ನಾಯಕನಹಟ್ಟಿ ರಾಜ್ಯ ಹೆದ್ದಾರಿಯಲ್ಲಿ ಸಂಚಾರಕ್ಕೆ ಸಂಚಕಾರ

| Published : Sep 07 2024, 01:42 AM IST

ಸಾರಾಂಶ

ಪಟ್ಟಣದಲ್ಲಿ ಹಾದುಹೋಗಿರುವ 45 ನೇ ರಾಜ್ಯ ಹೆದ್ದಾರಿ ನಿರ್ವಹಣೆ ಇಲ್ಲದೇ ಗುಂಡಿಗಳ ಸಾಮ್ರಾಜ್ಯವಾಗಿದ್ದು, ಜನರು ಸುಗಮ ಸಂಚಾರ ಇಲ್ಲದೇ ನಿತ್ಯ ಪರಿತಪಿಸುವಂತಾಗಿದೆ. ಗುಂಡಿ ತಪ್ಪಿಸಲು ಹೋಗಿ ರಾಯಚೂರು ಜಿಲ್ಲೆಯಲ್ಲಿ ಗುರುವಾರ ಸಂಭವಿಸಿದ ಅಪಘಾತದಲ್ಲಿ ಮೂರು ಮಂದಿ ವಿದ್ಯಾರ್ಥಿಗಳು ಅಸುನೀಗಿದ್ದರು. ಇಂತಹ ಅವಘಡಗಳಿಗೆ ಭವಿಷ್ಯದಲ್ಲಿ ಈ ರಸ್ತೆ ಕಾರಣವಾಗಬಾರದು ಎಂಬುದಷ್ಟೇ ಸಾರ್ವಜನಿಕರ ಆತಂಕ ಮತ್ತು ಮನವಿ.

ಕನ್ನಡಪ್ರಭ ವಾರ್ತೆ ನಾಯಕನಹಟ್ಟಿ ಪಟ್ಟಣದಲ್ಲಿ ಹಾದುಹೋಗಿರುವ 45 ನೇ ರಾಜ್ಯ ಹೆದ್ದಾರಿ ನಿರ್ವಹಣೆ ಇಲ್ಲದೇ ಗುಂಡಿಗಳ ಸಾಮ್ರಾಜ್ಯವಾಗಿದ್ದು, ಜನರು ಸುಗಮ ಸಂಚಾರ ಇಲ್ಲದೇ ನಿತ್ಯ ಪರಿತಪಿಸುವಂತಾಗಿದೆ. ಗುಂಡಿ ತಪ್ಪಿಸಲು ಹೋಗಿ ರಾಯಚೂರು ಜಿಲ್ಲೆಯಲ್ಲಿ ಗುರುವಾರ ಸಂಭವಿಸಿದ ಅಪಘಾತದಲ್ಲಿ ಮೂರು ಮಂದಿ ವಿದ್ಯಾರ್ಥಿಗಳು ಅಸುನೀಗಿದ್ದರು. ಇಂತಹ ಅವಘಡಗಳಿಗೆ ಭವಿಷ್ಯದಲ್ಲಿ ಈ ರಸ್ತೆ ಕಾರಣವಾಗಬಾರದು ಎಂಬುದಷ್ಟೇ ಸಾರ್ವಜನಿಕರ ಆತಂಕ ಮತ್ತು ಮನವಿ. ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಗಡಿಭಾಗದ ದೊಣೆಹಳ್ಳಿ ಸಮೀಪದ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ 45 ನೇ ರಾಜ್ಯ ಹೆದ್ದಾರಿ ಮುಸ್ಟೂರು-ಚನ್ನಬಸಯ್ಯನಹಟ್ಟಿ-ನಾಯಕನಹಟ್ಟಿ-ಮನಮೈನಹಟ್ಟಿ-ನೇರಲಗುಂಟೆ-ಚಳ್ಳಕೆರೆ ಸಂಪರ್ಕ ಕಲ್ಪಿಸುತ್ತದೆ. ಒಟ್ಟು 28 ಕಿ.ಮೀ ಉದ್ದ ರಸ್ತೆ ನಿರ್ಮಿಸಲ್ಪಟ್ಟಿದೆ. ಆದರೆ, ಈಚೆಗೆ ಈ ರಾಜ್ಯ ಹೆದ್ದಾರಿಯಲ್ಲಿ ಬೃಹತ್ ಗುಂಡಿಗಳು ಅಪಾಯಗಳನ್ನು ಆಹ್ವಾನಿಸುತ್ತಿವೆ. ನಿರಂತರ ಮಳೆಗೆ ತುಂಬಿರುವ ಈ ಗುಂಡಿಗಳಿಂದ ಬೈಕ್ ಅಪಘಾತಗಳು ಹೆಚ್ಚುತ್ತಿವೆ.

