ಕಪ್ಪತ್ತಗುಡ್ಡಕ್ಕೆ ಹರಿದು ಬರುತ್ತಿದೆ ಪ್ರವಾಸಿಗರ ದಂಡು

| Published : Jun 20 2024, 01:00 AM IST

ಕಪ್ಪತ್ತಗುಡ್ಡಕ್ಕೆ ಹರಿದು ಬರುತ್ತಿದೆ ಪ್ರವಾಸಿಗರ ದಂಡು
Share this Article
  • FB
  • TW
  • Linkdin
  • Email

ಸಾರಾಂಶ

ಉತ್ತರ ಕರ್ನಾಟಕದ ಸಸ್ಯಕಾಶಿ ಎಂದು ಪ್ರಸಿದ್ಧಿ ಪಡೆದ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಹೋಬಳಿಯ ವ್ಯಾಪ್ತಿಯಲ್ಲಿ ಬರುವ ಕಪ್ಪತ್ತಗುಡ್ಡ ಈಗ ಮಂಜಿನಗಿರಿಯಾಗಿ ಪರಿವರ್ತನೆಯಾಗಿದೆ. ಹೀಗಾಗಿ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ.

ರಿಯಾಜಅಹ್ಮದ ಎಂ. ದೊಡ್ಡಮನಿ

ಡಂಬಳ: ಸತತ ಮಳೆ, ತಂಪು ಹವೆ, ಮೋಡ ಮುಸುಕಿದ ವಾತಾವರಣದಿಂದ ಕಪ್ಪತ್ತಗುಡ್ಡದ ವಾತಾವರಣ ಆಹ್ಲಾದಕರವಾಗಿದ್ದು, ಪ್ರವಾಸಿಗರ ದಂಡೇ ಹರಿದು ಬರುತ್ತಿದೆ.

ಉತ್ತರ ಕರ್ನಾಟಕದ ಸಸ್ಯಕಾಶಿ ಎಂದು ಪ್ರಸಿದ್ಧಿ ಪಡೆದ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಹೋಬಳಿಯ ವ್ಯಾಪ್ತಿಯಲ್ಲಿ ಬರುವ ಕಪ್ಪತ್ತಗುಡ್ಡ ಈಗ ಮಂಜಿನಗಿರಿಯಾಗಿ ಪರಿವರ್ತನೆಯಾಗಿದೆ. ಮುಂಜಾನೆ, ಮುಸ್ಸಂಜೆ ವೇಳೆಯಲ್ಲಿ ಇಲ್ಲಿಯ ಪರಿಸರ ಪ್ರವಾಸಿಗರಿಗೆ ಮುದ ನೀಡುತ್ತಿದೆ. ಔಷಧ ಸಸ್ಯಗಳ ಸುವಾಸನೆ, ಕಾಡುಪ್ರಾಣಿಗಳ ಸ್ವಚ್ಛಂದ ವಿಹಾರ, ಹಕ್ಕಿಗಳ ಕಲರವ ಪ್ರವಾಸಿಗರು ಮೈಮರೆಯುವಂತೆ ಮಾಡುತ್ತಿದೆ.

ಮಂಜಿನ ವಾತಾವರಣ: ಕಪ್ಪತ್ತಗುಡ್ಡದಲ್ಲಿ ಬೆಳಗ್ಗೆ 6ರಿಂದ 8 ಗಂಟೆ ವರೆಗೆ ಮತ್ತು ಸಂಜೆ ವೇಳೆ ಮಂಜಿನ ವಾತಾವರಣ ನಿರ್ಮಾಣವಾಗಿದೆ. ಸಾಕಷ್ಟು ಮಳೆ ಬಿದ್ದಿದ್ದರಿಂದ ಬೆಟ್ಟದ ಸುತ್ತಮುತ್ತಲೂ ಸದ್ಯಕ್ಕೆ ನೀರಿನ ಕೊರತೆ ಇಲ್ಲ. ಕಪ್ಪತ್ತಗುಡ್ಡದ ಒಡಲಿನಲ್ಲಿರುವ ಸಣ್ಣ ಸಣ್ಣ ಕೆರೆಗಳು, ಬೇಸಿಗೆಯಲ್ಲಿ ಪ್ರಾಣಿಗಳಿಗೆ ನೀರು ಒದಗಿಸುವ ಹೊಂಡಗಳು ತುಂಬಿವೆ. ಎಲ್ಲೆಲ್ಲೂ ಹಸಿರು ಕಂಡುಬರುತ್ತಿದೆ. ಸಾಲು ಸಾಲು ಗುಡ್ಡಗಳಿಗೆ ಹಸಿರು ಹೊದಿಕೆ ಹಾಕಿದಂತೆ ಕಂಡುಬರುತ್ತಿದೆ.

