3 ಲಕ್ಷಕ್ಕೂ ಅಧಿಕ ಸಸಿಗಳು ಬೇರೂರಲು ಸಿದ್ಧ

| Published : Jun 01 2025, 02:08 AM IST

ಸಾರಾಂಶ

ತಾಲೂಕಿನ ಅರಣ್ಯ ಇಲಾಖೆಯ ಸಸ್ಯಪಾಲನಾ ಕ್ಷೇತ್ರಗಳಲ್ಲಿ ವಿವಿಧೆಡೆ ಬೇರೂರಲು ಸುಮಾರು 3 ಲಕ್ಷಕ್ಕೂ ಅಧಿಕ ಸಸಿಗಳು ಸಿದ್ಧವಾಗಿವೆ.ತಾಲೂಕಿನ ಹಿಡಕಲ್ ಡ್ಯಾಮ್ ಮತ್ತು ಗುಡಸ ಗ್ರಾಮದ ಸಸ್ಯಪಾಲನಾ ಕ್ಷೇತ್ರಗಳಲ್ಲಿ ವಿವಿಧ ಜಾತಿಯ ರೋಗಾಣು ರಹಿತ ಸಾವಿರಾರು ಉತ್ತಮ ಸಸಿಗಳನ್ನು ಬೆಳೆಸಲಾಗಿದೆ. ಭೀಕರ ಬೇಸಿಗೆ ದಿನಗಳಲ್ಲಿ ನೀರಿನ ಸಮಸ್ಯೆ ಇದ್ದಾಗಲೂ ಕಡಿಮೆ ಅವಧಿಯಲ್ಲಿ ಸಸಿಗಳನ್ನು ಬೆಳೆಸಲಾಗಿದೆ.

ರವಿ ಕಾಂಬಳೆ

ಕನ್ನಡಪ್ರಭ ವಾರ್ತೆ ಹುಕ್ಕೇರಿ

ತಾಲೂಕಿನ ಅರಣ್ಯ ಇಲಾಖೆಯ ಸಸ್ಯಪಾಲನಾ ಕ್ಷೇತ್ರಗಳಲ್ಲಿ ವಿವಿಧೆಡೆ ಬೇರೂರಲು ಸುಮಾರು 3 ಲಕ್ಷಕ್ಕೂ ಅಧಿಕ ಸಸಿಗಳು ಸಿದ್ಧವಾಗಿವೆ.ತಾಲೂಕಿನ ಹಿಡಕಲ್ ಡ್ಯಾಮ್ ಮತ್ತು ಗುಡಸ ಗ್ರಾಮದ ಸಸ್ಯಪಾಲನಾ ಕ್ಷೇತ್ರಗಳಲ್ಲಿ ವಿವಿಧ ಜಾತಿಯ ರೋಗಾಣು ರಹಿತ ಸಾವಿರಾರು ಉತ್ತಮ ಸಸಿಗಳನ್ನು ಬೆಳೆಸಲಾಗಿದೆ. ಭೀಕರ ಬೇಸಿಗೆ ದಿನಗಳಲ್ಲಿ ನೀರಿನ ಸಮಸ್ಯೆ ಇದ್ದಾಗಲೂ ಕಡಿಮೆ ಅವಧಿಯಲ್ಲಿ ಸಸಿಗಳನ್ನು ಬೆಳೆಸಲಾಗಿದೆ.

