ಪ್ರಶಸ್ತಿ, ಸನ್ಮಾನಗಳಿಂದ ಸಮಾಜಮುಖಿ ಚಟುವಟಿಕೆಗೆ ಪ್ರೇರಣೆ: ರವಿ ಹೆಗಡೆ

| Published : Dec 06 2023, 01:15 AM IST

ಪ್ರಶಸ್ತಿ, ಸನ್ಮಾನಗಳಿಂದ ಸಮಾಜಮುಖಿ ಚಟುವಟಿಕೆಗೆ ಪ್ರೇರಣೆ: ರವಿ ಹೆಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ಸಮಾಜಮುಖಿ ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಸಿ ಸಮಾಜ ತಿದ್ದುವ ಕೆಲಸದಲ್ಲಿ ನಿರತರಾಗುವಂತೆ ಪ್ರೇರಣೆ ನೀಡುವ ಕೆಲಸವನ್ನು ಪ್ರಶಸ್ತಿ, ಸನ್ಮಾನಗಳು ಮಾಡುತ್ತವೆ. ಅದರ ಜವಾಬ್ದಾರಿಯನ್ನು ಹೊತ್ತು ಸರಿ ದಾರಿಯಲ್ಲಿ ನಡೆದಾಗ ಪ್ರಶಸ್ತಿಗಳಿಗೆ ಅರ್ಥ ಮೂಡುತ್ತದೆ ಮತ್ತು ಅದರ ಆಶಯದಂತೆ ನಡೆದುಕೊಳ್ಳುವುದು ಪುರಸ್ಕತರ ಜವಾಬ್ದಾರಿಯೂ ಆಗಿದೆ ಎಂದರು.

ಕನ್ನಡಪ್ರಭ ವಾರ್ತೆ ಸೊರಬ

ಪ್ರಶಸ್ತಿಗಳಿಂದ ನಾವು ನಡೆವ ದಾರಿಯು ಇನ್ನಷ್ಟು ಸ್ಫುಟ ಮತ್ತು ಸ್ಪಷ್ಟವಾಗಿ ಇರುವಂತೆ ನೋಡಿಕೊಳ್ಳಬೇಕೆಂಬ ಜವಾಬ್ದಾರಿ ನಮ್ಮ ಮೇಲೆ ಬಂದಂತಾಗಿದೆ ಎಂದು ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ ಹೇಳಿದರು.

ಪಟ್ಟಣದ ಡಾ.ರಾಜ್ ರಂಗಮಂದಿರದಲ್ಲಿ ಸುರಭಿವಾಣಿ ಪತ್ರಿಕೆ ದಶಮಾನೋತ್ಸವ ಹಾಗೂ ಸುರಭಿ ಸೇವಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕೊಡಮಾಡುವ ಸುರಭಿಶ್ರೀ ರಾಜ್ಯ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

ಸಮಾಜದಲ್ಲಿ ಉತ್ತಮ ಕೆಲಸಗಳು ನಡೆಯುತ್ತಲೇ ಇರುತ್ತದೆ. ಆದರೆ ಇವುಗಳಲ್ಲಿ ಎಲ್ಲವೂ ಸಮಾಜಕ್ಕೆ ಪೂರಕವಾಗಿಯೇ ಇರುತ್ತವೆ ಎಂದು ಭಾವಿಸಬೇಕಾಗಿಲ್ಲ. ಅವು ಸಮಾಜಮುಖಿಯಾಗಿ ಇರಬೇಕು ಎನ್ನುವ ನಿಬಂಧನೆಗಳೂ ಇಲ್ಲ. ಆದರೆ ನನ್ನನ್ನೂ ಸೇರಿದಂತೆ ಇಂದು ಪ್ರಶಸ್ತಿ ನೀಡಿ ಪುರ ಸ್ಕರಿಸಲಾಗುತ್ತಿದೆ ಎಂದರೆ ನಾವೆಲ್ಲರೂ ಸಮಾಜಕ್ಕೆ ಪೂರಕವಾಗಿ ಕೆಲಸ ಮಾಡಿದ್ದೇವೆ ಎಂದು ಭಾವಿಸಬಹುದು. ಹೀಗಾಗಿ ಈ ಪ್ರಶಸ್ತಿ ನಾವು ನಡೆವ ದಾರಿಯು ಇನ್ನಷ್ಟು ಸ್ಫುಟ ಮತ್ತು ಸ್ಪಷ್ಟವಾಗಿ ಇರುವಂತೆ ನೋಡಿಕೊಳ್ಳಬೇಕೆಂಬ ಜವಾಬ್ದಾರಿ ನಮ್ಮ ಮೇಲೆ ಬಂದಂತಾಗಿದೆ ಎಂದು ವಿಶ್ಲೇಷಿಸಿದರು.

