ಸಾರಾಂಶ
ರಾಜ್ಯ ಸರ್ಕಾರದ ಬಜೆಟ್ ವಿರೋಧಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಶನಿವಾರ ಟ್ರ್ಯಾಕ್ಟರ್ ತಳ್ಳುವ ಮೂಲಕ ವಿನೂತವಾಗಿ ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ರಾಮನಗರ
ರಾಜ್ಯ ಸರ್ಕಾರದ ಬಜೆಟ್ ವಿರೋಧಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಶನಿವಾರ ಟ್ರ್ಯಾಕ್ಟರ್ ತಳ್ಳುವ ಮೂಲಕ ವಿನೂತವಾಗಿ ಪ್ರತಿಭಟನೆ ನಡೆಸಿದರು.ನಗರದ ಐಜೂರು ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು ರಾಜ್ಯ ಸರ್ಕಾರದ ಬಜೆಟ್ ಜನ ವಿರೋಧಿ ಹಾಗೂ ಹಿಂದೂ ವಿರೋಧಿಯಾಗಿದೆ. ಶೇ.80 ರಷ್ಟಿರುವ ಹಿಂದುಗಳಿಗೆ ರಾಜ್ಯ ಸರ್ಕಾರ ಚೊಂಬು ನೀಡಿದೆ. ಸರ್ಕಾರದಲ್ಲಿ ದುಡ್ಡಿಲ್ಲ, ಟ್ರ್ಯಾಕ್ಟರ್ ಗೆ ಡೀಸೆಲ್ ಇಲ್ಲ ಎಂದು ಟ್ರ್ಯಾಕ್ಟರ್ ತಳ್ಳುವ ಮೂಲಕ ಆಕ್ರೋಶ ಹೊರ ಹಾಕಿದರು.
16 ವರ್ಷಗಳ ಕಾಲ ಬಜೆಟ್ ಮಂಡಿಸಿ ಅನುಭವ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಈ ರೀತಿಯ ಬಜೆಟ್ ಅನ್ನು ನಿರೀಕ್ಷೆ ಮಾಡಿರಲಿಲ್ಲ. ಸಿದ್ದರಾಮಯ್ಯ ಸಮಾಜವಾದಿ ತತ್ವಕ್ಕೆ ವಿರುದ್ಧವಾಗಿ ಒಂದು ಧರ್ಮದವರನ್ನು ಒಲೈಕೆ ಮಾಡುವ ಸಲುವಾಗಿ ಬಜೆಟ್ ಮಂಡಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಎಸ್ಸಿ ಎಸ್ಟಿ ಹಣವನ್ನು ರಾಜ್ಯ ಸರ್ಕಾರ ಗುಳುಂ ಮಾಡಿದೆ. ದಲಿತ ವಿರೋಧಿ ಸರ್ಕಾರದಿಂದ ಏನನ್ನು ನಿರೀಕ್ಷೆ ಮಾಡಲು ಸಾಧ್ಯ? ಮೇಕೆದಾಟು ಯೋಜನೆ ಜಾರಿ ಘೋಷಣೆ ಇಲ್ಲ. ಅಲ್ಪಸಂಖ್ಯಾತರ ಹೆಸರಿನಲ್ಲಿ ಕೇವಲ ಮುಸ್ಲಿಂ ಸಮುದಾಯಕ್ಕೆ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ನೀಡಿದೆ. ಆ ಮೂಲಕ ತೆರಿಗೆ ಕಟ್ಟುವ ಸಮುದಾಯಕ್ಕೆ ಸಿಎಂ ಸಿದ್ದರಾಮಯ್ಯ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಆನಂದಸ್ವಾಮಿ, ಜಗದೀಶ್, ದರ್ಶನ್ ರೆಡ್ಡಿ, ಚಂದ್ರಶೇಖರ್ ರೆಡ್ಡಿ, ಕಿಶನ್ ಗೌಡ, ಚಂದ್ರಶೇಖರ್, ರಾಘವೇಂದ್ರ,ಕಾಳಯ್ಯ, ನಾಗಮ್ಮ, ಶಿವಮುತ್ತು, ಶಿವಾನಂದ್, ನಾಗೇಶ್, ಸುರೇಶ್, ರುದ್ರದೇವರು, ಜಯಕುಮಾರ್, ಕೆಂಪರಾಜು, ಲಕ್ಷ್ಮೀ ಹೇಮಾವತಿ, ತಾಸಿನ್ ಖಾನ್ ಸೇರಿದಂತೆ ಹಲವರು ಭಾಗವಹಿಸಿದ್ದರು.