ಭೂ ತಾಯಿಯ ಉಸಿರುಗಟ್ಟಿಸಿದ ಪ್ಲಾಸ್ಟಿಕ್‌

| Published : Apr 24 2024, 02:17 AM IST / Updated: Apr 24 2024, 02:18 AM IST

ಸಾರಾಂಶ

ಎಲ್ಲವನ್ನು ನೀಡುವ ಭೂಮಿ ತಾಯಿಯನ್ನು ನಾವೆಷ್ಟು ರಕ್ಷಿಸುತ್ತೇವೆ ಎಂದು ಆಲೋಚಿಸಬೇಕಿದೆ. ನಿತ್ಯ ನಾವು ಬಳಸುವ ಪ್ಲಾಸ್ಟಿಕ್ ಅವಳ ಉಸಿರುಗಟ್ಟುವಂತೆ ಮಾಡುತ್ತಿದೆ.

ಧಾರವಾಡ:

ಎಲ್ಲವನ್ನು ನೀಡುವ ಭೂಮಿ ತಾಯಿಯನ್ನು ನಾವೆಷ್ಟು ರಕ್ಷಿಸುತ್ತೇವೆ ಎಂದು ಆಲೋಚಿಸಬೇಕಿದೆ. ನಿತ್ಯ ನಾವು ಬಳಸುವ ಪ್ಲಾಸ್ಟಿಕ್ ಅವಳ ಉಸಿರುಗಟ್ಟುವಂತೆ ಮಾಡುತ್ತಿದೆ. ಅದಕ್ಕಾಗಿ ಮಕ್ಕಳು ಮನೆಯಲ್ಲಿ ಪ್ಲಾಸ್ಟಿಕ್ ವಸ್ತು ಬಳಸುವುದು ಕಡಿಮೆ ಮಾಡಬೇಕು. ಅವರ ಕೈಯಲ್ಲಿ ಭೂಮಿ ಸುರಕ್ಷಿತವಾಗಿ ಉಳಿಯಬೇಕು ಎಂದರೆ ಅವರಿಗೆ ಭೂಮಿಯ ಮಹತ್ವ ತಿಳಿಸಿಕೊಡಬೇಕು ಎಂದು ಚಿಲಿಪಿಲಿ ಸಂಸ್ಥೆ ಅಧ್ಯಕ್ಷ ಶಂಕರ ಹಲಗತ್ತಿ ಹೇಳಿದರು.

ಹುಬ್ಬಳ್ಳಿ-ಧಾರವಾಡ ಮಹಾನಗರ ಪರಿಸರ ಸಮಿತಿ ಹಾಗೂ ಚಿಲಿಪಿಲಿ ಸಂಸ್ಥೆಯ ಸಹಯೋಗದಲ್ಲಿ ಸ್ಕೌಟ್ ಮತ್ತು ಗೌಡ್ಸ್ ಸಂಸ್ಥೆಯ ಆವರಣದಲ್ಲಿ ನಡೆದ `ವಿಶ್ವ ಭೂ ದಿನಾಚರಣೆ ಉದ್ಘಾಟಿಸಿದ ಅವರು, ನಿತ್ಯ ಕಸ ನಿರ್ವಹಣೆಗಾಗಿ ವಾಹನ ಬರುತ್ತವೆ. ಪ್ರತಿದಿನ ಧ್ವನಿ ಸುರುಳಿ ಮೂಲಕ ಕಸ ಸುಡದಿರುವ ಬಗ್ಗೆ, ಕಸವನ್ನು ಚರಂಡಿ ಮತ್ತು ರಸ್ತೆಯ ಮೇಲೆ ಚೆಲ್ಲದಿರುವ ಬಗ್ಗೆ ಹೇಳುತ್ತಲೇ ಇದ್ದರೂ ಇಂದಿಗೂ ಜನರು ವಾಹನದಲ್ಲಿ ಕಸ ಹಾಕದೇ ಬೀದಿಯಲ್ಲಿ ಎಸೆಯುತ್ತಿದ್ದಾರೆ. ಪರಿಸರದ ಕುರಿತು ಸಾರ್ವಜನಿಕವಾಗಿ ಬಹಳಷ್ಟು ಅರಿವು ನೀಡುವಂತಾಗಬೇಕು ಎಂದರು.

