ಸಾರಾಂಶ
ಹುಬ್ಬಳ್ಳಿ:
ಇದು ಎಲ್ಲಿಯೋ ಕುಗ್ರಾಮದಲ್ಲಿರುವ ಆವರಣವಲ್ಲ. ಜನನಿಬಿಡ ಪ್ರದೇಶವಾಗಿರುವ ವಿದ್ಯಾನಗರದಲ್ಲಿರುವ ಸರ್ಕಾರಿ ಕಚೇರಿಯೊಂದರ ಅವ್ಯವಸ್ಥೆ. ಎಲ್ಲೆಂದರಲ್ಲಿ ಬಿದ್ದಿರುವ ತೆಂಗಿನಕಾಯಿಯ ಸಿಪ್ಪೆ, ಕಸದ ರಾಶಿ ಕಂಡರೆ ಕಚೇರಿಗೆ ಹೋಗುವುದಿರಲಿ, ಆ ಕಡೆ ಜನತೆ ಮುಖ ಮಾಡಿಯೂ ತಿರುಗುವುದಿಲ್ಲ.ಹೌದು, ಇಲ್ಲಿನ ವಿದ್ಯಾನಗರದಲ್ಲಿರುವ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ (ಕೆಎಚ್‌ಡಿಸಿ) ಕಚೇರಿಯ ಆವರಣದ ಸ್ಥಿತಿ. ನಿತ್ಯವೂ ನೂರಾರು ಜನ ಕಚೇರಿಯ ಕೆಲಸಕ್ಕೆ ಇಲ್ಲಿಗೆ ಬಂದು ಹೋಗುವುದು ಸಾಮಾನ್ಯ. ಆದರೆ, ಅವರಿಗೆ ಕಚೇರಿಗೆ ಹೋಗಲೂ ಆಗದಂತಹ ಸ್ಥಿತಿ ನಿರ್ಮಾಣವಾಗಿದ್ದು, ನಿತ್ಯ ಇಲ್ಲಿಗೆ ಬರುವ ಜನರು ಅಧಿಕಾರಿಗಳ, ಇಲ್ಲಿನ ಅವ್ಯವಸ್ಥೆಗೆ ಹಿಡಿಶಾಪ ಹಾಕುತ್ತಾ ಸಂಚರಿಸುತ್ತಾರೆ.
ಹೋಗಲು ಆಗದ ಸ್ಥಿತಿ:ಇನ್ನು ಈ ಕಚೇರಿಯ ಒಳಗಡೆ ಹೋಗಲು ಕಟ್ಟಡದ ಅಕ್ಕಪಕ್ಕದಲ್ಲಿ ಮಾರ್ಗವಿದೆ. ಆದರೆ, ಅಲ್ಲಿ ಮಳೆನೀರು ನಿಂತು ರಸ್ತೆಯಲ್ಲ ಕೆಸರುಗದ್ದೆಯಂತಾಗಿದೆ. ಇನ್ನು ಇಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಹಾಗೂ ಸಿಬ್ಬಂದಿ ನಿತ್ಯವೂ ಹರಸಾಹಸ ಪಟ್ಟು ಕಚೇರಿಗೆ ಹೋಗಬೇಕು. ಸಾರ್ವಜನಿಕರ ಸ್ಥಿತಿಯಂತೂ ಹೇಳತೀರದು. ಅಲ್ಲದೇ ಇದರ ಪಕ್ಕದಲ್ಲಿಯೇ ಕಟ್ಟಡದ ತಡೆಗೋಡೆಗೆ ಹೊಂದಿಕೊಂಡು ಟೆಂಗಿನಕಾಯಿ ಚಿಪ್ಪುಗಳ ರಾಶಿಯೇ ಬಿದ್ದಿದೆ. ಸಾರ್ವಜನಿಕರು ಎಸೆದಿರುವ ಕಸದ ರಾಶಿಯಂತೂ ಸಾಕಷ್ಟಿದೆ. ಈ ತಡೆಗೋಡೆಗೆ ಹೊಂದಿಕೊಂಡು ಕಚೇರಿಯ ಒಳಂಗಣದಲ್ಲಿ ಚಿಕ್ಕದಾದ ಉದ್ಯಾನ ನಿರ್ಮಿಸಲಾಗಿದೆ. ಆದರೆ, ಅದೂ ಸಹ ನಿರ್ವಹಣೆ ಇಲ್ಲದೇ ಸಾಂಕ್ರಾಮಿಕ ರೋಗಗಳ ಉತ್ಪತ್ತಿ ತಾಣವಾಗಿ ಮಾರ್ಪಟ್ಟಿದೆ.
