ಸಂಸದ ಪ್ರಜ್ವಲ್ ರೇವಣ್ಣ ವಿಡಿಯೋ ಹೇಳಿಕೆ ಸ್ವಾಗತಾರ್ಹ

| Published : May 28 2024, 01:16 AM IST / Updated: May 28 2024, 07:32 AM IST

Parameshwar

ಸಾರಾಂಶ

ಮೇ 31 ರಂದು ಬೆಳಿಗ್ಗೆ 10 ಗಂಟೆಗೆ ಎಸ್ಐಟಿ ಮುಂದೆ ಹಾಜರಾಗಿ ಸಹಕಾರ ನೀಡುವುದಾಗಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಜ್ಞಾತ ಸ್ಥಳದಿಂದ ಹರಿಬಿಟ್ಟಿರುವ ವಿಡಿಯೋ ಹೇಳಿಕೆಯನ್ನು ಸ್ವಾಗತಿಸುವುದಾಗಿ ಗೃಹ ಸಚಿವ ಪರಮೇಶ್ವರ್ ಹೇಳಿದರು.

 ತುಮಕೂರು :  ಮೇ 31 ರಂದು ಬೆಳಿಗ್ಗೆ 10 ಗಂಟೆಗೆ ಎಸ್ಐಟಿ ಮುಂದೆ ಹಾಜರಾಗಿ ಸಹಕಾರ ನೀಡುವುದಾಗಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಜ್ಞಾತ ಸ್ಥಳದಿಂದ ಹರಿಬಿಟ್ಟಿರುವ ವಿಡಿಯೋ ಹೇಳಿಕೆಯನ್ನು ಸ್ವಾಗತಿಸುವುದಾಗಿ ಗೃಹ ಸಚಿವ ಪರಮೇಶ್ವರ್ ಹೇಳಿದರು.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕರ್ನಾಟಕದ ಇತಿಹಾಸದಲ್ಲಿ ಇಂತಹ ಘಟನೆ ನಡೆದಿರಲಿಲ್ಲ. ಇಡೀ ಜಗತ್ತೇ ಮಾತನಾಡುವ ಹೊತ್ತಲ್ಲಿ ಅವರನ್ನು ಕರೆತರುವ ಪ್ರಯತ್ನ ಎಲ್ಲ ರೀತಿಯಲ್ಲೂ ನಡೆಯುತ್ತಿತ್ತು. ಪ್ರಧಾನ ಮಂತ್ರಿಗಳಿಗೆ, ಮುಖ್ಯಮಂತ್ರಿಗಳು ಎರಡು ಬಾರಿ ಪತ್ರ ಬರೆದಿದ್ದರು ಎಂದರು.ಇಂಟರ್ ಪೋಲ್‌ಗೂ ಕೂಡ ಮನವಿ ಮಾಡಿದ್ವಿ. ಅಲ್ಲದೇ ಬ್ಲೂ ಕಾರ್ನರ್ ನೋಟಿಸ್ ಕೂಡಾ ಇಶ್ಯೂ ಮಾಡಲಾಗಿತ್ತು. ಆ ಪ್ರಕ್ರಿಯೆ ಕೂಡಾ ನಡೆಯುತ್ತಿತ್ತು. ಪ್ರಜ್ವಲ್ ರೇವಣ್ಣ ಅವರ ಡಿಪ್ಲೋಮೆಟಿಕ್ ಪಾಸ್ ಪೋರ್ಟ್ ರದ್ದು ಮಾಡಿ ಅವರನ್ನು ಕರೆತರುವುದಕ್ಕೆ ಕೇಂದ್ರ ಸರ್ಕಾರ ಸಹಾಯ ಮಾಡಬೇಕು ಅಂತ ಕೂಡ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ಪಾಸ್ ಪೋರ್ಟ್ ರದ್ದು ಪ್ರಕ್ರಿಯೆ ಪ್ರಾರಂಭ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿತ್ತು. ಈ ಮಧ್ಯದಲ್ಲಿ ಪ್ರಜ್ವಲ್‌ ಬರ್ತಿವಿ ಅಂತ ಹೇಳಿರುವುದನ್ನು ನಾವು ಸ್ವಾಗತ ಮಾಡುತ್ತೇವೆ. ಎಸ್‌ಐಟಿ ಬಳಿ ಇರುವ ಸಾಕ್ಷಿ ಆಧಾರದ ಮೇಲೆ ತನಿಖೆ ಮುಂದುವರಿಯುತ್ತದೆ ಎಂದರು.

