ರಾಜ್ಯದ ಬಹುತೇಕ ಮರಾಠಿಗರಿಗೆ ಕನ್ನಡವೇ ಪ್ರೀತಿ

| Published : Feb 26 2024, 01:30 AM IST

ಸಾರಾಂಶ

ರಾಜ್ಯದ ಬಹುತೇಕ ಮರಾಠಿಗರು ಕನ್ನಡ ಭಾಷೆಯನ್ನೇ ಅತ್ಯಂತ ಪ್ರೀತಿಯಿಂದ ಬಳಸುತ್ತಿರುವುದು ಉತ್ತಮ ಬೆಳವಣಿಗೆ. ರಾಜ್ಯದ ಗಡಿಯಲ್ಲಿ ಕೆಲವರು ಪುಂಡಾಟ ನಡೆಸುತ್ತಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಆದರೆ, ಅವರಿಗೂ ರಾಜ್ಯದಲ್ಲಿ ಬದುಕುತ್ತಿರುವ ಮರಾಠಿಗರಿಗೂ ಯಾವುದೇ ಸಂಬಂಧ ಇಲ್ಲ. ಮರಾಠಿಗರು ರಾಜ್ಯದ ಕನ್ನಡಿಗರೊಂದಿಗೆ ಮತ್ತು ಅನ್ಯ ಧರ್ಮೀಯರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಸಹಬಾಳ್ವೆ ಜೀವನ ನಡೆಸುತ್ತಿದ್ದಾರೆ. ರಾಜ್ಯದ ಮರಾಠಿಗರು ಕನ್ನಡ ಭಾಷಾಪ್ರೇಮಿ ಸಹೃದಯಿಗಳಾಗಿದ್ದಾರೆ. ಸಣ್ಣಪುಟ್ಟ ವೈಮನಸುಗಳನ್ನು ಮರೆತು ಸಮಾಜ ಬಾಂಧವರು ಒಗ್ಗಟ್ಟಾಗಬೇಕು ಎಂದು ಭದ್ರಾವತಿ ಮರಾಠ ಸಮಾಜದ ಅಧ್ಯಕ್ಷ ವಕೀಲ ಲೋಕೇಶ ರಾವ್ ದೊಂಬಾಳೆ ಹೊಳೆಹೊನ್ನೂರಿನಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು

ರಾಜ್ಯದ ಬಹುತೇಕ ಮರಾಠಿಗರು ಕನ್ನಡ ಭಾಷೆಯನ್ನೇ ಅತ್ಯಂತ ಪ್ರೀತಿಯಿಂದ ಬಳಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ಭದ್ರಾವತಿ ಮರಾಠ ಸಮಾಜದ ಅಧ್ಯಕ್ಷ ವಕೀಲ ಲೋಕೇಶ ರಾವ್ ದೊಂಬಾಳೆ ಹೇಳಿದರು.

ಇಲ್ಲಿಗೆ ಸಮೀಪದ ಮೈದೊಳಲಿನಲ್ಲಿ ಶನಿವಾರ ಆಯೋಜಿಸಿದ ಛತ್ರಪತಿ ಶಿವಾಜಿ ಮಹಾರಾಜರ 397ನೇ ಜಯಂತ್ಯುತ್ಸವ ಪ್ರಯುಕ್ತ ಹಮ್ಮಿಕೊಂಡಿದ ಛತ್ರಪತಿ ಶಿವಾಜಿ ಮಹಾರಾಜರ ಅಶ್ವಾರೂಢ ಪ್ರತಿಮೆಯ ರಾಜಬೀದಿ ಉತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ರಾಜ್ಯದ ಗಡಿಯಲ್ಲಿ ಕೆಲವರು ಪುಂಡಾಟ ನಡೆಸುತ್ತಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಆದರೆ, ಅವರಿಗೂ ರಾಜ್ಯದಲ್ಲಿ ಬದುಕುತ್ತಿರುವ ಮರಾಠಿಗರಿಗೂ ಯಾವುದೇ ಸಂಬಂಧ ಇಲ್ಲ. ಮರಾಠಿಗರು ರಾಜ್ಯದ ಕನ್ನಡಿಗರೊಂದಿಗೆ ಮತ್ತು ಅನ್ಯ ಧರ್ಮೀಯರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಸಹಬಾಳ್ವೆ ಜೀವನ ನಡೆಸುತ್ತಿದ್ದಾರೆ. ರಾಜ್ಯದ ಮರಾಠಿಗರು ಕನ್ನಡ ಭಾಷಾಪ್ರೇಮಿ ಸಹೃದಯಿಗಳಾಗಿದ್ದಾರೆ. ಸಣ್ಣಪುಟ್ಟ ವೈಮನಸುಗಳನ್ನು ಮರೆತು ಸಮಾಜ ಬಾಂಧವರು ಒಗ್ಗಟ್ಟಾಗಬೇಕು ಎಂದರು.

