ಸಾರಾಂಶ
ಶಿಕಾರಿಪುರ: ಶಿಕ್ಷಣ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ಅವಧಿಯಲ್ಲಿ ಅತಿ ಹೆಚ್ಚಿನ ಅನುದಾನ ನೀಡಿ, ಕಾಳಜಿ ವಹಿಸಿದ್ದಾರೆ. ಮಕ್ಕಳು ಈ ಸೌಲಭ್ಯದ ಸದುಪಯೋಗ ಪಡೆದು ಅತ್ಯುತ್ತಮ ಫಲಿತಾಂಶದ ಮೂಲಕ ತಾಲೂಕಿನ ಕೀರ್ತಿ ಹೆಚ್ಚಿಸಬೇಕು ಎಂದು ಸಂಸದ ರಾಘವೇಂದ್ರ ಹೇಳಿದರು.
ತಾಲೂಕಿನ ಸದಾಶಿವಪುರ ತಾಂಡಾ, ಕಪ್ಪನಹಳ್ಳಿ, ಮುಡುಬ ಸಿದ್ದಾಪುರ, ಹರಗಿ, ಕೋಡೀಹಳ್ಳಿ ಗ್ರಾಮಗಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ನೂತನ ಕೊಠಡಿಗಳ ಉದ್ಘಾಟಿಸಿ ಅವರು ಮಾತನಾಡಿದರು.ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲೆಯ ಮಾದರಿಯಲ್ಲಿ ಸಕಲ ಸೌಲಭ್ಯದ ಮೂಲಕ ಎಲ್ಲ ರೀತಿಯ ವ್ಯವಸ್ಥೆ ಕಲ್ಪಿಸಲಾಗಿದೆ. ಗ್ರಾಮೀಣ ಮಕ್ಕಳು ನಗರ ಪ್ರದೇಶಕ್ಕೆ ಉನ್ನತ ಶಿಕ್ಷಣಕ್ಕೆ ತೆರಳಲು ಸಾದ್ಯವಾಗದೆ ಪರಿತಪಿಸದಂತೆ ಎಲ್ಲ ರೀತಿಯ ಶಿಕ್ಷಣವನ್ನು ಪಟ್ಟಣದಲ್ಲಿ ಆರಂಭಿಸಲಾಗಿದೆ. ತಾಲೂಕಿನಾದ್ಯಂತ 8 ಪಿಯುಸಿ ಕಾಲೇಜು, 8 ವಸತಿ ಶಾಲೆ, 42 ಹಾಸ್ಟೆಲ್, ಐಟಿಐ ಕಾಲೇಜು, ಮಹಿಳಾ ಡಿಪ್ಲೋಮಾ, ಪದವಿ, ಸ್ನಾತಕೋತ್ತರ ಪದವಿ ಕಾಲೇಜುಗಳನ್ನು ಆರಂಭಿಸಲಾಗಿದೆ ಎಂದು ತಿಳಿಸಿದರು.
ಕಿತ್ತೂರು ರಾಣಿ ಚನ್ನಮ್ಮ, ಮೊರಾರ್ಜಿ ದೇಸಾಯಿ ವಸತಿ ಶಾಲೆ ಸಹಿತ ಪ್ರತಿಭಾನ್ವಿತ ಮಕ್ಕಳು ಕಡಿಮೆ ಖರ್ಚಿನಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ. ಕಳೆದ ವರ್ಷ ತಾಲೂಕಿನ 80 ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ₹20 ಕೋಟಿ ಅನುದಾನ ನೀಡಲಾಗಿದೆ. ಎಂಎಡಿಬಿ ಮೂಲಕ ಬಿಜೆಪಿ ಸರ್ಕಾರದ ಅವಧಿಯಲ್ಲಿ 130ಕ್ಕೂ ಹೆಚ್ಚಿನ ಕೊಠಡಿಗಳನ್ನು ನಿರ್ಮಿಸಿ ಸ್ಥಳ ಅಭಾವದ ಕೊರತೆ ನೀಗಿಸಲಾಗಿದೆ ಎಂದು ತಿಳಿಸಿದರು.ಸದಾಶಿವಪುರ ತಾಂಡಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯ ಶಿಕ್ಷಕ ರಾಘವೇಂದ್ರಾಚಾರ್ ಅವರನ್ನು ಸನ್ಮಾನಿಸಲಾಯಿತು. ಟಿಎಪಿಸಿಎಂಎಸ್ ನಿರ್ದೇಶಕ ಜಯಾನಾಯ್ಕ ಮುಖಂಡ ರುದ್ರೇಶ್, ಶರತ್ ನಾಯ್ಕ, ಪರಮೇಶ್ ನಾಯ್ಕ, ಸುಬ್ರಹ್ಮಣ್ಯ, ರೇವಣಪ್ಪ, ಮಂಜಪ್ಪ, ಹನುಮಂತಪ್ಪ ಮತ್ತಿತರರು ಹಾಜರಿದ್ದರು.
- - - -10ಕೆಎಸ್.ಕೆಪಿ1:ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯಶಿಕ್ಷಕ ರಾಘವೇಂದ್ರಾಚಾರ್ ಅವರನ್ನು ಸನ್ಮಾನಿಸಲಾಯಿತು.