ಸಾರಾಂಶ
ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಹಾಸನದ ಗೊರೂರು ಅಣೆಕಟ್ಟೆಯಿಂದ ಹೇಮಾವತಿ ನದಿಗೆ 75 ಸಾವಿರಕ್ಕೂ ಹೆಚ್ಚಿನ ಕ್ಯುಸೆಕ್ ನೀರು ಬಿಟ್ಟಿರುವುದರಿಂದ ನದಿ ಪಾತ್ರದ ಹೊಲಗದ್ದೆ, ತೋಟಗಳು ಜಲಾವೃತವಾಗಿದೆ.ಉಕ್ಕಿ ಹರಿಯುತ್ತಿರುವ ಹೇಮೆಯ ಆರ್ಭಟಕ್ಕೆರೈತಾಪಿ ಜನರ ಜಮೀನುಗಳಿಗೆ ನೀರು ನುಗ್ಗಿ ದೊಡ್ಡ ಅವಾಂತರ ಮಾಡಿದೆ. ಬಹುತೇಕ ನದಿ ಪಾತ್ರದ ಜಮೀನುಗಳಿಗೆ ನೀರು ನುಗ್ಗಿದೆ. ಇದರಿಂದ ರೈತರು ಜಮೀನು ಪ್ರವೇಶ ಮಾಡದಂತೆ ಜಲದಿಗ್ಭಂಧನವಾಗಿದೆ.
ಶುಕ್ರವಾರ ಗೊರೂರು ಅಣೆಕಟ್ಟಿನಿಂದ 75 ಸಾವಿರ ಕ್ಯುಸೆಕ್ ನೀರನ್ನು ಬಿಡಲಾಗುತ್ತಿದೆ. ಇದರಿಂದ ಹೇಮಾವತಿ ನದಿಪಾತ್ರದ ನಿವಾಸಿಗಳು, ರೈತರು ಆತಂಕಕ್ಕೆ ಒಳಗಾಗುವಂತಾಗಿದೆ. ನದಿಯಲ್ಲಿ ಮತ್ತಷ್ಟು ನೀರಿನ ಪ್ರಮಾಣ ಹೆಚ್ಚಾಗುವ ಆತಂಕ ಕಾಡುತ್ತಿದ್ದು ರೈತರು ಸುರಕ್ಷಿತ ಸ್ಥಳಕ್ಕೆ ತೆರಳಲು ಪರದಾಡುವಂತಾಗಿದೆ.ಬಹುತೇಕ ರೈತರು ಸತತ ಒಂದು ವರ್ಷದಿಂದ ಮಳೆ ಇಲ್ಲದೆ ಕಂಗಲಾಗಿ ಹೈನುಗಾರಿಕೆ ನಂಬಿಕೊಂಡಿದ್ದರು. ನದಿಪಾತ್ರದ ಜಮೀನುಗಳಲ್ಲಿ ಮೇವಿನ ಬೆಳೆ ಬೆಳೆದುಕೊಂಡಿದ್ದರು. ಹಲವರು ರಾಗಿ, ಜೋಳದ ಹುಲ್ಲಿನ ಬವಣೆ ಹಾಕಿಕೊಂಡು ಶೇಖರಣೆ ಮಾಡಿಕೊಂಡಿದ್ದರು.
ಉಕ್ಕಿ ಹರಿದ ಹೇಮಾವತಿ ಆರ್ಭಟಕ್ಕೆ ಮಂದಗೆರೆ ಬಳಿಯ ಬೇವಿನಹಳ್ಳಿಯ ಅಂಕನಾಥೇಶ್ವರ ದೇಗುಲಕ್ಕೆ ಹೇಮೆ ನದಿ ನೀರು ಪ್ರವೇಶಿಸಿದೆ. ಇದರಿಂದ ದೇಗುಲದ ಗರ್ಭಗುಡಿಗೆ ನೀರು ನುಗ್ಗಿ ಪೂಜಾಕೈಂಕರ್ಯಕ್ಕೆ ಜಲದಿಗ್ಭಂದನ ಏರ್ಪಟ್ಟಿದೆ.ದೇಗುಲದ ಬಳಿ ಇರುವ ರೈತರ ತೆಂಗಿನತೋಟಕ್ಕೆ ನೀರು ನುಗ್ಗಿದ ಪರಿಣಾಮ ಪಂಪುಸೆಟ್‌ಗಳನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲು ರೈತರು ಪರದಾಡಿದರು.
