ದೇಶದಲ್ಲಿ ಜನರು ವ್ಯಾಪಾರ, ಉದ್ಯೋಗಗಳಿಗೆ ನೀಡುವ ಹೆಚ್ಚಿನ ಆದ್ಯತೆಯನ್ನು ಕೃಷಿಗೆ ನೀಡುತ್ತಿಲ್ಲ. ಇದರಿಂದ ಕೃಷಿ ಕ್ಷೇತ್ರ ಹಿಂದುಳಿಯಲು ಮುಖ್ಯ ಕಾರಣವಾಗುತ್ತಿದೆ ಎಂದು ಕಾಶಿ ಜ್ಞಾನಪೀಠದ ಜಗದ್ಗುರು ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಮಹಾಸ್ವಾಮೀಜಿ ನುಡಿದಿದ್ದಾರೆ.
- ಹೊನ್ನಾಳಿಯಲ್ಲಿ ಕಾಶಿ ಜ್ಞಾನಪೀಠದ ಜಗದ್ಗುರು ಸಲಹೆ । ಹಿರೇಕಲ್ಮಠದಲ್ಲಿ ಲಿಂಗೈಕ್ಯ ಶೀಗಳ ಪುಣ್ಯಾರಾಧನೆ । ರಾಜ್ಯಮಟ್ಟದ ಕೃಷಿಮೇಳ
- - -ಕನ್ನಡಪ್ರಭ ವಾರ್ತೆ ಹೊನ್ನಾಳಿ
ದೇಶದಲ್ಲಿ ಜನರು ವ್ಯಾಪಾರ, ಉದ್ಯೋಗಗಳಿಗೆ ನೀಡುವ ಹೆಚ್ಚಿನ ಆದ್ಯತೆಯನ್ನು ಕೃಷಿಗೆ ನೀಡುತ್ತಿಲ್ಲ. ಇದರಿಂದ ಕೃಷಿ ಕ್ಷೇತ್ರ ಹಿಂದುಳಿಯಲು ಮುಖ್ಯ ಕಾರಣವಾಗುತ್ತಿದೆ ಎಂದು ಕಾಶಿ ಜ್ಞಾನಪೀಠದ ಜಗದ್ಗುರು ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಮಹಾಸ್ವಾಮೀಜಿ ನುಡಿದರು.ಹೊನ್ನಾಳಿ ಪಟ್ಟಣದ ಹಿರೇಕಲ್ಮಠದಲ್ಲಿ ಲಿಂ. ಶ್ರೀ ಮೃತ್ಯುಂಜಯ ಶಿವಾಚಾರ್ಯ ಶ್ರೀಗಳ ಪುಣ್ಯಾರಾಧನೆ ಹಾಗೂ ಲಿಂ. ಚಂದ್ರಶೇಖರ ಶಿವಾಚಾರ್ಯ ಶ್ರೀಗಳ ಪುಣ್ಯಸ್ಮರಣೆ ಅಂಗವಾಗಿ ಫೆ.27ರ ಶುಕ್ರವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಕೃಷಿಮೇಳ ಕಾರ್ಯಕ್ರಮ ಉದ್ಘಾಟಿಸಿ ಹಾಗೂ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ವೈಜ್ಞಾನಿಕ ಕೃಷಿ ಪದ್ಧತಿ ಮುಖ್ಯ:ದೇಶದಲ್ಲಿ ಶೇ.70ರಷ್ಟಿರುವ ರೈತರ ಬಗ್ಗೆ, ಕೃಷಿ ಮತ್ತು ಗೋವುಗಳ ಬಗ್ಗೆ ಸರ್ಕಾರಗಳು ಪಠ್ಯಪುಸ್ತಗಳಲ್ಲಿ ಪಠ್ಯವಿಷಯವನ್ನಾಗಿ ಸೇರಿಸಬೇಕು. ಆ ಮೂಲಕ ಬಾಲ್ಯದಲ್ಲಿಯೇ ಮಕ್ಕಳಲ್ಲಿ ಕೃಷಿ ಕ್ಷೇತ್ರ ಬಗ್ಗೆ ಆಸಕ್ತಿ ಮೂಡಿಸುವ ಕೇಲಸವಾಗಬೇಕು. ಹಿಂದಿನ ಕಾಲದಲ್ಲಿ ಕೃಷಿ ಚಟುವಟಿಕೆಯೇ ಪ್ರಥಮ ಸ್ಥಾನದಲ್ಲಿತ್ತು. ಎರಡನೇ ಸ್ಥಾನದಲ್ಲಿ ವಾಣಿಜ್ಯ, ಮೂರನೇ ಸ್ಥಾನದಲ್ಲಿ ಉದ್ಯೋಗ ಕ್ಷೇತ್ರಗಳಿದ್ದವು. ಆದರೆ, ಇಂದು ಕೃಷಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ ಎಂದು ಬೇಸರಿಸಿದರು. ರೈತರು ಏಕಬೆಳೆ ಪದ್ಧತಿಯನ್ನು ಕೈಬಿಟ್ಟು ಮಿಶ್ರಬೆಳೆ ಪದ್ಧತಿಗಳನ್ನು ಅನುಸರಿಸಬೇಕು. ಜೊತೆಗೆ ವೈಜ್ಞಾನಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ರೈತರ ಬದುಕು ಹಸನಾಗಲಿ:ಹೊನ್ನಾಳಿ ಹಿರೇಕಲ್ಮಠದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನಾ ಶಿವಾಚಾರ್ಯ ಸ್ವಾಮೀಜಿ ಪ್ರಾಸ್ತಾವಿಕವಾಗಿ ಮಾತನಾಡಿ, ಶ್ರೀಮಠದಿಂದ ಕೃಷಿಮೇಳ ಆಯೋಜಿಸುವ ಅವಶ್ಯಕತೆ ಇತ್ತೆ ಎಂದು ಕೆಲವರ ಮನಸ್ಸಿನಲ್ಲಿದೆ. ಆದರೆ ಇಂದು ರೈತನ ಬದುಕು ನಿಜಕ್ಕೂ ದುಸ್ತರವಾಗುತ್ತಿದೆ. ಇದನ್ನು ಎಲ್ಲರೂ ಅರಿಯಬೇಕು. ಹಾಗಾಗಿ ರಾಜ್ಯಮಟ್ಟದ ಕೃಷಿಮೇಳ ನಡೆಸಿ, ರೈತರ ಬದುಕು ಹಸನಾಗಬೇಕು ಎಂಬ ಉದ್ದೇಶದಿಂದ ಶ್ರೀಮಠ ಈ ಸೇವೆಗೆ ಮುಂದಾಗಿದೆ ಎಂದರು.
ಕೃಷಿಮೇಳಕ್ಕೆ ಶಕ್ತಿಮೀರಿ ಸಹಕಾರ:ರೈತರು ಎಂದು ನೆಮ್ಮದಿಯ ಜೀವನ ಸಾಗಿಸುತ್ತಾರೋ ಆಗ ಮಾತ್ರ ನಾವೆಲ್ಲ ನೆಮ್ಮದಿಯಾಗಿರಲು ಸಾಧ್ಯ. ರಾಜ್ಯಮಟ್ಟದ ಕೃಷಿಮೇಳ ನಡೆಸಲು ಸಮಯ ತೀರಾ ಕಡಿಮೆ ಇತ್ತು. ಆದರೂ, ಎಲ್ಲವನ್ನು ಅನುವು ಮಾಡಿಕೊಂಡು ಎಲ್ಲರ ಸಹಕಾರದಿಂದ ಕೃಷಿಮೇಳ ನಡೆಸುತ್ತಿದ್ದೇವೆ. ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಶಾಸಕ ಡಿ.ಜಿ. ಶಾಂತನಗೌಡ, ಬಯಲುಸೀಮೆ ನಿಗಮ ಮಂಡಳಿ ಅಧ್ಯಕ್ಷ ಎಚ್.ಬಿ.ಮಂಜಪ್ಪ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹಾಗೂ ಇತರರು ಕೃಷಿಮೇಳಕ್ಕೆ ಶಕ್ತಿಮೀರಿ ಸಹಕಾರ ನೀಡಿದ್ದಾರೆ ಎಂದು ಶ್ರೀಗಳು ಶ್ಲಾಘಿಸಿ, ಸ್ಮರಿಸಿದರು.
