ಹಾವೇರಿ: ಜಿಲ್ಲೆಯಲ್ಲಿ ಪಾರ್ಸಲ್ ಹಾಗೂ ಸಾರಿಗೆ ಮೂಲಕ ಮಾದಕ ವಸ್ತುಗಳ ಸಾಗಾಣಿಕೆ ಬಗ್ಗೆ ಹೆಚ್ಚಿನ ನಿಗಾವಹಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಸೂಚಿಸಿದರು.
ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ನಾರ್ಕೊ ಸಮನ್ವಯ ಕೇಂದ್ರ (ಎನ್‌ಸಿಒಆರ್‌ಡಿ) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಗಾಂಜಾ ಮಾರಾಟ, ಸಾಗಾಟ ಮಾಡುವವರನ್ನು ಮಟ್ಟಹಾಕುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯೊಂದಿಗೆ ಸಂಬಂಧಪಟ್ಟ ಇಲಾಖೆಗಳು ಸಹಕಾರ ನೀಡಬೇಕು ಎಂದು ತಿಳಿಸಿದರು.
ಮಾದಕ ಪದಾರ್ಥ ಸೇವನೆ ಮಾಡುವವರನ್ನು ಗುರುತಿಸಬೇಕು, ಅನುಮಾನಾಸ್ಪದ ವ್ಯಕ್ತಿಗಳನ್ನು ನಿಯಮಿತವಾಗಿ ಪರೀಕ್ಷೆಗೆ ಒಳಪಡಿಸಿ, ಮಾದಕ ಪದಾರ್ಥ ಸೇವನೆ ಮಾಡಿದವರ ಮೇಲೆ ನಿಯಮಾನುಸಾರ ಕಾನೂನು ಕ್ರಮ ಜರುಗಿಸಬೇಕು ಎಂದು ಸೂಚಿಸಿದರು.ಸಹಕಾರ ನೀಡಿ: ಪೊಲೀಸ್ ಇಲಾಖೆಯಿಂದ ಪ್ರತಿದಿನ ನಿಯಮಿತವಾಗಿ ಗಾಂಜಾ ಮಾರಾಟ, ಸಾಗಾಟ ಮಾಡುವವರನ್ನು ಹಾಗೂ ಮಾದಕ ಪದಾರ್ಥ ಸೇವನೆ ಮಾಡುವವರನ್ನು ಪರಿಶೀಲನೆಗೆ ಒಳಪಡಿಸಿ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ಈ ಕಾರ್ಯಕ್ಕೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸಹಕಾರ ನೀಡಬೇಕು ಎಂದರು.
ಜಿಲ್ಲೆಯ ಶಿಕ್ಷಣ ಇಲಾಖೆಯ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಶಾಲಾ-ಕಾಲೇಜುಗಳಲ್ಲಿ ಹಾಗೂ ಹಾಸ್ಟೆಲ್‌ಗಳಲ್ಲಿಯ ವಿದ್ಯಾರ್ಥಿಗಳಿಗೆ ನಿಯಮಿತವಾಗಿ ಜಾಗೃತಿ ಕಾರ್ಯಕ್ರಮ ಆಯೋಜಿಸಬೇಕು ಎಂದು ಸೂಚಿಸಿದರು.
ಔಷಧಿ ಅಂಗಡಿಗಳ ಮೇಲೆ ನಿಗಾ
ನಿಷೇಧಿತ ಔಷಧಿಗಳನ್ನು ಮಾರಾಟ ಮಾಡುವ ಔಷಧಿ ಅಂಗಡಿಗಳ ಮೇಲೆ ನಿಗಾ ವಹಿಸಬೇಕು. ಔಷಧಿ ಅಂಗಡಿಗಳಲ್ಲಿ ದಾಸ್ತಾನು, ಮಾರಾಟದ ಬಗ್ಗೆ ವಹಿ ನಿರ್ವಹಿಸಬೇಕು. ರಶೀದಿ ಇಲ್ಲದೆ ಔಷಧಿಗಳನ್ನು ನೀಡುವುದಿಲ್ಲ ಎಂಬ ಸೂಚನಾ ಫಲಕಗಳನ್ನು ಕಡ್ಡಾಯವಾಗಿ ಔಷಧಿ ಅಂಗಡಿಗಳಲ್ಲಿ ಪ್ರದರ್ಶಿಸಬೇಕು ಎಂದು ಜಿಲ್ಲಾ ಔಷಧ ನಿಯಂತ್ರಕರಿಗೆ ಸೂಚನೆ ನೀಡಿದರು.ಜಿಲ್ಲಾ ಔಷಧ ನಿಯಂತ್ರಕರು ಮಾತನಾಡಿ, ಜಿಲ್ಲೆಯಲ್ಲಿ 120 ಹೋಲ್‌ಸೆಲ್ ಹಾಗೂ 955 ರಿಟೇಲರ್ ಔಷಧಿ ಮಾರಾಟಗಾರರಿದ್ದು, ಸೂಚನಾ ಫಲಕ ಅಳವಡಿಸುವಂತೆ ಈಗಾಗಲೇ ಎಲ್ಲ ಅಂಗಡಿದಾರರಿಗೆ ಸೂಚನೆ ನೀಡಲಾಗಿದೆ. ಈ ಕುರಿತು ಜಿಲ್ಲೆಯಲ್ಲಿ ಪರಿಶೀಲನೆ ಮಾಡುವುದಾಗಿ ಸಭೆಗೆ ಮಾಹಿತಿ ನೀಡಿದರು.
