ಸಾರಾಂಶ
ಮನೆಯಲ್ಲಿ ನಿತ್ಯ ಕಲಹದಿಂದ ಬೇಸತ್ತು 12 ವರ್ಷದ ಮಗಳೊಂದಿಗೆ ತಾಯಿ ವರದಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ವರದಾಹಳ್ಳಿ ಗ್ರಾಮದಲ್ಲಿ ನಡೆದಿದೆ. ಮಗಳ ಮೃತದೇಹ ಸಿಕ್ಕಿದ್ದು, ತಾಯಿ ಮೃತದೇಹಕ್ಕಾಗಿ ಹುಡುಕಾಟ ಮುಂದುವರಿದಿದೆ.
ಹಾವೇರಿ: ಮನೆಯಲ್ಲಿ ನಿತ್ಯ ಕಲಹದಿಂದ ಬೇಸತ್ತು 12 ವರ್ಷದ ಮಗಳೊಂದಿಗೆ ತಾಯಿ ವರದಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ವರದಾಹಳ್ಳಿ ಗ್ರಾಮದಲ್ಲಿ ನಡೆದಿದೆ. ಮಗಳ ಮೃತದೇಹ ಸಿಕ್ಕಿದ್ದು, ತಾಯಿ ಮೃತದೇಹಕ್ಕಾಗಿ ಹುಡುಕಾಟ ಮುಂದುವರಿದಿದೆ.
ಸವಿತಾ ನಾಗರಾಜ್ ಉಳ್ಳಾಗಡ್ಡಿ (38) ಹಾಗೂ ಕಾವ್ಯಾ (11) ಆತ್ಮಹತ್ಯೆ ಮಾಡಿಕೊಂಡ ತಾಯಿ, ಮಗಳು.ಭಾನುವಾರ ಸಂಜೆಯೇ ಇಬ್ಬರೂ ನದಿಗೆ ಹಾರಿದ್ದು, ಕಾವ್ಯಾಳ ಮೃತದೇಹ ಸೋಮವಾರ ಪತ್ತೆಯಾಗಿದೆ. ತಾಯಿ ಸವಿತಾಳ ಮೃತದೇಹಕ್ಕಾಗಿ ಪೊಲೀಸ್ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಹುಡುಕಾಟ ನಡೆಸಿದ್ದಾರೆ. ವರದಾ ನದಿಯಲ್ಲಿ ನೀರಿನ ಹರಿವು ಹೆಚ್ಚಿರುವುದರಿಂದ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಬೋಟ್‌ಗಳ ಮೂಲಕ ಸಂಜೆವರೆಗೂ ಹುಡುಕಾಟ ನಡೆಸಿದರೂ ಮೃತದೇಹ ಸಿಕ್ಕಿಲ್ಲ.
ಸವಿತಾಳಿಗೆ ಪುತ್ರಿ ಕಾವ್ಯಾ ಹಾಗೂ ಇಬ್ಬರು ಗಂಡು ಮಕ್ಕಳಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇತ್ತೀಚೆಗಷ್ಟೇ ಮೃತ ಕಾವ್ಯಾ ನವೋದಯ ಪರೀಕ್ಷೆ ಪಾಸಾಗಿದ್ದಳು. ಓದಿನಲ್ಲಿ ಚುರುಕಾಗಿದ್ದಳು. ಮನೆಯಲ್ಲಿ ದಿನನಿತ್ಯ ಕಲಹ, ಭಿನ್ನಾಭಿಪ್ರಾಯ ಹಿನ್ನೆಲೆಯಲ್ಲಿ ಮನನೊಂದಿದ್ದ ತಾಯಿ ಸವಿತಾ ಪುತ್ರಿಯನ್ನು ನದಿ ಬಳಿ ಕರೆದುಕೊಂಡು ಬಂದು ಬಳಿಕ ಇಬ್ಬರೂ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ. ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.