ಶಾಸಕ ಡಿ.ಜಿ.ಶಾಂತನಗೌಡ ಸ್ವಾಗತ ಭಾಷಣ ಮಾಡಿ, ನಮ್ಮ ಹಿರೇಕಲ್ಮಠದಲ್ಲಿ ರೈತರ ಬಗ್ಗೆ ಚಿಂತಿಸಿ, ರೈತರ ಬದುಕು ದುಸ್ತರ ಆಗದಂತೆ ನಾವು ನೋಡಿಕೊಳ್ಳಬೇಕು, ಅದು ಕರ್ತವ್ಯ ಎಂದು ತಿಳಿದು ನಮ್ಮ ಶ್ರೀಗಳು ಕೃಷಿಮೇಳ ನಡೆಸುತ್ತಿದ್ದಾರೆ. ರೈತರಿಗೆ ಬೇಕಾದ ಕೃಷಿ ಪರಿಕರ ಹಾಗೂ ಆಧುನಿಕ ಬೇಸಾಯದ ಬಗ್ಗೆ ತಿಳಿಸಲು ಕೃಷಿಮೇಳ ಸಹಕಾರಿಯಾಗಿದೆ. ಈ ಮೂಲಕ ನಮ್ಮ ಶ್ರೀಗಳು ಇಡೀ ದೇಶಕ್ಕೆ ಮಾದರಿಯಾಗಿದ್ದಾರೆ ಎಂದರು.ಹಿರೇಕೆರೂರು ಕ್ಷೇತ್ರ ಶಾಸಕ ಯು.ಬಿ.ಬಣಕಾರ್ ಮಾತನಾಡಿ, ರೈತರ ಬಗ್ಗೆ ವೇದಿಕೆಗಳಲ್ಲಿ ಮಾತನಾಡುತ್ತೇವೆ. ಆದರೆ ಅವರ ಸಮಸ್ಯೆಗಳ ಬಗ್ಗೆ ಗಮನಹರಿಸುವ ಕಾರ್ಯಗಳಿಗೆ ನಾವು ಮುಂದಾಗಬೇಕಿದೆ. ನಮ್ಮ ಸರ್ಕಾರ ಕೂಡಲೇ ಎಲ್ಲ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿ ಮಾಡಬೇಕು ಎಂದು ಮುಖ್ಯಮಂತ್ರಿ ಅವರಿಗೆ ಮನವಿ ಮಾಡುತ್ತೇವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ರಟ್ಟೆಹಳ್ಳಿಯ ಕಬ್ಬಿನಕಂತಿ ಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ದೇಶದಲ್ಲಿ ದಿನೇದಿನೇ ಜನಸಂಖ್ಯೆ ಏರಿಕೆ ಆಗುತ್ತಿದೆ. ಈ ಹಿನ್ನೆಲೆ ಮುಂಬರುವ ದಿನಗಳಲ್ಲಿ ಹೆಚ್ಚು ಆಹಾರ ಬೆಳೆಯುವ ಕಡೆ ರೈತರು ಆಧುನಿಕ ಕೃಷಿ ಪರಿಕರಗಳ ಬಗ್ಗೆ ಅಧ್ಯಯನ ಮಾಡಬೇಕು ಎಂದು ತಿಳಿಸಿದರು.ರಾಂಪುರ ಶ್ರೀಮಠದ ಶಿವಕುಮಾರ ಹಾಲಸ್ವಾಮೀಜಿ, ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ಅಧ್ಯಕ್ಷ ಪ್ರಭು ಸಾರಂಗ ದೇಶಿಕೇಂದ್ರ ಶಿವಾಚಾರ್ಯ ಶ್ರೀಗಳು, ಮಾಜಿ ಶಾಸಕ ವೈ. ಸಂಪಂಗಿ, ಬಯಲುಸೀಮೆ ನಿಗಮ ಮಂಡಳಿ ಅಧ್ಯಕ್ಷ ಎಚ್.ಬಿ.ಮಂಜಪ್ಪ, ಕಾಡಾ ಮಾಜಿ ಅಧ್ಯಕ್ಷ ನಗರದ ಮಹಾದೇವಪ್ಪ, ರೈತ ಮುಖಂಡರು ಹಾಗೂ ಇತರರು ಸಮಾರಂಭದಲ್ಲಿ ಮಾತನಾಡಿದರು.
ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಎಚ್.ಎ. ಉಮಾಪತಿ, ರೈತ ಮುಖಂಡ ಹಿರೇಮಠದ ಬಸವರಾಜಪ್ಪ, ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಎಚ್ ಎ. ಗದ್ದಿಗೇಶ್, ಪುರಸಭೆ ಮಾಜಿ ಸದಸ್ಯ ಹೊಸಕೇರಿ ಸುರೇಶ್, ಅನ್ನದಾನಯ್ಯ, ಪಂಚಾಕ್ಷರಯ್ಯ, ವೀರಣ್ಣ, ದಿಡಗೂರು ಪಾಲಾಕ್ಷಪ್ಪ, ವಾಸಪ್ಪ, ಕುಮಾರಸ್ವಾಮಿ, ದಾನಪ್ಪ ಹಾಗೂ ಇತರರು ಇದ್ದರು.ಶುಕ್ರವಾರದಿಂದ ಆರಂಭಗೊಂಡಿರುವ ರಾಜ್ಯಮಟ್ಟದ ಕೃಷಿ ಮೇಳದಲ್ಲಿ ಕೃಷಿ, ತೋಟಗಾರಿಕೆ ಆರಣ್ಯ, ಕೈಗಾರಿಕೆ ಇಲಾಖೆಗಳ ವತಿಯಿಂದ ರೈತರಿಗೆ ಅನೇಕ ಮಾಹಿತಿ ನೀಡುವ ಮಳಿಗೆಗಳನ್ನು ಹಾಕಲಾಗಿತ್ತು. ಶುಕ್ರವಾರ ಸಂಜೆ ಹಾಸ್ಯ ಕಲಾವಿದ ಪ್ರಾಣೇಶ ಅವರ ನಗೆಹಬ್ಬ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕಮಗಳು ಜನರನ್ನು ರಂಜಿಸಿದವು.
- - -* ಚಂದ್ರಸ್ಮರಣೆ ಕೃಷಿಮೇಳ: ಕೃಷಿಕ ಧ್ವಜಾರೋಹಣ ಮೂಲಕ ಚಾಲನೆ
- ಕಾಶಿಪೀಠ ಜಗದ್ಗುರು ಪುರಪ್ರವೇಶ । ಅದ್ಧೂರಿ ಅಡ್ಡಪಲ್ಲಕ್ಕಿ ಉತ್ಸವ- - -ಹೊನ್ನಾಳಿ: ಪಟ್ಟಣದ ಹಿರೇಕಲ್ಮಠದಲ್ಲಿ ಲಿಂಗೈಕ ಮೃತ್ಯುಂಜಯ ಶಿವಾಚಾರ್ಯ ಸ್ವಾಮೀಜಿಯವರ 56ನೇ ಪುಣ್ಯಾರಾಧನೆ, ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಯವರ 11ನೇ ಪುಣ್ಯ ಸ್ಮರಣೆಗಾಗಿ ಚಂದ್ರಸ್ಮರಣೆ- ಕೃಷಿ ವಿಕಾಸಕ್ಕಾಗಿ ತಂತ್ರಜ್ಞಾನ ಎಂಬ ಶೀರ್ಷಿಕೆಯಡಿ ಫೆ. 27ರಿಂದ 4 ದಿನಗಳ ಕಾಲ ಕೃಷಿ ಮೇಳ ಹಮ್ಮಿಕೊಳ್ಳಲಾಗಿದೆ.ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಲು ಕಾಶಿಪೀಠದ ಜ್ಞಾನ ಸಿಂಹಾಸನಾಧೀಶ್ವರರಾದ ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಭಗವತ್ಪಾದರು ಆಗಮಿಸಿದ್ದು, ಶುಕ್ರವಾರ ಬೆಳಗ್ಗೆ ಪುರಪ್ರವೇಶ ನಡೆಯಿತು. ಹೊನ್ನಾಳಿ ಸಂಗೊಳ್ಳಿ ರಾಯಣ್ಣ ವೃತ್ತಕ್ಕೆ ಶ್ರೀಗಳು ಆಗಮಿಸಿದಾಗ ಹೊನ್ನಾಳಿ ಹಿರೇಕಲ್ಮಠದ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಅವರೊಂದಿಗೆ ಸ್ವಾಗತಿಸಿ, ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಅನಂತರ ಸಹಸ್ರಾರು ಭಕ್ತರೊಂದಿಗ ಡೊಳ್ಳು, ವೀರಗಾಸೆ, ಭಜನೆ ಸೇರಿದಂತೆ ವಿವಿಧ ವಾದ್ಯಗಳೊಂದಿಗೆ ಅಡ್ಡಪಲ್ಲಕ್ಕಿ ಮಹೋತ್ಸವ ಮೂಲಕ ಹಿರೇಕಲ್ಮಠಕ್ಕೆ ಕರೆತರಲಾಯಿತು.
ಕೃಷಿ ಮೇಳದ ಮೊದಲ ದಿನವಾದ ಶುಕ್ರವಾರ ಬೆಳಗ್ಗೆ ಯೋಗ ಕಾರ್ಯಕ್ರಮ ನಡೆಯಿತು. ಚಂದ್ರಸ್ಮರಣೆ ಕೃಷಿಮೇಳ -2026ಕ್ಕೆ ಕೃಷಿಕ ಧ್ವಜಾರೋಹಣ ಮೂಲಕ ಚಾಲನೆ ನೀಡಲಾಯಿತು ಪ್ರವೇಶ ದ್ವಾರ ಉದ್ಘಾಟನೆಯನ್ನು ಶಾಸಕ ಡಿ.ಜಿ.ಶಾಂತನಗೌಡ, ಕೃಷಿ ಮಳಿಗೆಗೆ ಉದ್ಘಾಟನೆಯನ್ನು ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಬಿ. ಮಂಜಪ್ಪ ಹಾಗೂ ಫಲ-ಪುಪ್ಪ ಪ್ರದರ್ಶನವನ್ನು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಉದ್ಘಾಟಿಸಿದರು.ಕಾಶಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವದಲ್ಲಿ ಎಚ್.ಎ. ಉಮಾಪತಿ, ಶ್ರಿಮಠದ ಸದ್ಬಕ್ತ ಮಂಡಳಿ ಹಾಗೂ ರೈತ ಸಂಘದ ಪದಾಧಿಕಾರಿಗಳು, ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.- - --27ಎಚ್.ಎಲ್.ಐ1:
ಹೊನ್ನಾಳಿ ಹಿರೇಕಲ್ಮಠದಲ್ಲಿ 4 ದಿನಗಳ ಕಾಲ ನಡೆಯಲಿರುವ ಧಾರ್ಮಿಕ ಕಾರ್ಯಕ್ರಮ, ಕೃಷಿಮೇಳಕ್ಕೆ ಕಾಶಿ ಪೀಠದ ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಭಗವತ್ಪಾದರು ಆಗಮಿಸಿದಾಗ, ಅದ್ಧೂರಿ ಅಡ್ಡಪಲ್ಲಕ್ಕಿ ಉತ್ಸವ ನಡೆಸಲಾಯಿತು.- - -
-27ಎಚ್.ಎಲ್.ಐ3:ಹೊನ್ನಾಳಿ ಹಿರೇಕಲ್ಮಠದಲ್ಲಿ ಶುಕ್ರವಾರ ರಾಜ್ಯಮಟ್ಟದ ಕೃಷಿಮೇಳ ಕಾರ್ಯಕ್ರಮವನ್ನು ಕಾಶಿ ಜ್ಞಾನಪೀಠದ ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಮಹಾಸ್ವಾಮೀಜಿ ಉದ್ಘಾಟಿಸಿದರು. ವಿವಿಧ ಮಠಾಧೀಶರು, ಗಣ್ಯರು ಇದ್ದರು.