ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರುಆರ್ಥಿಕ ಸಮಸ್ಯೆ ಹಿನ್ನಲೆಯಲ್ಲಿ ಬೇಸರಗೊಂಡು ತಾಯಿ ಹಾಗೂ ಅವರ ಅವಳಿ ಮಕ್ಕಳು ಸಾಮೂಹಿಕವಾಗಿ ಆತ್ಮಹತ್ಯೆಗೆ ಶರಣಾಗಿರುವ ಹೃದಯಾವಿದ್ರಾವಕ ಘಟನೆ ಜೆ.ಪಿ.ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ನಡೆದಿದೆ.ಜೆ.ಪಿ.ನಗರದ ಮೂರನೇ ಹಂತದ ಸುಕನ್ಯಾ (48), ಅವರ ಮಕ್ಕಳಾದ ನಿಖಿತ್ (28) ಹಾಗೂ ನಿಶ್ಚಿತ್ (28) ಮೃತರು. ದುರ್ದೈವಿಗಳು. ಮನೆಯ ಕೊಠಡಿಯಲ್ಲಿ ಬೆಳಗ್ಗೆ 8.30ರ ಸುಮಾರಿಗೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ತಾಯಿ- ಮಕ್ಕಳು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅದೇ ವೇಳೆ ನಡುಮನೆಯಲ್ಲಿ ದಿನಪತ್ರಿಕೆ ಓದುತ್ತಿದ್ದ ಮೃತ ಸುಕನ್ಯಾ ಪತಿ ಜಯಾನಂದ್, ಕೋಣೆಯಲ್ಲಿ ಚೀರಾಟ ಕೇಳಿ ಆತಂಕಗೊಂಡು ರಕ್ಷಣೆಗೆ ಕೂಗಾಡಿದ್ದಾರೆ. ತಕ್ಷಣವೇ ಸ್ಥಳೀಯರಿಂದ ಮಾಹಿತಿ ಪಡೆದು ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದಾರೆ. ಆದರೆ ಆ ವೇಳೆಗೆ ಬೆಂಕಿಯಲ್ಲಿ ತಾಯಿ-ಮಕ್ಕಳು ಬೆಂದು ಹೋಗಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.ಸಾಲದ ಸುಳಿಯಲ್ಲಿ ಸಿಲುಕಿದ ಕುಟುಂಬ: ಉಡುಪಿ ಜಿಲ್ಲೆ ಅಂಬಲಾವಾಡಿ ಗ್ರಾಮದ ಜಯಾನಂದ್ ಅವರು, ಮೂರು ದಶಕಗಳ ಹಿಂದೆಯೇ ಉದ್ಯಮ ಸಲುವಾಗಿ ನಗರಕ್ಕೆ ಬಂದಿದ್ದರು. ಜೆ.ಪಿ.ನಗರದ 3ನೇ ಹಂತದಲ್ಲಿ ಬಾಡಿಗೆ ಮನೆಯಲ್ಲಿ ತಮ್ಮ ಪತ್ನಿ ಹಾಗೂ ಇಬ್ಬರು ಮಕ್ಕಳ ಜತೆ ನೆಲೆಸಿದ್ದ ಅವರು, ಬನ್ನೇರುಘಟ್ಟ ರಸ್ತೆಯಲ್ಲಿ ವುಡ್ ಡೈಮೆಂಕಿಂಗ್ ಕೈಗಾರಿಕೆಯನ್ನು ನಡೆಸುತ್ತಿದ್ದರು. ಆದರೆ ಕೊರೋನಾ ಬಳಿಕ ಆರ್ಥಿಕ ಸಂಕಷ್ಟದಿಂದ ಅವರ ಕೈಗಾರಿಕೆಯ ಬಾಗಿಲಿಗೆ ಬೀಗ ಬಿದ್ದಿತ್ತು. ಇತ್ತ ಮನೆಯಲ್ಲೇ 1 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಮೃತ ಸುಕನ್ಯಾ ಮನೆಪಾಠ ಮಾಡುತ್ತಿದ್ದರೆ, ಖಾಸಗಿ ಕಂಪನಿಯಲ್ಲಿ ಅವರ ಮಕ್ಕಳು ಉದ್ಯೋಗದಲ್ಲಿದ್ದರು. ಆದರೆ ಇತ್ತೀಚಿಗೆ ಕೆಲಸ ಕಳೆದುಕೊಂಡು ಅವರ ಹಿರಿಯ ಪುತ್ರ ನಿಶ್ಚಿತ್ ನಿರುದ್ಯೋಗಿಯಾಗಿದ್ದರು ಎಂದು ತಿಳಿದು ಬಂದಿದೆ.