ಮುಂದಿನ ಪೀಳಿಗೆಗೆ ಸಮಾನತೆ ಸಮಾಜವನ್ನು ಕೊಡುಗೆಯಾಗಿ ನೀಡುವ ಜವಾಬ್ದಾರಿ ನಮ್ಮ ಮೇಲಿದೆ. ಬಹುಮುಖ್ಯವಾಗಿ ಯುವಕರು ಸಮಾಜದ ಕಾರ್ಯಕ್ರಮಗಳಲ್ಲಿ ನಿಯಮಿತವಾಗಿ ಭಾಗವಹಿಸಬೇಕು. ವ್ಯಕ್ತಿಗೆ ಸಮಾಜದ ಅವಶ್ಯಕತೆ ಇದೆ. ಸಮಾಜ ಬಿಟ್ಟು ಬಾಳುವುದು ಅಸಾದ್ಯ. ಶಿವಾಜಿ ಮಹಾರಾಜರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಕೊಂಡು ಧರ್ಮ ಮಾರ್ಗದಲ್ಲಿ ನಡೆಯಬೇಕು ಎಂದರು.

ಯಾರೊಬ್ಬರು ತಮ್ಮ ತನವನ್ನು ಮರೆತು ಬದುಕಬಾರದು. ಸಮಾಜ ಮುಖಿ ಕಾರ್ಯಗಳಿಗೆ ಕೈಲಾದಷ್ಟು ಸಹಕಾರ ನೀಡುವುದನ್ನು ಎಂದಿಗೂ ಮರೆಯಬಾರದು. ಪ್ರತಿಯೊಬ್ಬ ತಾಯಿಯೂ ಜೀಜಾಮಾತೆಯಂತೆ ತಮ್ಮ ಮಕ್ಕಳನ್ನು ಧರ್ಮ ಮಾರ್ಗದಲ್ಲಿ ಬದುಕು ಕಟ್ಟಿಕೊಳ್ಳುವಂತೆ ಪ್ರೇರಣೆ ನೀಡಬೇಕು. ನೂತನವಾಗಿ ಅಸ್ಥಿತ್ವಕ್ಕೆ ಬಂದಿರುವ ಮರಾಠ ಅಭಿವೃದ್ಧಿ ನಿಗಮದ ಯೋಜನೆಗಳ ಲಾಭಗಳು ಪ್ರತಿಯೊಂದು ಕುಟುಂಬಕ್ಕೂ ಕಲ್ಪಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

ಗ್ರಾಮ ಸಮಿತಿ ಅಧ್ಯಕ್ಷ ಚಂದ್ರಪ್ಪ, ಉಪಾಧ್ಯಕ್ಷೆ ವಿನೋದಮ್ಮ, ಮಾಜಿ ತಾಪಂ ಸದಸ್ಯ ಈಶ್ವರ ರಾವ್, ಬಿ.ನಾಗಪ್ಪ, ರಾಮ್‍ರಾಮ್, ಶ್ರೀನಿವಾಸ್ ಬಂಡ್ಗಾರ್, ಶಿವಾಜಿ ರಾವ್, ಹಾಲೋಜಿ ರಾವ್, ಶೇಖರ ರಾವ್, ಯಲ್ಲೋಜಿ ರಾವ್, ಮಹಾದೇವ ರಾವ್, ಕೆ.ಟಿ. ಬಸವರಾಜ್‍ ರಾವ್, ಚಂದ್ರೋಜಿ ರಾವ್, ವಚನ್‍ ಮೋರೆ, ರಾಜಶೇಖರ್, ಚಂದನ್, ನಾಗರಾಜ್ ಸೇರಿದಂತೆ ಮೈದೊಳಲು ಮರಾಠ ಸಮಾಜ ಬಾಂಧವರು ಉಪಸ್ಥಿತರಿದ್ದರು.

- - - -24ಎಚ್‍ಎಚ್‍ಆರ್ ಪಿ05:

ಮೈದೊಳಲಿನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಅಶ್ವಾರೂಢ ಪ್ರತಿಮೆ ರಾಜಬೀದಿ ಉತ್ಸವಕ್ಕೆ ಭದ್ರಾವತಿ ಮರಾಠ ಸಮಾಜದ ಅಧ್ಯಕ್ಷ ವಕೀಲ ಲೋಕೇಶ ರಾವ್ ದೊಂಬಾಳೆ ಚಾಲನೆ ನೀಡಿದರು.