ಸಾರಾಂಶ
ಜಿಲ್ಲಾ ಮಟ್ಟದ ಉನ್ನತ ಅಧಿಕಾರಿಗಳ ಸಭೆಯಲ್ಲಿ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಿದ ಟೈಲರಿಂಗ್, ಗಾರೆ ಕೆಲಸ ಮತ್ತು ಮರಗೆಲಸದ ಫಲಾನುಭವಿಗಳಿಗೆ ಸಾಲ ಮಂಜೂರಾತಿ ನೀಡಬೇಕೆಂದು ಸಂಸದ ಕೋಟ ಸಲಹೆ ನೀಡಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಜಿಲ್ಲೆಯಲ್ಲಿ ೪,೯೪೨ ಕೇಂದ್ರ ಸರ್ಕಾರದ ಫಲಾನುಭವಿಗಳಿಗೆ ವಿವಿಧ ತರಬೇತಿ ಸಂಸ್ಥೆಗಳಿಂದ ತರಬೇತಿ ಒದಗಿಸುತ್ತಿದ್ದು, ಸುಮಾರು ೨,೫೦೦ ಕ್ಕೂ ಮಿಕ್ಕಿ ಮಂದಿಗೆ ತಲಾ ೧ ಲಕ್ಷದಂತೆ ಸಾಲ ಸೌಲಭ್ಯ ಒದಗಿಸಲಾಗಿದೆ. ಸುಮಾರು ೨೫ ಕೋಟಿ ರೂ. ಮೊತ್ತ ವಿತರಣೆ ಮಾಡಲಾಗಿದ್ದು, ಸಂಬಂಧಿಸಿದ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗಿದೆ ಎಂದು ಬ್ಯಾಂಕಿಂಗ್ ಮತ್ತು ಕೌಶಲಾಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ಕಚೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಉನ್ನತ ಅಧಿಕಾರಿಗಳ ಸಭೆಯಲ್ಲಿ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಿದ ಟೈಲರಿಂಗ್, ಗಾರೆ ಕೆಲಸ ಮತ್ತು ಮರಗೆಲಸದ ಫಲಾನುಭವಿಗಳಿಗೆ ಸಾಲ ಮಂಜೂರಾತಿ ನೀಡಬೇಕೆಂದು ಸಂಸದ ಕೋಟ ಸಲಹೆ ನೀಡಿದರು.
೧೮ ಸಾಂಪ್ರಾದಾಯಿಕ ಕುಲಕಸುಬುಗಳ ವೃತ್ತಿನಿರತರಿಗೆ ಉತ್ತೇಜನ ನೀಡಿ, ಉಚಿತವಾಗಿ ತರಬೇತಿ ಒದಗಿಸಿ ಸಾಲ ಸೌಲಭ್ಯ ಒದಗಿಸುವ ಯೋಜನೆಯಾದ ವಿಶ್ವಕರ್ಮ ಯೋಜನೆಗೆ ಕೇಂದ್ರ ಸರ್ಕಾರ ೧೩,೦೦೦ ಕೋಟಿ ಮೊತ್ತದ ಭದ್ರತೆ ಒದಗಿಸಿದ್ದು, ವಿವಿಧ ಸಾಂಪ್ರದಾಯಿಕ ಕುಲಕಸುಬುಗಳ ವೃತ್ತಿನಿರತರಿಗೆ ಉತ್ತಮ ಗುಣಮಟ್ಟದ ೧೫,೦೦೦ ರು. ವೆಚ್ಚದ ಕಿಟ್‌ಗಳನ್ನು ಉಚಿತವಾಗಿ ಒದಗಿಸಲಾಗುವುದು. ಕುಶಲಕರ್ಮಿಗಳಿಗೆ ನೀಡುವ ಕಿಟ್‌ಗಳ ಗುಣಮಟ್ಟ ಮತ್ತು ಫಲಾನುಭವಿಗಳಿಗೆ ಒದಗಿಸುವ ಸಲಕರಣೆಯ ಬಗ್ಗೆ ಅಂತಿಮ ತೀರ್ಮಾನ ಕೇಂದ್ರ ಸರ್ಕಾರ ಕೈಗೊಂಡಿದ್ದು, ಸದ್ಯದಲ್ಲಿಯೇ ಸಾಮಾಗ್ರಿಗಳ ಟೆಂಡರ್ ಅವಧಿ ಕೊನೆಗೊಳ್ಳುತ್ತಿದ್ದು, ಆ ಹಿನ್ನೆಲೆಯಲ್ಲಿ ಕಿಟ್‌ಗಳ ವಿತರಣೆಯನ್ನು ಕಾಯದೇ ತರಬೇತಿ ಮತ್ತು ಸಾಲ ಸೌಲಭ್ಯಕ್ಕೆ ವೇಗ ಕೊಡಲು ಅಧಿಕಾರಿಗಳಿಗೆ ಕೋಟ ತಾಕೀತು ಮಾಡಿದರು.ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಶ್ರೀ ಶ್ರೀನಿವಾಸ ರಾವ್, ಕೈಗಾರಿಕಾ ವಿಸ್ತರಣಾಧಿಕಾರಿ ಸೀತರಾಮ ಶೆಟ್ಟಿ, ಕೈಗಾರಿಕಾ ಜಂಟಿ ನಿರ್ದೇಶಕ ನಾಗರಾಜ ನಾಯ್ಕ್, ವಿಶ್ವಕರ್ಮ ಯೋಜನೆಯ ನೋಡಲ್ ಅಧಿಕಾರಿಯಾದ ಅರುಣ್, ವಿಶ್ವಕರ್ಮ ಯೋಜನೆಯ ತಾಂತ್ರಿಕ ಸಹಾಯಕಿಯಾದ ಸಂಧ್ಯಾ ಮತ್ತು ಲೀಡ್ ಬ್ಯಾಂಕ್ ಮ್ಯಾನೇಜರ್ ಹರೀಶ್ ಇದ್ದರು.