ಫ್ಯಾಕ್ಟರಿ ಬಂದ್ ಆದ ಬಳಿಕ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಜಯಾನಂದ್ ಅವರು, ತಮ್ಮ ಪರಿಚಿತರು ಹಾಗೂ ಬ್ಯಾಂಕ್ ಸೇರಿ ಒಟ್ಟು 11 ಲಕ್ಷ ಸಾಲ ಮಾಡಿದ್ದರು. ಅದೇ ರೀತಿ ಅವರ ಪತ್ನಿ ಸುಕನ್ಯಾ ಹಾಗೂ ಮಕ್ಕಳು ಕೂಡ ಪ್ರತ್ಯೇಕವಾಗಿ ಸಾಲ ಮಾಡಿದ್ದರು ಎಂಬ ಮಾಹಿತಿ ಇದೆ. ಸಾಲ ವಸೂಲಿ ಸಲುವಾಗಿ ಮಂಗಳವಾರ ಸಂಜೆ ಅವರ ಮನೆಗೆ ಬ್ಯಾಂಕ್ ಸಿಬ್ಬಂದಿ ತೆರಳಿ ನೋಟಿಸ್ ಸಹ ಕೊಟ್ಟಿದ್ದರು ಎಂದು ಪೊಲೀಸರು ಹೇಳಿದ್ದಾರೆ.ಆತ್ಮಹತ್ಯೆ ಹೇಗೆ?: ಹಣಕಾಸು ಸಮಸ್ಯೆಯಿಂದ ಜಿಗುಪ್ಸೆಗೊಂಡು ತಾಯಿ-ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದಾರೆ. ಅದರಂತೆ ಬೆಳಗ್ಗೆ ಪೆಟ್ರೋಲ್ ಬಂಕ್ ತೆರಳಿ ಕ್ಯಾನ್‌ನಲ್ಲಿ ನಿಶ್ಚಿತ್ ಹಾಗೂ ನಿಖಿತ್ ಪೆಟ್ರೋಲ್ ತಂದಿದ್ದಾರೆ. ಆನಂತರ ತಾಯಿ-ಮಕ್ಕಳು ಸಾಮೂಹಿಕವಾಗಿ ಕೋಣೆಯಲ್ಲಿ ಕುಳಿತು ಪೆಟ್ರೋಲ್ ಸುರಿದುಕೊಂಡು ಬೆಂಚಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಸಾಲ ಸಮಸ್ಯೆಯಿಂದ ತಾಯಿ-ಮಕ್ಕಳು ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಇದೆ. ಹಣಕಾಸು ವಿಚಾರವಾಗಿ ಮೃತರ ಕುಟುಂಬಕ್ಕೆ ಯಾರಾದರೂ ಕಿರುಕುಳ ನೀಡಿರುವ ಬಗ್ಗೆ ದೂರು ಸಲ್ಲಿಸಿದರೆ ತನಿಖೆ ನಡೆಸುತ್ತೇವೆ ಎಂದು ದಕ್ಷಿಣ ವಿಭಾಗ ಡಿಸಿಪಿ ಶಿವಪ್ರಕಾಶ್ ದೇವರಾಜ್ ಹೇಳಿದರು. ದಶಕಗಳಿಂದ ನಾನು ಹಾಗೂ ಜಯಾನಂದ್ ಸ್ನೇಹಿತರು. ಕೊರೋನಾ ಬಳಿಕ ಅವರಿಗೆ ಹಣಕಾಸು ಸಮಸ್ಯೆ ಎದುರಾಗಿತ್ತು. ಇದೇ ನೋವಿನಲ್ಲೇ ಈ ದುರಂತ ನಡೆದಿರಬಹುದು ಎಂದು ಮೃತರ ಕುಟುಂಬದ ಸ್ನೇಹಿತ ಚಂದ್ರಶೇಖರ್ ಹೇಳಿದರು.