ಮಸೀದಿ ಆರಾಧನೆಗೆ ಸೀಮಿತವಲ್ಲ: ಜಿಫ್ರಿ ಮುತ್ತುಕೋಯ ತಂಙಳ್

| Published : Jan 06 2025, 01:02 AM IST

ಮಸೀದಿ ಆರಾಧನೆಗೆ ಸೀಮಿತವಲ್ಲ: ಜಿಫ್ರಿ ಮುತ್ತುಕೋಯ ತಂಙಳ್
Share this Article
  • FB
  • TW
  • Linkdin
  • Email

ಸಾರಾಂಶ

ಮಸೀದಿಗಳು ಸಮಾಜದ ಪ್ರತಿ ವ್ಯಕ್ತಿಯ ಸಮಸ್ಯೆಗಳನ್ನು ಗುರುತಿಸಿ ಬಗೆಹರಿಸುವ ಕೇಂದ್ರವಾಗಿರಬೇಕು ಎಂಬುವುದು ಇಸ್ಲಾಂ ಧರ್ಮದ ಮೂಲ ಆಶಯವಾಗಿದೆ ಎಂದು ಗಣ್ಯರು ತಿಳಿಸಿದರು.

ಕನ್ನಡಪ್ರಭ ವಾರ್ತೆ ಪೊನ್ನಂಪೇಟೆ

ಮಸೀದಿ ಕೇವಲ ಆರಾಧನೆಗೆ ಮಾತ್ರ ಸೀಮಿತವಾಗಿರುವುದಿಲ್ಲ, ಬದಲಾಗಿ ಸಮುದಾಯದ ಉನ್ನತಿಗೆ ಮಾರ್ಗದರ್ಶನ ನೀಡುವ ಸ್ಥಳವೂ ಆಗಿದೆ. ಮಸೀದಿಗಳು ಸಮಾಜದ ಪ್ರತೀ ವ್ಯಕ್ತಿಯ ಸಮಸ್ಯೆಗಳನ್ನು ಗುರುತಿಸಿ ಬಗೆಹರಿಸುವ ಕೇಂದ್ರವಾಗಿರಬೇಕು ಎಂಬುವುದು ಇಸ್ಲಾಂ ಧರ್ಮದ ಮೂಲ ಆಶಯವಾಗಿದೆ ಎಂದು ಸಮಸ್ತ ಕೇಂದ್ರ ಮುಶಾವರ ಅಧ್ಯಕ್ಷ, ವಿದ್ವಾಂಸ ಸೈಯದ್ ಜಿಫ್ರಿ ಮುತ್ತುಕೋಯ ತಂಙಳ್ ಹೇಳಿದರು.

ಇಲ್ಲಿನ ತ್ಯಾಗರಾಜ ರಸ್ತೆಯಲ್ಲಿ ಆಧುನಿಕ ಇಸ್ಲಾಮಿಕ್ ವಾಸ್ತುಶಿಲ್ಪ ಶೈಲಿಯ ಮಸೀದಿಯಾಗಿ ಪುನರ್‌ ನಿರ್ಮಾಣಗೊಂಡಿರುವ ಪೊನ್ನಂಪೇಟೆ ಶಾಫಿ ಜುಮಾ ಮಸೀದಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಮಸೀದಿ ಎಂಬುದು ಜಾತಿ, ಧರ್ಮ, ಪಂಥವನ್ನು ಮೀರಿ ಮನುಷ್ಯ ಪ್ರೀತಿಯ ಸೌಹಾರ್ದಯುತ ಜೀವನ ನಡೆಸುತ್ತಾ ಆ ಮೂಲಕ ಶಾಂತಿ, ಸಹೋದರತೆಯ ಸಮಾಜ ನಿರ್ಮಾಣದ ಕುರಿತು ಕಲಿಸುವ ಪಾಠ ಶಾಲೆಯಾಗಬೇಕು ಎಂದು ಕಳೆದ 1400 ವರ್ಷಗಳ ಹಿಂದೆಯೇ ವಿಶ್ವ ಪ್ರವಾದಿ ಮೊಹಮ್ಮದ್ ಪೈಗಂಬರ್ ಬೋಧಿಸಿದ್ದಾರೆ ಎಂದರು.

