ಸಾರಾಂಶ
ಕನ್ನಡಪ್ರಭ ವಾರ್ತೆ ರಾಮನಗರ
ವರ್ಷಗಟ್ಟಲೆ ಕಾನೂನು ಸಮರ ನಡೆಸುತ್ತಿರುವ ಬಡ ಜನರಿಗೆ ನೆರವು ನೀಡುವ ನಿಟ್ಟಿನಲ್ಲಿ ಆರಂಭವಾದ ಲೋಕ್ ಅದಾಲತ್ ನಲ್ಲಿ ಬ್ಯಾಂಕ್ ಸಾಲ, ಚೆಕ್ ಬೌನ್ಸ್, ವಿವಾಹ ವಿಚ್ಛೇದನ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳು ಇತ್ಯರ್ಥಗೊಂಡು ಯಶಸ್ವಿ ಕಂಡಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಬಿ.ವಿ. ರೇಣುಕಾ ತಿಳಿಸಿದರು.ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ ಖುದ್ದಾಗಿ ಭಾಗವಹಿಸಿ ಪ್ರಕರಣಗಳ ವಿಲೇವಾರಿ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾದ್ಯಂತ ಕಕ್ಷಿದಾರರು ಹಾಗೂ ವಕೀಲರ ಸಹಕಾರದಿಂದ ನ್ಯಾಯಾಲಯಗಳಲ್ಲಿ ವಿಚಾರಣೆಗಿದ್ದ ಪ್ರಕರಣಗಳ ಪೈಕಿ 2,53,124 ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಂಡಿವೆ ಎಂದರು.
ಕಕ್ಷಿದಾರರು ಬಹಳ ವರ್ಷ ಅಲೆದಾಡುವ ಬದಲು ಲೋಕ್ ಅದಾಲತ್‌ನಲ್ಲಿ ರಾಜಿ ಸಂಧಾನದ ಮೂಲಕ ತಮ್ಮ ತಮ್ಮ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಂಡರೆ ಹಣ ಮತ್ತು ಸಮಯ ಎರಡೂ ಉಳಿಯುವಾಗುತ್ತದೆ ಎಂಬ ಉದ್ದೇಶದಿಂದ ಲೋಕ್ ಅದಾಲತ್ ಹಮ್ಮಿಕೊಳ್ಳಲಾಗುತ್ತಿದೆ. ಉಭಯ ಕಕ್ಷಿದಾರರ ಒಪ್ಪಿಗೆ ಇದ್ದಲ್ಲಿ ಮಾತ್ರ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗುತ್ತದೆ ಎಂದು ಹೇಳಿದರು.ಈವರೆಗೆ ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆಗಿದ್ದ ಪ್ರಕರಣಗಳ ಪೈಕಿ ರಾಜಿ ಸಂಧಾನದ ಮೂಲಕ ಬಗೆಹರಿಸಬಹುದಾದ 10,400 ಪ್ರಕರಣಗಳನ್ನು ಗುರುತಿಸಲಾಗಿತ್ತು. ಈ ಪೈಕಿ ಲೋಕ ಅದಾಲತ್‌ನಲ್ಲಿ ಸುಮಾರು 4,327 ಕೇಸ್‌ಗಳನ್ನು ಇತ್ಯರ್ಥಪಡಿಸಲಾಗಿದೆ. ಅಲ್ಲದೇ ವಾಜ್ಯ ಪೂರ್ವ 2,48,841 ಕೇಸ್‌ಗಳ ಪೈಕಿ 2,48,797 ಪ್ರಕರಣ ಸೇರಿದಂತೆ ಒಟ್ಟು 2,53,124 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, ಒಟ್ಟು 22,68,42,028 ರು. ವಸೂಲಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.ಲೋಕ್ ಅದಾಲತ್ ರಾಮನಗರ, ಚನ್ನಪಟ್ಟಣ, ಮಾಗಡಿ ಕನಕಪುರ ನ್ಯಾಯಾಲಯ ಸೇರಿದಂತೆ ಒಟ್ಟು 20 ಪೀಠದಲ್ಲಿ ಹಮ್ಮಿಕೊಳ್ಳಲಾಗಿತ್ತು. ವ್ಯಾಜ್ಯಪೂರ್ವ ಹಾಗೂ ಬಾಕಿಯಿರುವಂತಹ ಪ್ರಕರಣಗಳಲ್ಲಿ ಇತ್ಯರ್ಥವಾಗುವಂತಹ ಪ್ರಕರಣಗಳನ್ನ ಕೈಗೆತ್ತಿಕೊಂಡು ವಿಲೇವಾರಿ ಮಾಡಲಾಗಿದೆ. ಸಾರ್ವಜನಿಕರು ಈ ಲೋಕ್ ಅದಾಲತ್ ಪ್ರಯೋಜನ ಪಡೆದುಕೊಳ್ಳಬೇಕೆಂದು ಬಿ.ವಿ. ರೇಣುಕಾ ಮನವಿ ಮಾಡಿದರು.