ಸಮಾಜಮುಖಿ ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಸಿ ಸಮಾಜ ತಿದ್ದುವ ಕೆಲಸದಲ್ಲಿ ನಿರತರಾಗುವಂತೆ ಪ್ರೇರಣೆ ನೀಡುವ ಕೆಲಸವನ್ನು ಪ್ರಶಸ್ತಿ, ಸನ್ಮಾನಗಳು ಮಾಡುತ್ತವೆ. ಅದರ ಜವಾಬ್ದಾರಿಯನ್ನು ಹೊತ್ತು ಸರಿ ದಾರಿಯಲ್ಲಿ ನಡೆದಾಗ ಪ್ರಶಸ್ತಿಗಳಿಗೆ ಅರ್ಥ ಮೂಡುತ್ತದೆ ಮತ್ತು ಅದರ ಆಶಯದಂತೆ ನಡೆದುಕೊಳ್ಳುವುದು ಪುರಸ್ಕತರ ಜವಾಬ್ದಾರಿಯೂ ಆಗಿದೆ ಎಂದರು.

ವಾಣಿಜ್ಯೀಕರಣವಾಗುತ್ತಿರುವ ಈಗಿನ ಸಂದರ್ಭದಲ್ಲಿ ಪತ್ರಿಕೆಗಳು ದೀರ್ಘ ಕಾಲದವರೆಗೆ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿವೆ ಎಂದರೆ ಅದರಲ್ಲಿನ ಗುಣಾತ್ಮಕ ಅಂಶಗಳು ಸಮಾಜಮುಖಿ ಚಟುವಟಿಕೆಯಲ್ಲಿ ತೊಡಿಗಿವೆ ಎಂದು ಅರ್ಥೈಸಬಹುದು. ಗ್ರಾಮೀಣ ಮಟ್ಟದಿಂದ ಬೆಳೆದ ಒಂದು ಪತ್ರಿಕೆ ದಶಮಾನೋತ್ಸವ ಆಚರಿಸುತ್ತಿರುವುದು ಶ್ಲಾಘನೀಯ ಎಂದರು.

ಶಿಕಾರಿಪುರ ತಾಲೂಕು ದುಗ್ಲಿ ಕಡೇನಂದಿಹಳ್ಳಿ ಮಠದ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು ಕಾರ್ಯಕ್ರಮ ಉದ್ಘಾಟಿಸಿ, ಆತ್ಮಕ್ಕೆ ಎಂದಿಗೂ ಸಾವಿಲ್ಲ. ಹಾಗಾಗಿ ಪ್ರತಿಯೊಬ್ಬ ಮನುಷ್ಯನೂ ಸಮಾಜದ ಒಳಿತಿಗಾಗಿ ದುಡಿದಾಗ ಮೋಕ್ಷ ಪ್ರಾಪ್ತಿಯಾಗುತ್ತದೆ. ಕ್ಷಣಿಕ ಜೀವನದಲ್ಲಿ ಸಾರ್ಥಕ ಬದುಕಿನೆಡೆ ನಡೆಯಲು ಗುರುವಿನ ಆಶೀರ್ವಾದವೂ ಲಭ್ಯವಾಗಬೇಕು. ಆಗ ಮಾತ್ರ ಬದುಕನ್ನು ಸರಿದಾರಿಗೆ ತರಲು ಸಾಧ್ಯ. ಇದಕ್ಕೆ ಧಾರ್ಮಿಕ ಚಿಂತನೆ ಬೆಳೆಸಿಕೊಂಡು ಆತ್ಮವನ್ನು ಭವನಂತನ ಪಾದಕ್ಕೆ ಅರ್ಪಿಸಿದಾಗ ಮನುಷ್ಯ ಜನ್ಮ ಸಾರ್ಥಕತೆ ಪಡೆಯುತ್ತದೆ ಎಂದು ಹೇಳಿದರು.

