ಸಾರಾಂಶ
ಸಾಮಾನ್ಯ ಪ್ರವೇಶ ಪರೀಕ್ಷೆ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಯಜ್ಞೋಪವೀತವನ್ನು ತೆಗೆದು ಪರೀಕ್ಷಾ ಕೊಠಡಿಗೆ ಪ್ರವೇಶಿಸಲು ಸೂಚಿಸಿದ ಘಟನೆಯನ್ನು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತೀವ್ರವಾಗಿ ಖಂಡಿಸಿದ್ದಾರೆ.
ಶಿರಸಿ: ಇತ್ತೀಚೆಗೆ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಯಜ್ಞೋಪವೀತವನ್ನು ತೆಗೆದು ಪರೀಕ್ಷಾ ಕೊಠಡಿಗೆ ಪ್ರವೇಶಿಸಲು ಸೂಚಿಸಿದ ಘಟನೆಯನ್ನು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತೀವ್ರವಾಗಿ ಖಂಡಿಸಿದ್ದಾರೆ.
ಶನಿವಾರ ಈ ಕುರಿತು ಪ್ರಕಟಣೆ ನೀಡಿದ ಅವರು, ಭಾರತದ ಸಂವಿಧಾನವು ನಮ್ಮ ಸನಾತನ ಧರ್ಮಕ್ಕೆ ನೀಡಿರುವ ಮೂಲಭೂತ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಯಜ್ಞೋಪವೀತವು ಸನಾತನ ಧರ್ಮದಲ್ಲಿ ಒಂದು ಮಹತ್ವದ ಸಂಕೇತವಾಗಿದೆ. ಅನೇಕ ಹಿಂದೂಗಳು ಇದನ್ನು ತಮ್ಮ ಧಾರ್ಮಿಕ ಆಚರಣೆಗಳ ಅವಿಭಾಜ್ಯ ಅಂಗವಾಗಿ ಮತ್ತು ಬ್ರಾಹ್ಮಣ ಸಮುದಾಯದ ಪವಿತ್ರ ಸಂಕೇತವಾಗಿ ಪರಿಗಣಿಸುತ್ತಾರೆ. ಪರೀಕ್ಷಾ ಕೇಂದ್ರಗಳಲ್ಲಿ ಇದನ್ನು ತೆಗೆಯಲು ಒತ್ತಾಯಿಸುವುದು ಅಕ್ಷಮ್ಯ ಮತ್ತು ಧಾರ್ಮಿಕ ನಂಬಿಕೆಗಳಿಗೆ ಮಾಡಿದ ಘೋರ ಅಪಮಾನವಾಗಿದೆ. ಈ ವಿಷಯವನ್ನು ರಾಜ್ಯ ಸರ್ಕಾರವು ಗಂಭೀರವಾಗಿ ಪರಿಗಣಿಸಬೇಕು. ಅಸಮರ್ಪಕ ವರ್ತನೆ ತೋರಿದ ಪರೀಕ್ಷಾ ಕೇಂದ್ರದ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರವು ಕಠಿಣ ಮತ್ತು ನಿರ್ದಿಷ್ಟ ಮಾರ್ಗಸೂಚಿಗಳನ್ನು ರೂಪಿಸಬೇಕು ಎಂದು ಒತ್ತಾಯಿಸಿದ್ದಾರೆ.ಯಜ್ಞೋಪವೀತವನ್ನು ತೆಗೆಯಲು ಸೂಚಿಸಿದ್ದರಿಂದ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದ ವಿದ್ಯಾರ್ಥಿಗೆ ಮರು ಪರೀಕ್ಷೆಯನ್ನು ನಡೆಸಲು ಸೂಕ್ತ ವ್ಯವಸ್ಥೆ ಮಾಡಬೇಕು. ಇತ್ತೀಚಿನ ದಿನಗಳಲ್ಲಿ ಹಿಂದೂ ಧರ್ಮದ ಸನಾತನ ಸಂಸ್ಕೃತಿಗೆ ಧಕ್ಕೆ ತರುವಂತಹ ಘಟನೆಗಳು ಹೆಚ್ಚುತ್ತಿರುವುದು ವಿಷಾದನೀಯ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಇಂತಹ ತಪ್ಪುಗಳನ್ನು ಎಸಗುವ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸುವ ಮೂಲಕ ತನ್ನ ಆಡಳಿತವು ಸನಾತನ ಧರ್ಮಕ್ಕೂ ಸಮಾನ ಗೌರವ ನೀಡುತ್ತದೆ ಮತ್ತು ಸನಾತನ ಧರ್ಮದ ಮೌಲ್ಯಗಳನ್ನು ಎತ್ತಿಹಿಡಿಯಲು ಬದ್ಧವಾಗಿದೆ ಎಂಬುದನ್ನು ಸ್ಪಷ್ಟಪಡಿಸಬೇಕೆಂದು ಆಗ್ರಹಿಸಿದ್ದಾರೆ.