ಕಾಲ್ನಡಿಗೆಯಲ್ಲಿ ಸಂಸದ ಕೋಟ ಹೆದ್ದಾರಿ ಪ್ರಗತಿ ಪರಿಶೀಲನೆ

| Published : Mar 04 2025, 12:31 AM IST

ಸಾರಾಂಶ

ರಾಷ್ಟ್ರೀಯ ಹೆದ್ದಾರಿ 169ಎ ಇದರ ಮಲ್ಪೆ- ಆಗುಂಬೆ ಚತುಷ್ಪಥ ಕಾಮಗಾರಿ ಕಳೆದ ಕೆಲವು ಸಮಯದಿಂದ ಪ್ರಗತಿಯಲ್ಲಿದೆ. ಈ ರಸ್ತೆಯಲ್ಲಿ ಅಲ್ಲಲ್ಲಿ ಭೂಸ್ವಾದೀನ ಪ್ರಕ್ರಿಯೆಗಳಿಗೆ ಕೆಲವೊಂದು ಕಾರಣಗಳಿಂದ ತಡೆ ಬಿದ್ದಿದೆ. ಈ ಹಿನ್ನೆಲೆಯಲ್ಲಿ ಸಂಸದ ಕೋಟ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು.

ಮಲ್ಪೆ- ಆಗುಂಬೆ ಚತುಷ್ಪಥ ಕಾಮಗಾರಿ । 4 ಕಿ.ಮೀ. ಕಾಲ್ನಡಿಗೆ ಮೂಲಕ ವೀಕ್ಷಿಸಿದ ಸಂಸದ

ಕನ್ನಡಪ್ರಭ ವಾರ್ತೆ ಮಲ್ಪೆ

ವಿಪರೀತ ಸುಡುಬಿಸಿಲಿನ ನಡುವೆ ಸೋಮವಾರ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಮಲ್ಪೆಯಿಂದ ಕರಾವಳಿ ಬೈಪಾಸ್‌ ವರೆಗೆ ಸುಮಾರು 4 ಕಿ.ಮೀ. ಕಾಲ್ನಡಿಗೆ ಮೂಲಕ ಇಲ್ಲಿನ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಪ್ರಕ್ರಿಯೆಗಳನ್ನು ವೀಕ್ಷಿಸಿದರು.ರಾಷ್ಟ್ರೀಯ ಹೆದ್ದಾರಿ 169ಎ ಇದರ ಮಲ್ಪೆ- ಆಗುಂಬೆ ಚತುಷ್ಪಥ ಕಾಮಗಾರಿ ಕಳೆದ ಕೆಲವು ಸಮಯದಿಂದ ಪ್ರಗತಿಯಲ್ಲಿದೆ. ಈ ರಸ್ತೆಯಲ್ಲಿ ಅಲ್ಲಲ್ಲಿ ಭೂಸ್ವಾದೀನ ಪ್ರಕ್ರಿಯೆಗಳಿಗೆ ಕೆಲವೊಂದು ಕಾರಣಗಳಿಂದ ತಡೆ ಬಿದ್ದಿದೆ. ಈ ಹಿನ್ನೆಲೆಯಲ್ಲಿ ಸಂಸದ ಕೋಟ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು.

