ಸಾರಾಂಶ
ಗದಗ: ಮನೆಯೇ ಮೊದಲ ಪಾಠಶಾಲೆಯಾಗಿರುವುದರಿಂದ ಮಕ್ಕಳ ಶೈಕ್ಷಣಿಕ ಬೆಳವಣಿಗೆಯಲ್ಲಿ ತಾಯಿಗೆ ಮೊದಲ ಸ್ಥಾನವಿದೆ. ಮಗುವಿಗೆ ಮೌಲ್ಯಾಧಾರಿತ ಬದುಕನ್ನು ಕಟ್ಟಿ ಕೊಡುವ ಜವಾಬ್ದಾರಿ ತಾಯಿಯದ್ದಾಗಿದೆ ಎಂದು ಸಾಹಿತಿ ಕವಿತಾ ದಂಡಿನ ಹೇಳಿದರು.
ನಗರದ ಜ್ಞಾನಭಾರತಿ ವಿದ್ಯಾಸಂಸ್ಥೆಯ ಶ್ರೀನಿವಾಸ ನರಗುಂದಕರ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಮಕ್ಕಳ ಸಂಸ್ಕಾರ-ಸಾಂಸ್ಕೃತಿಕ ಮೇಳದಲ್ಲಿ ಮಕ್ಕಳ ಪರೀಕ್ಷಾ ತಯಾರಿಕೆಯಲ್ಲಿ ಪಾಲಕರ ಕರ್ತವ್ಯ ಹಾಗೂ ಕೌಟುಂಬಿಕ ಜೀವನದಲ್ಲಿ ಸಂಸ್ಕಾರ ಅಳವಡಿಕೆಯಲ್ಲಿ ಮಾತೆಯರ ಪಾತ್ರ ಕುರಿತು ಉಪನ್ಯಾಸ ನೀಡಿ ಮಾತನಾಡಿದರು.ಮೌಲ್ಯ ಶಿಕ್ಷಣವು ಮಕ್ಕಳಲ್ಲಿ ಉತ್ತಮ ಸಂಸ್ಕಾರವನ್ನುಂಟು ಮಾಡುತ್ತದೆ. ಮಕ್ಕಳು ಮೊಬೈಲ್ ದಾಸರಾಗುತ್ತಿದ್ದಾರೆ. ಇದು ಅತ್ಯಂತ ಅಪಾಯಕಾರಿಯಾಗಿದೆ. ಮೊಬೈಲ್ ಅತಿಯಾದ ಬಳಕೆಯಿಂದ ವಿದ್ಯಾರ್ಥಿಗಳ ಮೆದುಳಿನ ಮೇಲೆ ತೀವ್ರ ಪರಿಣಾಮವುಂಟಾಗುತ್ತಿದೆ. ಮಕ್ಕಳು ಒಂಟಿತನ ಹೆಚ್ಚಾಗಿ ಪ್ರೀತಿಸುತ್ತಾರೆ. ಪರಿಣಾಮವಾಗಿ ಮಕ್ಕಳು ಮನೆ, ಶಾಲೆಗಳಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮೌನಿಗಳಾಗುತ್ತಿದ್ದಾರೆ. ಮೊಬೈಲ್ ಮಾತ್ರವೇ ಅವರ ಬದುಕು ಎಂಬಂತಾಗಿದೆ. ಪಾಲಕರು ತಮ್ಮ ಮಕ್ಕಳ ಬಗ್ಗೆ ನಿಗಾವಹಿಸಬೇಕು ಎಂದು ಮನವಿ ಮಾಡಿದರು.
ಜ್ಞಾನಭಾರತಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ಪಂ. ಶ್ರೀಧರಚಾರ್ಯ ಶಿರಹಟ್ಟಿ ಮಾತನಾಡಿ, ಹಿರಿಯರು ನಮ್ಮ ಆಸ್ತಿ. ಅವರ ಅನುಭವಗಳು ನಮಗೆ ದಾರಿದೀಪ. ನಮ್ಮ ಸಂಸ್ಕೃತಿಯ ಪ್ರತಿಬಿಂಬವೇ ಹಿರಿಯರು. ಅವರ ನಡೆ-ನುಡಿ ಮಕ್ಕಳ ಬದುಕಿಗೆ ಮಾರ್ಗದರ್ಶನವಾಗಿವೆ ಎಂದರು.ಇಂದಿನ ತಾಂತ್ರಿಕ ಯುಗದಲ್ಲಿ ಮಕ್ಕಳು ವೈಜ್ಞಾನಿಕ ಮನೋಭಾವದೊಂದಿಗೆ ಉತ್ತಮ ಕಲಿಕಾ ಪ್ರವೃತ್ತಿ ಅಳವಡಿಸಿಕೊಂಡು ಮುಂದೆ ಬರಲು ಪ್ರಯತ್ನಶೀಲರಾಗಬೇಕು. ಕುಟುಂಬದಲ್ಲಿ ಮಕ್ಕಳ ಆಸಕ್ತಿ ಬಗೆಗೆ ಕಾಳಜಿ ಹೊಂದಿ ಅವರ ಉನ್ನತ ಭವಿಷ್ಯದತ್ತ ಎಲ್ಲರೂ ಚಿಂತಿಸಬೇಕು ಎಂದರು.
ಈ ವೇಳೆ ಸಂಪನ್ಮೂಲ ವ್ಯಕ್ತಿ ಶಿಲ್ಪಾ ಹಳ್ಳಿಕೇರಿ ಹಾಗೂ ಸಂಸ್ಥೆಯ ಕಾರ್ಯದರ್ಶಿ ಸೂರ್ಯನಾರಾಯಣ ನರಗುಂದಕರ ಮಾತನಾಡಿದರು. ವಿವಿಧ ಸ್ಫರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪಾರಿತೋಷಕದೊಂದಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.ರಾಜಶ್ವೇರಿ ಬೇವಿನಮರದ, ಮುಖ್ಯೋಪಾಧ್ಯಾಯಿನಿ ಮೀನಾಕ್ಷಿ ಕಪ್ಪರದ, ಸರಸ್ವತಿ ಬಡಗೂಳಿಯವರ, ಸುಜಾತಾ ಶೆಂದಗೆ, ಸಪೂರಾ ಬೇಗಂ ಖಾಜಿ, ಸುನೀತಾ ದಲಭಂಜನ, ಈಶ್ವರಪ್ಪ ಬೇವಿನಮರದ, ಗೀತಾ ಕುಲಕರ್ಣಿ, ರಾಹುಲ್ ಮಹೇಂದ್ರಕರ, ಸಯ್ಯದ ಖಾಜಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ವಿದ್ಯಾ ಪೂಜಾರಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಮೀನಾಕ್ಷಿ ಕಪ್ಪರದ ಸ್ವಾಗತಿಸಿದರು. ಆರ್.ವಿ. ಪಲ್ಲೇದ ಪರಿಚಯಿಸಿದರು. ರುಕ್ಮೀಣಿ ರಾಠೋಡ ನಿರೂಪಿಸಿದರು. ಕರಿಯಪ್ಪ ಹೆಳವಿ ವಂದಿಸಿದರು.