ಭೂ ದಿನಾಚರಣೆ ಕುರಿತು ಉಪನ್ಯಾಸ ನೀಡಿದ ನಿವೃತ್ತ ಶಿಕ್ಷಕ ಕೆ.ಎಚ್. ನಾಯಕ, ನಮಗೆ ಜನ್ಮ ನೀಡಿದ ತಾಯಿಯ ಬಗ್ಗೆ ಹೇಗೆ ಕಾಳಜಿ ಮತ್ತು ಪ್ರೀತಿ ಮಾಡುತ್ತೇವೋ ಹಾಗೇ ಈ ಭೂಮಿಯನ್ನು ಕಾಳಜಿಯಿಂದ ನೋಡಬೇಕು. ಭೂಮಿಗೆ ಧರೆ, ಕ್ಷಿತಿ, ಧರಣಿ, ಭುವಿ, ವಸುಂದರೆ, ನಭಾ, ಪೃಥ್ವಿ, ಇಳೆ, ಧರಿತ್ರಿ, ಮೇದಿನಿ, ಧಾತ್ರಿ, ಅವನಿ, ಭೂದೇವಿ, ಭುವನ, ಹಿರಣ್ಯಗರ್ಭಾ, ವಸುಧಾ, ಉರ್ವಿ, ವಸುಮತಿ ಹೀಗೆ ಹದಿನೈದಕ್ಕೂ ಹೆಚ್ಚು ಹೆಸರಿನಲ್ಲಿ ಕರೆಯುತ್ತಾರೆ. ತಾಯಿ ಮಕ್ಕಳಿಗೆ ಬೇಕಾಗಿದ್ದೆಲ್ಲವನ್ನೂ ನೀಡುವಂತೆ ಭೂಮಿತಾಯಿಯೂ ಮನುಷ್ಯನ ಎಲ್ಲ ಬೇಡಿಕೆ ಈಡೇರಿಸುತ್ತಾ ಬರುತ್ತಿರುವುದರಿಂದಲೇ ಇದಕ್ಕೆ ಭೂತಾಯಿ ಎಂದು ಕರೆಯಲಾಗುತ್ತದೆ ಎಂದರು.

ಉದ್ಯಮಿ ಯಲ್ಲಪ್ಪ ಬೆಂಡಿಗೇರಿ ಮಾತನಾಡಿ, ಕಳೆದ 10-20 ವರ್ಷಗಳ ಹಿಂದೆ ಹಳ್ಳ, ಕೊಳ್ಳಗಳು ತುಂಬಿ ಹರೆಯುತ್ತಿದ್ದವು. ಮಕ್ಕಳು ಯಾವ ತರಬೇತಿದಾರರು ಇಲ್ಲದೇ ಈಜು ಕಲಿಯುತ್ತಿದ್ದರು. ಉಸುಕು, ಮಣ್ಣು ಅವರ ಆಟದ ಮೈದಾನವಾಗಿದ್ದವು. ಇಂದು ಈ ಅನುಭವ ಇಂದಿನ ಮಕ್ಕಳಿಗೆ ಇಲ್ಲದಾಗಿದೆ. ಕೆರೆಗಳು ಬತ್ತಿವೆ. ಹಳ್ಳ, ಕೊಳ್ಳಗಳು ಮುಚ್ಚಿವೆ. ನಿಸರ್ಗವು ಗಂಡಾಂತರದಲ್ಲಿ ಇದ್ದು ಇಂದಿನ ಪೀಳಿಗೆ ಕಾಳಜಿ ವಹಿಸಿದರೆ ಮಾತ್ರ ಉಳಿದ ನಿಸರ್ಗ ಸಂಪತ್ತನ್ನು ರಕ್ಷಿಸಲು ಸಾಧ್ಯ ಎಂದರು. ಇನ್ನೊಬ್ಬ ಅತಿಥಿ ಡಾ.ಜಗದೀಶ ಗುಡುದೂರ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ ಕುಮಾರೇಶ್ವರ ಕಲ್ಚರ್ ಸೊಸೈಟಿಯ ಅಧ್ಯಕ್ಷ ಎಂ.ಎಂ. ಚಿಕ್ಕಮಠ ಮಾತನಾಡಿದರು. ಪರಿಸರ ಸಮಿತಿ ಕಾರ್ಯದರ್ಶಿ ವಿಲಾಸ ಕುಲಕರ್ಣಿ ಸ್ವಾಗತಿಸಿದರು. ಜಾನಪದ ಹಿರಿಯ ಕಲಾವಿದೆ ಪ್ರಮಿಳಾ ಜಕ್ಕನ್ನವರ ಪರಿಸರ ಗೀತೆ ಹೇಳಿದರು. ಸಿಕಂದರ ದಂಡಿನ ನಿರೂಪಿಸಿದರು. ಶ್ರುತಿ ಹುರಳಿಕೊಪ್ಪ, ಸೋಮು ಕಾರಿಗನೂರ, ನೇತ್ರಾ ಪವಾರ, ಆಫ್ರೀನ್ ಜಕಾತಿ, ರೇಷ್ಮಾ ತಹಸೀಲ್ದಾರ್‌ ಹಾಗೂ ನೂರಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು.