ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ವಿಶೇಷವಾಗಿ ಸರ್ವಿಸ್ ರಸ್ತೆ ಕಾಮಗಾರಿ ಪೂರ್ಣಗೊಳಿಸುವುದಕ್ಕೆ ಆದ್ಯತೆ ನೀಡಲಾಗಿದೆ. ಹಾಸನಾಂಬಾ ಜಾತ್ರೆ ಅಕ್ಟೋಬರ್‌ ೨೯ರಿಂದ ಆರಂಭವಾಗಲಿರುವ ಹಿನ್ನೆಲೆಯಲ್ಲಿ, ಅದಕ್ಕೂ ಮುನ್ನ ಸರ್ವಿಸ್ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಉಳಿದಿರುವ ಸಣ್ಣಪುಟ್ಟ ಸಂಪರ್ಕ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸುವ ಭರವಸೆಯನ್ನು ಗುತ್ತಿಗೆದಾರರು ನೀಡಿದ್ದಾರೆ ಎಂದು ವಿಶ್ವಾಸ ವ್ಯ ಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ನಗರ ಹಾಗೂ ಹೊಸ ಬಸ್‌ ನಿಲ್ದಾಣವನ್ನು ಸಂರ್ಕಿಸುವ ಮೇಲ್ಸೇತುವೆ ಕಾಮಗಾರಿಯ ಪ್ರಗತಿಯನ್ನು ಪರಿಶೀಲಿಸಲಾಗಿದ್ದು, ಹಾಸನಾಂಬಾ ಜಾತ್ರೋತ್ಸವದ ಆರಂಭಕ್ಕೂ ಮುನ್ನ ಸಂಚಾರಕ್ಕೆ ಅಗತ್ಯವಿರುವ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ ಎಂದು ಸಂಸದ ಶ್ರೇಯಸ್‌ ಎಂ. ಪಟೇಲ್ ತಿಳಿಸಿದರು.

ನಗರದ ಎನ್.ಆರ್. ವೃತ್ತದಿಂದ ಜಿಲ್ಲಾ ನ್ಯಾಯಾಲಯದವರೆಗೂ ನಡೆಯುತ್ತಿರುವ ಮೇತ್ಸೇತುವೆ ಕಾಮಗಾರಿಯನ್ನು ಸೋಮವಾರ ವೀಕ್ಷಣೆ ಮಾಡಿದ ನಂತರ ಮಾಧ್ಯಮದೊಂದಿಗೆ ಮಾತನಾಡಿ, ಉಳಿದಿರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪರಿಶೀಲಿಸಲಾಗಿದೆ. ಕಾಮಗಾರಿಗಳ ಪ್ರಮಾಣ ದೊಡ್ಡದಾಗಿರುವ ಹಿನ್ನೆಲೆಯಲ್ಲಿ ಕೆಲವು ತಾಂತ್ರಿಕ ಕಾರಣಗಳಿಂದ ವಿಳಂಬವಾಗಿದೆ. ಆದರೂ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ವಿಶೇಷವಾಗಿ ಸರ್ವಿಸ್ ರಸ್ತೆ ಕಾಮಗಾರಿ ಪೂರ್ಣಗೊಳಿಸುವುದಕ್ಕೆ ಆದ್ಯತೆ ನೀಡಲಾಗಿದೆ. ಹಾಸನಾಂಬಾ ಜಾತ್ರೆ ಅಕ್ಟೋಬರ್‌ ೨೯ರಿಂದ ಆರಂಭವಾಗಲಿರುವ ಹಿನ್ನೆಲೆಯಲ್ಲಿ, ಅದಕ್ಕೂ ಮುನ್ನ ಸರ್ವಿಸ್ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಉಳಿದಿರುವ ಸಣ್ಣಪುಟ್ಟ ಸಂಪರ್ಕ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸುವ ಭರವಸೆಯನ್ನು ಗುತ್ತಿಗೆದಾರರು ನೀಡಿದ್ದಾರೆ ಎಂದು ವಿಶ್ವಾಸ ವ್ಯ ಕ್ತಪಡಿಸಿದರು.

