ಸಾರಾಂಶ
ಹೊನ್ನಾಳಿ: ಪ್ರಸ್ತುತ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷದ ಪ್ರಚಾರ ಕಾರ್ಯಕ್ಕಾಗಿ ಚುನಾವಣಾ ಕಾರ್ಯಾಲಯವನ್ನು ಏ.11 ಗುರುವಾರ ಬೆಳಗ್ಗೆ 11 ಗಂಟೆಗೆ ಹೊನ್ನಾಳಿ ಪಟ್ಟಣದ ಹೊನ್ನಾಳಿ-ಶಿವಮೊಗ್ಗ ಮುಖ್ಯ ರಸ್ತೆಯ ಪಕ್ಕದ ಕಟ್ಟಡದಲ್ಲಿ ಆರಂಭಿಸಲಾಗುವುದು ಎಂದು ಪಕ್ಷದ ತಾಲೂಕು ಅಧ್ಯಕ್ಷ ಜೆ.ಕೆ.ಸುರೇಶ್ ತಿಳಿಸಿದರು.
ಪಕ್ಷದ ಕಚೇರಿಯಲ್ಲಿ ಭಾನುವಾರ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ನೇತೃತ್ವದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ಕಾರ್ಯಾಲಯದ ಉದ್ಘಾಟನೆಗಾಗಿ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ, ಸಂಸದ ಜಿ.ಎಂ.ಸಿದ್ದೇಶ್ವರ, ಚುನಾವಣಾ ಉಸ್ತುವಾರಿ ಎಸ್.ಎ.ರವೀಂದ್ರನಾಥ, ಜಿಲ್ಲಾಧ್ಯಕ್ಷ ರಾಜಶೇಖರ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸೇರಿದಂತೆ ಹಲವಾರು ಬಿಜೆಪಿ ಮುಖಂಡರು, ಹೊನ್ನಾಳಿ ವಿಧಾನಸಭಾ ಕ್ಷೇತ್ರದ ಹೊನ್ನಾಳಿ, ನ್ಯಾಮತಿ ಅವಳಿ ತಾಲೂಕುಗಳ ಮುಖಂಡರು, ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಏ.11 ಗುರುವಾರ ಪಕ್ಷದ ನೂತನ ಚುನಾವಣಾ ಕಾರ್ಯಾಲಯ ಉದ್ಘಾಟನೆ ಬಳಿಕ ಕಟ್ಟಡ ಪಕ್ಕದ ಅವರಣದಲ್ಲಿ ತಾಲೂಕುಗಳ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರ ಸಭೆಯನ್ನು ಕೂಡ ಕರೆಯಲಾಗಿದೆ.400ಕ್ಕೂ ಹೆಚ್ಚಿನ ಸ್ಥಾನ ನಿಶ್ಚಿತವಾಗಿ ಬೆಜಿಪಿ ಗೆಲ್ಲಲಿದೆ: ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ಮಾಜಿ ಸಚಿವ ಹಾಗೂ ಚುನಾವಣಾ ತಾಲೂಕು ಸಂಚಾಲಕ ಎಂ.ಪಿ.ರೇಣುಕಾಚಾರ್ಯ ಅವರು ಮಾತನಾಡಿ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶದಲ್ಲಿ ಸುಮಾರು 400ಕ್ಕೂ ಹೆಚ್ಚಿನ ಸ್ಥಾನಗಳಲ್ಲಿ ಗೆಲವು ಸಾಧಿಸಿ ಮೋದಿ ಅವರು 3ನೇ ಬಾರಿಗೆ ಮತ್ತೊಮ್ಮೆ ದೇಶದ ಪ್ರಧಾನಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ದೃಢ ವಿಶ್ವಾಸ ವ್ಯಕ್ತಪಡಿಸಿದರು.
ಇದೇ ರೀತಿ ರಾಜ್ಯದಲ್ಲಿ ಕೂಡ 28 ಕ್ಷೇತ್ರಗಳಲ್ಲಿ ಎನ್‌ಡಿಎ ಗೆಲವು ಸಾಧಿಸಲಿದೆ. ಈ ಬಾರಿಯ ಲೋಕಸಭಾ ಚುನಾವಣೆ ಇಡೀ ಭವಿಷ್ಯದ ಚುನಾವಣೆಯಾಗಿದ್ದು, ಒಂದು ಕಾಲದಲ್ಲಿ ಆರ್ಥಿಕ ಕ್ಷೇತ್ರದಲ್ಲಿ 10ನೇ ಸ್ಥಾನದಲ್ಲಿದ್ದ ಭಾರತ ಮೋದಿ ಅವರು ದೂರದೃಷ್ಟಿತನಕ್ಕೆ 3ನೇ ಸ್ಥಾನದಲ್ಲಿದೆ ಎಂದರು.ಬಿಜೆಪಿಯಲ್ಲಿ ಎಂದೂ ಭಿನ್ನಾಭಿಪ್ರಾಯಗಳಿರಲಿಲ್ಲ ಆದರೆ ಪಕ್ಷದ ಮುಖಂಡರ ನಡುವೆ ಅಭಿಪ್ರಾಯಗಳು ಬೇರೆ ಬೇರೆಯಾಗಿರುವುದು ಸಹಜ. ಚುನಾವಣೆ ಅಂತ ಸಂದರ್ಭದಲ್ಲಿ ಎಲ್ಲಾ ಅಭಿಪ್ರಾಯಗಳ ವ್ಯತ್ಯಾಸಗಳನ್ನು ಮರೆತು ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಅತ್ಯಧಿಕ ಮತಗಳ ಆಂತರದಿಂದ ಗೆಲ್ಲಿಸುವುದೇ ಬಹುಮುಖ್ಯವಾಗಿರುತ್ತದೆ ಎಂದು ಸ್ಪಷ್ಟಪಡಿಸಿದರು.
ಕೆ.ಪಿ.ಕುಬೇಂದ್ರಪ್ಪ, ಸುರೇಂದ್ರನಾಯ್ಕ, ಧರ್ಮಪ್ಪ, ಎಂ.ಎಸ್.ಪಾಲಾಕ್ಷಪ್ಪ, ಮಂಜುನಾಥ ನೆಲಹೊನ್ನೆ, ಅರಕೆರೆ ನಾಗರಾಜ್, ಸಿ.ಆರ್. ಶಿವಾನಂದಪ್ಪ, ದಿಡಗೂರು ಪಾಲಾಕ್ಷಪ್ಪ, ದೊಡ್ಡೇರಿ ಡಿ.ಜಿ.ರಾಜಪ್ಪ, ಮಾರುತಿನಾಯ್ಕ, ಇಂಚರ ಮಂಜು, ನ್ಯಾಮತಿ ರವಿಕುಮಾರ್, ಕೆ.ವಿ.ಶ್ರೀಧರ, ಮಹೇಶ್ ಹುಡೇದ್ ಬಾಬೂ ಹೊಬಳದಾರ್ ಸೇರಿದಂತೆ ನ್ಯಾಮತಿ ಮತ್ತು ಹೊನ್ನಾಳಿ ತಾಲೂಕುಗಳ ಮುಖಂಡರು ಮತ್ತು ಕಾರ್ಯಕರ್ತರು ಇದ್ದರು.