ಸಾರಾಂಶ
ಚಿಕ್ಕಮಗಳೂರು, ಮನುಷ್ಯನ ಸ್ವಾರ್ಥ ಮತ್ತು ಆಧುನಿಕತೆ ಜೀವನಾನುಸಾರಕ್ಕೆ ಪ್ರಕೃತಿಯನ್ನು ಹಾಳುಗೆಡುವಿ ಪ್ರತಿದಿನ ಭೂತಾಯಿ ಮಡಿಲನ್ನು ಕಲುಷಿತಗೊಳಿಸಿ ವಿಷವನ್ನು ಉಣಬಡಿಸುತ್ತಿದ್ದಾನೆ ಎಂದು ಲೈಫ್ ಲೈನ್ ಫೀಡ್ಸ್ ಮ್ಯಾನೇಜರ್ ಡೈರೆಕ್ಟರ್ ಕೆ.ಕಿಶೋರ್‌ಕುಮಾರ್ ಹೆಗ್ಡೆ ಹೇಳಿದರು.
- ಕಲ್ಯಾಣನಗರದಲ್ಲಿ ಸಂಪೂರ್ಣ ಸ್ವಚ್ಛತಾ ಅಭಿಯಾನ । ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಬಹುಮಾನ ವಿತರಣ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಮನುಷ್ಯನ ಸ್ವಾರ್ಥ ಮತ್ತು ಆಧುನಿಕತೆ ಜೀವನಾನುಸಾರಕ್ಕೆ ಪ್ರಕೃತಿಯನ್ನು ಹಾಳುಗೆಡುವಿ ಪ್ರತಿದಿನ ಭೂತಾಯಿ ಮಡಿಲನ್ನು ಕಲುಷಿತಗೊಳಿಸಿ ವಿಷವನ್ನು ಉಣಬಡಿಸುತ್ತಿದ್ದಾನೆ ಎಂದು ಲೈಫ್ ಲೈನ್ ಫೀಡ್ಸ್ ಮ್ಯಾನೇಜರ್ ಡೈರೆಕ್ಟರ್ ಕೆ.ಕಿಶೋರ್‌ಕುಮಾರ್ ಹೆಗ್ಡೆ ಹೇಳಿದರು.
ಕಲ್ಯಾಣನಗರದಲ್ಲಿ ಲೈಫ್ ಲೈನ್ ಫೀಡ್ಸ್ ಮತ್ತು ಕಲ್ಯಾಣನಗರದ ವೆಲ್‌ಫೇರ್ ಸೊಸೈಟಿ ಗುರುವಾರ ಆಯೋಜಿಸಿದ್ಧ ಸಂಪೂರ್ಣ ಸ್ವಚ್ಚತಾ ಅಭಿಯಾನ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಪ್ರಕೃತಿ ಸಂಪತ್ತಿನಿಂದ ಜೀವನ ರೂಪಿಸಿಕೊಂಡಿರುವ ಮನುಜನಿಗೆ ಎಂದಿಗೂ ಪರಿಸರ ತೆರಿಗೆ ಕೇಳುತ್ತಿಲ್ಲ. ಬದಲಾಗಿ ನಾವುಗಳು ಫಲವತ್ತತೆ ಮಣ್ಣು, ಸ್ವಚ್ಚಂಧ ವಾತಾವರಣ ನಿರ್ಮಿಸಲು ಪೂರಕವಾಗಿ ನಡೆದು ಕೊಂಡರೆ ಸಕಲ ಜೀವ ರಾಶಿಗಳಿಗೂ ಒಳಿತು. ಆದರೆ ಎಲ್ಲೆಂದರಲ್ಲಿ ಕಸ ಬಿಸಾಕಿ ಮಲೀನಗೊಳಿಸುವ ಹಕ್ಕು ಮನುಷ್ಯರಿಗಿಲ್ಲ ಎಂದರು.