ಸಮಸ್ತ ಕೇಂದ್ರ ಮುಶಾವರ ಸದಸ್ಯ ಮತ್ತು ಕೊಡಗಿನ ನಾಹಿಬ್ ಖಾಝಿ ಎಡಪಾಲದ ಅಬ್ದುಲ್ಲಾ ಪೈಝಿ ಉದ್ಘಾಟಿಸಿದರು.

ಪೊನ್ನಂಪೇಟೆ ಶಾಫಿ ಜುಮಾ ಮಸೀದಿಯ ಆಡಳಿತ ಮಂಡಳಿ ಪ್ರಧಾನ ಕಾರ್ಯದರ್ಶಿ ಪಿ.ಎ. ಆಸೀಸ್, ಎಸ್.ಕೆ.ಜೆ.ಎಂ. ಕೇಂದ್ರೀಯ ಸಮಿತಿ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಮುಸ್ಲಿಯರ್ ಮಾತನಾಡಿದರು.

ಪೊನ್ನಂಪೇಟೆ ಶಾಫಿ ಜುಮಾ ಮಸೀದಿಯ ಆಡಳಿತ ಮಂಡಳಿ ಅಧ್ಯಕ್ಷ ಅಹಮ್ಮದ್ ಹಾಜಿ ಅಧ್ಯಕ್ಷತೆ ವಹಿಸಿದ್ದರು. ಮಸೀದಿಯ ನಿರ್ಮಾಣ ಕಾರ್ಯ ನಿರ್ವಹಿಸಿದ ಗುತ್ತಿಗೆದಾರರನ್ನು ಗೌರವಿಸಲಾಯಿತು.

ಕೊಡಗು ಜಿಲ್ಲಾ ಎಸ್.ಕೆ.ಜೆ.ಎಂ. ಕಾರ್ಯದರ್ಶಿ ಆರಿಫ್ ಪೈಝಿ, ಕೊಡಗು ಜಿಲ್ಲಾ ಎಸ್.ವೈ.ಎಸ್. ಕಾರ್ಯದರ್ಶಿ ಅಶ್ರಫ್ ಪೈಝಿ, ಎಸ್.ಕೆ.ಎಸ್.ಎಸ್.ಎಫ್. ಪ್ರಮುಖರಾದ ಉಮ್ಮರ್ ಫೈಝಿ, ಹಿರಿಯರಾದ ಎರಮು ಹಾಜಿ, ಪೊನ್ನಂಪೇಟೆ ಶಾಫಿ ಜುಮಾ ಮಸೀದಿಯ ಆಡಳಿತ ಮಂಡಳಿ ಉಪಾಧ್ಯಕ್ಷ ಸಿ.ಎಂ. ಅಶ್ರಫ್, ಕೋಶಾಧಿಕಾರಿ ಮೊಹಮ್ಮದ್ ಹಾಜಿ ಮೊದಲಾದವರು ಇದ್ದರು.

ಪೊನ್ನಂಪೇಟೆ ಶಾಫಿ ಜುಮಾ ಮಸೀದಿಯ ಆಡಳಿತ ಮಂಡಳಿ ಪ್ರಧಾನ ಕಾರ್ಯದರ್ಶಿ ಪಿ.ಎ. ಅಸೀಸ್ ಧ್ವಜಾರೋಹಣ ನೆರವೇರಿಸಿದರು. ಮಸೀದಿಯ ಖತೀಬ ಜಿಯಾದ್ ದಾರಿಮಿ ಪ್ರಾರ್ಥಿಸಿದರು. ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ಸದಸ್ಯರಾದ ಸಿ.ಎ. ಜುನೈದ್ ಸ್ವಾಗತಿಸಿದರು. ಸಹ ಕಾರ್ಯದರ್ಶಿ ಕೆ.ಎಂ. ಅಬು ವಂದಿಸಿದರು.

ರಾತ್ರಿ ನಡೆದ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಹೆಸರಾಂತ ಧರ್ಮಗುರು ಯಾಹ್ಯ ಬಾಖವಿ ಪ್ರಧಾನ ಭಾಷಣ ಮಾಡಿದರು.