ಸಾರಾಂಶ
ಕನ್ನಡಪ್ರಭ ವಾರ್ತೆ ಬೀದರ್
ಬಿರು ಬಿಸಿಲು. ಎಂದಿನಂತಿಲ್ಲ ಬೀದರ್ ಬಿಸಿಲು. ಕೆಂಡವುಗುಳುವ ಕಲಬುರಗಿ, ರಾಯಚೂರು ಹಾಗೂ ಯಾದಗಿರಿಯನ್ನು ಬೆನ್ನಟ್ಟಿದಂತೆ ಬೀದರ್ ಜಿಲ್ಲೆಯೂ ಬಿಸಿಲು 42 ಡಿಗ್ರಿ ಸೆಲ್ಸಿಯಸ್ ತಲುಪಿದೆ. ಇಂಥ ಬಿಸಿಲಲ್ಲಿ ಲೋಕಸಭಾ ಚುನಾವಣೆಯ ಕಾವು ಮತ್ತೊಂದೆಡೆ. ಬಿಸಿಲಿನ ಕಾವಿಗೆ ಬಸವಳಿದಿದ್ದಾರೆ ನಮ್ಮ ಬೀದರ್ ಜನ ನಾಯಕರು, ಅವರೊಟ್ಟಿಗೆ ಕಾರ್ಯಕರ್ತರೂ ಹೀಗೇಯೇ ಇಲ್ಲಿ ಚುನಾವಣಾ ಕಾವಿನೊಂದಿಗೆ ಬೇಸಿಗೆ ಬಿಸಿಲು ಕೂಡ ದಿನೇ ದಿನೇ ಹೆಚ್ಚಾಗುತ್ತಿದೆ. ಸದ್ಯ ಜಿಲ್ಲೆಯಲ್ಲಿ ಎರಡು ರಾಷ್ಟ್ರೀಯ ಪಕ್ಷದ ಘೋಷಿತ ಅಭ್ಯರ್ಥಿಗಳು ತಮ್ಮ ಪ್ರಚಾರ ಕಾರ್ಯವನ್ನು ಈಗಾಗಲೇ ಆರಂಭಿಸಿದ್ದಾರೆ.ಬಿಸಿಲಿನ ಝಳ ಬೆಳಗ್ಗೆ 10 ಆಗುತ್ತಿದ್ದಂತೆ ನೆತ್ತಿಗೇರುತ್ತಿದ್ದು, ಬೆವರು ಸುರಿಯಲಾರಂಭಿಸೋದು ಸಹಜವಾಗಿದೆ. ಬೇಸಿಗೆ ಬಿಸಿಲು ಹೆಚ್ಚಾಗಿದ್ದರಿಂದ ಘೋಷಿತ ಅಭ್ಯರ್ಥಿಗಳು, ಮುಖಂಡರು ಹಾಗೂ ಬೆಂಬಲಿಗರು ಮತ ಯಾಚನೆಗೆ ಬೆಳ್ಳಂಬೆಳಿಗ್ಗೆ ಹಾಗೂ ಸಂಜೆ ಸಮಯ ನಿಗದಿ ಮಾಡಿದ್ದಾರೆ. ಇದು ಆರೋಗ್ಯಕ್ಕೂ ಉತ್ತಮ.
ಬಿರುಬಿಸಿಲಿನಲ್ಲಿ ಮನೆ ಮನೆ ಮತಯಾಚನೆ ಅನಿವಾರ್ಯವಾಗಿದ್ದು ಬಿಸಿಲಿನ ಧಗೆಯಲ್ಲಿ ಸಂಚರಿಸೋದು ಕಷ್ಟ ಅಲ್ಲದೆ ಈ ಸಮಯದಲ್ಲಿ ಮತದಾರರು ಕೂಡ ಅಭ್ಯರ್ಥಿಗಳ ಕೈಗೆ ಸಿಗುತ್ತಾರೆ ಎಂಬ ಉದ್ದೇಶದಿಂದ ಕ್ಷೇತ್ರದಲ್ಲಿ ಓಡಾಟ ಬೆಳಗ್ಗೆ ಕೆಲ ಗಂಟೆ ಮತ್ತು ಸಂಪೂರ್ಣ ಸಂಜೆಯ ಸಮಯವನ್ನು ಬಳಸಿಕೊಳ್ಳುತ್ತಿದ್ದಾರೆ.ಮೂರ್ನಾಲ್ಕು ದಿನಗಳ ಹಿಂದೆ ಬೀದರ್ ಜಿಲ್ಲೆಯಲ್ಲಿ 42 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದರಿಂದ ಆರೋಗ್ಯ ಇಲಾಖೆ ಹಾಗೂ ಜಿಲ್ಲಾಡಳಿತ ಜನರಿಗೆ ಎಚ್ಚರಿಕೆ ವಹಿಸಲು ಮನವಿ ಮಾಡಿತ್ತು ಹವಾಮಾನ ಇಲಾಖೆ ಕೂಡ ಮುನ್ಸೂಚನೆ ನೀಡಿದೆ. ಹೀಗಾಗಿ ಘೋಷಿತ ಅಭ್ಯರ್ಥಿಗಳೊಂದಿಗೆ ಪ್ರಚಾರದ ಸಮಯದಲ್ಲಿ ಹೆಚ್ಚಿನ ಬೆಂಬಲಿಗರು ಕಾಣದೇ ಇರುವುದು ಇದಕ್ಕೆ ಕಾರಣವೇನೋ.
ಕಾಂಗ್ರೆಸ್ ಘೋಷಿತ ಅಭ್ಯರ್ಥಿ ಸಾಗರ ಖಂಡ್ರೆ ಹಾಗೂ ಬಿಜೆಪಿಯ ಘೋಷಿತ ಅಭ್ಯರ್ಥಿ ಭಗವಂತ ಖೂಬಾ ಅವರು ಮಧ್ಯಾಹ್ನದ ಸಮಯದಲ್ಲಿ ಮನೆ ಮನೆ ಮತಯಾಚನೆಗೆ ಬ್ರೇಕ್ ಹಾಕಿ ಸಂಜೆ ವೇಳೆ ತನ್ನ ಪ್ರಚಾರ ಮುಂದುವರೆಸಿದ್ದಾರಷ್ಟೇ ಅಲ್ಲ ಈ ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ ಈ ಚುನಾವಣೆಯಲ್ಲಿ ಮತದಾರರು ಹಾಗೂ ಅಭ್ಯರ್ಥಿಗಳಿಗೆ ಬಿಸಿಲಿನ ಧಗೆ ಎದುರಿಸುವುದು ಅನಿವಾರ್ಯವಾದಂತಾಗಿದೆ.ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಮಧ್ಯಾಹ್ನದ ಹೊತ್ತಿನಲ್ಲಿ ವೇದಿಕೆ ಕಾರ್ಯಕ್ರಮಗಳನ್ನೇನೂ ಬಿಟ್ಟಿಲ್ಲ. ಆದರೆ ಅಲ್ಲಿಗೆ ತೆರಳಲು ಹವಾ ನಿಯಂತ್ರಿತ ಕಾರುಗಳೇ ಬೇಕಿವೆ. ಇದು ಅಭ್ಯರ್ಥಿ ಮುಖಂಡರಷ್ಟೇ ಅಲ್ಲ ಕಾರ್ಯಕರ್ತರ ಬೇಡಿಕೆಯೂ ಆಗಿದ್ದು, ಪಕ್ಷ ಅದಕ್ಕೆ ವ್ಯವಸ್ಥೆ ಮಾಡಲೇಬೇಕಾದ ಅನಿವಾರ್ಯತೆ ಇದೆ. ಒಟ್ಟಾರೆ ಬಿಸಿಲಿನ ಝಳಕ್ಕೆ ನಮ್ಮ ಬೀದರ್ ಜಿಲ್ಲೆಯ ಜನರೊಂದಿಗೆ ನಾಯಕರೂ ಬಸವಳಿದಿದ್ದಾರೆ, ಚುನಾವಣಾ ಪ್ರಚಾರ ಅನಿವಾರ್ಯ.