ಕಾಮಗಾರಿಗೆ ಅಗತ್ಯವಿರುವ ಬಿಟುಮಿನ್ ಸೇರಿದಂತೆ ಕೆಲವು ನಿರ್ಮಾಣ ಸಾಮಗ್ರಿಗಳ ಲಭ್ಯತೆಯಲ್ಲಿ ಸಮಸ್ಯೆ ಎದುರಾಗಿರುವುದರಿಂದ ವಿಳಂಬವಾಗಿದೆ ಎಂದು ಗುತ್ತಿಗೆದಾರರು ತಿಳಿಸಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ಸಾರ್ವಜನಿಕರಿಗೆ ಅನಗತ್ಯ ತೊಂದರೆಯಾಗದಂತೆ ಕಾಮಗಾರಿಯನ್ನು ಚುರುಕುಗೊಳಿಸುವಂತೆ ಸೂಚಿಸಲಾಗಿದೆ. ಮೇಲ್ಸೇತುವೆ ಹಾಗೂ ರೈಲ್ವೆ ಕ್ರಾಸಿಂಗ್‌ಗೆ ಸಂಬಂಧಿಸಿದ ತಾಂತ್ರಿಕ ಕಾಮಗಾರಿಗಳನ್ನೂ ಪರಿಶೀಲಿಸಲಾಗಿದ್ದು, ಸುರಕ್ಷತಾ ಮಾನದಂಡಗಳನ್ನು ಸಂಪೂರ್ಣವಾಗಿ ಖಚಿತಪಡಿಸಿಕೊಂಡ ಬಳಿಕವೇ ಸಂಚಾರಕ್ಕೆ ಮುಕ್ತಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ರೈಲ್ವೆ ಕ್ರಾಸಿಂಗ್ ಭಾಗದಲ್ಲಿ ಅಗತ್ಯ ಕಾಮಗಾರಿಗಳು ನಡೆಯುತ್ತಿದ್ದು, ಅಕ್ಟೋಬರ್‌ ಅಂತ್ಯದೊಳಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.

ಮೇಲ್ಸೇತುವೆಯಲ್ಲಿ ವಾಹನಗಳು ಸಂಚರಿಸುವಾಗ ಕಂಪನ ಉಂಟಾಗುತ್ತಿರುವ ಕುರಿತು ಸಾರ್ವಜನಿಕರಿಂದ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ, ತಾಂತ್ರಿಕವಾಗಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಮೇಲ್ಸೇತುವೆಯ ವಿನ್ಯಾಸದಲ್ಲಿ ಅಳವಡಿಸಿರುವ ಕೆಲವು ತಾಂತ್ರಿಕ ವ್ಯವಸ್ಥೆಗಳ ಕಾರಣದಿಂದ ಹೀಗಾಗುವ ಸಾಧ್ಯತೆಯಿದ್ದರೂ, ಸಾರ್ವಜನಿಕರ ಸುರಕ್ಷತೆಗೆ ಯಾವುದೇ ರಾಜಿಯಾಗದಂತೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ, ಕೆಲವು ಕಾಮಗಾರಿಗಳಿಗೆ ಸಂಬಂಧಿಸಿದ ಭೂಸ್ವಾಧೀನ ಹಾಗೂ ನ್ಯಾಯಾಲಯದ ತಡೆಯಾಜ್ಞೆ ಪ್ರಕರಣಗಳೂ ಪ್ರಗತಿಗೆ ಅಡ್ಡಿಯಾಗಿವೆ. ಸಂಬಂಧಿಸಿದ ಪ್ರಕರಣಗಳನ್ನು ಕಾನೂನುಬದ್ಧವಾಗಿ ಬಗೆಹರಿಸಿ ಕಾಮಗಾರಿ ಮುಂದುವರಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದರು.

