ಸಾರಾಂಶ
ಚಿತ್ರದುರ್ಗ ನಗರದ ಕೋಟೆ ನಾಡು ಬುದ್ಧವಿಹಾರ ಕೇಂದ್ರದಲ್ಲಿ ಬುಧವಾರ ಡಾ.ಬಿ.ಆರ್.ಅಂಬೇಡ್ಕರ್ ಪರಿಶಿಷ್ಟ ಜಾತಿ ಹೈನುಗಾರಿಕೆ ಅಭಿವೃದ್ಧಿ ಹಾಗೂ ಉತ್ಪಾದಕರ ಸಹಕಾರ ಸಂಘ ನಿಯಮಿತದ ಸರ್ವ ಸದಸ್ಯರ ಸಭೆ ನಡೆಸಲಾಯಿತು.
ಸರ್ವ ಸದಸ್ಯರ ಸಭೆಯಲ್ಲಿ ಬಿ.ಪಿ.ತಿಪ್ಪೇಸ್ವಾಮಿ ಹೇಳಿಕೆ ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಪ್ರಸ್ತುತ ದಿನ ಮಾನದಲ್ಲಿ ಶೋಷಿತ ಜಾತಿಗಳು ತಮ್ಮ ಸಮಾಜವನ್ನು ಆರ್ಥಿಕ ಸ್ವಾವಲಂಬಿಗಳನ್ನಾಗಿ ಮಾಡುವ ಚಳುವಳಿ ಆರಂಭಿಸುವ ಅನಿವಾರ್ಯತೆ ಇದೆ ಎಂದು ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ಹೇಳಿದರು.ನಗರದ ಕೋಟೆ ನಾಡು ಬುದ್ಧವಿಹಾರ ಕೇಂದ್ರದಲ್ಲಿ ಬುಧವಾರ ಡಾ.ಬಿ.ಆರ್.ಅಂಬೇಡ್ಕರ್ ಪರಿಶಿಷ್ಟ ಜಾತಿ ಹೈನುಗಾರಿಕೆ ಅಭಿವೃದ್ಧಿ ಹಾಗೂ ಉತ್ಪಾದಕರ ಸಹಕಾರ ಸಂಘ ನಿಯಮಿತದ ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪರಿಶಿಷ್ಟ ಜಾತಿಯಲ್ಲಿನ ಆರ್ಥಿಕ ಅಶಕ್ತರು ಹಾಗೂ ನಿರುದ್ಯೋಗಿಗಳು ಸ್ವ-ಉದ್ಯೋಗ ಆರಂಭಿಸಿ ಆರ್ಥಿಕ ಸ್ವಾವಲಂಬನೆ ಸಾಧಿಸುವ ಮೂಲಕ ಬಾಬಾ ಸಾಹೇಬ್ ಅಂಬೇಡ್ಕರ್ ಆಶಯದಂತೆ ಸ್ವಾಭಿಮಾನದಿಂದ ವೈಚಾರಿಕತೆಯುಳ್ಳ ಸಹಕಾರ ಮಾರ್ಗದಲ್ಲಿ ಜೀವನವನ್ನು ಪ್ರೇರೇಪಿಸುವ ಸಲುವಾಗಿ ಜಿಲ್ಲೆಯ ವ್ಯಾಪ್ತಿಗೊಳಪಟ್ಟು ಈ ಸಹಕಾರಿ ಸಂಘವನ್ನು ಸ್ಥಾಪಿಸಲಾಗಿದೆ. ಮುಖ್ಯ ಪ್ರವರ್ತಕರ ಜತೆಗೆ 21 ಜನ ಪ್ರವರ್ತಕರಿರುತ್ತಾರೆ.ಈ ಸಹಕಾರಿ ಸಂಘದ ಷೇರುದಾರರಿಗೆ ಸಾಲ, ಸಹಾಯನುದಾನ ದೊರಕಿಸಿ ಕೊಡುವ ಮೂಲಕ ಕಡಿಮೆ ಬಂಡವಾಳದಲ್ಲಿ ಸ್ವಂತ ಜಮೀನು ಇರುವವರು ಅಥವಾ ಇಲ್ಲದಿರುವವರು (ಭೂಮಿ ಹೊಂದಲು ಪರ್ಯಾಯ ವ್ಯವಸ್ಥೆಯೊಂದಿಗೆ) ಬೋರ್‌ವೆಲ್ ಕೊರೆಯಿಸಿಕೊಂಡು ಮೇವು ಬೆಳೆಯುವುದರೊಂದಿಗೆ ತಮ್ಮ ಊರು ಮತ್ತು ಮನೆಗಳಲ್ಲಿಯೇ ಹಸು ಸಾಕಾಣಿಕೆ ಮಾಡುವುದರಿಂದ ಸ್ವ-ಉದ್ಯೋಗ ಹೊಂದಿ ಆರ್ಥಿಕ ಸ್ವಾಲಂಬನೆ ಸಾಧಿಸಬಹುದೆಂಬ ಆಶಯ ಹೊಂದಲಾಗಿದೆ.
ಸಂಘದ ಸದಸ್ಯರಾಗಲು ಷೇರು ಮೊತ್ತ 1 ಸಾವಿರ ರು. ಹಾಗೂ ಪ್ರವೇಶ ಶುಲ್ಕ 100 ರು. ನಿಗದಿಯಾಗಿದ್ದು ಈ ಸಂಬಂಧ ಹೆಚ್ಚಿನ ಮಾಹಿತಿಗೆ ಮುಖ್ಯ ಪ್ರವರ್ತಕರನ್ನು (ಮೊ:9900592473) ಸಂಪರ್ಕಿಸಬಹುದಾಗಿದೆ ಎಂದರು. ಈ ವೇಳೆ ಸರ್ಕಾರಿ ನಿವೃತ್ತ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಿ.ಪಿ.ಪ್ರೇಮನಾಥ್, ಸಹಕಾರಿ ಸಂಘದ ಪ್ರವರ್ತಕರಾದ ಕೆ.ಆರ್.ಮದ್ದಪ್ಪ, ಬಿಜಿಕೆರೆ ಬಸವರಾಜ್, ಟಿ.ಮೂರ್ತಿ, ನನ್ನಿವಾಳ ರವಿಕುಮಾರ್, ಹುಚ್ಚವ್ವನಹಳ್ಳಿ ವೆಂಕಟೇಶ್, ತುರುವನೂರು ಜಗನ್ನಾಥ್, ಬಿ.ಎಸ್.ಯೋಗರಾಜ್, ವೈಶಾಲಿ, ಉಷಾ, ಬುರುಜನರೊಪ್ಪ ಭಾರತಿ, ಶಿಲ್ಪ, ಮಠದಹಟ್ಟಿ ವೆಂಕಟೇಶ್, ಅಶ್ವಥ್, ಧನುಷ್ ಜಗನ್ ಮುಂತಾದವರು ಹಾಜರಿದ್ದರು.