ಕುಡಿಯುವ ನೀರಿನ ಪೂರೈಕೆಗೆ ಆದ್ಯತೆ ನೀಡಬೇಕು

| Published : Jan 07 2025, 12:15 AM IST

ಸಾರಾಂಶ

ಜನರಿಗೆ ಇಲಾಖಾವಾರು ಯೋಜನೆಗಳನ್ನು ಜಾರಿಗೊಳಿಸಲು ಸ್ಥಳೀಯ ಶಾಸಕರು, ಸಂಸದರ ಸಮ್ಮುಖದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸರ್ಕಾರದ ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿ ನೀಡಬೇಕು. ರೈತರಿಗೆ ಸಾಕಷ್ಟು ಪ್ರಮಾಣದ ಬೀಜಗಳು ಮತ್ತು ರಸಗೊಬ್ಬರಗಳು ಲಭ್ಯವಿರಬೇಕು. ಕಳಪೆ ಬೀಜ ವಿತರಿಸಿದರೆ ಕ್ರಮ ಕೈಗೊಳ್ಳಲಾಗುವುದು.

ಕನ್ನಡಪ್ರಭ ವಾರ್ತೆ ಕೋಲಾರಬಡವರ ಅಭಿವೃದ್ಧಿಗಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಸಹಯೋಗದಲ್ಲಿ ನಾನಾ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ಅಧಿಕಾರಿಗಳು ಯೋಜನೆಗಳ ಸ್ಪಷ್ಟತೆ ಅರಿತು ಕಾರ್ಯೋನ್ಮುಖರಾಗಿ ಯೋಜನೆಗಳ ಲಾಭವನ್ನು ಅರ್ಹರಿಗೆ ತಲುಪಿಸಲು ಮುಂದಾಗಬೇಕು ಎಂದು ಸಂಸದ ಎಂ.ಮಲ್ಲೇಶ್ ಬಾಬು ಅಭಿಪ್ರಾಯಪಟ್ಟರು.ನಗರದ ಜಿಪಂ ಸಭಾಂಗಣದಲ್ಲಿ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ (ದಿಶಾ) ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ನೀಡಿರುವ ಅನುದಾನದ ಮಾಹಿತಿ ಜನಸಾಮಾನ್ಯರಿಗೆ ತಿಳಿಯಪಡಿಸಬೇಕು. ಅಂತಹ ಯೋಜನೆಗಳ ಸಂಪೂರ್ಣ ಲಾಭವನ್ನು ಜಿಲ್ಲೆಯ ಜನತೆ ಪಡೆಯಬೇಕು ಎಂದರು.

ಯೋಜನೆಗಳ ಮಾಹಿತಿ ನೀಡಿ

ಜನರಿಗೆ ಇಲಾಖಾವಾರು ಯೋಜನೆಗಳನ್ನು ಜಾರಿಗೊಳಿಸಲು ಸ್ಥಳೀಯ ಶಾಸಕರು, ಸಂಸದರ ಸಮ್ಮುಖದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸರ್ಕಾರದ ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿ ನೀಡಬೇಕು. ರೈತರಿಗೆ ಸಾಕಷ್ಟು ಪ್ರಮಾಣದ ಬೀಜಗಳು ಮತ್ತು ರಸಗೊಬ್ಬರಗಳು ಲಭ್ಯವಿರಬೇಕು. ಕಡಿಮೆ ಗುಣಮಟ್ಟದ ಬೀಜಗಳು ಮತ್ತು ರಸಗೊಬ್ಬರದ ಮಾರಾಟ ಪ್ರಕರಣಗಳ ವರದಿ ಬಂದರೆ, ಕಠಿಣವಾಗಿ ಕ್ರಮ ತೆಗೆದುಕೊಳ್ಳಲಾಗುವುದು ಎ₹ದರು. ಜಿಲ್ಲೆಯಲ್ಲಿ ಬಾಲ್ಯ ವಿವಾಹ ಪ್ರಕರಣಗಳು ಮರು ಕಳುಹಿಸದಂತೆ ಶಾಲಾ-ಕಾಲೇಜುಗಳಲ್ಲಿ ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸುವ ಯೋಜನೆ ರೂಪಿಸಲು ಸಂಸದರು ಪ್ರಸ್ಥಾಪಿಸಿದರು. ಈ ಕುರಿತು ವಿಶೇಷ ಉಪನ್ಯಾಸಗಳನ್ನು ಆಯೋಜಿಸಲು ಸೂಚಿಸಿದರು. ನೀರಿನ ಪೂರೈಕೆಗೆ ಆದ್ಯತೆಕುಡಿಯುವ ನೀರಿನ ಸೌಲಭ್ಯವು ಮೂಲಭೂತ ಸೌಲಭ್ಯಗಳಲ್ಲಿ ಒಂದಾಗಿದ್ದು, ಈಗಾಗಲೇ ಜಿಲ್ಲೆಯಲ್ಲಿ ಕುಡಿಯುವ ನೀರಿನ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ನೋಡಿಕೊಳ್ಳಬೇಕು. ಬಡವರಿಗೆ ಶಾಶ್ವತವಾಗಿ ನೀರು ಒದಗಿಸುವ ಯೋಜನೆ ಜಲಜೀವನ ಮಿಷನ್ (ಜೆಜೆಎಂ) ಯೋಜನೆಯಾಗಿದ್ದು, ಈ ಯೋಜನೆಯ ಈಗಾಗಲೇ ಅನುಷ್ಠಾನವಾಗಿದ್ದರೂ ಸಹಿತ ಮನೆ ಮನೆಗೆ ನೀರು ಸಮರ್ಪಕವಾಗಿ ಸರಬರಾಜಾಗುತ್ತಿಯೋ ಇಲ್ಲವೋ ಎನ್ನುವುದರ ಪರಿಶೀಲನೆ ಮಾಡಬೇಕು ಎಂದರು.ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್ ಮಾತನಾಡಿ, ಜೆಜೆಎಂ ಯೋಜನೆಯಡಿ ಸಮರ್ಪಕ ನೀರು ಸರಬರಾಜಿನ ಕುರಿತು ಪರಿಶೀಲನೆ ನಡೆಸಬೇಕು. ಪೈಪ್ ಒಡೆದು ನೀರು ಪೋಲಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ಕೆ.ಸಿ ವ್ಯಾಲಿ ನೀರನ್ನು ಹೊಸಕೋಟೆಗೆ ಹರಿಸಲಾಗುತ್ತಿದೆ. ಕೋಲಾರ ಜನತೆಗೆ ನೀರು ಒದಗಿಸಲು ಸಾಧ್ಯವಾಗುತ್ತಿಲ್ಲ. ನಗರದ ಅಮಾನಿ ಕೆರೆಯನ್ನು ಸಿಎಸ್‌ಆರ್ ನಿಧಿಯಿಂದ ಸುಂದರಿಕರಣ ಮಾಡಲಾಗುತ್ತಿದೆ, ಆದರೆ ಮತ್ತೆ ಆ ಸ್ಥಳದಲ್ಲಿ ಜೋನ್ದು ಹುಲ್ಲು ಬೆಳೆಯುತ್ತಿದೆ. ಅದನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸಲು ಕ್ರಮ ವಹಿಸಬೇಕು ಎಂದರು.ಸಿ.ಎಸ್.ಆರ್ ನಿಧಿ ಸದ್ಬಳಕೆಯಾಗಲಿ

