ಹೆಣ್ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಇನ್ನೆಷ್ಟು ಬಲಿ ಬೇಕು: ಸಚಿವೆ ಶೋಭಾ

| Published : Aug 18 2024, 01:54 AM IST

ಹೆಣ್ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಇನ್ನೆಷ್ಟು ಬಲಿ ಬೇಕು: ಸಚಿವೆ ಶೋಭಾ
Share this Article
  • FB
  • TW
  • Linkdin
  • Email

ಸಾರಾಂಶ

ಕೋಲ್ಕತ್ತಾ ವೈದ್ಯ ಮೇಲಿನ ದೌರ್ಜನ್ಯ ಖಂಡಿಸಿ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಪ್ರತಿಭಟನೆ ನಡೆಯಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಹೆಣ್ಮಕ್ಕಳ ಮೇಲಿನ ದೌರ್ಜನ್ಯ, ಅತ್ಯಾಚಾರ, ಕೊಲೆ ಪ್ರಕರಣಗಳನ್ನು ರಾಜ್ಯ ಸರ್ಕಾರವು ಗಂಭೀರವಾಗಿ ಪರಿಗಣಿಸಲು ಇನ್ನೆಷ್ಟು ಬಲಿ ಬೇಕು ಎಂದು ಕೇಂದ್ರ ಸಣ್ಣ ಮತ್ತು ಮಧ್ಯಮ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಪ್ರಶ್ನಿಸಿದ್ದಾರೆ.

ಶನಿವಾರ ಬಿಜೆಪಿ ಕಚೇರಿ ಬಳಿ ಪಕ್ಷದ ಮಹಿಳಾ ಮೋರ್ಚಾ ವತಿಯಿಂದ ಕೊಲ್ಕತ್ತಾದಲ್ಲಿನ ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಮತ್ತು ಹತ್ಯೆ ಪ್ರಕರಣವನ್ನು ಖಂಡಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮಾತನಾಡಿದರು.

ಕೊಲ್ಕತ್ತಾ ವೈದ್ಯೆ ಹತ್ಯೆ ಕುರಿತು ಇಂಡಿ ಒಕ್ಕೂಟವು ಸುಮ್ಮನಿದೆ. ಬಡ ಕುಟುಂಬದಿಂದ ಬಂದ ಹುಡುಗಿಯಾಗಿದ್ದು, ಕಷ್ಟ ಪಟ್ಟು ಆಕೆಯ ತಾಯಿ ವೈದ್ಯೆಯನ್ನಾಗಿ ಮಾಡಿದರು. ತಮಗೆ ಮಾತ್ರವಲ್ಲದೇ, ಸಮಾಜಕ್ಕೂ ಆಕೆ ಆಧಾರವಾಗುವ ಕನಸು ಕಂಡಿದ್ದರು. ಆಕೆಯ ಹತ್ಯೆ ನಡೆದಿದ್ದು, ಕೊಲ್ಕತ್ತಾ ಹೈಕೋರ್ಟ್ ಮಧ್ಯಪ್ರವೇಶದಿಂದ ಸಿಬಿಐ ತನಿಖೆಗೆ ಆದೇಶವಾಗಿದೆ ಎಂದು ಹೇಳಿದರು.

ಪಶ್ಚಿಮ ಬಂಗಾಳದಲ್ಲಿ ಅಧಿಕಾರಿಗಳು ಧ್ವನಿಹೀನರಾಗಿದ್ದಾರೆ. ನ್ಯಾಯಕ್ಕಾಗಿ ಧ್ವನಿ ಎತ್ತಿದರೆ ಮರುದಿನ ಅವರು ಇರುವುದಿಲ್ಲ ಎಂಬ ಸ್ಥಿತಿ ಇದೆ. ಪುಂಡ ಪೋಕರಿಗಳಿಗೆ ಭಯ ಇಲ್ಲದ ಸ್ಥಿತಿ ಇದೆ. ಮೃತ ವೈದ್ಯೆಯ ಕುಟುಂಬದ ಜೊತೆ ದೇಶ ನಿಂತಿದೆ ಎಂದು ತಿಳಿಸಿದರು.

ರಾಜ್ಯದಲ್ಲಿಯೂ ಇಂತಹ ಪರಿಸ್ಥಿತಿ ಇದ್ದು, ಆತ್ಮಹತ್ಯೆ ಪ್ರಕರಣಗಳು ನಡೆಯುತ್ತಿವೆ. ವರ್ಗಾವಣೆಗೆ 50 ಲಕ್ಷ, ಒಂದು ಕೋಟಿ ಕೇಳಿದರೆ ರಾಜ್ಯದ ಅಧಿಕಾರಿಗಳು ಎಲ್ಲಿಂದ ತರಲು ಸಾಧ್ಯ? ಪೊಲೀಸ್ ಅಧಿಕಾರಿಗಳಿಗೇ ರಕ್ಷಣೆ ಇಲ್ಲದಿರುವಾಗ ಜನರ ರಕ್ಷಣೆ ಎಲ್ಲಿಂದ ಬಂತು ಎಂದು ರಾಜ್ಯ ಸರ್ಕಾರ ವಿರುದ್ಧ ಟೀಕಾಪ್ರಹಾರ ನಡೆಸಿದರು.

ಕಾನೂನು- ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ರಾಜ್ಯ ಸರ್ಕಾರಗಳದ್ದಾಗಿರುತ್ತದೆ. ಹಲವು ರಾಜ್ಯಗಳು ಮಹಿಳಾ ರಕ್ಷಣೆಗೆ ಸಂಬಂಧಿಸಿದ ಕಾನೂನು ತಿದ್ದುಪಡಿ ಅಳವಡಿಸಲು ಈ ಹಿಂದೆ ಹಿಂದೇಟು ಹಾಕಿದ್ದವು. ಅಪ್ರಾಪ್ತೆಯರ ಮೇಲಿನ ಅತ್ಯಾಚಾರ ಪ್ರಕರಣಗಳಿಗೆ ಮರಣದಂಡನೆ ವಿಧಿಸುವ ಕಾಯ್ದೆ ಬಗ್ಗೆ ಕೇಂದ್ರ ಸರ್ಕಾರವು ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳಿದರು.

ಬಿಜೆಪಿ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಕೆ. ಮಂಜುಳಾ ಮಾತನಾಡಿ, ಮೊಂಬತ್ತಿ ಬೆಳಗುವ ಮೂಲಕ ಮೃತ ವಿದ್ಯಾರ್ಥಿನಿಗೆ ಶ್ರದ್ಧಾಂಜಲಿ ಸಲ್ಲಿಸಲಾಗಿದೆ. ಈ ಕಿಚ್ಚು ದೇಶಾದ್ಯಂತ ಇನ್ನಷ್ಟು ಪ್ರಜ್ವಲಿಸಲಿದೆ. ಪಶ್ಚಿಮಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯೆ ಭಾರತಿ ಶೆಟ್ಟಿ, ಮಹಿಳಾ ಮೋರ್ಚಾ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.