- ವ್ಯಾಪಾರ, ಸಿನಿಮಾ, ರಾಜಕೀಯ ಕ್ಷೇತ್ರಗಳಲ್ಲೂ ಸಾಧನೆ: ಮುರುಘಾ ಶ್ರೀ ಶ್ಲಾಘನೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆಯಲ್ಲಿ ಒಂದು ಕಾಲಕ್ಕೆ ಘನತೆವೆತ್ತ ಯಜಮಾನಿಕೆ ತಂದುಕೊಟ್ಟ ಮೋತಿ ವೀರಣ್ಣ ವ್ಯಾಪಾರ, ಸಿನಿಮಾ, ರಾಜಕೀಯ ಹೀಗೆ ಮೂರೂ ರಂಗಗಳಲ್ಲೂ ಯಶಸ್ಸಿನ ಶಿಖರವೇರಿದ್ದರು. ಆದರೂ ಜನಸಾಮಾನ್ಯರ ಒಳಿಗಿಗೆ ಸದಾ ಮಿಡಿಯುತ್ತಿದ್ದ ಸಹೃದಯಿಯಾಗಿದ್ದರು ಎಂದು ಚಿತ್ರದುರ್ಗ ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರು ಸ್ಮರಿಸಿದರು.

ನಗರದ ಗುಂಡಿ ಮಹದೇವಪ್ಪ ಕಲ್ಯಾಣ ಮಂಟಪದಲ್ಲಿ ಶನಿವಾರ ದಿವಂಗತ ಮಾಜಿ ಶಾಸಕ ಮೋತಿ ವೀರಣ್ಣ ಸ್ಮರಣಾರ್ಥ ನುಡಿನಮನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಮೋತಿ ಕುಟುಂಬವರು ಕೇವಲ ತನ್ನ ಏಳಿಗೆ ಮಾತ್ರ ಬಯಸಲಿಲ್ಲ. ಸಮಾಜದೊಂದಿಗೆ ಬೆರೆತು, ಎಲ್ಲರನ್ನೂ ಬೆಳೆಸುವ ದೊಡ್ಡ ಗುಣವನ್ನು ಮೋತಿ ಕುಟುಂಬಕ್ಕಿತ್ತು. ಅದಕ್ಕಾಗಿಯೇ ಇಡೀ ದಾವಣಗೆರೆ ಸಮಾಜವು ಈ ಕುಟುಂಬವನ್ನು ಬೆಳೆಸಿತು. ಮುರುಘಾ ಮಠದ ಮೇಲೆ ವೀರಣ್ಣನವಿಗೆ ಅಚಲ ಭಕ್ತಿ ಇತ್ತು. ಈ ಹಿಂದೆ ಹಿರಿಯ ಗುರುಗಳು ಮೋತಿಯವರ ಮನೆಯಲ್ಲಿ ಒಂದು ತಿಂಗಳ ಕಾಲ ವಾಸ್ತವ್ಯ ಹೂಡಿದ್ದರು ಎಂದ ಅವರು, ಮೋತಿ ವೀರಣ್ಣನವರ ವ್ಯಕ್ತಿತ್ವ ಅಜರಾಮರವಾದುದು ಎಂದರು.


ಹರಿಹರದ ಬಿಜೆಪಿ ಶಾಸಕ ಬಿ.ಪಿ.ಹರೀಶ್ ಮಾತನಾಡಿ, 1978ರ ವಿಧಾನಸಭೆ ಚುನಾವಣೆ ಸಂಕಷ್ಟದ ವೇಳೆ ಮೋತಿ ವೀರಣ್ಣನವರು ನಮ್ಮ ಕುಟುಂಬಕ್ಕೆ ಬೆನ್ನೆಲುಬಾಗಿ ನಿಂತಿದ್ದರು. ರಾಜಕೀಯಕ್ಕೆ ಬರುವ ಮುನ್ನ ತಮ್ಮ ತಂದೆಯವರನ್ನು ಚಿತ್ರದುರ್ಗದ ಮುರುಘಾ ಮಠಕಕ್ಕೆ ಕರೆದೊಯ್ದು ಗುರುಗಳ ಆಶೀರ್ವಾದ ಕೊಡಿಸಿದ್ದೇ ಮೋತಿ ವೀರಣ್ಣನವರು. ತಮ್ಮ ತಂದೆಗೆ ಸಹಕಾರ ನೀಡಿದ್ದಕ್ಕಾಗಿ ಮೋತಿ ವೀರಣ್ಣನವರಿಗೆ ನಾವು ಸದಾ ಸ್ಮರಿಸುತ್ತೇವೆ ಎಂದರು.

ಕೋಡಿ ಮಠದ ಶ್ರೀ ಶಿವಾನಂದ ಶಿವಯೋಗಿ ಸ್ವಾಮೀಜಿ ಮಾತನಾಡಿ, ಇದು ಕೇವಲ ವ್ಯಕ್ತಿಯ ಆರಾಧನೆಯಲ್ಲ. ಬದಲಾಗಿ ಮೋತಿ ವೀರಣ್ಣನವರಲ್ಲಿದ್ದ ಸದ್ಗುಣಗಳ ಆರಾಧನೆಯಾಗಿದೆ. ಇಂತಹ ಹಿರಿಯರು ಇಂದಿನ ರಾಜಕಾರಣಿಗಳಿಗೆ ಸ್ಫೂರ್ತಿಯಾಗಿದ್ದಾರೆ ಎಂದು ಶ್ಲಾಘಿಸಿದರು.

