ವಕ್ಫ್‌ನಿಂದ ಆಸ್ತಿ ಕಬಳಿಕೆಯ ಹುನ್ನಾರ ಕುರಿತು ತೀವ್ರ ಚರ್ಚೆ : ಜೆಪಿಸಿ ಅಧ್ಯಕ್ಷರಿಗೆ 70ಕ್ಕೂ ಅಧಿಕ ಅಹವಾಲು ಸಲ್ಲಿಕೆ

| Published : Nov 07 2024, 11:51 PM IST / Updated: Nov 08 2024, 11:39 AM IST

ವಕ್ಫ್‌ನಿಂದ ಆಸ್ತಿ ಕಬಳಿಕೆಯ ಹುನ್ನಾರ ಕುರಿತು ತೀವ್ರ ಚರ್ಚೆ : ಜೆಪಿಸಿ ಅಧ್ಯಕ್ಷರಿಗೆ 70ಕ್ಕೂ ಅಧಿಕ ಅಹವಾಲು ಸಲ್ಲಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಜೆಪಿಸಿ ಅಧ್ಯಕ್ಷರು ಸಾರ್ವಜನಿಕರ ಅಹವಾಲು ಸ್ವೀಕರಿಸುತ್ತಿದ್ದ ವೇಳೆ ಹಲವು ರೈತರು ಹಾಗೂ ಹೋರಾಟಗಾರರು "ವಕ್ಫ್‌ ಬೋರ್ಡ್‌ ಹಠಾವೋ, ಭಾರತ್‌ ಬಚಾವೋ " ಎಂದು ಘೋಷಣೆ ಕೂಗಿದರು.

ಹುಬ್ಬಳ್ಳಿ:  ವಕ್ಫ್‌ನಿಂದ ಆಸ್ತಿ ಕಬಳಿಕೆಯ ಹುನ್ನಾರ ಕುರಿತು ರಾಜ್ಯಾದ್ಯಂತ ತೀವ್ರ ಚರ್ಚೆಯಾಗುತ್ತಿರುವ ಹಿನ್ನೆಲೆಯಲ್ಲಿ ಗುರುವಾರ ನಗರಕ್ಕೆ ಆಗಮಿಸಿದ್ದ ಕೇಂದ್ರ ಸರ್ಕಾರದ ವಕ್ಫ್‌ ಕಾಯ್ದೆ ತಿದ್ದುಪಡಿ ಸಂಬಂಧಿತ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಅಧ್ಯಕ್ಷ ಜಗದಂಬಿಕಾ ಪಾಲ್ ಅವರಿಗೆ ಹಲವು ರೈತರು, ಶಾಸಕರು, ಮುಖಂಡರು ಮನವಿ ಸಲ್ಲಿಸಿ ವಕ್ಫ್‌ನಿಂದ ಆಗಿರುವ ಸಮಸ್ಯೆಗಳ ಕುರಿತು ಗಮನ ಸೆಳೆದರು.

ಇಲ್ಲಿನ ಖಾಸಗಿ ಹೊಟೇಲ್‌ನಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಅಹವಾಲು ಸ್ವೀಕಾರ ಸಭೆಯಲ್ಲಿ ಸಾವಿರಾರು ಜನರು ಪಾಲ್ಗೊಂಡು ವಕ್ಫ್‌ನಿಂದ ಉದ್ಭವವಾಗಿರುವ ಸಮಸ್ಯೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ಮೊದಲಿಗೆ ರಾಜ್ಯದಲ್ಲಿ ವಕ್ಫ್‌ನಿಂದ ರೈತರು, ಮಠ-ಮಂದಿರ, ಶ್ರೀಸಾಮಾನ್ಯರಿಗೆ ಆಗಿರುವ ಸಮಸ್ಯೆಗಳ ಕುರಿತು ಬಿಜೆಪಿಯಿಂದ ರಚನೆಯಾಗಿದ್ದ ಸತ್ಯ ಶೋಧನಾ ಸಮಿತಿಯು ರಾಜ್ಯಾದ್ಯಂತ ಕೈಗೊಂಡ ಸಮೀಕ್ಷೆಯ ಸಂಪೂರ್ಣ ಮಾಹಿಯುಳ್ಳ ವರದಿಯನ್ನು ಸಮಿತಿ ಅಧ್ಯಕ್ಷ ಗೋವಿಂದ ಕಾರಜೋಳ ಜೆಪಿಸಿ ಅಧ್ಯಕ್ಷರಿಗೆ ಸಲ್ಲಿಸಿತು. ಈ ವೇಳೆ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ, ಶಾಸಕ ಮಹೇಶ ಟೆಂಗಿನಕಾಯಿ ಸೇರಿದಂತೆ ಹಲವರಿದ್ದರು.

