ರಾಮನಗರ: ರೈತರ ಬಹುದಿನಗಳ ಕನಸಾಗಿದ್ದ ಮೊಟ್ಟೆದೊಡ್ಡಿ ಏತ ನೀರಾವರಿ ಯೋಜನೆಗೆ ಶಾಸಕ ಇಕ್ಬಾಲ್ ಹುಸೇನ್ ಸೋಮವಾರ ಚಾಲನೆ ನೀಡಿದರು

ರಾಮನಗರ: ರೈತರ ಬಹುದಿನಗಳ ಕನಸಾಗಿದ್ದ ಮೊಟ್ಟೆದೊಡ್ಡಿ ಏತ ನೀರಾವರಿ ಯೋಜನೆಗೆ ಶಾಸಕ ಇಕ್ಬಾಲ್ ಹುಸೇನ್ ಸೋಮವಾರ ಚಾಲನೆ ನೀಡಿದರು.

ರಾಮನಗರ-ಕನಕಪುರ ರಸ್ತೆಯ ಪಕ್ಕದಲ್ಲಿ ನಿರ್ಮಾಣ ಮಾಡಿರುವ ಅರ್ಕಾವತಿ ನದಿ ಪಕ್ಕದ ಪಂಪ್‌ಹೌಸ್‌ನಿಂದ ನೀರು ಹರಿಸುವ ಮೂಲಕ ಯೋಜನೆಗೆ ಶಾಸಕರು ಗ್ರಾಮದ ಮುಖಂಡರ ಜೊತೆಗೂಡಿ ಹಸಿರು ನಿಶಾನೆ ತೋರಿಸಿದರು.

ಅರ್ಕಾವತಿ ನದಿಯಿಂದ ನೀರೆತ್ತಿ ಮೊಟ್ಟೆದೊಡ್ಡಿ, ಲಕ್ಕಪ್ಪನಹಳ್ಳಿ ಗ್ರಾಮಗಳ ಭಾಗಕ್ಕೆ ನೀರು ಒಯ್ಯುವ ಯೋಜನೆ ಇದಾಗಿದ್ದು, ಕಳೆದ 25 ವರ್ಷಗಳಿಂದ ನೆನೆಗುದಿಗೆ ಬಿದ್ದಿತ್ತು. ಇದೀಗ ಶಾಸಕ ಇಕ್ಬಾಲ್ ಹುಸೇನ್ ರವರು ಯೋಜನೆಗೆ ಮರು ಜೀವ ನೀಡಿರುವುದು ರೈತರ ಮೊಗದಲ್ಲಿ ಹರ್ಷ ತರಿಸಿದೆ.

ಕೆಂಗಲ್ ಹನುಮಂತಯ್ಯನವರು ಮುಖ್ಯಮಂತ್ರಿಯಾಗಿದ್ದ (1979) ಅವಧಿಯಲ್ಲಿ ತಮ್ಮ ಹುಟ್ಟೂರು ಲಕ್ಕಪ್ಪನಹಳ್ಳಿ ಮತ್ತು ಮೊಟ್ಟೆದೊಡ್ಡಿ ಗ್ರಾಮಗಳಿಗೆ ಅರ್ಕಾವತಿ ನದಿ ನೀರು ಹರಿಸಿ ಅನುಕೂಲ ಕಲ್ಪಿಸಲು ಮೊಟ್ಟೆದೊಡ್ಡಿ ಏತ ನೀರಾವರಿ ಯೋಜನೆ ಜಾರಿಗೆ ತಂದರು. ಇದಕ್ಕೆ ಅಂದಿನ ನೀರಾವರಿ ಸಚಿವ ಡಿ.ಬಿ.ಚಂದ್ರೇಗೌಡ ಚಾಲನೆ ನೀಡಿದ್ದರು.

