ಕಾಂಗ್ರೆಸ್‌ನಲ್ಲಿ ನಾಯಕರ ಮಕ್ಕಳಿಗೆ ಮಾತ್ರ ಅವಕಾಶ: ಭಗವಂತ ಖೂಬಾ

| Published : Mar 24 2024, 01:31 AM IST

ಸಾರಾಂಶ

ಕಾರ್ಯಕರ್ತರ ಪಕ್ಷ ಬಿಜೆಪಿ, ಕುಟುಂಬದವರ ಪಕ್ಷ ಕಾಂಗ್ರೆಸ್‌. ರಾಜ್ಯದಲ್ಲಿರುವ ಕಾಂಗ್ರೆಸ್‌ ಸರ್ಕಾರದ ಆಡಳಿತಕ್ಕೆ ಸ್ವತಃ ಕಾಂಗ್ರೆಸ್‌ ಶಾಸಕರೇ ಬೇಸತ್ತಿದ್ದಾರೆ. ನಮ್ಮ ಜಿಲ್ಲೆಗಂತೂ ಒಂದು ನಯಾ ಪೈಸೆ ಅನುದಾನ ರಾಜ್ಯದಿಂದ ಕಳೆದ 9 ತಿಂಗಳಲ್ಲಿ ಬಂದಿಲ್ಲ, ಅಭಿವೃದ್ಧಿ ಶೂನ್ಯವಾಗಿದೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಹೇಳಿದರು.

ಕನ್ನಡಪ್ರಭ ವಾರ್ತೆ ಬೀದರ್‌

ಕಾರ್ಯಕರ್ತರ ಪಕ್ಷ ನಮ್ಮದು, ಕುಟುಂಬದವರ ಪಕ್ಷ ಕಾಂಗ್ರೆಸ್ಸಿನವರದು, ನಮ್ಮಲ್ಲಿ ಕಾರ್ಯಕರ್ತರು ನಾಯಕರಾಗುತ್ತಾರೆ, ಆದರೆ ಕಾಂಗ್ರೆಸ್‌ನಲ್ಲಿ ನಾಯಕರ ಮಕ್ಕಳು ಮಾತ್ರ ಬೆಳೆಯುತ್ತಾರೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಆರೋಪಿಸಿದರು.

ಬಸವಕಲ್ಯಾಣ ನಗರದಲ್ಲಿ ವಿವಿಧ ದೇವಸ್ಥಾನಗಳಿಗೆ ಕೇಂದ್ರ ಸಚಿವ ಭಗವಂತ ಖೂಬಾ ಹಾಗೂ ಬಿಜೆಪಿ ಪಕ್ಷದ ಮುಖಂಡರು ಸೇರಿ ತೆರಳಿ ದರ್ಶನಾಶೀರ್ವಾದ ಪಡೆದು ಬಳಿಕ ಬಸವೇಶ್ವರ ದೇವಸ್ಥಾನ ಹಾಗೂ ಗೌರ ಗ್ರಾಮದ ಬಿರೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಬೀರೇಶ್ವರ ಸ್ವಾಮೀಜಿಯವರ ದರ್ಶನಾಶೀರ್ವಾದ ಪಡೆದುಕೊಂಡರು. ಅಲ್ಲಿಂದ ಪುರುಷಕಟ್ಟೆಗೆ ತೆರಳಿ ದರ್ಶನವನ್ನು ಪಡೆದರು. ನಂತರ ಬಿಜೆಪಿ ಕಾರ್ಯಾಲಯದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿರುವ ಕಾಂಗ್ರೆಸ್‌ ಸರ್ಕಾರದ ಆಡಳಿತಕ್ಕೆ ಸ್ವತಃ ಕಾಂಗ್ರೆಸ್‌ ಶಾಸಕರೇ ಬೇಸತ್ತಿದ್ದಾರೆ. ನಮ್ಮ ಜಿಲ್ಲೆಗಂತೂ ಒಂದು ನಯಾ ಪೈಸೆ ಅನುದಾನ ರಾಜ್ಯದಿಂದ ಕಳೆದ 9 ತಿಂಗಳಲ್ಲಿ ಬಂದಿಲ್ಲ, ಅಭಿವೃದ್ಧಿ ಶೂನ್ಯವಾಗಿದೆ ಎಂದರು. ಬೀದರ್‌ನಿಂದ ಮತ್ತೊಮ್ಮೆ ಬಿಜೆಪಿ ಗೆಲ್ಲಿಸಬೇಕೆಂದು ಕೋರಿದರು.

ಸ್ಥಳಿಯ ಶಾಸಕ ಶರಣು ಸಲಗರ ಮಾತನಾಡಿ, ಕಳೆದ ಸಲದಂತೆ ಈ ಬಾರಿಯೂ ನಮ್ಮ ಪಕ್ಷಕ್ಕೆ ಬಸವಕಲ್ಯಾಣದಿಂದ ಅತೀ ಹೆಚ್ಚಿನ ಲೀಡ್‌ ಕೊಡುತ್ತೇವೆ. ನಮ್ಮ ಬಸವಕಲ್ಯಾಣದ ಜನರು ಎಂದಿಗೂ ಪ್ರಬುದ್ಧರು, ಅಭಿವೃದ್ಧಿ ಪರ, ದೇಶದ ರಕ್ಷಣೆ ಮಾಡುವವರ ಪರ ನಿಲ್ಲುತ್ತಾರೆ ಎಂದರು.

ಬಸವೇಶ್ವರ ದೇವಸ್ಥಾನದ ಪಂಚಕಮಿಟಿ ಅಧ್ಯಕ್ಷರಾದ ಬಸವರಾಜ ಕೊರಕೆ, ಸೋಮಶೇಖರ ವಸ್ತ್ರದ, ಅಶೋಕ ಶಿಂಧೆ, ಸುಭಾಷ ಹೊಳ್ಕುಂದೆ ಮತ್ತಿತರರ ಮನೆಗೆ ಭೇಟಿ ನೀಡಿ, ಹತ್ತು ವರ್ಷಗಳ ಸಾಧನೆಗಳನ್ನು ತಿಳಿಸಿ ಮತ್ತೊಮ್ಮೆ ಬೆಂಬಲಿಸುವಂತೆ ಕೋರಿದರು.

ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್‌, ಮರಾಠಾ ನಿಗಮದ ಮಾಜಿ ಅಧ್ಯಕ್ಷ ಎಂಜಿ ಮೂಳೆ, ಮಂಡಲ ಅಧ್ಯಕ್ಷ ಅಶೋಕ ವಕಾರೆ, ಕುಶಾಲರಾವ್‌ ಪಾಟೀಲ್‌ ಗಾದಗಿ ಮತ್ತಿತರರು ಇದ್ದರು.