ಶ್ರೀರಾಮಸೇನೆ:

ಶ್ರೀರಾಮಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್‌ ಅಹವಾಲು ಸಲ್ಲಿಸಿ, ರಾಜ್ಯ ಸರ್ಕಾರವು ವಕ್ಫ್‌ ಮೂಲಕ ರಾಜ್ಯದಲ್ಲಿ ರೈತರ, ಮಠ-ಮಂದಿರಗಳ, ಅಮಾಯಕರ ಆಸ್ತಿ ಕಬಳಿಸುವ ಯತ್ನ ಮಾಡುತ್ತಿದೆ. ಇದನ್ನು ಶ್ರೀರಾಮಸೇನೆ ಖಂಡಿಸುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ವಕ್ಫ್‌ ಮಸೂದೆ ತಿದ್ದುಪಡಿಗೆ ಕೈಗೊಂಡಿರುವ ನಿರ್ಧಾರಕ್ಕೆ ನಾವು ಬೆಂಬಲ ವ್ಯಕ್ತಪಡಿಸಿದ್ದು. ಆದಷ್ಟು ಬೇಗನೆ ವಕ್ಫ್ ಮಸೂದೆಗೆ ಸರ್ಕಾರ ತಿದ್ದುಪಡಿ ತರಲಿ ಎಂದು ಮನವಿ ಸಲ್ಲಿಸಿದರು.

ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ, ಶಾಸಕ ಎಂ.ಆರ್‌. ಪಾಟೀಲ ನೇತೃತ್ವದಲ್ಲಿ ಕುಂದಗೋಳ ತಾಲೂಕಿನ ರೈತರು, ಶಾಸಕ ಡಾ. ಚಂದ್ರು ಲಮಾಣಿ ನೇತೃತ್ವದಲ್ಲಿ ಶಿರಹಟ್ಟಿ ತಾಲೂಕಿನ ರೈತರು, ಹಾವೇರಿ ಜಿಲ್ಲಾ ವಕೀಲರು, ಗದಗ ಜಿಲ್ಲೆಯ ರೋಣ ತಾಲೂಕಿನ ರವೀಂದ್ರನಾಥ ದೊಡ್ಡಮೇಟಿ, ಮಾಜಿ ಶಾಸಕ ಅಮೃತ ದೇಸಾಯಿ, ನರಗುಂದದಿಂದ ಉಮೇಶಗೌಡ ಪಾಟೀಲ, ಭಾರತೀಯ ಕಿಸಾನ್‌ ಸಂಘ, ರತ್ನ ಭಾರತ ರೈತ ಸಮಾಜ ನೇತೃತ್ವದಲ್ಲಿ ಹಲವು ರೈತರು ಅಹವಾಲು ಸಲ್ಲಿಸಿದರು.

ಜತೆಗೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಬಸವರಾಜ ನವಲಗುಂದ, ಚನ್ನಪ್ಪ ಬಾಳಿಕಾಯಿ, ಬಸವರಾಜ ನವಲಗುಂದ, ಶ್ರೀಧರ ಕುಲಕರ್ಣಿ, ಮಂಜುನಾಥ ಗರಗ, ಗಂಗಪ್ಪ ಜವಳಗಿ, ವಿವೇಕ ಮೋರೆ, ರಮೇಶ ಕೊರವಿ, ಸಿ.ಜಿ. ಪಾಟೀಲ, ಭುವನೇಶ್ವರಿ ಬೆಳಗಲಿ, ಸೋಮನಾಥ ಅಂಗ್ರೇಜ, ಬಸಪ್ಪ ಪುಟ್ಟಪ್ಪನವರ ಸೇರಿದಂತೆ 70ಕ್ಕೂ ಅಧಿಕ ಅಹವಾಲುಗಳನ್ನು ಸಲ್ಲಿಸಲಾಯಿತು.

ವಕ್ಫ್‌ ಹಠಾವೋ:

ಜೆಪಿಸಿ ಅಧ್ಯಕ್ಷರು ಸಾರ್ವಜನಿಕರ ಅಹವಾಲು ಸ್ವೀಕರಿಸುತ್ತಿದ್ದ ವೇಳೆ ಹಲವು ರೈತರು ಹಾಗೂ ಹೋರಾಟಗಾರರು "ವಕ್ಫ್‌ ಬೋರ್ಡ್‌ ಹಠಾವೋ, ಭಾರತ್‌ ಬಚಾವೋ " ಎಂದು ಘೋಷಣೆ ಕೂಗಿದರು. ಈ ವೇಳೆ ಸಂಸದ ತೇಜಸ್ವಿ ಸೂರ್ಯ ಸಮಾಧಾನಪಡಿಸಿ, ನಿಮ್ಮ ಸಮಸ್ಯೆ ಆಲಿಸುವುದಕ್ಕಾಗಿಯೇ ಜೆಪಿಸಿ ಅಧ್ಯಕ್ಷರು ಇಲ್ಲಿಗೆ ಭೇಟಿ ನೀಡಿದ್ದಾರೆ. ಎಲ್ಲರೂ ಸಮಾಧಾನದಿಂದ ಇದ್ದು ಮನವಿ ನೀಡಿ, ನಿಮಗೆ ಆಗಿರುವ ಸಮಸ್ಯೆಗಳ ಕುರಿತು ಸಂಕ್ಷಿಪ್ತವಾಗಿ ತಿಳಿಸಿ. ಈ ರೀತಿ ಘೋಷಣೆ ಕೂಗಬೇಡಿ ಎಂದು ತಿಳಿಹೇಳಿದರು.

