ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಕಂದಾಯ ಇಲಾಖೆಯಲ್ಲಿ ಬಾಕಿ ಉಳಿದಿದ್ದ 4600ಕ್ಕೂ ಹೆಚ್ಚು ಕಂದಾಯ ನ್ಯಾಯಾಲಯ ಪ್ರಕರಣಗಳನ್ನು ಕಳೆದ 6 ತಿಂಗಳಲ್ಲಿ ವಿಲೇವಾರಿ ಮಾಡುವ ಮೂಲಕ ಮಂಡ್ಯ ಜಿಲ್ಲೆ ಇಡೀ ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.ನಗರದ ಬನ್ನೂರು ರಸ್ತೆಯ ಪೊಲೀಸ್ ಕಾವಾಯಿತು ಮೈದಾನದಲ್ಲಿ ಜಿಲ್ಲಾಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಆಯೋಜಿಸಿದ್ದ 75ನೇ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ತಹಸೀಲ್ದಾರ್, ಉಪವಿಭಾಗಾಧಿಕಾರಿ ಮತ್ತು ಜಿಲ್ಲಾಧಿಕಾರಿಗಳ ನ್ಯಾಯಾಲಯಗಳಲ್ಲಿ ಬಾಕಿ ಇದ್ದ ಸುಮಾರು 4,600ಕ್ಕೂ ಹೆಚ್ಚು ಪ್ರಕರಣ ಇತ್ಯರ್ಥಪಡಿಸಲಾಗಿದೆ ಎಂದರು.
ಮೃತ ಪಟ್ಟವ್ಯಕ್ತಿಯ ವಾರಸುದಾರರು, ವಾರಸು ನೆಲೆಯಲ್ಲಿ ಹಕ್ಕು ಬದಲಾವಣೆಗಾಗಿ ತಾಲೂಕು ಕಚೇರಿಗೆ ಅಲೆಯುವುದನ್ನು ತಪ್ಪಿಸಲು ಜಿಲ್ಲಾಧಿಕಾರಿಗಳ ವಿಶೇಷ ಆಸಕ್ತಿಯಿಂದಾಗಿ ಪೌತಿ ಖಾತಾ ಆಂದೋಲನ ಹಮ್ಮಿಕೊಂಡು ಕಳೆದ 6 ತಿಂಗಳಲ್ಲಿ ಒಟ್ಟು 150ಕ್ಕೂ ಹೆಚ್ಚು ಪೌತಿ ಖಾತೆ ಆಂದೋಲನ ನಡೆಸಿ 7 ಸಾವಿರಕ್ಕೂ ಹೆಚ್ಚು ಪೌತಿ ಖಾತೆ ಮಾಡಲಾಗಿದೆ ಎಂದರು.ಕಳೆದ 6 ತಿಂಗಳಿಂದ 12 ಸಾವಿರಕ್ಕೂ ಹೆಚ್ಚು ಆರ್.ಟಿ.ಸಿ ತಿದ್ದುಪಡಿ, ಕಂದಾಯ ದಾಖಲೆ ಸಂರಕ್ಷಿಸುವ ದೃಷ್ಟಿಯಿಂದ ಕಂದಾಯ ಭೂ ದಾಖಲೆಗಳ ಆಧುನೀಕರಣಕ್ಕಾಗಿ ಪೈಲಟ್ ಆಧಾರದಲ್ಲಿ ಪಾಂಡವಪುರ ತಾಲೂಕಿನಲ್ಲಿ 35 ಲಕ್ಷ ರು. ವೆಚ್ಚದಲ್ಲಿ ಭೂ ದಾಖಲೆಗಳ ಗಣಕೀಕರಣ ಮಾಡಲು ಯೋಜನೆ ರೂಪಿಸಲಾಗಿದೆ. ಉಳಿದ ತಾಲೂಕುಗಳಲ್ಲಿಯೂ ಮುಂದಿನ ದಿನಗಳಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದರು.
ಮಳೆಯ ಕೊರತೆಯಿಂದಾಗಿ ಉಂಟಾದ ಬೆಳೆ ನಷ್ಟಕ್ಕೆ ಪರಿಹಾರ ನೀಡುವ ಸಲುವಾಗಿ ಗರಿಷ್ಠ 2,000 ರವರೆಗೆ ಪರಿಹಾರ ವಿತರಿಸಲಾಗುತ್ತಿದೆ. ಈವರೆಗೆ ಜಿಲ್ಲೆಯ 74,489 ರೈತರಿಗೆ 28.89 ಕೋಟಿ ರು. ಹಣವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲು ಕ್ರಮವಹಿಸಲಾಗಿದೆ. ಬರ ಪರಿಸ್ಥಿತಿ ತುರ್ತು ಕ್ರಮ ನಿರ್ವಹಿಸಲು ಈಗಾಗಲೇ 10.50 ಕೋಟಿ ರು. ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು.ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಜಿಲ್ಲೆಯ 233 ಗ್ರಾಪಂಗಳಲ್ಲಿ ಇ-ಸ್ವತ್ತು ಅಭಿಯಾನ ಕೈಗೊಳ್ಳಲಾಗಿದೆ. ಮನೆ ಮತ್ತು ನಿವೇಶನದ ಮಾಲೀಕರಿಗೆ ಇ-ಸ್ವತ್ತು ತಂತ್ರಾಂಶದಲ್ಲಿ 8,663 ಇ-ಸ್ವತ್ತು ದಾಖಲೆಗಳನ್ನು ವಿಶೇಷ ಆಂದೋಲನದ ಮೂಲಕ ನೀಡಲಾಗಿದೆ ಎಂದರು.