ಈ ಯೋಜನೆಯಿಂದಾಗಿ ಸುಮಾರು ಎರಡು ದಶಕಗಳ ಕಾಲ ಕೃಷಿ ಚಟುವಟಿಕೆ ಉತ್ತಮವಾಗಿ ನಡೆದಿತ್ತು. ಆನಂತರ ನದಿಯಲ್ಲಿ ನೀರಿನ ಕೊರತೆ ಉಂಟಾಗಿ ಯೋಜನೆ ಹಳ್ಳ ಹಿಡಿಯಿತು. ರೈತರು ಯೋಜನೆಗೆ ಮರು ಜೀವ ನೀಡುವಂತೆ ಜನಪ್ರತಿನಿಧಿಗಳು ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸುತ್ತಲೇ ಬಂದಿದ್ದರು.

ರೈತರ ಒತ್ತಡಕ್ಕೆ ಮಣಿದ ಶಾಸಕ ಇಕ್ಬಾಲ್ ಹುಸೇನ್ ಸುಮಾರು 5 ಕೋಟಿ ರುಪಾಯಿ ವೆಚ್ಚದಲ್ಲಿ ಸಣ್ಣ ನೀರಾವರಿ ಇಲಾಖೆ ಮೂಲಕ ಮೊಟ್ಟೆದೊಡ್ಡಿ ಏತ ನೀರಾವರಿ ಯೋಜನೆಗೆ ಕಾಯಕಲ್ಪ ನೀಡಿದ್ದಾರೆ. ಹಳೇ ಮೋಟಾರ್ ತೆಗೆದು ಹೊಸ ವಿದ್ಯುತ್ ಮೋಟಾರ್, ಪೈಪ್ ಅಳವಡಿಸಿ ಚೆಕ್ ಡ್ಯಾಂ ನಿರ್ಮಿಸಿ ನೀರೊದಗಿಸುವ ಕಾರ್ಯಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಕೆ.ರಾಜು, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್ , ಮುಖಂಡರಾದ ವಾಸು, ಜಯಣ್ಣ, ರೈಡ್ ನಾಗರಾಜ್ ಇದ್ದರು.

ಕೋಟ್ ..............

ಮೊಟ್ಟೆದೊಡ್ಡಿ ಏತ ನೀರಾವರಿ ಯೋಜನೆಯ ಪುನಶ್ಚತನಕ್ಕೆ ಒಟ್ಟು 5 ಕೋಟಿ ಖರ್ಚಾಗಿದ್ದು, ಇದರಿಂದ 450 ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರೆಯಲಿದೆ. 1.5 ಕಿ.ಮೀ. ಉದ್ದ ನೀರು ಹರಿಯಲಿದ್ದು, 60 ಅಶ್ವಶಕ್ತಿ ಸಾಮರ್ಥ್ಯದ ವಿದ್ಯುತ್ ಮೋಟಾರ್ ಅಳವಡಿಸಲಾಗಿದೆ. ಅರ್ಕಾವತಿ ನದಿಗೆ ಅಡ್ಡಲಾಗಿ ನೀರು ನಿಲ್ಲುವಂತೆ ಚೆಕ್ ಡ್ಯಾಂ ಸಹ ನಿರ್ಮಿಸಲಾಗಿದ್ದು, ಪಂಪ್ ಹೌಸ್ ಹೊಸ ಮನೆ, ವಿದ್ಯುತ್ ಸ್ಥಾವರ ಹೊಸ ಪೈಪ್ ಲೈನ್ ಅಳವಡಿಸಲಾಗಿದೆ.

-ಇಕ್ಬಾಲ್ ಹುಸೇನ್, ಶಾಸಕರು, ರಾಮನಗರ ಕ್ಷೇತ್ರ

30ಕೆಆರ್ ಎಂಎನ್ 6.ಜೆಪಿಜಿ

ರಾಮನಗರ ತಾಲೂಕಿನ ಮೊಟ್ಟೆದೊಡ್ಡಿ ಏತ ನೀರಾವರಿ ಯೋಜನೆಗೆ ಶಾಸಕ ಇಕ್ಬಾಲ್ ಹುಸೇನ್ ಚಾಲನೆ ನೀಡಿದರು.