ಕನ್ನಡಪ್ರಭ ವಾರ್ತೆ ನಾಗಮಂಗಲ

ಗ್ರಾಮೀಣ ಜನರಿಗೆ ಉತ್ತಮ ರಸ್ತೆ ಚರಂಡಿ, ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಿಕೊಟ್ಟರೆ ಬಹುತೇಕ ಸಮಸ್ಯೆಗಳಿಗೆ ಪರಿಹಾರ ಒದಗಿಸಿದಂತಾಗುತ್ತದೆ ಎಂದು ಶಾಸಕ ಎನ್.ಚಲುವರಾಯಸ್ವಾಮಿ ಹೇಳಿದರು.ತಾಲೂಕಿನ ತ್ಯಾಪೇನಹಳ್ಳಿಯಲ್ಲಿ ಲೋಕೋಪಯೋಗಿ ಇಲಾಖೆಯ 2 ಕೋಟಿ ರು.ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶನಿವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಹಳ್ಳಿಗಳು ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿಯಾದಂತೆ. ತಾಲೂಕಿನ ಜನರ ಆಶೀರ್ವಾದದಿಂದ ನನಗೆ ಸಿಕ್ಕಿರುವ ಅವಕಾಶದಲ್ಲಿ ಒಳ್ಳೆಯ ಕೆಲಸ ಮಾಡಬೇಕೆಂಬ ಉದ್ದೇಶದಿಂದ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುತ್ತಿದ್ದೇನೆ ಎಂದರು.

ತಾಲೂಕಿನಲ್ಲಿ ಬಹುತೇಕ ಹಳ್ಳಿಗಳ ರಸ್ತೆಗಳು ಹಾಳಾಗಿದ್ದವು. ಕಳೆದ ಮೂರು ವರ್ಷದಿಂದ ಸಾಕಷ್ಟು ರಸ್ತೆ, ಸೇತುವೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ನಾಗಮಂಗಲ ಶ್ರವಣಬೆಳಗೊಳ ಮುಖ್ಯ ರಸ್ತೆಯಿಂದ ಮುಳಕಟ್ಟೆ, ತ್ಯಾಪೇನಹಳ್ಳಿ ಮಾರ್ಗವಾಗಿ ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಬಿ.ಜಿ.ನಗರಕ್ಕೆ ಸಂಪರ್ಕ ಕಲ್ಪಿಸುವ ಈ ರಸ್ತೆಯನ್ನು ಬಹುತೇಕ ಅಭಿವೃದ್ಧಿ ಪಡಿಸಲಾಗಿದೆ ಎಂದರು.

ತ್ಯಾಪೇನಹಳ್ಳಿಯಿಂದ ಕೇವಲ 2 ಕಿಮೀ ದೂರದವರೆಗೆ ಮಾತ್ರ ಬಾಕಿ ರಸತ್ತೆ ಉಳಿದಿದೆ. ಅದಕ್ಕಾಗಿ 2 ಕೋಟಿ ರು. ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಈ ಕಾಮಗಾರಿ ಪೂರ್ಣಗೊಂಡರೆ ಈ ಮಾರ್ಗದ ರಸ್ತೆ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿಯಾದಂತಾಗುತ್ತದೆ ಎಂದರು.

ವಿಧಾನಸಭಾ ಕ್ಷೇತ್ರದ ಎಲ್ಲಾ ಹಳ್ಳಿಗಳಿಗೂ ದೀರ್ಘಕಾಲ ಬಾಳಿಕೆ ಬರುವಂತೆ ಗುಣಮಟ್ಟದ ರಸ್ತೆ ಮಾಡಿಸಿಕೊಡಬೇಕೆಂಬ ಉದ್ದೇಶ ನನ್ನದಾಗಿದೆ. ಮುಂದಿನ ಎರಡು ವರ್ಷದೊಳಗೆ ತಾಲೂಕಿನ ಹಲವೆಡೆ ಶಿಥಿಲಗೊಂಡಿರುವ ಗ್ರಾಮೀಣ ಪ್ರದೇಶದ ರಸ್ತೆ, ಚರಂಡಿ ಸೇತುವೆ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದರು.