ಜಿಲ್ಲೆಯ ರೈತರ ಜೀವನಾಡಿ ಮೈಷುಗರ್ ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ ಸರ್ಕಾರ 50 ಕೋಟಿ ರು. ಅನುದಾನ ನೀಡಿದೆ. ಜಿಲ್ಲೆಯ ರೈತರ ಮತ್ತು ಜನಪ್ರತಿನಿಧಿಗಳ ಸಹಕಾರದಿಂದ 2.41 ಲಕ್ಷ ಮೆಟ್ರಿಕ್‌ಟನ್ ಕಬ್ಬನ್ನು ನುರಿಸಿ ಈಗಾಗಲೇ 1.68 ಲಕ್ಷ ಕ್ವಿಂಟಲ್ ಸಕ್ಕರೆ ಉತ್ಪಾದಿಸಲಾಗಿರುತ್ತದೆ ಎಂದರು.ಜಿಲ್ಲೆಯ ಐತಿಹಾಸಿಕ 151 ಸ್ಮಾರಕಗಳನ್ನು ಸಂರಕ್ಷಿಸಲಾಗಿದೆ. ವಿ.ಸಿ.ನಾಲೆ ಎರಡನೇ ಹಂತದ ಆಧುನೀಕರಣ ಪ್ಯಾಕೇಜ್-1 ಕಾಮಗಾರಿಯನ್ನು ಅಂದಾಜು ಮೊತ್ತ 360 ಕೋಟಿ ರು.ಗಳಲ್ಲಿ ತೆಗೆದುಕೊಳ್ಳಲಾಗಿದೆ. ಮುಖ್ಯ ನಾಲೆಯ ಸರಪಳಿಯಿಂದ 46.25 ಕಿ.ಮೀ.ವರೆಗೆ ಆಧುನೀಕರಣಗೊಳಿಸಲು ಉದ್ದೇಶಿಸಲಾಗಿದೆ ಎಂದರು.
ಪೂರಿಗಾಲಿ ಸೂಕ್ಷ್ಮ ನೀರಾವರಿ ಯೋಜನೆಯಡಿ 593 ಕೋಟಿ ರು.ಗಳಲ್ಲಿ ಮಳವಳ್ಳಿ ತಾಲೂಕಿನ 51 ಗ್ರಾಮಗಳ 25000 ಎಕರೆ ಪ್ರದೇಶಕ್ಕೆ ಹನಿ ನೀರನ್ನು ಒದಗಿಸಲು ಹಾಗೂ 16 ಕೆರೆ ತುಂಬಿಸಲು ಯೋಜನೆ ರೂಪಿಸಲಾಗಿದೆ ಎಂದರು.ಕೆಮ್ಮಣ್ಣುನಾಲೆ, ತುರಗನೂರು ನಾಲೆ, ಹೆಬ್ಬಕವಾಡಿ ಮತ್ತು ಸಂಪರ್ಕ ನಾಲೆಗಳ ಆಧುನೀಕರಣ ಕಾಮಗಾರಿಗಳನ್ನು 375 ಕೋಟಿ ರು.ಗಳ ವೆಚ್ಚದಲ್ಲಿ ಕೈಗೆತ್ತಿಕೊಂಡು ಪೂರ್ಣಗೊಳಿಸಲು ಉದ್ದೇಶಿಸಲಾಗಿರುತ್ತದೆ ಎಂದರು.
ಮಳೆ ಕೊರೆ ನಡುವೆ ಮಳೆ ಆಶ್ರಿತ ಪ್ರದೇಶಗಳಲ್ಲಿ ಸುಸ್ಥಿರ ಕೃಷಿಗೆ ಒತ್ತು ನೀಡುವ ನಿಟ್ಟಿನಲ್ಲಿ ನಮ್ಮ ಸರ್ಕಾರವು ರಾಜ್ಯಾದ್ಯಂತ ಕೃಷಿ ಭಾಗ್ಯ ಯೋಜನೆಯನ್ನು 200 ಕೋಟಿ ರು.ವೆಚ್ಚದಲ್ಲಿ ಮರುಜಾರಿಗೊಳಿಸಿದೆ. ಪ್ರಸಕ್ತ ಜಿಲ್ಲೆಯಲ್ಲಿ ಕೃಷಿ ಭಾಗ್ಯ ಯೋಜನೆ ಅನುಷ್ಠಾನಗೊಳಿಸಲು 653.8 ಲಕ್ಷ ರು.ಅನುದಾನ ಮೀಸಲಿಡಲಾಗಿದೆ ಎಂದರು.ಶಿವಪುರ ಧ್ವಜ ಸತ್ಯಾಗ್ರಹ ಸೌಧದ ಅಭಿವೃದ್ಧಿ ಮತ್ತು ನಿರ್ವಹಣೆಗಾಗಿ ಪ್ರತಿಷ್ಟಾನ ರಚನೆ, ಮೇಲುಕೋಟೆ ಅಭಿವೃದ್ಧಿ ಪ್ರಾಧಿಕಾರ ರಚನೆ ಮತ್ತು ಮಂಡ್ಯ ನಗರದ ಕಲಾಮಂದಿರ ನವೀಕರಣ ಸಂಬಂಧ ಕ್ರಮ ವಹಿಸಲಾಗುತ್ತಿದೆ ಎಂದು ಸಚಿವರು ಧ್ವಜಾರೋಹಣ ಸಂದೇಶದಲ್ಲಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ಪಿ.ರವಿಕುಮಾರ್, ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.