ಜಾಗೃತಿ ಮೂಡಿಸಿ: ಜಿಲ್ಲೆಯ ಎಲ್ಲ ಶಾಲಾ-ಕಾಲೇಜುಗಳು, ಹಾಸ್ಟೆಲ್‌ಗಳಲ್ಲಿ ವರ್ಷದಲ್ಲಿ ಎರಡು ಬಾರಿ ಸ್ಥಳೀಯ ಪೊಲೀಸ್ ಅಧಿಕಾರಿಗಳ ಸಹಕಾರದೊಂದಿಗೆ ಜಾಗೃತಿ ಮೂಡಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ ಮಾತನಾಡಿ, 2025ನೇ ಸಾಲಿನಲ್ಲಿ 10 ಪ್ರಕರಣದಲ್ಲಿ ₹11,34,929 ಮೊತ್ತದ 40.206 ಕೆಜಿ ಹಾಗೂ 2026 ಸಾಲಿನ ಈ ವರೆಗೆ ಎಂಟು ಪ್ರಕರಣಗಳಲ್ಲಿ ₹11,67,700 ಮೊತ್ತದ 25 ಕೆಜಿ ಮಾದಕ ವಸ್ತು ವಶಪಡಿಸಿಕೊಳ್ಳಲಾಗಿದೆ. 2026ನೇ ಸಾಲಿನಲ್ಲಿ ಈ ವರೆಗೆ 43 ಪ್ರಕರಣಗಳಲ್ಲಿ 51 ಜನರು ಆರೋಪಿತರಾಗಿದ್ದಾರೆ ಎಂದು ತಿಳಿಸಿದರು.
ಕರ್ನಾಟಕ ಸ್ಟೇಟ್ ಪೊಲೀಸ್ ಆ್ಯಪ್ರಾಜ್ಯ ಮಟ್ಟದಲ್ಲಿ ಹಾಗೂ ಜಿಲ್ಲಾ ಮಟ್ಟದಲ್ಲಿ ವಿವಿಧ ಹಂತದ ಅಧಿಕಾರಿಗಳ ನೇತೃತ್ವದಲ್ಲಿ ಎಎನ್‌ಟಿಇ ರಚನೆ ಮಾಡಲಾಗಿದೆ. ಎಲ್ಲರೂ ಕರ್ನಾಟಕ ರಾಜ್ಯ ಪೊಲೀಸ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಂಡು, ನಿರ್ಭಯವಾಗಿ ಮಾದಕ ಪದಾರ್ಥ ಮಾರಾಟ, ಸಾಗಾಟ, ಸೇವನೆ ಮಾಡುವವರ ವಿವರವನ್ನು ನಮೂದು ಮಾಡಬೇಕು ಎಂದು ಸಲಹೆ ನೀಡಿದರು.
ಬೀಟ್ ಪೊಲೀಸರಿಗೆ ಈಗಾಗಲೇ ಮಾದಕ ವಸ್ತುಗಳ ಸೇವನೆ ಮಾಡುವವರ ಬಗ್ಗೆ ಹಾಗೂ ಪೆಡ್ಲರ್‌ಗಳ ಬಗ್ಗೆ ನಿಗಾವಹಿಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.ಸಭೆಯಲ್ಲಿ ಹಾವೇರಿ ಉಪ ವಿಭಾಗಾಧಿಕಾರಿ ಕಲ್ಯಾಣಿ ಕಾಂಬ್ಳೆ, ಪ್ರಾದೇಶಿಕ ಸಾರಿಗೆ ಅಧಿಕಾರಿ, ಅಬಕಾರಿ ಉಪ ಆಯುಕ್ತರು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಕಾಲೇಜುಗಳ ಪ್ರಾಂಶುಪಾಲರು ಇದ್ದರು.