ಯಾವುದೇ ಕಾಮಗಾರಿಯಾಗಲಿ ದೀರ್ಘಕಾಲ ಬಾಳಿಕೆ ಬರುವಂತೆ ಉತ್ತಮ ಗುಣಮಟ್ಟದಿಂದ ಕೂಡಿರಬೇಕು. ಸಂಬಂಧಿಸಿದ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಬಹಳ ಎಚ್ಚರಿಕೆ ವಹಿಸಿ ಕೆಲಸ ಮಾಡಬೇಕು. ಕಳಪೆ ಗುಣಮಟ್ಟ ಕಂಡುಬಂದಲ್ಲಿ ಸಹಿಸುವುದಿಲ್ಲ ಎಂದರು.

ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಿಂದ ಗ್ರಾಮೀಣ ಪ್ರದೇಶದ ಎಲ್ಲ ವರ್ಗದ ಜನರಿಗೆ ಬಹಳಷ್ಟು ಅನುಕೂಲವಾಗುತ್ತಿದೆ. ದೇಶಕ್ಕೆ ಮಾದರಿಯಾಗಿರುವ ಈ ಯೋಜನೆ ಮಹತ್ವವನ್ನು ಗ್ರಾಮೀಣ ಭಾಗದ ಮಹಿಳೆಯರು ಅರ್ಥೈಸಿಕೊಳ್ಳಬೇಕು. ಸಿಕ್ಕಿರುವ ಅವಕಾಶದಲ್ಲಿ ಕಾಲಹರಣ ಮಾಡದೆ ಅಭಿವೃದ್ಧಿ ಜೊತೆಗೆ ಶಾಶ್ವತವಾಗಿ ಉಳಿಯುವ ಮತ್ತು ಜನರಿಗೆ ಅನುಕೂಲವಾಗುವಂತಹ ಅಭಿವೃದ್ಧಿ ಕೆಲಸ ಮಾಡಬೇಕೆಂಬುದು ನನ್ನ ಮುಖ್ಯ ಉದ್ದೇಶವಾಗಿದೆ ಎಂದರು.

ನಂತರ ತಾಲೂಕಿನ ಬೆಳ್ಳೂರು ಹೋಬಳಿಯ ಕಾಡಅಂಕನಹಳ್ಳಿಯಲ್ಲಿ 2.5 ಕೋಟಿ ರು. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಇದೇ ವೇಳೆ ಭೂಮಿ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಾದ ಪ್ರಶಾಂತ್, ಅಭಿಷೇಕ್ ಮುಖಂಡರಾದ ತ್ಯಾಪೇನಹಳ್ಳಿ ಶ್ರೀನಿವಾಸ್, ರಾಮೇಗೌಡ, ದಿನೇಶ್, ರಾಮಲಿಂಗೇಗೌಡ, ಕಾಂತರಾಜು, ಶಿವರಾಮು, ರಾಘವೇಂದ್ರ, ಕೆಲಗೆರೆ ದೇವರಾಜು, ಪುಟ್ಟಸ್ವಾಮಿ, ಚಂದ್ರಪ್ಪ, ಮಂಜು, ವೆಂಕಟೇಶ್, ವಿಷಕಂಠ, ಎಂ.ವಿ.ಕೃಷ್ಣಪ್ಪ, ನರಗನಹಳ್ಳಿ ದೇವರಾಜು, ಪ್ರಕಾಶ್, ಸಂಪತ್‌ಕುಮಾರ್, ಪ್ರವೀಣ್‌ಕುಮಾರ್, ಸುನಿಲ್, ನಿಂಗರಾಜು, ಶಶಿಕುಮಾರ್ ಸೇರಿದಂತೆ ಹಲವರು ಇದ್ದರು.