ಸಾರಾಂಶ
ಕನ್ನಡಪ್ರಭ ವಾರ್ತೆ ಹಲಗೂರು
ಮನುಷ್ಯನ ವ್ಯಕ್ತಿತ್ವ ವಿಕಸನ, ಜ್ಞಾನವನ್ನು ಹೆಚ್ಚಿಸಿಕೊಳ್ಳಲು, ವಿಷಯಗಳನ್ನು ಅರಿಯಲು ಮಾತೃ ಭಾಷೆಯಿಂದ ಮಾತ್ರ ಸಾಧ್ಯ ಎಂದು ಹಲಗೂರು ವೃತ್ತ ನಿರೀಕ್ಷಕ ಶ್ರೀಧರ್ ತಿಳಿಸಿದರು.ದಳವಾಯಿ ಕೋಡಿಹಳ್ಳಿಯ ಗ್ರಾಮಸ್ಥರು ಆಯೋಜಿಸಿದ್ದ 69ನೇ ಕನ್ನಡ ರಾಜ್ಯೋತ್ಸವದಲ್ಲಿ ಕನ್ನಡ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಮಂಡ್ಯ ಜಿಲ್ಲೆಯಲ್ಲಿ ವಿದ್ಯಾರ್ಥಿಗಳು ಹೆಚ್ಚು ಅಂಕಗಳನ್ನು ಪಡೆಯುವುದು ಕನ್ನಡ ಭಾಷೆಯಲ್ಲಿ, ಫೇಲಾಗುವುದು ಇಂಗ್ಲೀಷ್ ನಲ್ಲಿ. ಏಕೆಂದರೆ ನಮಗೆ ಬೇರೆ ಭಾಷೆ ಬೇಕಿಲ್ಲ ಎಂಬ ಭಾವನೆ. ಆದ್ದರಿಂದ ಕನ್ನಡ ಭಾಷೆ ಶ್ರೀಮಂತವಾಗಿದೆ ಎಂದರು.
ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಕ್ರಿಸ್ತಶಕ 450ರ ಹಲ್ಮಿಡಿ ಶಾಸನದಲ್ಲಿ ಕನ್ನಡ ಭಾಷೆಯ ಉಲ್ಲೇಖವಿದೆ. ಆಗಲೇ ಕನ್ನಡ ಭಾಷೆಯ ಬೆಳವಣಿಗೆ ಗುರುತಿಸಲ್ಪಟ್ಟಿದೆ. ಭಾಷೆ ಮೊದಲು ಮನುಷ್ಯನ ಆಡುಭಾಷೆಯಾಗಿ ಒಬ್ಬರಿಂದ ಒಬ್ಬರಿಗೆ ಮಾತುಕತೆಯ ಮೂಲಕ ತಲುಪಿ ನಂತರ ಲಿಪಿಯ ಮೂಲಕ ಸಾಹಿತ್ಯದ ರೂಪ ತಾಳಿತು ಎಂದು ಹೇಳಿದರು.ಕಾವ್ಯಗಳಲ್ಲಿ ಕನ್ನಡ ಭಾಷೆಯ ಇತಿಹಾಸವಿದೆ. ಈಗ ನಾವು ಬಳಸುವ ವ್ಯಾವಹಾರಿಕ ಭಾಷೆ ಇಂಗ್ಲೀಷ್ ಹುಟ್ಟುವ ಮೊದಲೇ ಕನ್ನಡದಲ್ಲಿ ಹಲವು ಮಹೋನ್ನತ ಕಾವ್ಯಗಳ ರಚನೆಯಾಗಿತ್ತು. ಈಗ ಕನ್ನಡ ಭಾಷೆ ಕೇವಲ ಕೆಲವರ ಜನರ ಆಡುಭಾಷೆಯಾಗಿದೆ ಎಂದರು.
ಕೆಲವು ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಕನ್ನಡ ಮಾತನಾಡಿದರೆ ದಂಡ ವಿಧಿಸುವ ಪರಿಸ್ಥಿತಿ ಉಂಟಾಗಿದೆ. ಮನುಷ್ಯ ತನ್ನ ವ್ಯಕ್ತಿತ್ವ ವಿಕಸನಕ್ಕೆ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ವಿಷಯಗಳನ್ನು ಅರಿಯಲು ಮಾತೃ ಭಾಷೆ ಮೂಲಕ ಮಾತ್ರ ಸಾಧ್ಯ ಎಂದು ಹೇಳಿದರು.ಗ್ರಾಪಂ ಅಧ್ಯಕ್ಷ ಶಿವಣ್ಣ ಮಾತನಾಡಿ, ಕನ್ನಡ ನಾಡು, ಜಲ, ನೆಲ, ಭಾಷೆ ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಜಿಲ್ಲೆಯಲ್ಲೇ ಅತಿ ಹೆಚ್ಚು ಮಂದಿ ಕನ್ನಡ ಭಾಷೆ ಬಳಕೆ ಮಾಡುತ್ತಿದ್ದು, ಕನ್ನಡ ಒಂದು ಭಾಷೆಯಲ್ಲ ಅದು ಪ್ರತಿಯೊಬ್ಬರ ಜೀವದ ಭಾಷೆ ಎಂದರು.
ಸಬ್ ಇನ್ಸ್ ಪೆಕ್ಟರ್ ಬಿ.ಮಹೇಂದ್ರ ಮಾತನಾಡಿ, ಕರ್ನಾಟಕ ಶ್ರೀಮಂತ ಸಂಸ್ಕೃತಿ, ಐತಿಹಾಸಿಕ ಪರಂಪರೆ ಹೊಂದಿದ ನೆಲ. ಕನ್ನಡ ನಾಡು, ನುಡಿ ಸಂರಕ್ಷಣೆಗೆ ನಾವೆಲ್ಲರೂ ಒಂದಾಗಬೇಕಿದೆ ಎಂದು ತಿಳಿಸಿದರು.ಸಾಹಿತಿ ಸಾ.ಮ.ಶಿವಮಲ್ಲಯ್ಯ, ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಉದಯ್ ಕುಮಾರ್, ಮುಖಂಡರಾದ ರವೀಶ್, ತಮ್ಮಣ್ಣಗೌಡ, ಕುಮಾರ್ ಸೇರಿದಂತೆ ಗ್ರಾಮಸ್ಥರು ಇದ್ದರು.