ದಿನಗೂಲಿಗಳು ಹಾಗೂ ಇಲಾಖೆ ಸಿಬ್ಬಂದಿ ವರ್ಷವಿಡಿ ಕಾರ್ಯನಿರ್ವಹಿಸುತ್ತಿದ್ದಾರೆ. ತನ್ಮೂಲಕ ಅರಣ್ಯ ಅಭಿವೃದ್ಧಿ, ಬರ ಅಳಿಸುವ ಸಂಕಲ್ಪದಿಂದ ಸಸಿಗಳನ್ನು ನೆಟ್ಟು ಸಂರಕ್ಷಿಸುವ ಕಾರ್ಯ ನಡೆಯುತ್ತಿದೆ. ಇದರೊಂದಿಗೆ ತಾಲೂಕಿನ ಅರಣ್ಯ ಕ್ಷೇತ್ರಾಭಿವೃದ್ಧಿ ಮತ್ತಷ್ಟು ವಿಸ್ತರಿಸುವ ಆಶಾಭಾವ ಮೂಡಿಸಿದೆ. ಪ್ರಸಕ್ತ 2025-26ನೇ ಸಾಲಿನಲ್ಲಿ ತಾಲೂಕಿನ ವಿವಿಧ ರಸ್ತೆಗಳ ಬದಿ, ಗೋಮಾಳ, ಸ್ಮಶಾನ, ಶಾಲಾ-ಕಾಲೇಜು, ಸರ್ಕಾರಿ ಕಚೇರಿಗಳ ಆವರಣ ಸೇರಿದಂತೆ ಮತ್ತಿತರ ಕಡೆಗಳಲ್ಲಿ ಸಸಿಗಳನ್ನು ನೆಡಲು ಪ್ರಾದೇಶಿಕ ಮತ್ತು ಸಾಮಾಜಿಕ ವಲಯ ಅರಣ್ಯ ಇಲಾಖೆ ಯೋಜನೆ ರೂಪಿಸಿದೆ. ಅದರನ್ವಯ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಮುಂಗಡ ಗುಂಡಿ ತೆಗೆಯಲಾಗಿದೆ.

ಹಸಿರು ಹಬ್ಬದ ಸಾವಿರಾರು ಸಸಿಗಳ ಬೆಳವಣಿಗೆಯಲ್ಲಿ ವಲಯ ಅರಣ್ಯ ಅಧಿಕಾರಿಗಳಾದ ಬಿ.ಎಲ್.ಸನದಿ, ಭಾರತಿ ನಂದಿಹಳ್ಳಿ ಅವರು ಶ್ರಮಿಸುವ ಮೂಲಕ ಹಸಿರು ಪ್ರೀತಿ ಹುಟ್ಟುಹಾಕಿದ್ದಾರೆ. ಈ ಇಬ್ಬರು ಅಧಿಕಾರಿಗಳದ್ದು ಗಿಡಗಳನ್ನು ಬೆಳೆಸುವುದು ಅವರ ವೃತ್ತಿ. ಆದರೂ, ಹಸಿರೀಕರಣ ಅವರ ಪ್ರವೃತ್ತಿಯಾಗಿದೆ. ಹಾಗಾಗಿ ಅವರ ಕಾಳಜಿಯಿಂದ ಸಾವಿರಾರು ಸಸಿಗಳು ಬೆಳೆದು ಹಸಿರು ಚೆಲ್ಲುತ್ತಿವೆ.ಸಸಿಗಳ ವಿತರಣೆ:

