ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಕಳೆದ ೧೫ ತಿಂಗಳಿನಿಂದ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿ ಹಗರಣಗಳನ್ನು ನಡೆಸಿದ್ದು, ಮುಡಾ ಹಗರಣದಲ್ಲಿ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಭಾಗಿಯಾಗಿದ್ದು ಇವರ ನಿಜವಾದ ಬಣ್ಣ ಬಯಲಾಗಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿ.ಎಸ್.ನಿರಂಜನಕುಮಾರ್ ಆರೋಪಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ರಾಜೀನಾಮೆಗೆ ಆಗ್ರಹಿಸಿ ಹಾಗೂ ಹಗರಣಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಲು ಕಳೆದ ೫ ದಿನಗಳಿಂದ ಬಿಜೆಪಿ ಮತ್ತು ಜೆಡಿಎಸ್ ನಾಯಕರು, ಬೆಂಗಳೂರಿನಿಂದ ಮೈಸೂರುವರೆಗೆ ಬೃಹತ್ ಪಾದಯಾತ್ರೆಯೊಂದಿಗೆ ಮೈಸೂರು ಚಲೋ ಹಮ್ಮಿಕೊಂಡಿದ್ದು ಇದಕ್ಕೆ ವ್ಯಾಪಕ ಜನಬೆಂಬಲ ವ್ಯಕ್ತವಾಗಿದೆ. ದಿನಂಪ್ರತಿ ಪಾದಯಾತ್ರೆಯಲ್ಲಿ ೨೦ ಸಾವಿರ ಮಂದಿ ಭಾಗಿಯಾಗುತ್ತಿದ್ದು ಆ.೧೦ ರಂದು ಮೈಸೂರಿನಲ್ಲಿ ಬೃಹತ್ ಸಮಾವೇಶ ನಡೆಯಲಿದ್ದು ಈ ಸಮಾವೇಶಕ್ಕೆ ಜಿಲ್ಲೆಯಿಂದ ೧೫ ಸಾವಿರಕ್ಕೂ ಹೆಚ್ಚು ಮಂದಿ ಹೊರಡಲಿದ್ದಾರೆ ಎಂದರು.ಪರಿಶಿಷ್ಟರ ಕಲ್ಯಾಣ ಕಾರ್ಯಗಳು ಯಾವುದೇ ಸರ್ಕಾರದ ಆದ್ಯತೆಯಾಗಬೇಕು. ಸ್ವಾತಂತ್ರ್ಯ ನಂತರದಿಂದಲೂ ಪರಿಶಿಷ್ಟರು, ಹಿಂದುಳಿದವರು ಅಲ್ಪಸಂಖ್ಯಾತರ ಹೆಸರಿನಲ್ಲಿ ಮತ ಬ್ಯಾಂಕ್ ರಾಜಕಾರಣ ಮಾಡಿಕೊಂಡು ಬಂದಿರುವ ಕಾಂಗ್ರೆಸ್ ಈ ವರ್ಗಗಳನ್ನು ನಿರಂತರವಾಗಿ ವಂಚಿಸುತ್ತಾ ಬಂದಿರುವುದು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದ ಆಶಯಕ್ಕೆ ಬಗೆಯುತ್ತಿರುವ ದ್ರೋಹವಾಗಿದೆ.ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಪರಿಶಿಷ್ಟ ಪಂಗಡದ ಕಲ್ಯಾಣಕ್ಕೆ ಮೀಸಲಾಗಿದ್ದ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕಿ ನಾಗರಿಕ ಸಮಾಜ ತಲೆತಗ್ಗಿಸುವ ರೀತಿಯಲ್ಲಿ ಹಣ ದುರ್ಬಳಕೆ ಮಾಡಿಕೊಂಡಿದೆ. ಕರ್ನಾಟಕದ ಇತಿಹಾಸದಲ್ಲಿ ಇಂತಹ ಘೋರ ವಂಚನೆ ನಡೆದ ದಾಖಲೆಗಳೇ ಇಲ್ಲ. ಇದರ ವಿರುದ್ಧ ಪ್ರತಿಭಟಿಸಿ ಪರಿಶಿಷ್ಟ ಪಂಗಡದ ಸಮುದಾಯಗಳಿಗೆ ನ್ಯಾಯ ದೊರಕಿಸಿಕೊಡುವುದು ಪಾದಯಾತ್ರೆಯ ಉದ್ದೇಶವಾಗಿದೆ ಎಂದರು.ಭ್ರಷ್ಟ ಹಾಗೂ ಸ್ವಜನ ಪಕ್ಷಪಾತದ ಹಗರಣವನ್ನು ಬಯಲಿಗೆಳೆಯಲು ವಿಧಾನ ಸಭೆಯ ಉಭಯ ಸದನಗಳಲ್ಲೂ ಬಿಜೆಪಿ ಹಾಗೂ ಜೆಡಿಎಸ್ ನಡೆಸಿದ ಹೋರಾಟವನ್ನು ಸರ್ಕಾರ ಹತ್ತಿಕ್ಕಿ ಪ್ರಜಾಪ್ರಭುತ್ವದ ವೇದಿಕೆಯನ್ನು ದುರ್ಬಳಕೆ ಮಾಡಿಕೊಂಡು ಚರ್ಚೆಗೆ ಆವಕಾಶ ನೀಡದೇ ಒಂದು ದಿನ ಮುಂಚಿತವಾಗಿಯೇ ಸದನವನ್ನು ಮುಂದೂಡಿತು ಎಂದರು. ಈ ಹಿನ್ನೆಲೆಯಲ್ಲಿ ಬೀದಿಗಿಳಿದು ಹೋರಾಡುವುದು ಅನಿವಾರ್ಯವಾಗಿರುವ ಹಿನ್ನೆಲೆಯಲ್ಲಿ ಮುಡಾ ಹಾಗೂ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಹೂರಣವನ್ನು ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲಿ ’ಮೈಸೂರು ಚಲೋ’ ಬೃಹತ್ ಪಾದಯಾತ್ರೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.ವಿವಾದಾಸ್ಪದ ಜಮೀನನ್ನು ಆಧಾರವಾಗಿಟ್ಟುಕೊಂಡು ಕೋಟ್ಯಂತರ ರು.ಗಳ ಬೆಲೆಬಾಳುವ ೧೪ ನಿವೇಶನಗಳು ಮುಖ್ಯಮಂತ್ರಿ ಪತ್ನಿಯವರಿಗೆ ಮಂಜೂರಾಗಿರುವುದು ಇಡೀ ದೇಶದಲ್ಲಿ ಚರ್ಚಿತ ವಿಷಯವಾಗಿದೆ. ಇಲ್ಲಿ ಐದು ಸಾವಿರ ಕೋಟಿ ಭ್ರಷ್ಟಾಚಾರ ನಡೆದಿದೆ ಎಂದರು.ಮಾಜಿ ಶಾಸಕ ಎಸ್. ಬಾಲರಾಜು ಮಾತನಾಡಿ, ನಿಜವಾದ ಸಂವಿಧಾನ ವಿರೋಧಿ ಕಾಂಗ್ರೆಸ್ ಪಕ್ಷವಾಗಿದೆ, ಸೂರಿಲ್ಲದವರಿಗೆ ಸೂರು ಒದಗಿಸಬೇಕು ಎಂಬ ಸಾಮಾಜಿಕ ಕಾಳಜಿ ಆಳುವ ಸರ್ಕಾರದ ಆದ್ಯತೆ ಆಗಬೇಕು. ವಸತಿ ರಹಿತ ಕುಟುಂಬಗಳಿಗೆ ನಿವೇಶನ ಹಾಗೂ ಮನೆಗಳನ್ನು ಒದಗಿಸಬೇಕೆಂಬ ಉದ್ದೇಶದಿಂದ ಸ್ವಾತಂತ್ರ್ಯ ಪೂರ್ವದಲ್ಲಿ ಬೆಂಗಳೂರು ಹಾಗೂ ಮೈಸೂರು ಎರಡೂ ನಗರಗಳ ಯೋಜಿತ ಬೆಳವಣಿಗೆಗೆ ನಗರಾಭಿವೃದ್ಧಿ ವಿಶ್ವಸ್ಥ ಮಂಡಳಿಯನ್ನು ಅಸ್ತಿತ್ವಕ್ಕೆ ತಂದವರು ಮೈಸೂರು ಸಂಸ್ಥಾನವನ್ನು ಆಳಿದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಎಂದರು.ಮೈಸೂರು ಜಿಲ್ಲೆಯವರೇ ಆದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಡೀ ರಾಜ್ಯದ ವಸತಿ ರಹಿತ ಕುಟುಂಬಗಳಿಗೆ ಸೂರು ಒದಗಿಸುವ ಯಾವುದೇ ಒಂದು ಯೋಜನೆಯನ್ನು ಈವರೆವಿಗೂ ಕೈಗೆತ್ತಿಕೊಳ್ಳಲಿಲ್ಲ. ಎಸ್ಸಿ/ಎಸ್ಟಿಗಳ ಅಭಿವೃದ್ಧಿಗೆಂದು ಜಾರಿಗೆ ತಂದ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿಯ ಹಣವನ್ನು ೨ ವರ್ಷಗಳಲ್ಲಿ ೨೫ ಸಾವಿರದ ೩೯೮ ಕೋಟಿಗಳನ್ನು ಗ್ಯಾರಂಟಿ ಯೋಜನೆಗಳಿಗೆ ದುರ್ಬಳಕೆ ಮಾಡಿಕೊಳ್ಳುವ ಮೂಲಕ ಎಸ್‌ಸಿ/ಎಸ್‌ಟಿ ಜನಾಂಗಕ್ಕೆ ದ್ರೋಹ ಬಗೆದಿದ್ದಾರೆ, ಈ ಬಗ್ಗೆ ದಲಿತ ಕೋಟಾದಡಿ ಗೆದ್ದು ಮಂತ್ರಿಯಾಗಿರುವ ಎಚ್. ಸಿ.ಮಹದೇವಪ್ಪ ಮತ್ತ ಇತರರು ಚಕಾರವೆತ್ತದಿರುವುದು ನಾಚಿಕೆಗೇಡಿನ ಸಂಗತಿ ಎಂದರು.
ಈ ಯೋಜನೆಯ ಶೇ.೧೦% ರಷ್ಟೂ ಕೂಡ ಎಸ್‌ಸಿ/ಎಸ್‌ಟಿಗಳಿಗೆ ನೇರವಾಗಿ ತಲುಪುತ್ತಿಲ್ಲ. ಬದಲಾಗಿ ಅಧಿಕಾರಿಗಳು ಮತ್ತು ಮಂತ್ರಿ, ಶಾಸಕರು ನುಂಗಿ ನೀರು ಕುಡಿಯುತ್ತಿದ್ದಾರೆ. ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ೧೮೭ ಕೋಟಿ ರು.ಗಳ ಹಗರಣ ಈ ಬಗ್ಗೆ ಹಲವಾರು ದಲಿತ ಸಂಘಟನೆಗಳು ಹೋರಾಟಕ್ಕಿಳಿದಿವೆ, ಈ ಬಗ್ಗೆ ಅರಿವು ಇರುವವರು ಜನಾಂದೋಲನದ ಸಭೆಯಲ್ಲಿ ಭಾಗವಹಿಸಬಾರದು, ತಕ್ಷಣ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾಯದರ್ಶಿಗಳಾದ ವೃಷಬೇಂದ್ರಪ್ಪ, ಮೂಡ್ನಾಕೂಡು ಪ್ರಕಾಶ್, ಹೊನ್ನೂರು ಮಹದೇವಸ್ವಾಮಿ, ಮುಖಂಡರಾದ ಎಂ.ರಾಮಚಂದ್ರ, ಅರಕಲವಾಡಿ ನಾಗೇಂದ್ರ ಇದ್ದರು.