ಹಾವೇರಿ ನಗರದಲ್ಲಿ ವಿಶೇಷ ಅಭಿಯಾನ ಹಮ್ಮಿಕೊಂಡಿರುವ ನಗರಸಭೆ, 4800ಕ್ಕೂ ಹೆಚ್ಚು ಅನಧಿಕೃತ ಕುಡಿಯುವ ನೀರಿನ ನಳ ಸಂಪರ್ಕ ಇರುವುದನ್ನು ಪತ್ತೆ ಹಚ್ಚಿದೆ. ಈ ಕುರಿತು ಮಂಗಳವಾರದಿಂದ ವಿಶೇಷ ಕರ ವಸೂಲಿ ಅಭಿಯಾನ ನಡೆಸುವ ಮೂಲಕ ಹಲವಾರು ವರ್ಷಗಳಿಂದ ತೆರಿಗೆ ಉಳಿಸಿಕೊಂಡವರಿಂದ ಬಾಕಿ ವಸೂಲಿಗೆ ಮುಂದಾಗಿದೆ.

ಹಾವೇರಿ: ನಗರದಲ್ಲಿ ವಿಶೇಷ ಅಭಿಯಾನ ಹಮ್ಮಿಕೊಂಡಿರುವ ನಗರಸಭೆ, 4800ಕ್ಕೂ ಹೆಚ್ಚು ಅನಧಿಕೃತ ಕುಡಿಯುವ ನೀರಿನ ನಳ ಸಂಪರ್ಕ ಇರುವುದನ್ನು ಪತ್ತೆ ಹಚ್ಚಿದೆ. ಈ ಕುರಿತು ಮಂಗಳವಾರದಿಂದ ವಿಶೇಷ ಕರ ವಸೂಲಿ ಅಭಿಯಾನ ನಡೆಸುವ ಮೂಲಕ ಹಲವಾರು ವರ್ಷಗಳಿಂದ ತೆರಿಗೆ ಉಳಿಸಿಕೊಂಡವರಿಂದ ಬಾಕಿ ವಸೂಲಿಗೆ ಮುಂದಾಗಿದೆ.

ಸ್ಥಳೀಯ ನಗರಸಭೆ ವ್ಯಾಪ್ತಿಯಲ್ಲಿ 90 ಸಾವಿರಕ್ಕೂ ಹೆಚ್ಚು ಜನ ವಾಸಿಸುತ್ತಿದ್ದು, ಪ್ರಸ್ತುತ 9 ಸಾವಿರಕ್ಕೂ ಅಧಿಕ ಅಧಿಕೃತ ನಳ ಸಂಪರ್ಕ ಇವೆ. ವಾಸ್ತವವಾಗಿ 16 ಸಾವಿರ ನಳಗಳ ಸಂಪರ್ಕವಿದ್ದು, ನಗರಸಭೆ ಸಿಬ್ಬಂದಿ ಮನೆಮನೆಗೆ ಭೇಟಿ ನೀಡಿ ಪರಿಶೀಲಿಸಿದಾಗ 4,800ಕ್ಕೂ ಹೆಚ್ಚು ಅನಧಿಕೃತ ನಳಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಮಂಗಳವಾರ ನಗರಸಭೆ ಅಧಿಕಾರಿ, ಸಿಬ್ಬಂದಿ ವಿಶೇಷ ಅಭಿಯಾನ ಕೈಗೊಂಡು ಮನೆ ಮನೆಗೆ ಭೇಟಿ ನೀಡಿ ನೀರಿನ ಕರ ಬಾಕಿ, ಮನೆ ಕರ ಬಾಕಿ ಕ್ರಮ ಕೈಗೊಂಡರು. ಅನಧಿಕೃತ ನಳ ಸಂಪರ್ಕ ಇರುವವರಿಗೆ ನೋಟಿಸ್ ನೀಡಲಾಯಿತು. ಅನಧಿಕೃತ ನಲ್ಲಿ ಸಂಪರ್ಕ ಇರುವ ಮನೆಗಳ ಮಾಲೀಕರಿಗೆ 10,660 ರು. ದಂಡವನ್ನು ವಿಧಿಸಿ, ಅಧಿಕೃತ ಮಾಡಿಕೊಳ್ಳುವಂತೆ ಸೂಚನೆ ನೀಡಿದರು. ನಿಗದಿತ ಅವಧಿಯೊಳಗೆ ಅನಧಿಕೃತ ನಳಗಳನ್ನು ಅಧಿಕೃತ ಮಾಡಿಕೊಳ್ಳದಿದ್ದರೆ, ಕುಡಿಯುವ ನೀರು ಸಂಪೂರ್ಣವಾಗಿ ಬಂದ್ ಮಾಡುವ ಬಗ್ಗೆ ಖಡಕ್ ಎಚ್ಚರಿಕೆಯನ್ನು ನೀಡಿದರು.

