ಸಾರಾಂಶ
ತಾಲೂಕಿನ ಅಜ್ಜಿಪುರ ಸಫಾರಿ ಮಾರ್ಗದ ಮಧ್ಯೆ ಹರಿಯುವ ಉಡುತೊರೆ ಹಳ್ಳ ಮಳೆಗೆ ಉಕ್ಕಿಹರಿಯುತ್ತಿದ್ದು, ಗುಂಡಾಪುರ ಸಮೀಪದ ಉಡುತೊರೆ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.
ಕನ್ನಡಪ್ರಭ ವಾರ್ತೆ ಹನೂರು
ತಾಲೂಕಿನ ಅಜ್ಜಿಪುರ ಸಫಾರಿ ಮಾರ್ಗದ ಮಧ್ಯೆ ಹರಿಯುವ ಉಡುತೊರೆ ಹಳ್ಳ ಮಳೆಗೆ ಉಕ್ಕಿಹರಿಯುತ್ತಿದ್ದು, ಗುಂಡಾಪುರ ಸಮೀಪದ ಉಡುತೊರೆ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.ಒಡೆಯರಪಾಳ್ಯ, ಪಿಜಿ ಪಾಳ್ಯ ಭಾಗದ ಅರಣ್ಯ ಪ್ರದೇಶದಲ್ಲಿ ಕಾಡಂಚಿನ ಭಾಗದಲ್ಲಿ ಉತ್ತಮ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಈ ಪ್ರದೇಶಗಳಿಂದ ಹರಿದುಬರುವ ನೀರಿನಿಂದ ಉಡುತೊರೆ ಹಳ್ಳದಿಂದ ಜಲಾಶಯದ ಭರ್ತಿ ಮಿತಿ ಇನ್ನಷ್ಟು ಹೆಚ್ಚಾಗುತ್ತಿದೆ. ಇದರ ಪರಿಣಾಮವಾಗಿ ಜಲಾಶಯಕ್ಕೆ ಅಪಾರ ಪ್ರಮಾಣವಾದ ಮಳೆಯ ನೀರು ಉಡುತೊರೆ ಜಲಾಶಯ ತುಂಬುತ್ತಿದೆ.
ಇತ್ತೀಚೆಗೆ ಮಳೆ ಇಲ್ಲದೆ ಬರಿದಾಗುತ್ತಿದ್ದ ಅರಣ್ಯ ಪ್ರದೇಶದಲ್ಲಿ ಕಾಡುಪ್ರಾಣಿಗಳು ನಾಡಿನತ್ತ ಬಂದು ಮಾನವ ಪ್ರಾಣಿ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿತ್ತು. ಅರಣ್ಯ ಪ್ರದೇಶದಲ್ಲಿ ಉತ್ತಮ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಕಾಡು ಪ್ರಾಣಿಗಳಿಗೆ ನೀರಿನ ಮೂಲಗಳಾದ ಹಳ್ಳ, ತೊರೆ, ಕೆರೆಕಟ್ಟೆಗಳು ಭರ್ತಿಯಾಗಿದೆ. ಉಡುತೊರೆ ಹಳ್ಳ ತುಂಬಿ ಹರಿಯುತ್ತಿರುವುದರಿಂದ ಸ್ಥಳೀಯ ರೈತರು ಜಮೀನುಗಳಿಗೆ ಕಾಡುಪ್ರಾಣಿಗಳು ಮೇವು ನೀರು ಅರಸಿ ಬರುವುದು ತಪ್ಪಿದಂತಾಗಿದೆ.ಜಲಾಶಯ ತುಂಬಿದರೆ ಅಚ್ಚುಕಟ್ಟು ಪ್ರದೇಶದ ರೈತರಿಗೆ ವರದಾನವಾಗಲಿದೆ. ಕಳೆದ ಹಲವಾರು ವರ್ಷಗಳಿಂದ ಜಲಾಶಯ ತುಂಬಿದ್ದರೂ ಕಾಲುವೆಗಳಿಗೆ ನೀರು ಹರಿಸಿಲ್ಲ. ಮುಂದಿನ ದಿನಗಳಲ್ಲಿ ಅಚ್ಚುಕಟ್ಟು ಪ್ರದೇಶದ ರೈತರ ಜಮೀನುಗಳಿಗೆ ಹರಿದುಹೋಗುವ ಕಾಲುವೆಗಳನ್ನು ಸ್ವಚ್ಛಗೊಳಿಸಬೇಕು.