ಸಾಮಾನ್ಯವಾಗಿ ವಾಹನಗಳಲ್ಲಿ ಸಂಚರಿಸುವ ಪ್ರಯಾಣಿಕರು ತಿಂಡಿ ಪದಾರ್ಥಗಳ ಪ್ಲಾಸ್ಟಿಕ್ ಪ್ಯಾಕೆಟ್ ಗಳನ್ನು ರಸ್ತೆಗಳಲ್ಲಿ ಬೀಸಾಡುವುದು ನೋಡಿದರೆ ಸಿಡಿಮಿಡಿಗೊಳ್ಳುತ್ತೇವೆ. ವಾಗ್ವಾದಕ್ಕಿಳಿದರೆ ಬೇರೆಯಾಗಿ ಮಾತನಾಡುತ್ತಾರೆ. ಹೀಗಾಗಿ ಪರಿಸರ ಕಾಳಜಿ ತಾನಾಗಿಯೇ ರೂಡಿಸಿಕೊಂಡು ಸುರಕ್ಷಿತೆಯಿಂದ ಕಾಪಾಡುವ ಜವಾಬ್ದಾರಿ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.ಜಿಲ್ಲೆಯ ಕೆಲವರು ವಿದೇಶಗಳಿಗೆ ಪ್ರವಾಸಕ್ಕೆಂದು ತೆರಳಿ ಅಲ್ಲಿನ ಸ್ವಚ್ಛತಾ ನಿಯಮಕ್ಕೆ ತಲೆಬಾಗುತ್ತಾರೆ. ವಾಪಸ್ ಬಂದು ತಾಯ್ನಾಡಿನಲ್ಲಿ ಆ ಶಿಸ್ತನ್ನು ಪಾಲಿಸುತ್ತಿಲ್ಲ. ಇಷ್ಟೆಲ್ಲಾ ಗಮನಿಸಿದರೆ ನಮ್ಮ ಪ್ರಜಾಪ್ರಭುತ್ವ ಸಮಸ್ಯೆ ಎಂಬ ಪ್ರಶ್ನೆ ಕಾಡಲಿದ್ದು ಇದಕ್ಕೆ ದಂಡಂ ದಶಗುಣಂನಿಂದಲೇ ತಿದ್ದುವ ಕೆಲಸವಾಗಬೇಕು ಎಂದರು.ವಿಶ್ವದ ಮುಂದುವರಿದ ಜಪಾನ್ ದೇಶದಲ್ಲಿ ಬಾಲ್ಯದಿಂದಲೇ ಮಕ್ಕಳಿಗೆ ಶೌಚಾಲಯ ಶುಚಿಗೊಳಿಸುವ ಹಾಗೂ ತರಕಾರಿ ಕತ್ತರಿಸುವ ತರಬೇತಿ ನೀಡಿ ಶಿಸ್ತನ್ನು ರೂಢಿಸುವರು. ನಮ್ಮ ಶಾಲಾ ಮಕ್ಕಳಲ್ಲಿ ಶೌಚಾಲಯ ಶುಚಿಗೊಳಿಸಿದರೆ ದೊಡ್ಡ ತಪ್ಪಂತೆ ಬಿಂಬಿಸಲಾಗುತ್ತಿದೆ. ಹಿಂದೆ ತಾವು ಸೇರಿದಂತೆ ಅನೇಕ ಗಣ್ಯರು ಪರಿಶ್ರಮದಿಂದಲೇ ದೊಡ್ಡ ವ್ಯಕ್ತಿಯಾಗಿದ್ದಾರೆ ಎಂಬುದು ಮರೆಯಬಾರದು ಎಂದರು.ಆ ನಿಟ್ಟಿನಲ್ಲಿ ಕಲ್ಯಾಣನಗರ ಬಡಾವಣೆಗಳಲ್ಲಿ ನಿವಾಸಿಗಳೆಲ್ಲಾ ಒಟ್ಟಾಗಿ ವೇಲ್‌ಫೇರ್ ಸೊಸೈಟಿ ನಿರ್ಮಿಸಿ ಸ್ವಚ್ಚತೆ ಅರಿವು ಮೂಡಿಸುವ ಕಾರ್ಯದಲ್ಲಿ ನಿರತವಾಗಿದೆ. ಈ ಸೊಸೈಟಿ ನಿಯಮಗಳನ್ನು ಗಮನಿಸಿದ ಅನೇಕ ಬಡಾವಣೆಗಳಲ್ಲಿ ಇದೇ ರೀತಿ ಟ್ರಸ್ಟ್ ನಿರ್ಮಿಸಿಕೊಂಡು ವಾರ್ಡಿನ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದು ಖುಷಿ ತಂದಿದೆ ಎಂದು ಹೇಳಿದರು. ಸಿವಿಲ್ ಇಂಜಿನಿಯರ್ ಎಂ.ಎ.ನಾಗೇಂದ್ರ ಮಾತನಾಡಿ, ಮಾನವನ ಪಂಚೇಂದ್ರಿಗಳ ತೃಪ್ತಿಗಾಗಿ, ಪ್ರಕೃತಿಯ ಪಂಚ ಭೂತಗಳನ್ನು ಹಾಳು ಮಾಡುವುದು ಸರಿಯಲ್ಲ. ಜೊತೆಗೆ ಆಮ್ಲಜನಕ ಕಲುಷಿತಗೊಂಡು ಆಸ್ಪತ್ರೆಗಳಲ್ಲಿ ದಿನೇ ದಿನೇ ಅಸ್ತಮಾ ರೋಗಿಗಳ ಸಂಖ್ಯೆ ಹೆಚ್ಚಳಗೊಳ್ಳುತ್ತಿವೆ ಎಂದರು.ಕಸ ನಿರ್ಮೂಲನೆ ಕೇವಲ ಒಂದು ದಿನ ಅಥವಾ ತಿಂಗಳಲ್ಲಿ ಬಗೆಹರಿಯುವುದಲ್ಲ. ನಿರಂತರ ಪ್ರಕ್ರಿಯೆಯಲ್ಲಿ ಸಾಗಬೇಕು. ಎಲ್ಲವನ್ನೂ ಮೀರಿ ಮನುಷ್ಯನ ಸ್ವಾರ್ಥದಿಂದ ಪರಿಸರ ನಾಶಗೊಳಿಸಿದರೆ, ಪ್ರಕೃತಿ ಬಡ್ಡಿ ಸಮೇತ ತಿರುಗಿಸಿ, ನುಂಗಲಾ ರದಂಥ ತುತ್ತನ್ನು ಉಣಿಸಲಿದೆ ಎಂದು ಎಚ್ಚರಿಸಿದರು. ನಗರಸಭಾ ಪೌರಾಯುಕ್ತ ಬಿ.ಸಿ.ಬಸವರಾಜ್ ಮಾತನಾಡಿ, ಪ್ರತಿದಿನ ಸ್ವಾಸ್ಥ್ಯ ನಗರ ನಿರ್ಮಾಣಗೊಳಿಸುವ ನಿಟ್ಟಿನಲ್ಲಿ ನಗರಸಭೆ ಕಾರ್ಯನಿರ್ವಹಿಸುತ್ತಿದೆ. ಜೊತೆಗೆ ಸ್ಥಳಿಯ ನಿವಾಸಿಗಳ ಸಹಕಾರ ದೊರೆತಲ್ಲಿ ಪ್ರತಿಯೊಂದು ಬಡಾವಣೆಯಲ್ಲಿ ಸ್ವಚ್ಚತೆ ಕಾಪಾಡುವಲ್ಲಿ ಸುಲಭವಾಗಲಿದೆ ಎಂದು ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸೊಸೈಟಿ ಅಧ್ಯಕ್ಷ ಬಿ.ಎಸ್.ಹರೀಶ್, ಬಡಾವಣೆಗಳಲ್ಲಿ ಇನ್ನಷ್ಟು ಅಭಿವೃದ್ಧಿ ಕೆಲಸಗಳು ಬಾಕಿಯಿರುವ ಹಿನ್ನೆಲೆಯಲ್ಲಿ ಪೌರಾಯುಕ್ತರು, ಶಾಸಕರು ಹೆಚ್ಚು ಒತ್ತನ್ನು ನೀಡಬೇಕು ಎಂದರು.ಕಾರ್ಯಕ್ರಮದಲ್ಲಿ ಮಂಗಳ ತಮ್ಮಯ್ಯ, ಸೊಸೈಟಿ ಉಪಾಧ್ಯಕ್ಷ ಉಮಾ ನಾಗೇಶ್, ಕಾರ್ಯದರ್ಶಿ ಎನ್.ಟಿ. ವೇಣುಗೋಪಾಲ್, ಸಹ ಕಾರ್ಯದರ್ಶಿ ಸುಧೀರ್‌ಕುಮಾರ್, ಖಜಾಂಚಿ ಎ.ಟಿ.ನಿಂಗರಾಜ್ ಉಪಸ್ಥಿತರಿದ್ದರು.
1 ಕೆಸಿಕೆಎಂ 6ಚಿಕ್ಕಮಗಳೂರಿನ ಕಲ್ಯಾಣನಗರದಲ್ಲಿ ಗುರುವಾರ ನಡೆದ ಸಂಪೂರ್ಣ ಸ್ವಚ್ಛತಾ ಅಭಿಯಾನ ಹಾಗೂ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಸಮಾರಂಭವನ್ನು ಕಿಶೋರ್‌ಕುಮಾರ್ ಹೆಗ್ಡೆ ಉದ್ಘಾಟಿಸಿದರು. ಎಂ.ಎ. ನಾಗೇಂದ್ರ, ಬಿ.ಎಸ್. ಹರೀಶ್, ಮಂಗಳ ತಮ್ಮಯ್ಯ ಇದ್ದರು.