ವಾಹನ ಸವಾರರು ಕಡ್ಡಾಯ ರಸ್ತೆ ನಿಯಮ ಪಾಲಿಸಿ

| Published : Jan 23 2025, 12:46 AM IST

ಸಾರಾಂಶ

ಹೊಸಕೋಟೆ: ವಾಹನ ಸವಾರರು ರಸ್ತೆ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿದರೆ ಅಪಘಾತದ ಪ್ರಮಾಣ ತಗ್ಗಿಸಲು ಸಾಧ್ಯ, ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಧ್ಯಕ್ಷ ಡಿಎಸ್ ರಾಜ್‌ಕುಮಾರ್ ತಿಳಿಸಿದರು.

ಹೊಸಕೋಟೆ: ವಾಹನ ಸವಾರರು ರಸ್ತೆ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿದರೆ ಅಪಘಾತದ ಪ್ರಮಾಣ ತಗ್ಗಿಸಲು ಸಾಧ್ಯ, ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಧ್ಯಕ್ಷ ಡಿಎಸ್ ರಾಜ್‌ಕುಮಾರ್ ತಿಳಿಸಿದರು.

ನಗರದ ಜಿಜಿಎಂಎಸ್ ಶಾಲೆ ಆವರಣದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಂದ ಹಾಗೂ ಸಂಚಾರ ಠಾಣೆ ಸಹಯೋಗದಲ್ಲಿ ನಡೆದ ರಸ್ತೆ ಸುರಕ್ಷತಾ ಸಪ್ತಾಹ ಜಾಥಾ -2025 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪೊಲೀಸ್, ಸಾರಿಗೆ ಇಲಾಖೆ ಜೊತೆಗೆ ಸ್ಕೌಟ್ಸ್ ಮತ್ತು ಗೈಡ್ಸ್ ತಂಡದಿಂದ ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುತ್ತಿದೆ. ಪ್ರಮುಖವಾಗಿ ದ್ವಿಚಕ್ರ ವಾಹನ ಸವಾರರು ವಾಹನ ಚಲಾಯಿಸುವಾಗ ತಲೆಗೆ ಹೆಲ್ಮೆಟ್ ಹಾಕುವುದನ್ನು ಮರೆಯಬಾರದು. ಹೆಲ್ಮೆಟ್ ಬಳಕೆ ಒಬ್ಬ ವ್ಯಕ್ತಿಯ ಜೀವ ಹಾಗೂ ಜೀವನ ಕಾಪಾಡುತ್ತದೆ ಎಂದರು.

ಹೊಸಕೋಟೆ ಠಾಣೆ ಆರಕ್ಷಕ ನಿರೀಕ್ಷಕ ಅಶೋಕ್ ಮಾತನಾಡಿ, ಶಾಲಾ ಕಾಲೇಜು ವಿದ್ಯಾರ್ಥಿಗಳು ಶಾಲೆಯಿಂದ ಬರುವಾಗ ರಸ್ತೆ ದಾಟುವ ಸಮಯದಲ್ಲಿ ಸಾಕಷ್ಟು ಜಾಗರೂಕರಾಗಿ ರಸ್ತೆ ದಾಟಬೇಕು. ಸಂಚಾರ ಸುರಕ್ಷತೆಗಳ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರೂ ವಾಹನ ಸವಾರರು ನಿರ್ಲಕ್ಷ ವಹಿಸುವುದರಿಂದಲೇ ಅಪಘಾತಗಳು ಸಂಭವಿಸುತ್ತವೆ. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಮುಂದಾಗಿರುವುದು ಪ್ರಶಂಸನೀಯ ಎಂದರು.

ಭಾರತ್ ಸ್ಕೌಟ್ ಅಂಡ್ ಗೈಡ್ಸ್ ಹೊಸಕೋಟೆ ಶಾಖೆಯ ಗೌರವಾಧ್ಯಕ್ಷೆ ಗುಲಾಬ್ ಜಾನ್, ಉಪಾಧ್ಯಕ್ಷ ಇಮ್ತಿಯಾಜ್ ಪಾಷ, ಕಾರ್ಯದರ್ಶಿ ದಾಕ್ಷಾಯಿಣಿ ದೇವಿ, ಖಜಾಂಚಿ ಬೋರಮ್ಮ, ಜಿಲ್ಲಾ ಕಮಿಷನರ್ ನಾಗರಾಜ್, ತಾಲೂಕು ಸಂಚಾಲಕ ನಿಹಾಲ್, ಸಂಚಾರ ಠಾಣೆ ಆರಕ್ಷಕ ಉಪ ನಿರೀಕ್ಷಕ ಗಂಗಯ್ಯ, ಶಿಕ್ಷಣ ಇಲಾಖೆ ಪ್ರತಿನಿಧಿ ಶಿವಕುಮಾರ್ ಇತರರು ಹಾಜರಿದ್ದರು.

ಫೋಟೋ : 22 ಹೆಚ್‌ಎಸ್‌ಕೆ 5

ಹೊಸಕೋಟೆಯಲ್ಲಿ ಭಾರತ್ ಸ್ಕೌಟ್ ಅಂಡ್ ಗೈಡ್ಸ್ ವತಿಯಿಂದ ರಸ್ತೆ ಸುರಕ್ಷತಾ ಸಪ್ತಾಹ ಜಾಥಾ ಕಾರ್ಯಕ್ರಮವನ್ನು ಸ್ಕೌಟ್ ಅಂಡ್ ಗೈಡ್ಸ್ ಅಧ್ಯಕ್ಷ ಡಿಎಸ್ ರಾಜಕುಮಾರ್, ಪೊಲೀಸ್ ಇನ್ಸ್‌ಪೆಕ್ಟರ್ ಅಶೋಕ್ ಉದ್ಘಾಟಿಸಿದರು.