜಿಲ್ಲಾಧ್ಯಕ್ಷರಾಗಿ ಎನ್.ಎಸ್. ಹೆಗಡೆ ಆಯ್ಕೆಯಾಗಿದ್ದಾರೆ. ಅವರ ಮಾರ್ಗದರ್ಶನ ಮತ್ತು ಸೂಚನೆಯಂತೆ ಪಕ್ಷದ ಸಂಘಟನೆಗೆ ಹೆಚ್ಚು ಮಹತ್ವ ನೀಡಲಾಗುತ್ತದೆ ಎಂದರು.ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಗುರುಪ್ರಸಾದ, ಶಿವಾಜಿ, ಪ್ರಶಾಂತ ನಾಯ್ಕ, ಲೋಕಸಭಾ ಕ್ಷೇತ್ರದ ಸಂಚಾಲಕ ಗೋವಿಂದ ನಾಯ್ಕ ಭಟ್ಕಳ, ಪ್ರಮುಖರಾದ ಶ್ರೀರಾಮ ನಾಯ್ಕ, ರಮಾಕಾಂತ ಭಟ್, ರೇಖಾ ಹೆಗಡೆ ಕಂಪ್ಲಿ, ಉಷಾ ಹೆಗಡೆ ಇದ್ದರು.

ರಾಮನ ಹೆಸರಿನಲ್ಲಿ ಮತ ಕೇಳುವುದರಲ್ಲಿ ತಪ್ಪಿಲ್ಲ:ಆರ್ಟಿಕಲ್ ೩೭೦ರದ್ದು, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ, ಕಾಶಿ, ಮಥುರಾ ಸೇರಿದಂತೆ ಹಿಂದೂ ಪವಿತ್ರ ಸ್ಥಳಗಳ ಅಭಿವೃದ್ಧಿ ಮಾಡುವುದು ಬಿಜೆಪಿಯ ಅಜೆಂಡಾ ಆಗಿತ್ತು. ಕೇಂದ್ರದಲ್ಲಿ ನಮ್ಮ ಸರ್ಕಾರ ಅಧಿಕಾರದಲ್ಲಿದೆ. ಹೇಳಿದಂತೆ ನಡೆದುಕೊಂಡಿದ್ದೇವೆ. ಆ ಕಾರಣದಿಂದ ಬಿಜೆಪಿಯು ರಾಮನ ಹೆಸರಿನಲ್ಲಿ ಮತ ಕೇಳುವುದರಲ್ಲಿ ತಪ್ಪಿಲ್ಲ ಎಂದು ಮುಖಂಡರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅತೃಪ್ತರ ಜತೆ ಚರ್ಚೆ:

ಜಿಲ್ಲಾ, ತಾಲೂಕು ಪದಾಧಿಕಾರಿಗಳ ನೇಮಕ ಮಾಡುವ ಮುನ್ನ ವೀಕ್ಷಕರನ್ನು ಕಳುಹಿಸಿ, ಆಕಾಂಕ್ಷಿಗಳ ಪಟ್ಟಿ ತರಿಸಿಕೊಂಡು ಅಭಿಪ್ರಾಯ ಸಂಗ್ರಹಿಸಿ ಆಯ್ಕೆ ಮಾಡಲಾಗಿದೆ. ಬಿಜೆಪಿಯಲ್ಲಿ ಹಳೆಬರು, ಹೊಸಬರು ಎಂಬ ಬೇಧ-ಭಾವವಿಲ್ಲ. ಸಿದ್ದಾಪುರದಲ್ಲಿ ಅತೃಪ್ತಗೊಂಡವರನ್ನು ಭೇಟಿ ಮಾಡಿ, ಅವರ ಅಭಿಪ್ರಾಯ ಪಡೆಯುತ್ತೇನೆ ಎಂದು ಎನ್.ಎಸ್. ಹೆಗಡೆ ಸ್ಪಷ್ಟಪಡಿಸಿದರು.

ಸಚಿವರು ಓಲೈಕೆ ಬಿಡಲಿ:ಭಟ್ಕಳ ಪುರಸಭೆಗೆ ಜಾಲಿ ಪಂಚಾಯಿತಿಯ ಕೆಲ ಭಾಗವನ್ನು ಸೇರ್ಪಡೆ ಮಾಡಿ ನಗರಸಭೆ ಮಾಡಲು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ತೀರ್ಮಾನಿಸಿದ್ದಾರೆ ಎಂದು ತಿಳಿದು ಬಂದಿದೆ. ಇದಕ್ಕೆ ನಮ್ಮ ವಿರೋಧವಿಲ್ಲ. ನಗರಸಭೆಗೆ ಚಾಲನೆ ನೀಡುವ ಮೊದಲು ಜನಾಭಿಪ್ರಾಯ ಸಂಗ್ರಹಿಸಬೇಕು. ವೋಟ್‌ ಬ್ಯಾಂಕ್ ಮತ್ತು ಒಂದು ಕೋಮಿನ ಓಲೈಕೆಗೆ ಈ ರೀತಿ ಮಾಡಲು ಹೊರಟಿದ್ದಾರೆ. ಈ ಕುರಿತು ಸಂಸದ ಅನಂತಕುಮಾರ ಹೆಗಡೆ ಅವರು ನಗರಾಭಿವೃದ್ಧಿ ಸಚಿವರಿಗೆ ಪತ್ರ ಬರೆದಿದ್ದಾರೆ. ಜನರ ಅಭಿಪ್ರಾಯ ಪಡೆಯದಿದ್ದರೆ ಬಿಜೆಪಿಯಿಂದ ಹೋರಾಟ ನಡೆಸುತ್ತೇವೆ ಹೆಗಡೆ ಎಚ್ಚರಿಕೆ ನೀಡಿದರು.