ಮುಖ್ಯವಾಗಿ ಬಸ್ ನಿಲ್ದಾಣ ಸ್ಥಳಗಳಲ್ಲಿಯೇ ಗುಂಡಿಗಳು ಹೆಚ್ಚಾಗಿದ್ದು, ಹಿರಿಯ ನಾಗರೀಕರು, ಮಕ್ಕಳಾದಿಯಾಗಿ ಬಸ್ ಹತ್ತಲು ಪಡಿಪಾಟಲು ಬೀಳುವಂತಾಗಿದೆ. ನಾಯಕನಹಟ್ಟಿಯ ಚಿಕ್ಕಕೆರೆ ಕೋಡಿ ಬಸ್ ನಿಲ್ದಾಣ ಸುತ್ತಮುತ್ತಲೂ ಬರೀ ತಗ್ಗುಗಳೇ ಆವರಿಸಿವೆ. ಪಟ್ಟಣದ ಹೃದಯ ಭಾಗವಾಗಿರುವ ಮದಕರಿ ವೃತ್ತದಲ್ಲಿನ ಬಸ್ ನಿಲ್ದಾಣದಲ್ಲೂ ಭಾರೀ ಗಾತ್ರದ ಗುಂಡಿಗಳು ಗೋಚರಿಸುತ್ತಿವೆ. ಅಂಬೇಡ್ಕರ್ ವೃತ್ತದಲ್ಲೂ ಗುಂಡಿಗಳು ಆವರಿಸಿವೆ.

ಅದೇ ರೀತಿ ಮನಮೈನಹಟ್ಟಿಯ ಗ್ರಾಮದ ಬಸ್ ನಿಲ್ದಾಣ, ನೇರಲಗುಂಟೆಯ ಮೇಲಿನ ಹಾಗೂ ಕೆಳಗಿನ ಎರಡೂ ಗ್ರಾಮಗಳ ಬಸ್ ನಿಲ್ದಾಣಗಳು ಗುಂಡಿಗಳಿಂದ ರಾರಾಜಿಸುತ್ತಿವೆ. ಇದೇ ರೀತಿಯಲ್ಲಿ ಬಳ್ಳಾರಿ ರಾಷ್ಟ್ರೀಯ ಹೆದ್ದಾರಿವರೆಗೂ ಗುಂಡಿಗಳು ಹಾವಳಿ ಹೆಚ್ಚೇ ಇದೆ.

ನಾಯಕನಹಟ್ಟಿ ಪಟ್ಟಣದ 6 ನೇ ವಾರ್ಡಿನ ಮೂಲಕ ಮಲ್ಲೂರಹಳ್ಳಿ ರಸ್ತೆಗೆ ಸಂಪರ್ಕ ಕಲ್ಪಿಸುವ ಬೈಪಾಸ್ ರಸ್ತೆ ಒತ್ತುವರಿ ಆಗಿರುವುದಲ್ಲದೇ, ಡಾಂಬರು ಕೂಡ ಕಂಡಿಲ್ಲ. ಈ ಹೆದ್ದಾರಿ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಉಡಾಫೆ ಉತ್ತರ ನೀಡಿ ಲೋಕೋಪಯೋಗಿ ಇಲಾಖೆ ಕೈಚೆಲ್ಲುತ್ತಾ ಬಂದಿದೆ. ನಮಗೂ ಇದಕ್ಕೂ ಸಂಬಂಧ ಇಲ್ಲ ಎಂದು ಪಟ್ಟಣ ಪಂಚಾಯಿತಿ ಆಡಳಿತ ನಿರ್ಲಕ್ಷ್ಯ ತೋರಿದೆ. ಹಾಗಾಗಿ ಎರಡು ಕಿಮೀ ಉದ್ದದ ಈ ಬೈಪಾಸ್ ರಸ್ತೆಯಲ್ಲಿ ಸಂಚಾರ ಬಲು ಸಂಕಷ್ಟ ತಂದೊಡ್ಡಿದೆ. ಈ ಬೈಪಾಸ್‌ಗೆ ಮಸೀದಿ - ಪೋಸ್ಟ್ ಆಫೀಸ್ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ ಕೂಡ ನೆನೆಗುದಿಗೆ ಬಿದ್ದು ದಶಕ ಕಳೆದಿದೆ. ಈ ರಸ್ತೆಯಲ್ಲಿ ಗುಂಡಿಗಳ ಜತೆಗೆ ಕಲ್ಲುಗಳು ಸುಗಮ ಸಂಚಾರಕ್ಕೆ ಕಂಟಕ ಆಗುತ್ತಿದ್ದರೂ, ಪಟ್ಟಣ ಪಂಚಾಯಿತಿ ಜಾಣ ಕುರುಡು ಪ್ರದರ್ಶಿಸುತ್ತಲೇ ಬಂದಿದೆ. -----

