ಕಲುಷಿತ ನೀರು ಸೇವಿಸಿ 60ಕ್ಕು ಅಧಿಕ ಜನ ಅಸ್ವಸ್ಥ

| Published : Jul 29 2025, 01:52 AM IST

ಸಾರಾಂಶ

ಕನ್ನಡಪ್ರಭವಾರ್ತೆ ಬಸವನಬಾಗೇವಾಡಿ ಕಲುಷಿತ ನೀರು ಕುಡಿದು ಗ್ರಾಮದ ಸುಮಾರು 60ಕ್ಕೂ ಅಧಿಕ ಜನರು ಅಸ್ವಸ್ಥಗೊಂಡ ಘಟನೆ ನಿಡಗುಂದಿ ತಾಲೂಕಿನ ಬ್ಯಾಲ್ಯಾಳ ಗ್ರಾಮದಲ್ಲಿ ಶನಿವಾರ ನಡೆದಿದೆ. ಅಸ್ವಸ್ಥಗೊಂಡವರು ಬಸವನಬಾಗೇವಾಡಿ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದು, ಕೆಲವರು ಹತ್ತಿರದ ವಿವಿಧ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.ಗ್ರಾಮದ ಕೊಳವೆಬಾವಿ ನೀರು ಕುಡಿದಿದ್ದರಿಂದ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ತಿಳಿದುಬಂದಿದೆ.

ಕನ್ನಡಪ್ರಭವಾರ್ತೆ ಬಸವನಬಾಗೇವಾಡಿ

ಕಲುಷಿತ ನೀರು ಕುಡಿದು ಗ್ರಾಮದ ಸುಮಾರು 60ಕ್ಕೂ ಅಧಿಕ ಜನರು ಅಸ್ವಸ್ಥಗೊಂಡ ಘಟನೆ ನಿಡಗುಂದಿ ತಾಲೂಕಿನ ಬ್ಯಾಲ್ಯಾಳ ಗ್ರಾಮದಲ್ಲಿ ಶನಿವಾರ ನಡೆದಿದೆ. ಅಸ್ವಸ್ಥಗೊಂಡವರು ಬಸವನಬಾಗೇವಾಡಿ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದು, ಕೆಲವರು ಹತ್ತಿರದ ವಿವಿಧ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.ಗ್ರಾಮದ ಕೊಳವೆಬಾವಿ ನೀರು ಕುಡಿದಿದ್ದರಿಂದ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ತಿಳಿದುಬಂದಿದೆ.

ವಿಷಯ ತಿಳಿದು ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಸೋಮವಾರ ಬಸವನಬಾಗೇವಾಡಿ ಆಸ್ಪತ್ರೆಗೆ ಭೇಟಿ ನೀಡಿ ಅಸ್ವಸ್ಥಗೊಂಡವರ ಆರೋಗ್ಯ ವಿಚಾರಿಸಿದರು. ನಂತರ ಬಾಲ್ಯಾಳ ಗ್ರಾಮಕ್ಕೆ ಭೇಟಿ ನೀಡಿ ನೀರಿನ ವ್ಯವಸ್ಥೆ ಪರಿಶೀಲಿಸಿದರು. ಕಲುಷಿತ ನೀರು ಪೂರೈಕೆಯ ಬೋರವೆಲ್ ಬಂದ್ ಮಾಡಬೇಕು. ಜನರಿಗೆ ಶುದ್ಧವಾದ ಕುಡಿಯುವ ನೀರು ಪೂರೈಸಬೇಕು. ಜನರ ಆರೋಗ್ಯದ ಬಗ್ಗೆ ನಿಗಾವಹಿಸಬೇಕೆಂದು ಗ್ರಾಮ ಪಂಚಾಯತಿ ಅಧಿಕಾರಿಗೆ ಸೂಚಿಸಿದರು. ಈ ವೇಳೆ ನಿಡಗುಂದಿ ತಾಪಂ ಇಒ, ಬಾಬುಗೌಡ ಪಾಟೀಲ ಇತರರು ಇದ್ದರು.

ತಾಲೂಕು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಸಾಬೀರ ಪಟೇಲ, ಬ್ಯಾಲ್ಯಾಳ ಗ್ರಾಮದಲ್ಲಿ ಕಲುಷಿತ ನೀರು ಸೇವನೆಯಿಂದ ಗ್ರಾಮಸ್ಥರು ವಾಂತಿ, ಭೇದಿಯಿಂದ ಬಳಲುತ್ತಿದ್ದಾರೆ. ಶನಿವಾರದಿಂದಲೇ ಆಸ್ಪತ್ರೆಗೆ ಚಿಕಿತ್ಸೆಗೆ ಬರುತ್ತಿದ್ದಾರೆ. ಆಸ್ಪತ್ರೆಗೆ ಬಂದವರಿಗೆ ಚಿಕಿತ್ಸೆ ನೀಡಿ ಉಪಚರಿಸಲಾಗುತ್ತಿದೆ. ಈಗಾಗಲೇ ಕೆಲವರು ಹುಷಾರಾಗಿ ಮನೆಗೆ ತೆರಳಿದ್ದು, ಮಕ್ಕಳು ಸೇರಿದಂತೆ ಹತ್ತು ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲವರು ಇಟಗಿ ಆರೋಗ್ಯ ಕೇಂದ್ರದಲ್ಲಿಯೂ ಚಿಕಿತ್ಸೆ ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು.ತಾಲೂಕು ಆರೋಗ್ಯಾಧಿಕಾರಿ ಡಾ.ಕವಿತಾ ದೊಡಮನಿ, ಜಿಲ್ಲಾ ಸರ್ವೇಕ್ಷಾಣಾಧಿಕಾರಿ ಡಾ.ಅಪ್ಪಾಸಾಬ ಇನಾಮದಾರ, ಡಾ.ಮುಸ್ತಖಾ, ಡಾ.ಬಸವರಾಜ ಝಳಕಿ, ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಎಸ್.ಮೇಟಿ, ಹಿರಿಯ ಆರೋಗ್ಯ ನಿರೀಕ್ಷಕ ರಾಜಶೇಖರ ಚಿಂಚೋಳ್ಳಿ ಇತರರು ಇದ್ದರು.