ಪ್ರಾದೇಶಿಕ ಅರಣ್ಯ ಇಲಾಖೆ ಬರ ಅಳಿಸುವುದರ ಕಾಳಜಿ ತೋರಿದ್ದು ಸಸಿಗಳನ್ನು ವಿತರಿಸುವ ಕಾರ್ಯಕ್ಕೆ ಮುಂದಾಗಿದೆ. ಬೇವು, ಅರಳಿ, ಆಲ, ಹೊಂಗೆ, ತಪಸಿ, ಗುಲಗುಂಜಿ, ಬಿಲ್ಪತ್ರಿ, ಕದಂಬ ಸೇರಿದಂತೆ ವಿವಿಧ 20ಕ್ಕೂ ಅಧಿಕ ಜಾತಿಯ ಒಟ್ಟು ಮೂರುವರೆ ಲಕ್ಷ ಸಸಿಗಳನ್ನು ಬೆಳೆಸಲಾಗಿದೆ. ಈ ಬಾರಿ ತಾಲೂಕಿನ ವಿವಿಧ ರಸ್ತೆಗಳ ಬದಿ ಹಾಗೂ ಅರಣ್ಯ ಪ್ರದೇಶದಲ್ಲಿ ಸಸಿಗಳನ್ನು ನೆಡಲು ಉದ್ದೇಶಿಸಲಾಗಿದೆ. ಜೊತೆಗೆ ಮಾವನೂರ, ಚಿಲಭಾಂವಿ, ಶಿರೂರ ಪ್ರದೇಶದಲ್ಲಿ ಅತಿ ಹೆಚ್ಚು ಸಸಿಗಳನ್ನು ನಾಟಿ ಮಾಡಲು ಯೋಜನೆ ರೂಪಿಸಲಾಗಿದೆ.ಇನ್ನು ಸಾಮಾಜಿಕ ಅರಣ್ಯ ವಲಯದಿಂದ ಸಸಿಗಳನ್ನು ನೆಡಲು ನರೇಗಾ ಯೋಜನೆಯಡಿ ಮುಂಗಡ ಗುಂಡಿಗಳನ್ನು ತೆಗೆಯಲಾಗಿದೆ. ಸರ್ಕರಿ ಕಟ್ಟಡ, ಶಾಲಾ-ಕಾಲೇಜು ಆವರಣ, ರೈತರ ಜಮೀನಿನ ಬದುವುಗಳಲ್ಲಿ ಸುಮಾರು 6 ಸಾವಿರಕ್ಕೂ ಹೆಚ್ಚು ಸಸಿಗಳನ್ನು ನೆಡುವ ಗುರಿ ಹೊಂದಲಾಗಿದೆ. ಇದರೊಂದಿಗೆ ಹಸೀರಿಕರಣ ಮತ್ತು ನಗರ ಸೌಂದರ್ಯಕ್ಕಾಗಿ ಹೊಂಗೆ, ತಪಸಿ, ಬಸರಿ, ಗೋನಿ, ಬಾದಾಮ, ಬೇವು, ಅರಳಿ ಸೇರಿದಂತೆ ವಿವಿಧ ಜಾತಿಯ ಸಸಿಗಳನ್ನು ಬೆಳೆಸಲಾಗಿದೆ.ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಹುಕ್ಕೇರಿ ತಾಲೂಕಿನ ವಿವಿಧೆಡೆ ನೆಡಲು ಹಿಡಕಲ್ ಡ್ಯಾಂ ಸಸ್ಯ ಸಮೃದ್ಧಿ ಸಸ್ಯಪಾಲನಾಲಯದಲ್ಲಿ ನಾನಾ ಜಾತಿಯ ಸಸಿಗಳನ್ನು ಬೆಳೆಸಲಾಗಿದೆ. ಹದ ಮಳೆ ಸುರಿಯುತ್ತಿದ್ದು ಶೀಘ್ರವೇ ಸಸಿ ನೆಡುವ ಕಾರ್ಯ ಆರಂಭಿಸಲಾಗುವುದು.

- ಬಿ.ಎಲ್.ಸನದಿ,

ಪ್ರಾದೇಶಿಕ ಆರ್‌ಎಫ್‌ಒನೆಟ್ಟ ಸಸಿಗಳ ಪೋಷಣೆಗೆ ವಿಶೇಷ ಒತ್ತು ನೀಡಲಾಗಿದೆ. ಪರಿಸರ ಪ್ರಜ್ಞೆ ಮೂಡಿಸಲು, ಅರಣ್ಯೀಕರಣಕ್ಕೆ ಪ್ರತಿಯೊಬ್ಬರು ಒಂದು ಸಸಿಯನ್ನಾದರೂ ನೆಟ್ಟು ಪೋಷಿಸಬೇಕು. ರೈತರಿಗೆ ರಿಯಾಯಿತಿ ದರದಲ್ಲಿ ಸಸಿಗಳನ್ನು ವಿತರಿಸಲಾಗುತ್ತಿದೆ.

- ಭಾರತಿ ನಂದಿಹಳ್ಳಿ,
ಸಾಮಾಜಿಕ ಆರ್‌ಎಫ್‌ಒ