ನಗರದ ಚನ್ನಪಟ್ಟಣ ವೃತ್ತದ ಬೊಮ್ಮನಾಯಕನಹಳ್ಳಿ ಭಾಗದಲ್ಲಿ ಅಂಡರ್‌ಪಾಸ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸ್ಥಳ ಪರಿಶೀಲನೆ ನಡೆಸಿ, ಕಾಮಗಾರಿಯ ಕಾರ್ಯಸಾಧ್ಯತೆಯನ್ನು ಪರಿಶೀಲಿಸುವಂತೆ ಅಧಿಕಾರಿಗಳಿಗೆ ಈಗಾಗಲೇ ಸೂಚಿಸಲಾಗಿದೆ. ಸಾರ್ವಜನಿಕರ ಬೇಡಿಕೆಯನ್ನು ಪರಿಗಣಿಸಿ, ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಹಾಗೂ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಯೋಜನೆಗೆ ಅನುಮೋದನೆ ಪಡೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸಾಲ ಮನ್ನಾಕ್ಕೆ ಕೇಂದ್ರದ ಸಹಕಾರ ಅಗತ್ಯ:ರೈತರ ಸಾಲಮನ್ನಾ ಮಾಡಬೇಕೆಂಬುದು ರಾಜ್ಯದ ಬೇಡಿಕೆಯಾಗಿದ್ದು, ಈ ವಿಚಾರದಲ್ಲಿ ಕೇಂದ್ರ ಸರ್ಕಾರವೂ ರಾಜ್ಯದೊಂದಿಗೆ ಕೈಜೋಡಿಸಿ ಅಗತ್ಯ ಸಹಕಾರ ನೀಡಬೇಕು. ಹಿಂದಿನ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸಾಲಮನ್ನಾ ಮಾಡಲಾಗಿತ್ತು. ಆ ಸರ್ಕಾರದಲ್ಲಿ ನಮ್ಮ ಪಕ್ಷದ ಸುಮಾರು ೮೦ ಶಾಸಕರು ಭಾಗಿಯಾಗಿದ್ದರು. ನಮ್ಮ ಪಕ್ಷದ ಸಹಭಾಗಿತ್ವ ಹಾಗೂ ಬೆಂಬಲದೊಂದಿಗೆ ಕೈಗೊಂಡ ನಿರ್ಧಾರ ಅದಾಗಿತ್ತು. ಅದನ್ನು ಯಾರೂ ಮರೆತುಕೊಳ್ಳಬಾರದು. ಸಾಲಮನ್ನಾ ವಿಚಾರದಲ್ಲಿ ರಾಜ್ಯ ಸರ್ಕಾರವೊಂದೇ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರವೂ ಸಹಕಾರ ನೀಡಬೇಕು. ಕೇಂದ್ರದ ಸಹಕಾರ ದೊರೆತರೆ ಸಾಲಮನ್ನಾಕ್ಕೆ ಸಂಬಂಧಿಸಿದಂತೆ ಎಲ್ಲರೂ ಒಟ್ಟಾಗಿ ಕೆಲಸ ಮಾಡಲು ಸಿದ್ಧರಿದ್ದೇವೆ ಎಂದು ತಿಳಿಸಿದರು.

ಇದೇ ವೇಳೆ ಗ್ಯಾರಂಟಿ ಯೋಜನೆ ಜಿಲ್ಲಾಧ್ಯಕ್ಷ ರಂಜಿತ್ ಗೊರೂರು, ಮುಖಂಡರಾದ ದೇವರಾಜೇಗೌಡ, ಬನವಾಸೆ ರಂಗಸ್ವಾಮಿ, ಚಂದ್ರಶೇಖರ್‌, ರವಿಕುಮಾರ್‌, ರವೀಶ್ ಬಸವಪುರ, ಪ್ರಕಾಶ್ ಇತರರು ಇದ್ದರು.

----------

ಫೋಟೋ:

ಎನ್.ಆರ್. ವೃತ್ತದಿಂದ ಜಿಲ್ಲಾ ನ್ಯಾಯಾಲಯದವರೆಗೂ ನಡೆಯುತ್ತಿರುವ ಮೇತ್ಸೇತುವೆ ಕಾಮಗಾರಿಯನ್ನು ಸಂಸದ ಶ್ರೇಯಸ್‌ ಪಟೇಲ್‌ ಸೋಮವಾರ ವೀಕ್ಷಣೆ ಮಾಡಿದರು.