ಸಮಾಜದ ವಿವಿಧ ಕ್ಷೇತ್ರಗಳ ಗಣ್ಯರು ಮೋತಿ ವೀರಣ್ಣ ಭಾವಚಿತ್ರಕ್ಕೆ ಪುಷ್ಪನಮನ ಅರ್ಪಿಸಿದರು. ಮೋತಿ ವೀರಣ್ಣನವರ ಬದುಕು ಮತ್ತು ಸಾಧನೆ ದಾಖಲಿಸುವ ಮರೆಯದ ಮಾಣಿಕ್ಯ ವಿಶೇಷ ಕೃತಿಯನ್ನು ಇದೇ ವೇಳೆ ಬಿಡುಗಡೆ ಮಾಡಲಾಯಿತು.

ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ, ಹಿರಿಯ ಕೈಗಾರಿಕೋದ್ಯಮಿ ಅಥಣಿ ಎಸ್.ವೀರಣ್ಣ, ಬಿಜೆಪಿ ಯುವ ಮುಖಂಡ ಬಿ.ಜಿ. ಅಜಯಕುಮಾರ, ಚಿತ್ರನಟ, ನಿರ್ಮಾಪಕ ಮೋತಿ ರಾಜೇಂದ್ರ, ವೀರಶೈವ ಮಹಾಸಭಾದ ಮುಖಂಡರು, ವಿವಿಧ ಮುಖಂಡರು ಪಾಲ್ಗೊಂಡಿದ್ದರು.

- - -

(ಬಾಕ್ಸ್‌) * ಮಂತ್ರಿಯಾಗುವ ಎಲ್ಲ ಅರ್ಹತೆ ಮೋತಿ ವೀರಣ್ಣಗಿತ್ತು: ಆಂಜನೇಯ ಕಾಂಗ್ರೆಸ್‌ ಮುಖಂಡ, ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ, ನನ್ನ ಮದುವೆ ನೇತೃತ್ವದಲ್ಲಿ ಇದೇ ಗುಂಡಿ ಮಹದೇವಪ್ಪ ಕಲ್ಯಾಣ ಮಂಟಪದಲ್ಲಿ ಮೋತಿ ವೀರಣ್ಣನವರೇ ನೇತೃತ್ವ ವಹಿಸಿದ್ದರು. ಯಜಮಾನ್ ಮೋತಿ ವೀರಣ್ಣ ಅಂತಲೇ ಕರೆಯಲ್ಪಡುತ್ತಿದ್ದ ಮೋತಿ ವೀರಣ್ಣನವರ ಕುಟುಂಬಕ್ಕೆ ಯಜಮಾನ ಅಂತ ಊರಿನ ಜನರೆ ಗೌರವಿಸುತ್ತಿದ್ದರು. ಅಂತಹ ಬಾಂಧವ್ಯ, ಒಡನಾಟವನ್ನು ಜನರೊಂದಿಗೆ ಮೋತಿ ಕುಟುಂಬ ಹೊಂದಿತ್ತು. ಶಿಕ್ಷಣ, ಅರ್ಹತೆ, ಅನುಭವ, ದೂರದೃಷ್ಟಿ, ಜನಾನುರಾಗಿ ವ್ಯಕ್ತಿತ್ವ, ದೃಢಸಂಕಲ್ಪ, ನೇರಮಾತು, ಕೆಲಸದ ಕಾರ್ಯ ವೈಖರಿ ಇದನ್ನೆಲ್ಲಾ ಗಮನಿಸಿದವರಿಗೆ ಮಂತ್ರಿಯಾಗುವ ಎಲ್ಲ ಅರ್ಹತೆ ಮೋತಿ ವೀರಣ್ಣ ಅವರಿಗೆ ಇತ್ತು. ಆದರೆ, ರಾಜಕೀಯ ಏರಿಳಿತಗಳ ಮಧ್ಯೆ ಎಂದಿಗೂ ತಮ್ಮ ಮೌಲ್ಯವನ್ನು ವೀರಣ್ಣ ಬಿಟ್ಟು ಕೊಡಲಿಲ್ಲ ಎಂದು ತಿಳಿಸಿದರು.

- - -

-28ಕೆಡಿವಿಜಿ5:

ದಾವಣಗೆರೆಯಲ್ಲಿ ಶನಿವಾರ ದಿವಂಗತ ಮಾಜಿ ಶಾಸಕ ಮೋತಿ ವೀರಣ್ಣನವರ ಸ್ಮರಣಾರ್ಥ ನುಡಿನಮನ ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು, ಪಕ್ಷಗಳ ಮುಖಂಡರು ಪಾಲ್ಗೊಂಡು ಗೌರವ ಸಲ್ಲಿಸಿದರು.