ಮೆಟ್ರಿಕ್ ಮೇಳದಲ್ಲಿ ೬೦೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿ

| Published : Sep 01 2024, 01:46 AM IST

ಸಾರಾಂಶ

ಪುಸ್ತಕ, ಪೆನ್ನು ಕೈಯಲ್ಲಿಡಿದು ವಿದ್ಯಾಭ್ಯಾಸ ಕಲಿಯುತ್ತಿದ್ದ ವಿದ್ಯಾರ್ಥಿಗಳು ವ್ಯಾಪಾರ ಮಾಡಿದರು. ‘ಬನ್ನಿ ಅಣ್ಣ, ಬನ್ನಿ ಅಕ್ಕ, ತಾಜಾ ತಾಜಾ ತರಕಾರಿ ಕಡಿಮೆ ಬೆಲೆಗೆ ಖರೀದಿ ಮಾಡಿಕೊಳ್ಳಿ, ಬನ್ನಿ ಸಿಹಿ ತಿಂಡಿಗಳು ಮಾಡಿದ್ದೀವಿ, ಒಂದು ತಗೊಂಡ್ರೆ, ಮತ್ತೊಂದು ಫ್ರೀ’ ಎಂದು ಜನರನ್ನು ವ್ಯಾಪಾರ ಮಾಡುವಂತೆ ಆಕರ್ಷಣೆ ಮಾಡಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ವಿಜಯಪುರ, ಚನ್ನರಾಯಪಟ್ಟಣ ಹೋಬಳಿಯ ಸರ್ಕಾರಿ ಅನುದಾನಿತ ಮತ್ತು ಅನುದಾನರಹಿತ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ವಿಜಯಪುರ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ಆವರಣದಲ್ಲಿ ತಾಲೂಕು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ಆಯೋಜಿಸಿದ್ದ ಕಲೋತ್ಸವ, ಮೆಟ್ರಿಕ್ ಮೇಳ ಚಟುವಟಿಕೆ ಆಧಾರಿತ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಹನೀಪುಲ್ಲಾ, ಕನ್ನಡ ಸಾಹಿತ್ಯ ಪರಿಷತ್ ಟೌನ್ ಅಧ್ಯಕ್ಷ ಜೆ. ಶ್ರೀನಿವಾಸ್ ಸೇರಿದಂತೆ ವಿವಿಧ ಗಣ್ಯರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಪುಸ್ತಕ, ಪೆನ್ನು ಕೈಯಲ್ಲಿಡಿದು ವಿದ್ಯಾಭ್ಯಾಸ ಕಲಿಯುತ್ತಿದ್ದ ವಿದ್ಯಾರ್ಥಿಗಳು ವ್ಯಾಪಾರ ಮಾಡಿದರು. ‘ಬನ್ನಿ ಅಣ್ಣ, ಬನ್ನಿ ಅಕ್ಕ, ತಾಜಾ ತಾಜಾ ತರಕಾರಿ ಕಡಿಮೆ ಬೆಲೆಗೆ ಖರೀದಿ ಮಾಡಿಕೊಳ್ಳಿ, ಬನ್ನಿ ಸಿಹಿ ತಿಂಡಿಗಳು ಮಾಡಿದ್ದೀವಿ, ಒಂದು ತಗೊಂಡ್ರೆ, ಮತ್ತೊಂದು ಫ್ರೀ’ ಎಂದು ಜನರನ್ನು ವ್ಯಾಪಾರ ಮಾಡುವಂತೆ ಆಕರ್ಷಣೆ ಮಾಡಿದರು.

ತರಹೆವಾರಿ ತಿನಿಸುಗಳು, ಚಾಟ್ಸ್ ಹಾಗೂ ತರಕಾರಿ, ಬೇಕರಿ ಸೇರಿ ಹಲವಾರು ಬಗೆಯ ಮಳಿಗೆಗಳನ್ನು ತೆರೆದು ವ್ಯಾಪಾರ ಮಾಡುವ ಮೂಲಕ ಲಾಭ- ನಷ್ಟದ ಕುರಿತು ಲೆಕ್ಕಾಚಾರ ಮಾಡಿದರು. ಪೋಷಕರು ಮತ್ತು ಶಿಕ್ಷಕರು ತಮ್ಮ ಮಕ್ಕಳ ವ್ಯಾಪಾರಕ್ಕೆ ಸಹಾಯ ಮಾಡಿದರು.

ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಹನೀಪುಲ್ಲಾ ಮಾತನಾಡಿ, ಚಟುವಟಿಕೆಯಾಧಾರಿತ ಕಲಿಕೆಗೆ ಹೆಚ್ಚು ಪ್ರೋತ್ಸಾಹ ನೀಡಬೇಕು, ಪೋಷಕರೂ ಕೂಡಾ ಮಕ್ಕಳಲ್ಲಿರುವ ಜ್ಞಾನವನ್ನು ವೃದ್ಧಿಗೊಳಿಸಲಿಕ್ಕೆ ಹೆಚ್ಚು ಆಸಕ್ತಿ ತೋರಬೇಕು. ವಿದ್ಯಾರ್ಥಿಗಳಲ್ಲಿ ದೂರದೃಷ್ಟಿಯಿರಬೇಕು. ಜೀವನದಲ್ಲಿ ದೊಡ್ಡ ಗುರಿಯನ್ನು ಇಟ್ಟುಕೊಂಡಿದ್ದರೆ ಮಾತ್ರ, ಅದನ್ನು ಸಾಕಾರಗೊಳಿಸಲಿಕ್ಕಾಗಿ ಸಾಧ್ಯವಿದೆ. ಔಪಚಾರಿಕ ಶಿಕ್ಷಣದಿಂದ ಮಾತ್ರವಲ್ಲದೇ ಅನೌಪಚಾರಿಕ ಶಿಕ್ಷಣದಿಂದಲೂ ಜೀವನವನ್ನು ಉತ್ತಮಪಡಿಸಿಕೊಳ್ಳಬಹುದು ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ ಟೌನ್ ಅಧ್ಯಕ್ಷ ಜೆ.ಶ್ರೀನಿವಾಸ್ ಮಾತನಾಡಿ, ಶಿಕ್ಷಣ ಎಂಬುದು ಕೇವಲ ನಾಲ್ಕು ಗೋಡೆಗಳ ನಡುವೆ ಕಲಿಯುವಂತಹದ್ದು ಮಾತ್ರವಲ್ಲ, ಶಿಕ್ಷಣ ಮುಗಿದ ನಂತರ ರೂಪಿಸಿಕೊಳ್ಳಬೇಕಾಗಿರುವ ಬದುಕಿನ ಬಗ್ಗೆ ಉತ್ತಮ ಮಾರ್ಗದರ್ಶನ ನೀಡುತ್ತದೆ. ದೇಶದಲ್ಲಿ ನಿರುದ್ಯೋಗದ ಸಮಸ್ಯೆ ಜಾಸ್ತಿಯಾಗಿದೆ. ಈ ಸಮಸ್ಯೆಯನ್ನು ನೀಗಿಸಬೇಕಾದರೆ, ವ್ಯವಹಾರಿಕ ಜ್ಞಾನವನ್ನು ಬೆಳೆಸಿಕೊಂಡು, ವ್ಯಾಪಾರ ವಹಿವಾಟು ನಡೆಸುವ ಕಡೆಗೆ ಸಾಗಬೇಕು ಎಂದರು.

ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತೀರ್ಣರಾದವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಶಾಲೆಯ ಹಳೆಯ ವಿದ್ಯಾರ್ಥಿ ಸಂಘದಿಂದ ಗುರುವಂದನಾ ಕಾರ್ಯಕ್ರಮ ಸೇರಿ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಪ್ರಾಂಶುಪಾಲ ಪಿ.ವೆಂಕಟೇಶ್, ಪುರಸಭೆ ಸದಸ್ಯರಾದ ರಾಜಣ್ಣ, ನಾರಾಯಣಸ್ವಾಮಿ, ಬೈರೇಗೌಡ ಸೇರಿ ಎಸ್‌ಡಿಎಂಸಿ ಸದಸ್ಯರು, ಹಳೆಯ ವಿದ್ಯಾರ್ಥಿ ಸಂಘದ ಸದಸ್ಯರು ಮತ್ತು ವಿಧ್ಯಾರ್ಥಿಗಳು, ವಿವಿಧ ಶಾಲೆಯ ಮುಖ್ಯ ಶಿಕ್ಷಕರು, ಪೋಷಕರು ಇದ್ದರು.