ಸಾರಾಂಶ
ಗದಗ: ನಮ್ಮ ದೇಶದಲ್ಲಿ ತಾಯಿಗೆ ಪೂಜ್ಯನೀಯ ಸ್ಥಾನವಿದೆ. ತಾಯಿಯೇ ದೇವರು ಎಂಬ ಸಂಸ್ಕೃತಿ ನಮ್ಮದು. ಪ್ರತಿಯೊಂದು ಮಗುವಿಗೂ ತಾಯಿಯೇ ಮೊದಲ ಗುರು ಎಂದು ಡಾ.ತೋಂಟದ ಸಿದ್ಧರಾಮ ಸ್ವಾಮಿಗಳು ಹೇಳಿದರು.
ನಗರದ ತೋಟದಾರ್ಯ ಮಠದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದ 2725ನೇ ಶಿವಾನುಭವದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.ಪ್ರಾಕೃತಿಕವಾಗಿ ಹೆಣ್ಣು ಮಕ್ಕಳಿಗೆ ಪ್ರೀತಿ, ತಾಳ್ಮೆ,ಅಂತಃಕರಣ ಸ್ವಾಭಾವಿಕವಾಗಿ ಬಂದಿರುತ್ತದೆ. ಇಂತಹ ಅವ್ವನ ನೆನಪಿಗಾಗಿ ಬಸವರಾಜ ಹೊರಟ್ಟಿಯವರು ಅವ್ವ ಸೇವಾ ಟ್ರಸ್ಟ್ ಸ್ಥಾಪಿಸಿ ಆ ಮೂಲಕ ಮಾನವೀಯ ಮೌಲ್ಯ ಬಿತ್ತುತ್ತಿದ್ದಾರೆ. ಮಕ್ಕಳಿಗೆ ಸಂಸ್ಕಾರ ಕೊಟ್ಟು ಪೋಷಿಸಿದರೆ ಎಲ್ಲರೂ ಹೊರಟ್ಟಿಯವರಾಗಬಹುದು. ಅವ್ವನ ಕೃಪೆಯಿಂದ ಶಿವಾಜಿ ಒಬ್ಬ ಮಹಾನ್ ಯೋಧನಾದ. ಹೊರಟ್ಟಿಯವರು 48 ವರ್ಷದಿಂದ ವಿಧಾನ ಪರಿಷತ್‌ನಲ್ಲಿ ಸದಸ್ಯರಾಗಿ ಹೊಸ ಇತಿಹಾಸ ಬರೆದಿದ್ದಾರೆ. ಅವ್ವ ಟ್ರಸ್ಟ್ ಮೂಲಕ ವಿಭಿನ್ನ ಕಾರ್ಯಕ್ರಮ ಜರುಗುತ್ತಿದ್ದು, ಶಶಿ ಸಾಲಿ, ಡಾ. ಬಸವರಾಜ ಧಾರವಾಡ ಪರಿಶ್ರಮ ಸ್ಮರಣೀಯ ಎಂದರು.
ಅವ್ವ ಸೇವಾ ಟ್ರಸ್ಟಿನ ಕಾರ್ಯದರ್ಶಿ ಶಶಿ ಸಾಲಿ ಮಾತನಾಡಿ, ಪ್ರತಿಯೊಬ್ಬರು ತಂದೆ ತಾಯಿಯ ಮಹತ್ವ ಅರಿಯಬೇಕು. ಇತ್ತೀಚೆಗೆ ಹೆತ್ತ ತಂದೆ ತಾಯಿಯನ್ನು ವೃದ್ಧಾಶ್ರಮಕ್ಕೆ ಕಳಿಸುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ.ಅವ್ವ ಸೇವಾ ಟ್ರಸ್ಟ್ ನೋಂದವರ ಆಸರೆಯಾಗಿದೆ ಎಂದರು.ಅವ್ವ ಸೇವಾ ಟ್ರಸ್ಟಿನ ಗದಗ ಸಂಚಾಲಕ ಡಾ. ಬಸವರಾಜ ಧಾರವಾಡ ಮಾತನಾಡಿ, ಅವ್ವನ ಹೆಸರಿನಲ್ಲಿ ಪ್ರತಿವರ್ಷ ವಿಶೇಷ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸುತ್ತಿದೆ. 100ಕ್ಕೂ ಅಧಿಕ ದಿವ್ಯಾಂಗರಿಗೆ ಟ್ರೈಸಿಕಲ್‌ಗಳನ್ನು ನೀಡಿದೆ. 