ಕೋಟ್ ಬೊಕ್ಕಸ ಖಾಲಿಯಾಗಿದೆ

ಪಟ್ಟಣದಲ್ಲಿ ಹಾಳಾಗಿರುವ ರಸ್ತೆಗಳೇ ಕಾಂಗ್ರೆಸ್ ಸರ್ಕಾರದ ಬರಿದಾಗಿರುವ ಬೊಕ್ಕಸದ ಬಗ್ಗೆ ಬೊಟ್ಟು ಮಾಡುತ್ತಿವೆ. ಗ್ಯಾರಂಟಿ ಯೋಜನೆಗಳು ಗ್ರಾಮೀಣ ಅಭಿವೃದ್ಧಿಯನ್ನು ನುಂಗಿಹಾಕಿದೆ ಎನ್ನುವುದಕ್ಕೆ ಇದಕ್ಕಿಂತ ನಿದರ್ಶನಬೇಕೇ?

- ಶಿವಣ್ಣ ಬಿಜೆಪಿ ಜಿಲ್ಲಾ ಎಸ್ಟಿ ಮೋರ್ಚಾ ಅಧ್ಯಕ್ಷ

--------ಕೋಟ್ ರಸ್ತೆ ನಿರ್ವಹಣೆಗೆ ಟೆಂಡರ್

ಈ ಬಾರಿ ನಿರಂತರ ಮಳೆ ಸುರಿದಿದೆ. ಮಳೆ ಬಂದರೆ ರಸ್ತೆಗಳಿಗೆ ಅಷ್ಟಾಗಿ ಹಾನಿ ಉಂಟಾಗುವುದಿಲ್ಲ. ನಿರಂತರ ಮಳೆಯಿಂದಾಗಿ ಗುಂಡಿಗಳು ಸೃಷ್ಟಿಗೊಂಡಿವೆ. ಇವುಗಳ ನಿರ್ವಹಣೆಗಾಗಿಯೇ ಟೆಂಡರ್ ಆಹ್ವಾನಿಸಲು ಇಲಾಖೆ ಸಿದ್ಧತೆ ಮಾಡಿಕೊಂಡಿದೆ.- ಹಕೀಂ, ಎಇಇ ಲೋಕೋಪಯೋಗಿ ಇಲಾಖೆ ಚಳ್ಳಕೆರೆ----ಕೋಟ್ ಅಭಿವೃದ್ಧಿಗೆ ಯೋಜನೆ ಶೀಘ್ರಪಟ್ಟಣ ಪಂಚಾಯಿತಿಗೆ ಇದೀಗ ಮತ್ತೆ ಆಡಳಿತರೂಢ ವ್ಯವಸ್ಥೆ ಬಂದಿದೆ. ಮೊದಲ ಪ್ರಗತಿ ಪರಿಶೀಲನಾ ಸಭೆಯಲ್ಲಿ ಬೈಪಾಸ್ ರಸ್ತೆ ಸೇರಿದಂತೆ ಪಟ್ಟಣ ವ್ಯಾಪ್ತಿಯ ರಸ್ತೆಗಳ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುವುದು. ಓ. ಶ್ರೀನಿವಾಸ್ ಮುಖ್ಯಾಧಿಕಾರಿ ಪಪಂ ನಾಯಕನಹಟ್ಟಿ.--------------

ಪೋಟೋ ಕ್ಯಾಪ್ಸನ್

ನಾಯಕನಹಟ್ಟಿ ಮೂಲಕ ಹಾದು ಹೋಗಿರುವ ರಾಜ್ಯ ಹೆದ್ದಾರಿಯಲ್ಲಿ ಗುಂಡಿಗಳು ಬಿದ್ದಿರುವುದು.6 ಎನ್ವೈಕೆ 1-