ಸಾರಾಂಶ
ರಾಷ್ಟ್ರೀಯ ಡೆಂಘೀ ದಿನಾಚರಣೆ । ಮಳೆಗಾಲದಲ್ಲಿ ಎಚ್ಚರದಿಂದಿರಲು ಸೂಚನೆಕನ್ನಡಪ್ರಭ ವಾರ್ತೆ ಶಿವಮೊಗ್ಗ
ಡೆಂಘೀ, ಚಿಗುನ್ ಗುನ್ಯ, ಮಲೇರಿಯಾದಂತಹ ಇತರೆ ರೋಗಗಳನ್ನು ಹರಡುವ ಸೊಳ್ಳೆಗಳನ್ನು ನಿಯಂತ್ರಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ತಿಳಿಸಿದರು.ಇಲ್ಲಿನ ಬಾಪೂಜಿ ಆಯುರ್ವೇದಿಕ್ ಕಾಲೇಜಿನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮ, ಬಾಪೂಜಿ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರೀಯ ಡೆಂಘೀ ದಿನಾಚರಣೆ - 2025 ಉದ್ಘಾಟಿಸಿ ಮಾತನಾಡಿ, ಮುಂಗಾರು ಆರಂಭವಾಗಲಿದ್ದು ನಮ್ಮ ಮನೆ ಸುತ್ತಲಿನಲ್ಲಿ ಸೊಳ್ಳೆಗಳು ಆಗದಂತೆ ನೋಡಿಕೊಳ್ಳಬೇಕು ಎಂದರು.
ನಾವೆಲ್ಲ ಸೇರಿ ಡೆಂಘೀಯಂತಹ ಮಾರಣಾಂತಿಕ ರೋಗದ ಬಗ್ಗೆ ಮುನ್ನೆಚ್ಚರಿಕೆ ವಹಿಸಿ ನಿಯಂತ್ರಣಕ್ಕೆ ಬದ್ಧರಾಗಬೇಕು. ಪ್ಲಾಸ್ಟಿಕ್ ಬಳಕೆಗೆ ಸಹ ಕಡಿವಾಣ ಹಾಕಬೇಕೆಂದು ಕಿವಿಮಾತು ಹೇಳಿದರು.ಡಿಎಚ್ಈ ಡಾ.ನಟರಾಜ್ ಮಾತನಾಡಿ, ಸೊಳ್ಳೆಗಳ ಉತ್ಪತ್ತಿ ತಾಣಗಳಾದ ಸಿಮೆಂಟ್ ತೊಟ್ಟಿಗಳು ಟೈರ್‌ಗಳು, ಬ್ಯಾರೆಲ್‌ಗಳು, ನಿರ್ಮಾಣ ಹಂತದಲ್ಲಿ ಇರುವ ಕಟ್ಟಡಗಳು ಮತ್ತು ಘನ ತ್ಯಾಜ್ಯ ವಸ್ತುಗಳಲ್ಲಿ ನೀರು ನಿಂತು ಡೆಂಘೀ ಮತ್ತು ಚಿಕನ್‌ಗುನ್ಯಾ ಹರಡುವ ಸೊಳ್ಳೆಗಳು ಯಥೇಚ್ಛವಾಗಿ ಉತ್ಪತ್ತಿಯಾಗುತ್ತಿವೆ. ಮಳೆಗಾಲ ಪ್ರಾರಂಭ ಆಗುತ್ತಿರುವುದರಿಂದ ಡೆಂಘೀ ಹಾಗೂ ಚಿಕನ್‌ಗುನ್ಯಾ ರೋಗಗಳು ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದರು.
ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ.ಗುಡದಪ್ಪ ಕಸಬಿ ಮಾತನಾಡಿ, ‘ಡೆಂಘೀ ಸೋಲಿಸಲು ಹೆಜ್ಜೆಗಳು: ಪರಿಶೀಲಿಸಿ ಸ್ವಚ್ಛಗೊಳಿಸಿ ಮುಚ್ಚಿಡಿ’ ಎಂಬುದು ಈ ವರ್ಷದ ಘೋಷವಾಕ್ಯವಾಗಿದ್ದು ಅದರಂತೆ ನಾವು ನಡೆದುಕೊಳ್ಳಬೇಕಿದೆ. ಪ್ರತಿವರ್ಷ ಮೇ 16ರಂದು ಡೆಂಘೀ ದಿನಾಚರಣೆ ಆಚರಿಸಲಾಗುತ್ತದೆ. ಮುಂಗಾರು ಆರಂಭದ ಮುನ್ನ ಸೊಳ್ಳೆಯಿಂದ ಹರಡುವ ಡೆಂಘೀ, ಮಲೇರಿಯಾ, ಚಿಕುನ್‌ಗುನ್ಯ, ಝೀಕಾದಂತಹ ಸೋಂಕುಗಳು ಉಲ್ಬಣಗೊಳ್ಳುವ ಕಾರಣ ಸೊಳ್ಳೆ ಸಂತಾನೋತ್ಪತ್ತಿ ತಾಣಗಳನ್ನು ಗುರುತಿಸಿ, ಸೊಳ್ಳೆಗಳ ನಿಯಂತ್ರಣ ಮಾಡಬೇಕು ಎಂದು ತಿಳಿಸಿದರು.ಕಳೆದ ಸಾಲಿನಲ್ಲಿ ರಾಜ್ಯಾದ್ಯಂತ ಡೆಂಘೀ ಹೆಚ್ಚು ಪ್ರಕರಣ ದಾಖಲಾಗಿ ಸಾವು ನೋವು ಸಂಭವಿಸಿತ್ತು. ಡೆಂಘೀ ಮಾರಣಾಂತಿಕ ರೋಗವಾಗಿದ್ದು, ನಿರ್ಲಕ್ಷ್ಯ ಮಾಡಬಾರದು. ಯಾವುದೇ ರೀತಿ ಜ್ವರ ಇದ್ದರೂ ಸರ್ಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬೇಕು. ಈ ರೋಗಗಳ ನಿಯಂತ್ರಣದಲ್ಲಿ ಪ್ರತಿ ನಾಗರಿಕರ ಜವಾಬ್ದಾರಿ ಇದ್ದು, ಸೊಳ್ಳೆ ಉತ್ಪತ್ತಿ ತಾಣಗಳು, ಪರಿಕರಗಳಾದ ಡ್ರಮ್, ಸಿಮೆಂಟ್, ತೊಟ್ಟಿ ಇತರೆ ಸ್ವಚ್ಛಗೊಳಿಸಬೇಕು ಎಂದರು.
ಅಡಕೆ ತೋಟದಲ್ಲಿನ ಹಾಳೆಗಳಲ್ಲಿ ಲಾರ್ವಾ ಹೆಚ್ಚಿರುತ್ತದೆ. ತೋಟದ ಕೆಲಸ ಮಾಡುವ ಕಾರ್ಮಿಕರಲ್ಲೂ ಪ್ರಕರಣಗಳು ಕಾಣುತ್ತಿರುವುದರಿಂದ ಹಾಳೆಯಲ್ಲಿ ನೀರು ನಿಲ್ಲದಂತೆ ನಿಯಂತ್ರಣ ಮಾಡಬೇಕು ಹಾಗೂ ವೈಯಕ್ತಿಕ ರಕ್ಷಣಾತ್ಮಕ ಕ್ರಮಗಳಾದ ಸೊಳ್ಳೆ ನಿವಾರಕ ಲೇಪನ, ಸೊಳ್ಳೆ ಪರದೆಗಳನ್ನು ಬಳಸಬೇಕು. ಈ ಸೊಳ್ಳೆಗಳು ಹಗಲು ಕಚ್ಚುವದರಿಂದ ಮಕ್ಕಳು, ಹಿರಿಯರು ಮೈ ತುಂಬಾ ಬಟ್ಟೆ ಧರಿಸಬೇಕು ಎಂದ ಅವರು, ಜಾಗೃತಿ ಜಾಥಾ ಕಾರ್ಯಕ್ರಮ ಎಲ್ಲ, ತಾಲೂಕು, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನಡೆಯುತ್ತಿದ್ದು, ಕರಪತ್ರಗಳು, ಆಡಿಯೋ ಜಿಂಗಲ್ಸ್ ಮೂಲಕವೂ ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.ಡಿಎಸ್‌ಒ ಡಾ.ನಾಗರಾಜ ನಾಯ್ಕ್, ಟಿಎಚ್‌ಒ ಡಾ. ಚಂದ್ರಶೇಖರ್, ಬಾಪೂಜಿ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಅಧ್ಯಕ್ಷ ಆರಾಧ್ಯ ಎಂ.ವಿ.ಟಿ, ಬಾಪೂಜಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಕವಿತಾ, ಇತರೆ ಅಧಿಕಾರಿ, ಸಿಬ್ಬಂದಿ ಹಾಜರಿದ್ದರು. ಪೊಟೊ: 16ಎಸ್‌ಎಂಜಿಕೆಪಿ01
ಶಿವಮೊಗ್ಗದ ಬಾಪೂಜಿ ಆಯುರ್ವೇದಿಕ್ ಕಾಲೇಜಿನಲ್ಲಿ ರಾಷ್ಟ್ರೀಯ ಡೆಂಘೀ ದಿನ - 2025 ಕಾರ್ಯಕ್ರಮವನ್ನು ಶಾಸಕ ಎಸ್.ಎನ್.ಚನ್ನಬಸಪ್ಪ ಉದ್ಘಾಟಿಸಿದರು.