ಸುರಭಿವಾಣಿ ದಶಮಾನೋತ್ಸವದ ವಿಶೇಷ ಸಂಚಿಕೆ ಬಿಡುಗಡೆ ಮಾಡಿದ ಜಡೆ ಸಂಸ್ಥಾನ ಮಠದ ಡಾ. ಮಹಾಂತ ಸ್ವಾಮಿಗಳು, ಮೌಢ್ಯ ಅಳಿಸಿ ಮೌಲ್ಯ ಬಿತ್ತುವ ಕಾರ್ಯ ಪತ್ರಿಕೆಗಳಿಂದ ಮಾತ್ರ ಸಾಧ್ಯವಾಗುತ್ತಿದೆ. ಸಮಾಜದಲ್ಲಿನ ಒಳಿತು- ಕೆಡುಕುಗಳನ್ನು ಬಿತ್ತರಿಸುವ ಪತ್ರಿಕೆಗಳಿಂದ ಆಸ್ವಾದಿಸುವ ಮತ್ತು ಯಾವುದನ್ನು ಗ್ರಹಿಸಬೇಕು ಎನ್ನುವ ಮನೋಧರ್ಮ ನಮ್ಮ ಮೇಲಿದೆ ಎಂದರು.

ಜ್ಞಾನ ಮತ್ತು ಕ್ರಿಯೆ ಒಟ್ಟಿಗೆ ತೆಗೆದುಕೊಂಡು ಹೋದರೆ ಮನುಷ್ಯ ಜನ್ಮ ಸಾರ್ಥಕತೆ ಪಡೆಯುತ್ತದೆ. ನಿಸ್ವಾರ್ಥ ಮನೋಭಾವದಿಂದ ಸಮಾಜಮುಖಿ ಚಟುವಟಿಕೆಯಲ್ಲಿ ತೊಡಗಿಕೊಂಡವರೊಂದಿಗೆ ಕೈಜೋಡಿಸಿದಾಗ ಸಮಾಜದ ಒಳಿತು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸುರಭಿ ಚಾರಿಟೇಬಲ್ ಟ್ರಸ್ಟ್ ಸಮಾಜಮುಖಿ ಚಟುವಟಿಕೆಗಳಿಗೆ ಹಲವು ಯೋಜನೆಗಳನ್ನು ರೂಪಿಸಿದ್ದು, ಎಲ್ಲರ ಸಹಕಾರ ಬೇಕಾಗಿದೆ ಎಂದರು.

ಜೊತೆಗೆ ಹಿರಿಯ ಪತ್ರಕರ್ತ ಎಸ್. ಚಂದ್ರಕಾಂತ್ ಅವರಿಗೂ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಯೋಧ ಎನ್. ಜಗದೀಶ, ಡಾ. ಗಂಗಾಧರ ವ.ಮ. ಆತ್ರೇಯ ಸಾಗರ, ಅರುಣ್ ವಿನಾಯಕ ಶೇಟ್ ಹೊಸಾಡು (ಇಳಕಲ್), ಎನ್.ವಿ. ಈರೇಶ್ ಶಿಕಾರಿಪುರ, ಬಿ.ವಿ. ಗಣಪತಿ ಭಟ್ ಬೆಂಗಳೂರು, ರಾಜು ಎಂ. ರೇವಣಕರ್ ರಾಣೇಬೆನ್ನೂರು, ಮಹೇಂದ್ರಕುಮಾರ ಜೈನ್ ಶಿರಾಳಕೊಪ್ಪ, ಪ್ರದೀಪ್ ಎಲ್ಲನಕರ ಶಿರಸಿ, ಸತ್ಯನಾರಾಯಣ ರಾಯ್ಕರ್ ದಾವಣಗೆರೆ, ಸಂತೋಷ್ ಮಧುಕರ ಶೇಟ್ ಶಿರಸಿ, ಬಸವನಗೌಡ ಎಂ. ಮಲ್ಲಾಪುರ, ಗಜಾನನ ಎಸ್. ಅಣ್ವೇಕರ್ ಹುಬ್ಬಳ್ಳಿ ಅವರಿಗೆ ಸುರಭಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಹೊನ್ನಾವರ ಶ್ರೀ ಕ್ಷೇತ್ರ ಕಿರ್ಕಿ ಜ್ಞಾನೇಶ್ವರಿ ಪೀಠದ ಪ.ಪೂ. ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಸುರಭಿ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಎಸ್.ಜಿ. ರಾಮಚಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ಲಕ್ಕವಳ್ಳಿ ಜೈನಮಠದ ವೃಷಭಸೇನ ಭಟ್ಟಾಕರ, ಟ್ರಸ್ಟ್ನ ನಾರಾಯಣಭಟ್ ಮರಾಠ, ಯು.ಎಲ್. ಸಂದೀಪ್, ವಾಣಿಶ್ರೀ ಉಪಸ್ಥಿತರಿದ್ದರು. ಎನ್. ಷಣ್ಮುಖಾಚಾರ್ ಕಾರ್ಯಕ್ರಮ ನಿರೂಪಿಸಿದರು.