ಸಾರಾಂಶ
ಬ್ಯಾಡಗಿ: ದೇಶದಲ್ಲಿ ಶೇ. 14.2ರಷ್ಟು ಕುಟುಂಬಗಳು ಬಡತನದಲ್ಲಿವೆ. ಹೀಗಾಗಿ ತಾಯಿ ಮತ್ತು ಆರೋಗ್ಯವಂತ ಮಕ್ಕಳು ದೇಶದ ಬಹುದೊಡ್ಡ ಆಸ್ತಿ. ಇವರಿಬ್ಬರು ದೇಶದ ಆಧಾರಸ್ತಂಭಗಳಾಗಿವೆ. ಅವರೆಲ್ಲರ ಆರೋಗ್ಯದ ಹೊಣೆಗಾರಿಕೆ ಸರ್ಕಾರಗಳ ಮೇಲಿದೆ ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.
ಪಟ್ಟಣದ ತಾಪಂ ಸಭಾಭವನದಲ್ಲಿ ಶಿಶು ಅಭಿವೃದ್ಧಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಪೋಷಣ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಆರೋಗ್ಯ, ಕ್ಷೇಮ ಮತ್ತು ರೋಗ ನಿರೋಧಕ ಶಕ್ತಿ ಬೆಳೆಸುವ ಹಾಗೂ ಅಭಿವೃದ್ಧಿಪಡಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವ್ಯವಸ್ಥೆಯನ್ನು ರಚಿಸಿವೆ. ತಾಯಿ ಮತ್ತು ಮಗು ಅಪೌಷ್ಟಿಕತೆ ಸವಾಲುಗಳನ್ನು ಎದುರಿಸಲು ಪೋಷಣ ಅಭಿಯಾನ ಮೂಲಕ ಸರ್ಕಾರಗಳು ಪ್ರಯತ್ನ ನಡೆಸಿವೆ ಎಂದರು.ಗ್ಯಾರಂಟಿ ಯೋಜನೆ ರಾಜ್ಯ ಉಪಾಧ್ಯಕ್ಷ ಎಸ್.ಆರ್. ಪಾಟೀಲ ಮಾತನಾಡಿ, ಜೀವನ ಶೈಲಿ ಹಾಗೂ ಆಹಾರ ಪದ್ಧತಿಯ ಬದಲಾವಣೆ ಇಂದು ಸಾಕಷ್ಟು ರೋಗಗಳಿಗೆ ಮನೆ ಮಾಡಿದೆ. ಪ್ರಾಚೀನ ಕಾಲದ ಸಮತೋಲಿತ ಆಹಾರ ಪದ್ಧತಿ ರೋಗ ಹತ್ತಿರ ಬರದಂತೆ ತಡೆಯುತ್ತಿತ್ತು. ಆದರೆ ಇಂದಿನ ರಾಸಾಯನಿಕಯುಕ್ತ ಆಹಾರ ಪದಾರ್ಥಗಳು ಎಲ್ಲರನ್ನೂ ರೋಗಗ್ರಸ್ತರನ್ನಾಗಿಸುತ್ತಿವೆ. ಇದರಿಂದ ಜನಿಸುವ ಮಕ್ಕಳು ಸಹ ಅಪೌಷ್ಟಿಕೆಯಿಂದ ಬಳಲುವಂತಾಗಿದ್ದು, ಗರ್ಭಾವಸ್ಥೆ ಹಾಗೂ ಆನಂತರ ಉತ್ತಮ ಆಹಾರ ಪದ್ಧತಿ ಅತ್ಯಂತ ಪ್ರಮುಖವಾಗಿದೆ ಎಂದರು.
ಪುರಸಭೆ ಅಧ್ಯಕ್ಷ ಬಾಲಚಂದ್ರಗೌಡ ಪಾಟೀಲ ಮಾತನಾಡಿ, ಪೋಷಣ್ ಅಭಿಯಾನ-ಭಾರತ ಸರ್ಕಾರದ ಪ್ರಮುಖ ಯೋಜನೆಯಾಗಿದ್ದು, 2018ರ ಮಾ. 8ರಂದು ಪ್ರಧಾನ ಮಂತ್ರಿ ಚಾಲನೆ ನೀಡಿದ್ದಾರೆ ಎಂದರು.ಇದಕ್ಕೂ ಮುನ್ನ ಗರ್ಭಿಣಿಯರಿಗೆ ಪುರಸಭೆ ಸದಸ್ಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಂದ ಸೀಮಂತ ಕಾರ್ಯಕ್ರಮ ನರವೇರಿತು. 10ಕ್ಕೂ ಮಕ್ಕಳಿಗೆ ಮೊದಲು ತುತ್ತು ಅನ್ನ ಉಣಬಡಿಸಲಾಯಿತು. ಬಳಿಕ ಯೋಜನೆಯಡಿ ಬರುವ ಅಂಗನವಾಡಿ ಮಕ್ಕಳ ಜನ್ಮದಿನಾಚರಣೆ ಕೂಡ ನೆರವೇರಿಸಲಾಯಿತು.
ಪುರಸಭೆ ಉಪಾಧ್ಯಕ್ಷ ಸುಭಾಸ್ ಮಾಳಗಿ, ಸದಸ್ಯರಾದ ಬಸವರಾಜ ಛತ್ರದ, ಕಲಾವತಿ ಬಡಿಗೇರ, ಗಾಯತ್ರಿ ರಾಯ್ಕರ, ಸರೋಜಾ ಉಳ್ಳಾಗಡ್ಡಿ, ಫಕ್ಕೀರಮ್ಮ ಛಲವಾದಿ, ಶಂಕರ ಕುಸಗೂರ, ರಫೀಕ್ ಮುದ್ಗಲ್, ಆಶ್ರಯ ಸಮಿತಿ ಅಧ್ಯಕ್ಷ ಮುನಾಫ್ ಎರೇಶಿಮಿ, ಸದಸ್ಯ ದುರ್ಗೇಶ ಗೋಣೆಮ್ಮನವರ, ಗಿರೀಶ ಇಂಡಿಮಠ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕಾಧ್ಯಕ್ಷ ಶಂಭನಗೌಡ ಪಾಟೀಲ, ಮುಖಂಡರಾದ ದಾನಪ್ಪ ಚೂರಿ, ಸೋಮಣ್ಣ ಸಂಕಣ್ಣನವರ, ಖಾದರ್‌ಸಾಬ್ ದೊಡ್ಡಮನಿ, ಶಿಶು ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀನಿವಾಸ ಆಲದರ್ತಿ, ತಹಸೀಲ್ದಾರ್ ಎಫ್.ಎ. ಸೋಮನಕಟ್ಟಿ, ತಾಪಂ ಇಒ ಕೆ.ಎಂ. ಮಲ್ಲಿಕಾರ್ಜುನ, ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ಹೊಳಿಯಪ್ಪಗೋಳ, ಅಕ್ಷರ ದಾಸೋಹಾಧಿಕಾರಿ ಎನ್., ತಿಮ್ಮಾರೆಡ್ಡಿ, ಸಿಡಿಪಿಒ ಬಸವರಾಜ ಪೂಜಾರ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.