ಅಧಿಕಾರಿಗಳ ನಿರ್ಲಕ್ಷ್ಯ:ಕೆಎಚ್‌ಡಿಸಿ ಅಧಿಕಾರಿಗಳು ಇದೇ ಮಾರ್ಗದ ಮೂಲಕವೇ ನಿತ್ಯವೂ ಕಚೇರಿಯ ಒಳಗೆ ಹೋಗುತ್ತಾರೆ. ಸಂಬಂಧಿಸಿದ ಅಧಿಕಾರಿಗಳೂ ಇದರ ಬಗ್ಗೆ ಚಕಾರ ಎತ್ತುತ್ತಿಲ್ಲ. ಇದಕ್ಕೆ ಹೊಂದಿಕೊಂಡು ಮುಖ್ಯ ರಸ್ತೆಯಿದ್ದು, ನಿತ್ಯವೂ ಸಾವಿರಾರು ವಾಹನಗಳು ಸಂಚರಿಸುತ್ತವೆ. ಸವಾರರು ಈ ಕಚೇರಿಗೆ ಹೋಗುವ ಮಾರ್ಗದ ಅವ್ಯವಸ್ಥೆ ನೋಡಿ ನಿತ್ಯವೂ ಹಿಡಿಶಾಪ ಹಾಕುತ್ತಾ ಹೋಗುವುದು ಸಾಮಾನ್ಯವಾಗಿದೆ.
ಇದೇ ರಸ್ತೆಯ ಮೂಲಕವೇ ನಾನು ಕೆಲಸಕ್ಕೆ ಹೋಗುತ್ತೇನೆ. ವಿದ್ಯಾನಗರದ ಮುಖ್ಯ ರಸ್ತೆ ಪಕ್ಕದಲ್ಲಿರುವ ಕೆಎಚ್‌ಡಿಸಿ ಕಚೇರಿ ಆವರಣದಲ್ಲಿ ಮಳೆನೀರು ನಿಂತು ಆವರಣವೆಲ್ಲ ಕೆಸರುಗದ್ದೆಯಾಗಿದೆ. ಸಾಂಕ್ರಾಮಿಕ ರೋಗ ಹರಡುವ ತಾಣವಾಗಿ ಮಾರ್ಪಟ್ಟಿದೆ ಎಂದು ಅನಸೂಯಾ ಬಿರಾದಾರ ಹೇಳಿದರು.ಕೆಎಚ್‌ಡಿಸಿ ಕಚೇರಿ ಆವರಣ ಸಾಂಕ್ರಾಮಿಕ ರೋಗಗಳ ತಾಣವಾಗಿ ಮಾರ್ಪಟ್ಟಿದೆ. ನಿತ್ಯವೂ ಮಕ್ಕಳು, ಸಾರ್ವಜನಿಕರು ಇದೇ ರಸ್ತೆಯ ಮಾರ್ಗವಾಗಿ ಶಾಲೆಗೆ ತೆರಳುತ್ತಾರೆ. ಈ ಕಚೇರಿಯ ಎದುರೇ ಕಾಲೇಜಿದೆ. ಅಧಿಕಾರಿಗಳು ಈಗಲಾದರೂ ಸ್ವಚ್ಛತೆಗೆ ಆದ್ಯತೆ ನೀಡಲಿ ಎಂದು ರೇಖಾ ಸೋಮಣ್ಣವರ ಹೇಳಿದರು.