ಸಾರಾಂಶ
ವಿಘ್ನೇಶ್ ಎಂ. ಭೂತನಕಾಡು
ಕನ್ನಡಪ್ರಭ ವಾರ್ತೆ ಮಡಿಕೇರಿಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಸಂಸ್ಥೆಯಲ್ಲಿ ಶನಿವಾರ ನಡೆದ ಬೆಣ್ಣೆಹಣ್ಣು ಕ್ಷೇತ್ರೋತ್ಸವ ಹಾಗೂ ವೈವಿಧ್ಯತೆ ಮೇಳದಲ್ಲಿ ಸುಮಾರು ನೂರಕ್ಕೂ ಅಧಿಕ ತಳಿಯ ಬೆಣ್ಣೆಹಣ್ಣುಗಳು ಪ್ರದರ್ಶನಗೊಂಡು ರೈತರನ್ನು ಆಕರ್ಷಿಸಿತು.
ಒಂದೊಂದು ತಳಿಗಳು ಕೂಡ ನಾನಾ ಬಗೆಯ ಆಕಾರ, ಗಾತ್ರ ಹಾಗೂ ಬಣ್ಣದಲ್ಲಿ ವಿಭಿನ್ನವಾಗಿತ್ತು. 100 ಗ್ರಾಂ ನಿಂದ ಸುಮಾರು ಒಂದೂವರೆ ಕೆಜಿ ಗಾತ್ರದ ಬೆಣ್ಣೆಹಣ್ಣಿನ ತಳಿ ಕೂಡ ಪ್ರದರ್ಶನದಲ್ಲಿ ಕಂಡುಬಂತು. ಭಾರತೀಯ ತಳಿ ಮಾತ್ರವಲ್ಲದೆ ವಿದೇಶಿ ತಳಿಗಳಾದ ಮೆಕ್ಸಿಕನ್ ಹಾಸ್, ಪಿಂಕರ್ಟೋನ್, ಎಟ್ಟಿಂಗರ್, ಫ್ಯೂರ್ಟೆ, ಗ್ವೆನ್, ಲ್ಯಾಂಬ್ ಹಾಸ್, ಕ್ಯಾರಮನ್ ಹಾಸ್ ಸೇರಿದಂತೆ ಪ್ರದರ್ಶನಕ್ಕೀಡಲಾಗಿದ್ದ ವಿವಿಧ ವಿದೇಶಿ ತಳಿಗಳನ್ನು ರೈತರು ಕುತೂಹಲದಿಂದ ವೀಕ್ಷಿಸಿ ವಿಜ್ಞಾನಿಗಳೊಂದಿಗೆ ಮಾಹಿತಿ ಪಡೆದುಕೊಂಡರು.ಬೆಣ್ಣೆ ಹಣ್ಣಿನಲ್ಲಿ ಕಂಡು ಬರುವ ರೋಗ ಬಾಧೆ, ಕೀಟಗಳ ಪ್ರದರ್ಶನ, ಗಿಡಗಳಲ್ಲಿನ ಎಲೆಗಳ ಆಕಾರದ ಬಗ್ಗೆ ಕೂಡ ಬೆಳೆಗಾರರಿಗೆ ಮಾಹಿತಿ ನೀಡುವಂತಿತ್ತು. ಅಲ್ಲದ ಕೇಂದ್ರದಲ್ಲಿ ಬೆಣ್ಣೆಹಣ್ಣಿನ ಕ್ಷೇತ್ರೋತ್ಸವವು ನಡೆಯಿತು. ರೈತರು ನೇರವಾಗಿ ಗಿಡಗಳ ಸಮೀಪ ತೆರಳಿ ಗಿಡ ನಾಟಿ ಮಾಡುವ ವಿಧಾನ, ನಿರ್ವಹಣೆ, ರೋಗ ಬಾಧೆ, ಔಷಧಿ ಸಿಂಪಡಣೆ ಸೇರಿದಂತೆ ಗಿಡ ಬೆಳೆವಣಿಗೆ ಸಂದರ್ಭದಲ್ಲಿ ಬೆಳೆಗಾರರು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಕೇಂದ್ರದ ವಿಜ್ಞಾನಿಗಳಿಂದ ಮಾಹಿತಿ ತಿಳಿದುಕೊಂಡರು.