ವಕ್ಫ್‌ ಅಧ್ಯಕ್ಷರಿಂದ ಬೆದರಿಕೆ:

ಸುಮಾರು 150 ವರ್ಷಗಳಿಂದ ಗ್ರಾಮದಲ್ಲಿರುವ ಮಸೀದಿಯ ಸೇವೆ ಸಲ್ಲಿಸುತ್ತಿದ್ದ ನಮ್ಮ ಕುಟುಂಬಕ್ಕೆ 5.31 ಎಕರೆ ಭೂಮಿಯನ್ನು ಬಳುವಳಿಯಾಗಿ ನೀಡಲಾಗಿದೆ. ಇದನ್ನೇ ನಂಬಿಕೊಂಡು ನಮ್ಮ ಕುಟುಂಬ ಜೀವನ ನಿರ್ವಹಣೆ ಮಾಡುತ್ತಿದೆ. ಆದರೆ, ಕೆಲವು ದಿನಗಳಿಂದ ಜಿಲ್ಲಾ ವಕ್ಫ್‌ ಬೋರ್ಡ್‌ನ ಅಧ್ಯಕ್ಷರು ಗ್ರಾಮಕ್ಕೆ ಭೇಟಿ ನೀಡಿ ಇದು ವಕ್ಫ್‌ಗೆ ಸಂಬಂಧಿಸಿದ ಆಸ್ತಿಯಾಗಿದ್ದು, ಕೂಡಲೇ ಬಿಟ್ಟುಕೊಡಬೇಕು ಎಂಬು ವಕ್ಫ್‌ನ ಬೋರ್ಡ್‌ ಹಾಕಿ ಹೋಗಿದ್ದಾರೆ. ಕೇಳಲು ಹೋದರೆ ಜೀವ ಬೆದರಿಕೆ ಹಾಕುತ್ತಿದ್ದಾರೆ. ಇದರಿಂದ ನಮಗೆ ಮುಕ್ತಿ ಕೊಡಿಸಿ ಎಂದು ಹಾವೇರಿ ಜಿಲ್ಲೆಯ ಹಾನಗಲ್ಲ ತಾಲೂಕಿನ ಬೆಳಗಲಪೇಟೆಯ ಮಹ್ಮದಇಸಾಕ್‌ ತಹಸೀಲ್ದಾರ್‌ ಎಂಬುವರು ಜೆಪಿಸಿ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು.

ನನ್ನ ಮಗನ ಆತ್ಮಹತ್ಯೆಗೆ ವಕ್ಫ್‌ ಕಾರಣ:

ಈ ವಕ್ಫ್‌ನಿಂದಾದ ಪ್ರಮಾದದಿಂದಾಗಿ 2022ರಲ್ಲಿಯೇ ನನ್ನ ಮಗ ಹೊಲದಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹಾವೇರಿ ಜಿಲ್ಲೆಯ ಹಾನಗಲ್ಲ ತಾಲೂಕಿನ ಹರಣಗಿರಿ ಗ್ರಾಮದ ಚನ್ನಪ್ಪ ಬಾಳಿಕಾಯಿ ಜೆಪಿಸಿ ಅಧ್ಯಕ್ಷರಿಗೆ ಅಹವಾಲು ಸಲ್ಲಿಸಿ ಅಳಲು ತೋಡಿಕೊಂಡರು. 1964ರಲ್ಲಿ ಅಲ್ಲಾಪುರ ಗ್ರಾಮದಲ್ಲಿರುವ 4.36 ಎಕರೆ ಜಮೀನನ್ನು ಖರೀದಿಸಿದ್ದೇನೆ. ಅಂದಿನಿಂದ ಉಳುಮೆ ಮಾಡಿಕೊಂಡು ಬಂದಿದ್ದೇನೆ. 2015ರ ನಂತರ ಜಮೀನು ಪತ್ರದಲ್ಲಿ ಇದು ವಕ್ಫ್‌ ಆಸ್ತಿ ಎಂದು ಸುಳ್ಳು ದಾಖಲೆ ಸೃಷ್ಟಿಸಿ ನಮಗೆ ಯಾವುದೇ ನೋಟಿಸ್‌ ನೀಡದೇ ಜಾಗವನ್ನು ವಶಪಡಿಸಿಕೊಂಡಿದ್ದಾರೆ. ಇದರಿಂದ ಮನನೊಂದು ನನ್ನ ಮಗ ರುದ್ರಪ್ಪ ಉರ್ಫ್‌ ಚಂದ್ರಪ್ಪ ಬಾಳಿಕಾಯಿ 2022ರ ಜ. 6ರಂದು ಜಮೀನಿನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಮಗೆ ನ್ಯಾಯ ಕೊಡಿಸಿ ಎಂದು ಅಳಲು ತೋಡಿಕೊಂಡರು.