ಮಗು ಜನಿಸಿದ ಮೊದಲು ಅರ್ಧಗಂಟೆ ಒಳಗೆ ಕಡ್ಡಾಯವಾಗಿ ಹಾಲುಣಿಸುವುದರಿಂದ ಅದರಲ್ಲಿ ರೋಗನಿರೋಧಕ ಶಕ್ತಿ ಇರುತ್ತದೆ
ಯಲಬುರ್ಗಾ: ತಾಯಿಯ ಎದೆಹಾಲು ನವಜಾತ ಶಿಶುವಿಗೆ ಅಮೃತವಿದ್ದಂತೆ ಎಂದು ಗುನ್ನಾಳ ಪಿಎಚ್‌ಸಿ ಆಡಳಿತ ವೈದ್ಯಾಧಿಕಾರಿ ಡಾ. ದಯಾನಂದ ಸ್ವಾಮಿ ಹೇಳಿದರು.
ತಾಲೂಕಿನ ಗುನ್ನಾಳ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಯಡ್ಡೋಣಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಸ್ತನ್ಯಪಾನ ಸಪ್ತಾಹ ಹಾಗೂ ಪೌಷ್ಟಿಕ ಆಹಾರ ಕಾರ್ಯಕ್ರಮದಲ್ಲಿ ಮಾತನಾಡಿದರು.ಮಗು ಜನಿಸಿದ ಮೊದಲು ಅರ್ಧಗಂಟೆ ಒಳಗೆ ಕಡ್ಡಾಯವಾಗಿ ಹಾಲುಣಿಸುವುದರಿಂದ ಅದರಲ್ಲಿ ರೋಗನಿರೋಧಕ ಶಕ್ತಿ ಇರುತ್ತದೆ. ಅಲ್ಲದೆ ಇದು ಮಗುವಿನ ಆರೋಗ್ಯಕರ ಬೆಳೆವಣಿಗೆಗೆ ಅತ್ಯಗತ್ಯವಾದ ಜೀವಜಲವಿದ್ದಂತೆ ಎಂದರು.
ತಾಯಿಯ ಎದೆಹಾಲು ಮಗುವಿಗೆ ಜ್ವರ, ನೆಗಡಿ ಮತ್ತು ಬೇಧಿಯಂತಹ ಸೋಂಕು ತಗುಲದಂತೆ ರಕ್ಷಿಸುತ್ತದೆ. ಆದ್ದರಿಂದ ಪ್ರತಿಯೊಬ್ಬ ಬಾಣಂತಿಯರು ಆರು ತಿಂಗಳವರೆಗೆ ಮಗುವಿಗೆ ಎದೆಹಾಲು ಕೊಡಬೇಕು ಎಂದರು.ಆಯುಷ್ ವೈದ್ಯಾಧಿಕಾರಿ ಡಾ.ಟಿ.ಜೆ. ಘಾಟಗೆ, ಡಾ. ವಿರೂಪಾಕ್ಷಪ್ಪ ತಾಳಿಕೋಟಿ, ಹಿರಿಯ ಆರೋಗ್ಯ ನೀರಿಕ್ಷಣಾಧಿಕಾರಿ ಕಾಳಪ್ಪ ಮಾಯಾಚಾರಿ ಮಾತನಾಡಿ, ಗರ್ಭಿಣಿ ಹಾಗೂ ಬಾಣಂತಿ ಮಹಿಳೆಯರು ಪೌಷ್ಟಿಕ ಆಹಾರ ಸೇವಿಸಬೇಕು ಎಂದರು.
ಈ ಸಂದರ್ಭ ಆರೋಗ್ಯ ನೀರಿಕ್ಷಣಾಧಿಕಾರಿ ಕೆ. ಮಲ್ಲಯ್ಯ, ಮುಖಂಡ ಆದೇಶ ರೊಟ್ಟಿ, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಮತ್ತು ಆಯುಷ್ ಆಸ್ಪತ್ರೆಯ ಸಿಬ್ಬಂದಿ ಹಾಗೂ ಗರ್ಭಿಣಿಯರು, ಬಾಣಂತಿಯರು ಸೇರಿದಂತೆ ಮತ್ತಿತರರು ಇದ್ದರು.