80 ಅಂಧ ಮಕ್ಕಳಿಗೆ ಧನಸಹಾಯ ಮಾಡಿದೆ. ಧಾರವಾಡ ಜಿಲ್ಲೆಯಲ್ಲಿ 1000 ಸಸಿ ನೆಟ್ಟು ಪರಿಸರ ಸಂರಕ್ಷಣೆ ಮಾಡಿದೆ. ಬೆಳಗಾವಿ ವಿಭಾಗ ಮಟ್ಟದ 26 ಸಾವಿರ ಪ್ರೌಢಶಾಲೆಯ ಹೆಣ್ಣು ಮಕ್ಕಳಿಗೆ ಅವ್ವನ ಕುರಿತು ಪ್ರಬಂಧ ಸ್ಪರ್ಧೆ ಏರ್ಪಡಿಸಿ ಆಯ್ದ ಪ್ರಬಂಧಗಳನ್ನು ಅವ್ವ ಎಂಬ ಗ್ರಂಥಗಳಲ್ಲಿ ಪ್ರಕಟಿಸಿ ಲೋಕಾರ್ಪಣೆ ಮಾಡಲಾಗಿದೆ. ಗದಗ ಸಿದ್ದಲಿಂಗ ನಗರದ ಸರ್ಕಾರಿ ಪ್ರೌಢಶಾಲೆಯನ್ನು ದತ್ತು ಪಡೆದು ಮಾದರಿ ಶಾಲೆಯನ್ನಾಗಿ ಅಭಿವೃದ್ಧಿಪಡಿಸಲಾಗಿದೆ. ಬಸವರಾಜ ಹೊರಟ್ಟಿಯವರ ಹುಟ್ಟೂರು ಯಡಹಳ್ಳಿಯಲ್ಲಿ ಸ್ವಂತ 7ಎಕರೆ ಜಮೀನಿನಲ್ಲಿ ತಂದೆ ಶಿವಲಿಂಗಪ್ಪ ಅವರ ಹೆಸರಿನಲ್ಲಿ ಹೈಟೆಕ್ ಶಾಲೆ ನಿರ್ಮಿಸಿ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆಸರೆಯಾಗಿದ್ದಾರೆ ಎಂದರು.
ಡಿ.ಸಿ. ಪಾವಟೆ ಬಿ.ಎಡ್.ಕಾಲೇಜಿನ ಡಾ.ಗಿರಿಜಾ.ಎಸ್.ಹಸಬಿ ಮಾತನಾಡಿ, ಅವ್ವ ಸಂಸ್ಕೃತಿಯ ಪ್ರತೀಕ, ತ್ಯಾಗದ ಸಂಕೇತ, ಒಳ್ಳೆಯ ಗುಣ ನೀಡುವ ಕೆಲಸ ಮಾಡುತ್ತಾಳೆ. ಆಕೆ, ಧೀಶಕ್ತಿ, ಧೈರ್ಯ, ಪಾವಿತ್ರ‍್ಯತೆಯ ಧ್ಯೋತಕ. ಅಂಧ:ಕಾರ ಕಳೆದು, ಬೆಳಕನ್ನು ಕೊಡುವ ಕೆಲಸ ಮಾಡುತ್ತಾಳೆ. ತಾಯಿ ದೇವರಾಗಿರಬಹುದು. ದೇವರು ತಾಯಿಯಾಗಲಾಗದು. ಅವ್ವನ ನೆನಪಿಸುವ ಹಾಗೆ ಹೊರಟ್ಟಿ ಅವರು ಮಾದರಿಯಾದ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.ಶ್ರೀನಿವಾಸ ಕುಲಕರ್ಣಿ ಅವ್ವನ ಕುರಿತು ಹಾಡು ಹಾಡಿದರು. ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ್ ಸುತಾರ ಸಂಗೀತ ಸೇವೆ ನಡೆಸಿಕೊಟ್ಟರು. ಚಂದನ.ಕೆ. ಬಳಿಗೇರ ಧರ್ಮಗ್ರಂಥ ಪಠಿಸಿದರು. ಭಾಗ್ಯಶ್ರೀ ಕೆ.ಹರ್ಲಾಪೂರ ವಚನ ಚಿಂತನ ಮಾಡಿದರು.
ಅವ್ವ ಸೇವಾ ಟ್ರಸ್ಟಿನ ಸಹ ಸಂಚಾಲಕ ಎಸ್.ಎಂ. ಅಂಗಡಿ, ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ, ಕಾರ್ಯದರ್ಶಿ ವೀರಣ್ಣ ಗೋಟಡಕಿ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು. ಶಿವಾನುಭವ ಸಮಿತಿಯ ಚೇರಮನ್ ಐ.ಬಿ. ಬೆನಕೊಪ್ಪ ಸ್ವಾಗತಿಸಿದರು. ವಿದ್ಯಾ ಪ್ರಭು ಗಂಜಿಹಾಳ ನಿರೂಪಿಸಿದರು.