ನಗರಸಭೆ ವ್ಯಾಪ್ತಿಯಲ್ಲಿ ಸುಮಾರು 7 ಕೋಟಿ ರು. ಕರ ಬಾಕಿ ಬರಬೇಕಿದೆ. ಸುಮಾರು 15 ವರ್ಷಗಳಿಂದಲೂ ಮನೆ ಕರ, ನೀರಿನ ಕರ ಪಾವತಿಸದೆ ಇರುವವರು ಇದ್ದಾರೆ. ಕನಿಷ್ಠ 5 ಸಾವಿರದಿಂದ ಗರಿಷ್ಠ 25 ಸಾವಿರ ರು.ತನಕ ಬಾಕಿ ಉಳಿಸಿಕೊಂಡವರು ಇದ್ದಾರೆ. ತಿಂಗಳಿಗೆ 120 ರು.ನಂತೆ ಕರ ಪಾವತಿಸಬೇಕಾಗುತ್ತದೆ. ಹೆಚ್ಚಿಗೆ ಬಾಕಿ ಉಳಿಸಿಕೊಂಡವರು ಕಂತಿನ ಪ್ರಕಾರ ಬಾಕಿ ಕರ ಪಾವತಿಸಲು ಅವಕಾಶ ನೀಡಲಾಗುತ್ತದೆ ಎಂದು ಪೌರಾಯುಕ್ತರು ತಿಳಿಸಿದರು.

ಕರ ವಸೂಲಿಗೆ ಬಂದ ನಗರಸಭೆ ಅಧಿಕಾರಿಗಳು, ಸಿಬ್ಬಂದಿ ಜತೆಗೆ ನಿವಾಸಿಗಳು ವಾಗ್ವಾದ ನಡೆಸಿದರು. ಸ್ಥಳೀಯ ಅಶ್ವಿನಿ ನಗರದಲ್ಲಿ ಮಂಗಳವಾರ ನಗರಸಭೆ ಕರ ವಸೂಲಿಗೆ ಪೌರ ಕಾರ್ಮಿಕರು ಹಲಗೆ ಬಾರಿಸಿದರೆ, ಸಿಬ್ಬಂದಿಗಳು ಬಾಕಿ ಕರ ಪಾವತಿಸುವಂತೆ ಮಾಹಿತಿ ತಿಳಿಸುತ್ತಿದ್ದರು. ಕೆಲವರು ಸ್ಥಳದಲ್ಲೇ ಹಣ ಪಾವತಿಸಿದರೆ, ಇನ್ನೂ ಕೆಲವರು ಕಂತು ಮಾದರಿಯಲ್ಲಿ ಹಣ ಪಾವತಿಸುವುದಾಗಿ ತಿಳಿಸಿದರು. ಪಾವತಿ ಮಾಡದೇ ಇರುವ 10ಕ್ಕೂ ಹೆಚ್ಚು ಮನೆಗಳ ನಳ ಸಂಪರ್ಕವನ್ನು ಬಂದ್ ಮಾಡಿಸಿದರು. ಇನ್ನೂ ವಿಶ್ವೇಶತೀರ್ಥ ನಗರದಲ್ಲಿ ನಗರಸಭೆ ಅನುಮತಿ ಪಡೆಯದೆ ರಸ್ತೆಯಲ್ಲಿ ಗೂಡಂಗಡಿ ಇಟ್ಟಿದ್ದ ಮಹಿಳೆ ಜತೆಗೆ ಅನುಮತಿ ಪಡೆದುಕೊಳ್ಳುವ ವಿಚಾರವಾಗಿ ವಾಗ್ವಾದ ನಡೆಯಿತು. ಈ ವೇಳೆ ಪೌರಾಯುಕ್ತ ಕಾಂತರಾಜು ಎಚ್., ಪಿ.ಡಿ. ಚಂದ್ರಪ್ಪ ಸಿ., ಎಇಇ ಮಹೇಶ ಕಲಾಲ ಸೇರಿದಂತೆ ನಗರಸಭೆ ಅಧಿಕಾರಿಗಳು, ಸಿಬ್ಬಂದಿ, ಪೌರ ಕಾರ್ಮಿಕರು ಇದ್ದರು.ಕಳೆದ ಹತ್ತಾರು ವರ್ಷಗಳಿಂದ ಬಾಕಿ ಉಳಿಸಿಕೊಂಡಿರುವ ನೀರಿನ ಕರ, ಮನೆ ಕರವನ್ನು ನಿಗದಿತ ಕಾಲಮಿತಿಯೊಳಗೆ ಭರಿಸುವುದರಿಂದ ಸಿಬ್ಬಂದಿಗಳಿಗೆ ಸಂಬಳ ಕೊಡಲು ಹಾಗೂ ಹೆಚ್ಚಿನ ಸೇವೆಗಳನ್ನು ಒದಗಿಸಲು ಅನುಕೂಲವಾಗಲಿದೆ. ನಗರದ ಸಾರ್ವಜನಿಕರು ನಗರಸಭೆಗೆ ಸಹಕರಿಸಬೇಕು ಎಂದು ಪೌರಾಯುಕ್ತ ಕಾಂತರಾಜು ಎಚ್. ಹೇಳಿದರು.