ಮಂಗಳವಾರ ಸಂಜೆ ವೀರಮಕ್ಕಳಿಂದ ಹಲ್ಲುಮರಿ ಸಿಗಿಯುವ ಕಾರ್ಯಕ್ರಮ ಜರುಗಿತು. ಬಳಿಕ ಎಲ್ಲಾ ದೇವರುಗಳಿಗೆ ಗಂಗಾಸ್ನಾನ, ವಿಶೇಷ ಪೂಜೆ ಹಾಗೂ ಮಹಾಮಂಗಳಾರತಿ ನಡೆಯಿತು. ಬೀಡಿಕೆಯವರು ಹಾಗೂ ಭಕ್ತಾದಿಗಳಿಂದ ಆರತಿ ಸೇವೆ ನಡೆಯಿತು.

ಕನ್ನಡಪ್ರಭ ವಾರ್ತೆ ನಾಗಮಂಗಲ

ತಾಲೂಕಿನ ಬೀರೇಶ್ವರಪುರ ಗ್ರಾಮದಲ್ಲಿ 44 ವರ್ಷಗಳ ನಂತರ ಜರುಗುತ್ತಿರುವ ಶ್ರೀ ಕಾಟಣ್ಣಸ್ವಾಮಿ ಜಾತ್ರಾ ಮಹೋತ್ಸವದ ಪ್ರಯುಕ್ತ ಸೋಮವಾರ ರಾತ್ರಿ ನಡೆದ ಏಳುಕೂಟದ ಬೀರೇದೇವರುಗಳ ಉತ್ಸವ ಹಾಗೂ ಮಂಗಳವಾರ ಮುಂಜಾನೆ ನಡೆದ ವೈಭವದ ಕೊಂಡೋತ್ಸವಕ್ಕೆ 25 ಸಾವಿರಕ್ಕೂ ಹೆಚ್ಚು ಭಕ್ತರು ಸಾಕ್ಷಿಯಾದರು.

ಸೋಮವಾರ ರಾತ್ರಿ ಗ್ರಾಮಕ್ಕೆ ಆಗಮಿಸಿದ ಏಳುಕೂಟದ ದೇವರುಗಳಿಗೆ ಗ್ರಾಮಸ್ಥರು ಧೂಪ ದೀಪದಾರತಿ ಮಾಡಿ ಮಂಗಳವಾದ್ಯ, ತಮಟೆ ಮೇಳದೊಂದಿಗೆ ಅದ್ಧೂರಿ ಸ್ವಾಗತ ಕೋರಿ ಅತ್ಯಂತ ಶ್ರದ್ಧಾಭಕ್ತಿಯಿಂದ ಬರಮಾಡಿಕೊಂಡರು.

ನಂತರ ಗ್ರಾಮದ ಶ್ರೀ ದೊರೆ ದೊಡ್ಡಯ್ಯಸ್ವಾಮಿ, ಶ್ರೀ ಕಾಟಣ್ಣಸ್ವಾಮಿ ಸೇರಿ ತುಪ್ಪದಮಡು ಗ್ರಾಮದ ದಳವಾಯಿ ದೊಡ್ಡಯ್ಯಸ್ವಾಮಿ, ಮುಂಗೊಂಡ ಮುಂದಲಾರತಿ ಚಿಕ್ಕಯ್ಯಸ್ವಾಮಿ, ದೊಡ್ಡಾಬಾಲ ಗ್ರಾಮದ ಮಂತ್ರಿ ಹುಚ್ಚಪ್ಪಸ್ವಾಮಿ, ಹೊಂಗನೂರಮ್ಮದೇವಿ, ಅರಕೆರೆ ಗ್ರಾಮದ ಗಾಳಿಗುಂಡ ಹುಚ್ಚಪ್ಪಸ್ವಾಮಿ ಹಾಗೂ ಜೋಡಿನೇರಲಕೆರೆ ಗ್ರಾಮದ ದೊಡ್ಡದೇವಮ್ಮ ಮತ್ತು ಚಿಕ್ಕದೇವಮ್ಮ ದೇವರುಗಳಿಗೆ ಹೂ- ಹೊಂಬಾಳೆ, ಗಂಗಾಸ್ನಾನದ ನಂತರ ವಿಶೇಷ ಪೂಜಾ ಕೈಂಕರ್ಯ ಹಾಗೂ ಉತ್ಸವಗಳು ಜರುಗಿದವು.

ಜಾತ್ರಾ ಮಹೋತ್ಸವಕ್ಕೆ ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಸಹಸ್ರಾರು ಸಂಖ್ಯೆಯ ಭಕ್ತರಿಗೆ ಬೀರೇಶ್ವರಪುರ, ಬಳಪದ ಮಂಟಿಕೊಪ್ಪಲು, ಗದ್ದೆಭೂವನಹಳ್ಳಿ, ಮರಿಲಿಂಗನದೊಡ್ಡಿ ಸೇರಿದಂತೆ ವಿವಿಧ ಗ್ರಾಮಗಳ ದೇವರ ಒಕ್ಕಲುಗಳ ಬೀಡಿಕೆಯಿಂದ ಸೋಮವಾರ ರಾತ್ರಿ ಅನ್ನಸಂತರ್ಪಣೆ ನಡೆಯಿತು.