ಸಿ.ಎಸ್.ಆರ್ ನಿಧಿ ಸದ್ಭಳಕೆ ಕುರಿತು ಎಲ್ಲಾ ಶಾಸಕರನ್ನು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ, ತೀರ್ಮಾನವನ್ನು ಕೈಗೊಳ್ಳಬೇಕು ಎಂದು ಮುಳಬಾಗಿಲು ಶಾಸಕರಾದ ಸಮೃದ್ಧಿ ಮಂಜುನಾಥ್ ಅವರು ತಿಳಿಸಿದರು. ಚನ್ನೈ-ಬೆಂಗಳೂರು ಎಕ್ಸ್‌ಪ್ರೆಸ್ ಕಾರಿಡಾರ್ ಕಾರ್ಯಪ್ರಗತಿಯಲ್ಲಿದ್ದಾಗ ಹೆಚ್ಚು ಲೋಡ್‌ವುಳ್ಳ ವಾಹನಗಳನ್ನು ಬಳಕೆ ಮಾಡಿದ್ದರಿಂದ, ಇತರೆ ರಸ್ತೆಗಳು ಹಾಳಾಗಿವೆ. ಇದನ್ನು ರಾಷ್ಟ್ರೀಯ ಹೆದ್ಧಾರಿಗಳ ಪ್ರಾಧಿಕಾರದಿಂದ ಪುರ್ನನಿರ್ಮಿಸಿಕೊಡಬೇಕು ಎಂದು ಸಂಸದರು ಚನ್ನೈ-ಬೆಂಗಳೂರು ಎಕ್ಸ್‌ಪ್ರೆಸ್ ಯೋಜನೆಯ ಯೋಜನಾ ನಿರ್ದೇಶಕರಿಗೆ ಸೂಚಿಸಿದರು. ಈ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಅಧಿಕಾರಿಗಳಿಗೆ ತಿಳಿಸಿದರು. ಸಭೆಯಲ್ಲಿ ಎಂಎಲ್ಸಿ ಇಂಚರ ಗೋವಿಂದರಾಜು, ಶ್ರೀನಿವಾಸಪುರ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ, ಜಿಲ್ಲಾಧಿಕಾರಿ ಎಂ.ಆರ್.ರವಿ, ಜಿಲ್ಲಾ ರಕ್ಷಣಾಧಿಕಾರಿ ಬಿ.ನಿಖಿಲ್, ಕೆ.ಜಿ.ಎಫ್ ಎಸ್‌ಪಿ ಶಾಂತರಾಜು, ಉಪ ಅರಣ್ಯ ಸಂರಕ್ಷಾಣಾಧಿಕಾರಿ ಸರಿನ ಸಿಕ್ಕಲಿಗಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ನಾರಾಯಣಸ್ವಾಮಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಿ.ಶ್ರೀನಿವಾಸ್, ಜಿಪಂ ಯೋಜನಾ ನಿರ್ದೇಶಕಿ ಸುಮಾ ಇದ್ದರು.