ಪ್ರದರ್ಶನ ಹಿನ್ನೆಲೆಯಲ್ಲಿ ಕೇಂದ್ರದಿಂದ ಅಭಿವೃದ್ಧಿಪಡಿಸಲಾಗಿರುವ ಬೆಣ್ಣೆಹಣ್ಣು ತಳಿಗಳಾದ ಅರ್ಕ ಸುಪ್ರೀಂ, ಅರ್ಕ ಕೂರ್ಗ್ ರವಿ ಗಿಡಗಳು ಸೇರಿದಂತೆ ಎಗ್ ಫ್ರೂಟ್, ರಾಂಬೂಟಾನ್, ಲಿಚ್ಚಿ, ಮಲಯನ್ ಆ್ಯಪಲ್, ಮ್ಯಾಂಗೋಸ್ಟಿನ್, ಕೊಡಗಿನ ಕಿತ್ತಳೆ ಗಿಡಗಳ ಪ್ರದರ್ಶನ ಮತ್ತು ಮಾರಾಟ ನಡೆಯಿತು.ವಿವಿಧ ತಿನಿಸುಗಳು: ಬೆಣ್ಣೆಹಣ್ಣಿನಿಂದ ಮಾಡಲಾಗಿದ್ದ ವಿವಿಧ ತಿನಿಸುಗಳು ಗಮನ ಸೆಳೆಯಿತು. ಗೋಣಿಕೊಪ್ಪ ಕೆವಿಕೆಯ ಮಹಿಳಾ ಉದ್ಯಮಿ ರಶ್ಮಿ ಭಾನುಪ್ರಕಾಶ್ ಮತ್ತು ಅವರ ತಂಡ ಬೆಣ್ಣೆಹಣ್ಣಿನಿಂದ ಚೀಸ್ ಕೇಕ್, ಮೊಫಿನ್ಸ್, ಮಿಲ್ಕ್ ಶೇಖ್, ಸಲಾಡ್ ಮತ್ತಿತರ ತಿನಿಸುಗಳನ್ನು ಮಾಡಿ ಪ್ರದರ್ಶನಕ್ಕಿಟ್ಟಿದ್ದರು. ಗಣ್ಯರು ತಿನಿಸುಗಳನ್ನು ಸವಿದು ಮೆಚ್ಚುಗೆ ವ್ಯಕ್ತಪಡಿಸಿದರು. ಬೆಣ್ಣೆಹಣ್ಣಿನ ಸಿಪ್ಪೆಯಿಂದ ತಲೆ ಕೂದಲಿನ ಕಾಂತಿ ಹೆಚ್ಚಿಸುವ ಪೌಡರ್ ಅನ್ನು ಪ್ರದರ್ಶನ ಮಾಡಿದರು. ರಸೂಲ್ ಪುರದ ಯುವ ಉದ್ಯಮಿ ರಾಹುಲ್ ಅವರು ಅವಕಾಡೋ ಚಾಕಲೆಟ್, ಅವಕಾಡೋ ಟೋಸ್ಟ್, ಕೇಕ್ ಅನ್ನು ಪ್ರದರ್ಶನಕ್ಕಿಟ್ಟಿದ್ದರು. ಕೇಂದ್ರದ ವತಿಯಿಂದ ಕಾರ್ಯಕ್ರಮಕ್ಕೆ ಆಗಮಿಸಿದ್ದವರಿಗೆ ಬೆಣ್ಣೆಹಣ್ಣು ಮಿಲ್ಕ್ ಶೇಖ್ ನೀಡಿ ಸ್ವಾಗತಿಸಲಾಯಿತು.
ದೇಶದಲ್ಲಿ ಸುಮಾರು 150 ವರ್ಷಗಳಿಂದ ಬಟರ್ ಫ್ರೂಟ್ ಬೆಳೆಯಲಾಗುತ್ತಿದೆ. ಆರೋಗ್ಯಕ್ಕೆ ಬೇಕಾದ ಪೂರಕ ಅಂಶಗಳಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಬೇಡಿಕೆ ಬಂದಿದೆ. ಇದೀಗ ಭಾರತದಲ್ಲೂ ಬೇಡಿಕೆಯ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಇತ್ತೀಚಿನ ವರ್ಷದಲ್ಲಿ ಬೆಣ್ಣೆಹಣ್ಣು ಬೆಳೆಯುವವರ ಸಂಖ್ಯೆ ಕೂಡ ಅಧಿಕವಾಗಿದೆ ಎಂದು ಚೆಟ್ಟಳ್ಳಿ ಸಿ.ಹೆಚ್.ಇ.ಎಸ್.ಹಣ್ಣಿನ ವಿಜ್ಞಾನಿ ಡಾ. ಬಿ.ಎಂ. ಮುರುಳೀಧರ್ ಹೇಳಿದರು.ಬೆಣ್ಣೆಹಣ್ಣಿನಿಂದ ಹಲವು ತಿನಿಸುಗಳನ್ನು ಮಾಡಬಹುದು. ನಾವು ಈಗಾಗಲೇ ಬೆಣ್ಣೆಹಣ್ಣಿನಿಂದ ಮೌಲವರ್ಧನೆ ಮಾಡಿದ ಉತ್ಪನ್ನಗಳನ್ನು ಕೂಡ ಮಾಡುತ್ತಿದ್ದೇವೆ. ಇಲ್ಲಿನ ರೈತರಿಂದ ಬೆಣ್ಣೆಹಣ್ಣನ್ನು ಖರೀದಿಸಿ ಅದನ್ನು ಇತರೆ ಕಡೆಗೆ ವಾರ್ಷಿಕ 8 ಟನ್ ಬೆಣ್ಣೆಹಣ್ಣನ್ನು ಕಳುಹಿಸುತ್ತಿದ್ದೇನೆ. ಬೆಣ್ಣೆಹಣ್ಣಿನಿಂದ ಎಲ್ಲವೂ ಲಾಭ ಎಂದು ಮಹಿಳಾ ಉದ್ಯಮಿ ರಶ್ಮಿ ಭಾನುಪ್ರಕಾಶ್ ತಿಳಿಸಿದರು.