ಈ ಪರಿಸರದಲ್ಲಿ ಪ್ರತಿ ಸೆಂಟ್ಸ್‌ಗೆ 7 ರಿಂದ 8 ಲಕ್ಷ ರು. ವರೆಗೆ ಬೆಲೆ ಇದೆ. ಆದರೆ ಸರಕಾರ ನಿಗದಿ ಪಡಿಸಿದ 1 ಲಕ್ಷ ರು. ಪರಿಹಾರವನ್ನು ಹೇಗೆ ಪಡೆದುಕೊಳ್ಳುವುದು ಎಂದು ಸಂತ್ರಸ್ತ ಭೂ ಮಾಲಕರು ತಮ್ಮ ಅಸಮಾಧಾನ ವ್ಯಕ್ತಪಡಿಸಿ, ಗರಿಷ್ಠ ಪರಿಹಾರ ದೊರಕಿಸಿಕೊಡಬೇಕು ಆಗ್ರಹಿಸಿದರು.ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದರು, ಭೂಮಿಗೆ ಪರಿಹಾರ ದರ ಹೆಚ್ಚಿಸುವ ಬಗ್ಗೆ ಜಿಲ್ಲಾಧಿಕಾರಿಯವರ ಮೂಲಕ ಸರ್ಕಾರಕ್ಕೆ ಮೇಲ್ಮನವಿ ಸಲ್ಲಿಸಿ, ಹೆಚ್ಚಿನ ಪರಿಹಾರ ದೊರಕಿಸಿಕೊಡಲು ನಾನು ಮತ್ತು ಶಾಸಕ ಯಶ್ಪಾಲ್ ಸುವರ್ಣ ಪ್ರಯತ್ನಿಸುತ್ತೇವೆ. ಇದಕ್ಕೆ ಶೇ.99 ಭೂ ಮಾಲೀಕರು ಒಪ್ಪಿಕೊಂಡಿದ್ದಾರೆ ಎಂದರು.ಮಲ್ಪೆಯಿಂದ ಕರಾವಳಿ ಬೈಪಾಸ್ ವರೆಗೆ 227 ಭೂಸ್ವಾಧೀನ ಪ್ರಕರಣಗಳಲ್ಲಿ, 133 ಪ್ರಕರಣಗಳಿಗೆ ಪರಿಹಾರ ನೀಡಲಾಗಿದೆ. 25 ಪ್ರಕರಣಗಳಿಗೆ ಶುಕ್ರವಾರದೊಳಗೆ ಪರಿಹಾರ ನೀಡಲಾಗುವುದು. ಸುಮಾರು 40 ಪ್ರಕರಣಗಳು ಮಹಜರು ನಡೆಸಲಾಗಿದ್ದು, ನೋಟಿಸ್ ನೀಡುವ ಪ್ರಕ್ರಿಯೆ ನಡೆಯಲಿದೆ ಎಂದು ಹೇಳಿದರು.ಮಾ.4ರಂದು ಮಲ್ಪೆಯ ಮೊಗವೀರ ಸಭಾಭವನದಿಂದ ಕಲ್ಮಾಡಿ ವರೆಗೆ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡ ಕಡೆಗಳಲ್ಲಿ ಕಾಮಗಾರಿಯನ್ನು ಪ್ರಾರಂಭಿಸುವಂತೆ ಗುತ್ತಿಗೆದಾರರು ಹಾಗೂ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಎಲ್ಲಿಯಾದರೂ ಸಮಸ್ಯೆ ಉಂಟಾದಲ್ಲಿ ಕಾನೂನು ಪ್ರಕಾರ ನಿರ್ವಹಿಸುವಂತೆ ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದರು.ಈ ಸಂದರ್ಭ ನಗರಸಭೆ ಅಧ್ಯಕ್ಷ ಪ್ರಭಾಕರ್ ಪೂಜಾರಿ, ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಕುಂದಾಪುರ ಉಪವಿಭಾಗಧಿಕಾರಿ ಮಹೇಶ್ಚಂದ್ರ, ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಎಂಜಿನಿಯರ್, ಗುತ್ತಿಗೆದಾರ, ಪೋಲಿಸ್ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.---------

ಸಂಸದರ ಶ್ರಮಕ್ಕೆ ಪ್ರಶಂಸೆಮಲ್ಪೆಯಿಂದ ಪ್ರಗತಿ ಪರಿಶೀಲನೆ ಮಾಡುತ್ತಾ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ಸಂಸದರನ್ನು ಬಸ್‌, ಕಾರುಗಳಲ್ಲಿ ಪ್ರಯಾಣಿಸುತ್ತಿದ್ದವರು ದೂರದಿಂದಲೇ ಅವರ ಶ್ರಮವನ್ನು ಪೋಟೋ ಕ್ಲಿಕ್ಕಿಸುವ ಮೂಲಕ ಪ್ರಶಂಸಿದರು.