ಮಂಗಳವಾರ ಮುಂಜಾನೆ ನಂದಿ ಧ್ವಜ ಕುಣಿತ, ಹಲಗೆ ಕುಣಿತ, ವೀರಮಕ್ಕಳ ಕುಣಿತ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಏಳುಕೂಟದ ದೇವರುಗಳ ಉತ್ಸವ ಮೆರವಣಿಗೆ ನಂತರ ಶ್ರೀ ಕಾಟಣ್ಣಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ವೈಭವದ ಕೊಂಡೋತ್ಸವ ನಡೆಯಿತು. ಕೊಂಡೋತ್ಸವದ ವೇಳೆ ಭಾರೀ ಪ್ರಮಾಣದ ಬಣ್ಣ ಬಣ್ಣದ ಪಟಾಕಿಗಳು ಬಾನಂಗಳದಲ್ಲಿ ಚಿತ್ತಾರ ಮೂಡಿಸಿದವು.

ಬಳಿಕ ಭಕ್ತರು ಸರತಿ ಸಾಲಿನಲ್ಲಿ ನಿಂತು ತಂಬಿಟ್ಟಿನ ಆರತಿಯೊಂದಿಗೆ ಶ್ರೀ ಕಾಟಣ್ಣಸ್ವಾಮಿ ಹಾಗೂ ಏಳು ಕೂಟದ ಬೀರೇದೇವರುಗಳಿಗೆ ಪೂಜೆ ಸಲ್ಲಿಸಿ ತಮ್ಮ ಭಕ್ತಿ ಭಾವ ಸಮರ್ಪಿಸಿದರು. ತಾಲೂಕು ಸೇರಿ ಜಿಲ್ಲೆಯ ವಿವಿಧ ಭಾಗಗಳಿಂದ ಎತ್ತಿನ ಗಾಡಿ, ಟ್ರ್ಯಾಕ್ಟರ್‌ಗಳಲ್ಲಿ ಅಡುಗೆ ಸಾಮಗ್ರಿಗಳೊಂದಿಗೆ ಗ್ರಾಮಕ್ಕಾಗಮಿಸಿದ್ದ ಬೀರೇದೇವರ ಒಕ್ಕಲುಗಳು ನಿಗದಿಪಡಿಸಿದ ಸ್ಥಳಗಳಲ್ಲಿ ಬೀಡಿಕೆ ಹೂಡಿ ಸಹಸ್ರಾರು ಭಕ್ತಾದಿಗಳಿಗೆ ಅವರೆಕಾಳು ಕೂಟು, ಮುದ್ದೆ, ಪಾಯಸ, ಬೂಂದಿ ಅನ್ನಸಂತರ್ಪಣೆ ಮಾಡಿದರು.

ಏಳುಕೂಟದ ದೇವರ ಉತ್ಸವ ಮತ್ತು ವೈಭವದ ಕೊಂಡೋತ್ಸವವನ್ನು ಭಕ್ತರು ಕಣ್ತುಂಬಿಕೊಳ್ಳುವ ಸಲುವಾಗಿ ಜಾತ್ರೆ ನಡೆಯುವ ಹತ್ತಾರು ಸ್ಥಳಗಳಲ್ಲಿ ದೊಡ್ಡದಾದ ಎಲ್ ಇಡಿ ಪರದೆಗಳನ್ನು ಅಳವಡಿಸಲಾಗಿತ್ತು. ಭಕ್ತರ ಅನುಕೂಲಕ್ಕಾಗಿ ಕುಡಿಯುವ ನೀರು ಮತ್ತು ಹತ್ತಾರು ತಾತ್ಕಾಲಿಕ ಶೌಚಾಲಯಗಳ ವ್ಯವಸ್ಥೆ ಮಾಡಲಾಗಿತ್ತು.

ಮಂಗಳವಾರ ಸಂಜೆ ವೀರಮಕ್ಕಳಿಂದ ಹಲ್ಲುಮರಿ ಸಿಗಿಯುವ ಕಾರ್ಯಕ್ರಮ ಜರುಗಿತು. ಬಳಿಕ ಎಲ್ಲಾ ದೇವರುಗಳಿಗೆ ಗಂಗಾಸ್ನಾನ, ವಿಶೇಷ ಪೂಜೆ ಹಾಗೂ ಮಹಾಮಂಗಳಾರತಿ ನಡೆಯಿತು. ಬೀಡಿಕೆಯವರು ಹಾಗೂ ಭಕ್ತಾದಿಗಳಿಂದ ಆರತಿ ಸೇವೆ ನಡೆಯಿತು.

ನಾಲ್ಕು ದಿನಗಳ ಜಾತ್ರಾ ಮಹೋತ್ಸವದ ಹಿನ್ನೆಲೆ ಬೀರೇಶ್ವರಪುರ ಗ್ರಾಮದ ಮುಖ್ಯ ರಸ್ತೆ ಸೇರಿದಂತೆ ಎಲ್ಲಾ ದೇವಸ್ಥಾನಗಳು ಹಾಗೂ ಜಾತ್ರೆ ನಡೆಯುವ ಪ್ರದೇಶದಲ್ಲಿ ಅಲಂಕರಿಸಿದ್ದ ವರ್ಣರಂಜಿತ ವಿದ್ಯುತ್ ದೀಪಾಲಂಕಾರ ಜಾತ್ರೆಗೆ ವಿಶೇಷ ಮೆರಗು ನೀಡಿತು.

ಸಹಸ್ರಾರು ಸಂಖ್ಯೆಯ ಭಕ್ತರ ಸುರಕ್ಷತೆ ದೃಷ್ಟಿಯಿಂದ ಡಿವೈಎಸ್‌ಪಿ ಬಿ.ಚಲುವರಾಜು, ನಾಗಮಂಗಲ ಪಟ್ಟಣ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಶಿವಕುಮಾರ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.