ಕೇಂದ್ರ ಸರ್ಕಾರ ಮೇಲೆ ಗೂಬೆ ಕೂರಿಸಿದ ಪರಮೇಶ್ವರ್: ಪ್ರಜ್ವಲ್ ರೇವಣ್ಣ ಕೇಸ್‌ನಲ್ಲಿ ಕೇಂದ್ರ ಸರ್ಕಾರ ನಮಗೆ ಸಹಕಾರ ಕೊಡಲಿಲ್ಲ. ಡಿಪ್ಲೊಮ್ಯಾಟಿಕ್ ಪಾಸ್ ಪೋರ್ಟ್ ಕ್ಯಾನ್ಸಲ್ ಮಾಡುತ್ತೇವೆ ಅಂತ ಹೇಳಿದ್ದರು ಅಷ್ಟೇ. ವಿದೇಶಾಂಗ ಸಚಿವರು ಇನ್ನು ಮಾಡಿರಲಿಲ್ಲ. ನಮ್ಮ ಪತ್ರಗಳಿಗೆ ಇನ್ನು ಯಾವುದೇ ಉತ್ತರ ಬಂದಿಲ್ಲ ಎಂದರೆ ಅವರು ಏನು ಮಾಡಿಲ್ಲ ಅಂತಾ ಅರ್ಥ ಎಂದು ಪರಮೇಶ್ವರ್ ಹೇಳಿದರು.ನಾನು ವಿಡಿಯೋ ನೋಡಿರಲಿಲ್ಲ‌. ನನಗೆ ಎರಡು ಗಂಟೆ ಮುಂಚೆ ಸುದ್ದಿ ಬಂತು. ಈ ರೀತಿಯಾಗಿ ಅವರು ಹೇಳಿಕೆ ಕೊಟ್ಟಿದ್ದಾರೆ ಅಂತ. ನಾನು ಬೇರೊಂದು ಕೆಲಸಕ್ಕೆ ಬಂದಿದ್ದೆ. ಹಾಗಾಗಿ ವಿಡಿಯೋ ನೋಡಿರಲಿಲ್ಲ. ಈಗ ವಿಡಿಯೋ ನೋಡಿದಾಗ ಕನ್ಫರ್ಮ್ ಆಗಿದೆ. ಅವರು ಏನಾದರೂ ಹೇಳಿಕೊಳ್ಳಲಿ. ಅವರು ಹೇಳಿದಕ್ಕೆ ನಾನು ಉತ್ತರ ಕೊಡುವುದಕ್ಕೆ ಹೋಗುವುದಿಲ್ಲ‌. ಎಸ್‌ಐಟಿ ಮುಂದೆ ಹಾಜರಾಗಿದ ಮೇಲೆ ಅದೇನ್ ಆಗಬೇಕೋ ಆಗುತ್ತೆ ಎಂದರು.

ಅಜ್ಞಾತ ಸ್ಥಳದಿಂದ ವಿಡಿಯೋ ಮಾಡಿ ಕಳುಹಿಸುವ ಮೂಲದ ಬಗ್ಗೆ ನಮಗೆ ನಿಮಗೆ ಆ ಮಾಹಿತಿ ಗೊತ್ತಿರುವುದಿಲ್ಲ. ಎಸ್ಐಟಿ ಅವರಿಗೆ ಗೊತ್ತಿರುತ್ತದೆ. ಅವರನ್ನು ಯಾವ ರೀತಿ ಕಸ್ಟಡಿಗೆ ತಗೋಬೇಕು. ಯಾವ ರೀತಿಯಾಗಿ ಕಾನೂನಿನ ಚೌಕಟ್ಟಿಗೆ ತರಬೇಕು ಅಂತ ಅವರು ನಿರ್ಧರಿಸುತ್ತಾರೆ ಎಂದು ಹೇಳಿದರು.ಪ್ರಜ್ವಲ್ ರೇವಣ್ಣ ನನ್ನದೇನು ತಪ್ಪಿಲ್ಲ ಎಂಬ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಎಲ್ಲರೂ ಹಾಗೆ ಹೇಳ್ತಾರೆ. ತಪ್ಪಿಲ್ಲ ಅಂದರೆ ಮಾಡಿರೋರು ಯಾರು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಎಸ್‌ಐಟಿ ಅವರು ಎಲ್ಲಾ ಮಾಹಿತಿ ಕಲೆಹಾಕುತ್ತಾರೆ. ಮಾಹಿತಿ ಆಧಾರದ ಮೇಲೆ ಯಾರದ್ದು ತಪ್ಪು, ಯಾರದ್ದು ತಪ್ಪಿಲ್ಲ ಅಂತ ಆ ಆಧಾರದ ಮೇಲೆ ಹೇಳುತ್ತಾರೆ ಎಂದರು.

31 ಕ್ಕೂ ಬಂದಿಲ್ಲ ಅಂದರೆ ಮುಂದೆ ಏನಾಗುತ್ತೆ ನೋಡೋಣ. ಬೆಳಗ್ಗೆಯಿಂದ ತಮ್ಮ ಒಡೆತನದ ಸಿದ್ದಾರ್ಥ ಸಂಸ್ಥೆಯ ಖಾಸಗಿ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿದ್ದ ಪರಮೇಶ್ವರ್ ಮಾಧ್ಯಮದವರ ಮೊಬೈಲ್ ಪಡೆದು ಪ್ರಜ್ವಲ್ ರೇವಣ್ಣ ಮಾತನಾಡಿರುವ ವಿಡಿಯೋ ವೀಕ್ಷಿಸಿದರು.