ಪ್ರವಾಸಿಗರು: ಸದ್ಯ ಕಪ್ಪತ್ತಗುಡ್ಡಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಿದೆ. ಬೆಂಗಳೂರು, ಹುಬ್ಬಳ್ಳಿ, ಕೊಪ್ಪಳ, ಧಾರವಾಡ, ಗದಗ, ಹೂವಿನಹಡಗಲಿ ಭಾಗಗಳಿಂದ ಹೆಚ್ಚಿನ ಪ್ರವಾಸಿಗರು ಬರುತ್ತಿದ್ದಾರೆ. ಸಾವಿರಾರು ಔಷಧ ಸಸ್ಯ ಪ್ರಭೇದ ಹೊಂದಿರುವ ಗುಡ್ಡಕ್ಕೆ ಭೇಟಿ ನೀಡುತ್ತಿದ್ದಾರೆ. ಆಲದ ಕೆರೆ, ಗಾಳಿಗುಂಡಿ ಬಸವೇಶ್ವರ, ಕಪ್ಪತ್ತಮಲ್ಲಯ್ಯನ ದೇವಸ್ಥಾನ, ನಂದಿವೇರಿ ಮಠದ ಹತ್ತಿರ ಇರುವ ಪರಿಸರ, ಬಂಗಾರ ಕೊಳ್ಳದ ಭಾಗಗಳಲ್ಲಿ ಜನರು ಕಂಡುಬರುತ್ತಿದ್ದಾರೆ.

ಕಾಡು ಪ್ರಾಣಿಗಳ ದರ್ಶನ: ಗುಡ್ಡದ ಭಾಗದ ಅಲ್ಲಲ್ಲಿ ಪ್ರವಾಸಿಗರಿಗೆ ಜಿಂಕೆಗಳ ದಂಡು, ನವಿಲು, ಕಾಡುನಾಯಿ, ನರಿ, ಚಿರತೆಗಳು ಕಾಣಸಿಗುತ್ತದೆ. ನೂರಾರು ಸಣ್ಣ ಪುಟ್ಟ ಪಕ್ಷಿಗಳ ಕಲರವ ಕೇಳಿಸುತ್ತದೆ. ಕೆಲವೊಮ್ಮೆ ರಸ್ತೆ ಬದಿಯ ಕೆರೆ ಸಮೀಪ ಪ್ರಾಣಿ-ಪಕ್ಷಿಗಳು ವಿಹರಿಸುತ್ತಿರುವ ದೃಶ್ಯ ಕಾಣಸಿಗುತ್ತದೆ.

ಇಲ್ಲಿಗೆ ಬರುವ ಪ್ರವಾಸಿಗರು ಇಲ್ಲಿಯ ವಾತಾವರಣ ಹಾಗೂ ಪರಿಸರವನ್ನು ಇಷ್ಟಪಡುತ್ತಾರೆ. ಜತೆಗೆ ಸದಾ ಕಪ್ಪತ್ತಗುಡ್ಡ ಸಮೃದ್ಧವಾಗಿರಲಿ ಎಂದು ಆಶಿಸುತ್ತಾರೆ.ಗದಗ ಜಿಲ್ಲೆಯ ಬಿಸಿಲಿನ ಪ್ರಖರತೆ ತಡೆಯಲು, ಉತ್ತಮ ಮಳೆಯಾಗಲು ಕಪ್ಪತ್ತಗುಡ್ಡದ ಪರಿಸರ ಕಾರಣವಾಗಿದೆ. ಇಲ್ಲಿಯ ಔಷಧ ಸಸ್ಯಗಳು ಹಾಗೂ ಅರಣ್ಯ ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು. ಅಂದಾಗ ಮಾತ್ರ ಮುಂದಿನ ದಿನಮಾನಗಳಲ್ಲಿ ಉತ್ತಮವಾಗಿ ಇಟ್ಟುಕೊಳ್ಳಲು ಸಾಧ್ಯ ಎಂದು ರೋಣ ಶಾಸಕ ಜಿ.ಎಸ್. ಪಾಟೀಲ್ ಹೇಳಿದರು. ದೇಶದ ಬೇರೆ ಬೇರೆ ರಾಜ್ಯ, ಜಿಲ್ಲೆಗಳಿಂದ ಪ್ರವಾಸಿಗರು ಕಪ್ಪತ್ತಗುಡ್ಡವನ್ನು ನೋಡಲು ತಂಡೋಪತಂಡವಾಗಿ ಬರುತ್ತಿದ್ದು, ಪರಿಸರಪ್ರಿಯರಿಗೆ ಕಪ್ಪತ್ತಗುಡ್ಡ ಖುಷಿ ನೀಡುತ್ತಿದೆ. ಈ ಬಾರಿ ಕಪ್ಪತ್ತಗುಡ್ಡದಲ್ಲಿ ಸಾವಿರಾರು ಗಿಡಗಳನ್ನು ನೆಡಲಾಗಿದೆ. ಗಿಡಗಳ ಸಂರಕ್ಷಣೆ ಮತ್ತು ವನ್ಯಜೀವಿಗಳ ರಕ್ಷಣೆಗೆ ಆದ್ಯತೆ ನೀಡಲಾಗಿದೆ ಎಂದು ಮುಂಡರಗಿ ಕಪ್ಪತ್ತಗುಡ್ಡ ವಲಯ ಅರಣ್ಯ ಅಧಿಕಾರಿ ವೀರೇಂದ್ರ ಮರಿಬಸಣ್ಣವರ ಹೇಳುತ್ತಾರೆ.