ಈ ವೇಳೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯೆ ಹಾಗೂ ನ್ಯಾಯಾಧೀಶೆ ಪಿ.ಆರ್.ಸವಿತಾ ಉಪಸ್ಥಿತರಿದ್ದರು. ...ಬಾಕ್ಸ್ ...ವಿಚ್ಚೇದನಕ್ಕಾಗಿ ಬಂದು, ಮತ್ತೆ ಒಂದಾದ ಜೋಡಿಗಳುರಾಮನಗರ: ವಿವಾಹ ವಿಚ್ಛೇದನ ಕೋರಿ ಜಿಲ್ಲಾ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದ ನವ ದಂಪತಿ ಸೇರಿದಂತೆ 2 ಜೋಡಿಗಳು ಕಹಿ ಘಟನೆ ಮರೆತು ಮತ್ತೆ ಒಂದಾದ ಘಟನೆಗೆ ಲೋಕ ಅದಾಲತ್ ಸಾಕ್ಷಿಯಾಯಿತು.
ಹಲವು ವರ್ಷಗಳಿಂದ ನ್ಯಾಯಾಲಯದ ಬಾಗಿಲು ತಟ್ಟಿದ್ದ ದಂಪತಿಗಳು, ಹಾಗೂ ನವ ಜೋಡಿಗಳು ರಾಷ್ಟ್ರೀಯ ಲೋಕ್ ಅದಾಲತ್ ಸಂದರ್ಭದಲ್ಲಿ ಒಗ್ಗೂಡುವ ಮನಸ್ಸು ಮಾಡಿದ್ದಾರೆ. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಬಿ.ವಿ. ರೇಣುಕಾರವರ ಪ್ರಯತ್ನದ ಫಲವಾಗಿ ವೈಮನಸ್ಸು ಮರೆತು ಒಟ್ಟಾಗಿ ಬಾಳುವ ಪ್ರತಿಜ್ಞೆ ಮಾಡಿದ್ದಾರೆ. ಹಾರ ಬದಲಿಸಿಕೊಂಡು, ಸಿಹಿ ಸವಿದು, ಪರಸ್ಪರ ಕೈ ಹಿಡಿದ ಜೋಡಿಗಳು ನಗುಮೊಗದೊಂದಿಗೆ ನ್ಯಾಯಾಲಯದಿಂದ ಮನೆಗೆ ತೆರಳಿದರು.12ಕೆಆರ್ ಎಂಎನ್ 4.ಜೆಪಿಜಿ
ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಬಿ.ವಿ. ರೇಣುಕಾರವರು ಖುದ್ದಾಗಿ ಭಾಗವಹಿಸಿ ಪ್ರಕರಣಗಳ ವಿಲೇವಾರಿ ನಡೆಸಿದರು.