ಅಲ್ಲದೇ, ಚಿಕ್ಕಮಂದಗೆರೆಯ ರೈತ ಮಂಜುನಾಥ್ ಅವರ ತೆಂಗು, ಬಾಳೆ, ಅಡಿಕೆ ತೋಟಕ್ಕೆ ನೀರು ನುಗ್ಗಿದ್ದು ಒಕ್ಕಣೆ ಮಾಡಿದ್ದ ತೆಂಗು ಕೊಚ್ಚಿ ಹೋಗಿವೆ. ಜಮೀನಿಗೆ ಹಾಕಲು ಶೇಖರಣೆ ಮಾಡಲಾಗಿದ್ದ ಕುರಿ, ಕೋಳಿ ಗೊಬ್ಬರದ ಮೂಟೆಗಳು ನೀರು ಪಾಲಾಗಿವೆ. ಗೊನೆ ಬಿಟ್ಟಿದ್ದ ಬಾಳೆಗಿಡ ನೆಲಕಚ್ಚಿವೆ. ಜಮೀನಿನಲ್ಲಿದ್ದ ಪಂಪ್‌ಸೆಟ್ ಮನೆಗೆ ನೀರು ನುಗ್ಗಿದೆ. ಪಂಪ್‌ಸೆಟ್ ಮೋಟಾರ್ ಸುರಕ್ಷಿತ ಸ್ಥಳಕ್ಕೆ ರವಾನಿಸಲು ಸಾಧ್ಯವಾಗದೆ ಪರದಾಡುವಂತಾಗಿದೆ.ಗಾಣದಹಳ್ಳಿ, ಮಾದಾಪುರ, ಚಿಕ್ಕಮಂದಗೆರೆ, ಗದ್ದೆಹೊಸೂರು, ಕುರೆವು ಗ್ರಾಮಗಳ ರೈತರು ಎಚ್ಚರಿಕೆಯಿಂದ ಇರಲು ತಾಲೂಕು ಹಾಗೂ ಗ್ರಾಮ ಪಂಚಾಯ್ತಿ ಆಡಳಿತ ಹಾಗೂ ಪೊಲೀಸರು ಧ್ವನಿವರ್ಧಕದ ಮೂಲಕ ಜಾಗ್ರತೆ ಮೂಡಿಸಲಾಗುತ್ತಿದೆ. ಮಂದಗೆರೆ ಸೇತುವೆ ಬಳಿ ಯುವಕರ ದಂಡು ಸೆಲ್ಪಿ ತೆಗೆದುಕೊಳ್ಳುವುದನ್ನು ಕಂಡು ಪೊಲೀಸರು ತಿಳಿ ಹೇಳಿ ಕಳಿಸಿದ್ದಾರೆ.
ಸ್ಥಳದಲ್ಲಿಯೇ ಬೀಡು ಬಿಟ್ಟಿರುವ ಕಿಕ್ಕೇರಿ ಠಾಣೆ ಇನ್ಸ್ ಪೆಕ್ಟರ್ ರೇವತಿ ನದಿಪಾತ್ರದ ಜನತೆಗೆ ನೀರಿಗೆ ಇಳಿಯದಂತೆ, ಈಜುವಿಕೆ, ಪಾತ್ರೆ, ಬಟ್ಟೆ ತೊಳೆಯದಂತೆ, ಜಾನುವಾರುಗಳಿಗೆ ನೀರುಕುಡಿಸಲು, ನದಿಪಾತ್ರದಲ್ಲಿ ಮೇವು ಉಣಿಸುವ ಕೆಲಸಕ್ಕೆ ಮುಂದಾಗದಂತೆ ಎಚ್ಚರಿಕೆ ನೀಡುತ್ತಿದ್ದಾರೆ.