ಸಾರಾಂಶ
ಧಾರವಾಡ:
ಸಂಸದ ಪ್ರಜ್ವಲ್ ರೇವಣ್ಣನಂತವರು ಸಾವಿರಾರು ಮಹಿಳೆಯರ ಬದುಕು ಕಸೆದುಕೊಂಡರೂ ವಿಜೃಂಬಿಸುತ್ತಿದ್ದಾರೆ ಎಂದು ವಿಮೋಚನಾ ಸಂಸ್ಥೆಯ ಬಿ.ಎಲ್. ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.ಹೋರಾಟದ ನಡಿಗೆ ಹಾಸನದ ಕಡೆಗೆ ಅಭಿಯಾನದ ಭಾಗವಾಗಿ ಇಲ್ಲಿಯ ಪ್ರಗತಿಪರ ಸಂಘಟನೆಗಳ ಒಕ್ಕೂಟವು ಸಂಘಟಿಸಿದ ಮೌನ ಪ್ರತಿಭಟನೆಯ ಜಾಥಾಕ್ಕೆ ಮಂಗಳವಾರ ಚಾಲನೆ ನೀಡಿದ ಅವರು, ದೇಶದಲ್ಲಿ ಮಹಿಳೆಯರಿಗೆ, ಹೆಣ್ಣು ಮಕ್ಕಳಿಗೆ ಬೆಲೆ ಇಲ್ಲದ ರೀತಿಯಲ್ಲಿ ಸಮಾಜ, ಸರ್ಕಾರ ನಡೆದುಕೊಳ್ಳುತ್ತಿದೆ.
ರಾಜ್ಯದಲ್ಲಿ 2019ರಲ್ಲಿ 12 ಲಕ್ಷ ಮಕ್ಕಳ ವೇಶ್ಯಾವಾಟಿಕೆಯ ಪ್ರಕರಣಗಳಿದ್ದರೂ ಕೇವಲ 529 ಪ್ರಕರಣ ಮಾತ್ರ ಸರ್ಕಾರಿ ಕಡತದಲ್ಲಿ ದಾಖಲಾಗಿವೆ. ಇದು ಸರ್ಕಾರದ ಧೋರಣೆ ತಿಳಿಸುತ್ತದೆ. ದೇಶದ ಅಂಕಿ-ಸಂಖ್ಯೆ ತೆಗೆದುಕೊಂಡರೆ ಪ್ರತಿ ಗಂಟೆಗೆ ಮೂವರು ಮಕ್ಕಳ ಮೇಲೆ ಅತ್ಯಾಚಾರ, ಪ್ರತಿ ಗಂಟೆಗೆ ಐದು ಮಕ್ಕಳ ಮೇಲೆ ಲೈಂಗಿಕ ದಾಳಿ ನಡೆಯುತ್ತಲೇ ಇವೆ. ಸರ್ಕಾರ, ಸಮಾಜ, ನ್ಯಾಯದಾನ ಪದ್ಧತಿಯಲ್ಲಿಯೂ ಮಹಿಳೆ ನಲಗುತ್ತಿರುವುದನ್ನು ನೋಡಿದರೆ ದೇಶವನ್ನು ಎತ್ತ ಕೊಂಡೊಯುತ್ತಿದ್ದೇವೆ ಎಂಬ ಆತಂಕ ಕಾಡುತ್ತದೆ ಎಂದರು.ಕನ್ನಡ ವಿವಿ ವಿಶ್ರಾಂತ ಕುಲಪತಿ ಪ್ರೊ. ಮಲ್ಲಿಕಾ ಘಂಟಿ ಮಾತನಾಡಿ ಒಬ್ಬ ವಿಕೃತ ಕಾಮಿಯೊಬ್ಬನಿಂದ ದೇಶದ ಮುಂದೆ ಕರ್ನಾಟಕ ತಲೆತಗ್ಗಿಸುವಂತಾಗಿದೆ. ಹಾಸನ ಜಿಲ್ಲೆಯ ಮಹಿಳೆಯರು ಆತ್ಮಸ್ಥೈರ್ಯ ಕಳೆದುಕೊಂಡು ನಲುಗುತ್ತಿದ್ದಾರೆ. ಅವರಿಗೆ ಆತ್ಮಸ್ಥೈರ್ಯ ತುಂಬುವ ಕಾರ್ಯ ಸರ್ಕಾರ, ಸಮಾಜದಿಂದ ತುರ್ತಾಗಿ ಆಗಬೇಕಿದೆ. ಸಂತ್ರಸ್ತ ಮಹಿಳೆಯರಿಗೆ ರಕ್ಷಣೆ ಸಿಗಬೇಕು. ದೇಶದಲ್ಲಿ ಮಹಿಳೆಯ ಘನತೆ, ಗೌರವ ನೀಡುವ ಮತ್ತು ರಕ್ಷಿಸುವ ಕಾರ್ಯದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಎಡವಿದ್ದಾವೆ ಎಂದು ದೂರಿದರು.
ಹಿರಿಯ ಕವಿಯತ್ರಿ ಪ್ರೊ. ಮಾಲತಿ ಪಟ್ಟಣಶೆಟ್ಟಿ ಮಾತನಾಡಿ, ಯುವಕರು ಪ್ರೀತಿ-ಪ್ರೇಮವನ್ನು ಕಾಮವನ್ನಾಗಿ ನೋಡದೇ ಅದೊಂದು ಪವಿತ್ರವಾದ ಬಂಧ ಎಂದು ತಿಳಿದೊಂಡಿದ್ದರೆ ನೇಹಾ ಹಿರೇಮಠ, ಅಂಜಲಿ ಅಂಬಿಗೇರ ಬಲಿಯಾಗುತ್ತಿರಲಿಲ್ಲ. ದೇಶದ ಭವಿಷ್ಯ ಯುವಕರ ಕೈಯಲ್ಲಿದೆ. ಈ ದೇಶದಲ್ಲಿ ಮಹಿಳೆ ಸುರಕ್ಷಿತವಲ್ಲ ಎಂಬ ಭಾವನೆ ಬರುತ್ತಿರುವುದು ಈ ದೇಶದ ದುರಂತವೇ ಸರಿ ಎಂದು ಅಭಿಪ್ರಾಯ ಪಟ್ಟರು.ಕಿಟಲ್, ವಿಜ್ಞಾನ, ಕಲಾ ಕಾಲೇಜುಗಳು, ಹುರಕಡ್ಲಿ ಅಜ್ಜ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳು, ಮಹಿಳಾ ಸಂಘಟನೆಗಳ ಪ್ರಮುಖರು, ವಕೀಲರು, ಪ್ರಗತಿಪರ ಸಂಘಟನೆಗಳ ಮುಖ್ಯಸ್ಥರು ಜಾಥಾದಲ್ಲಿ ಭಾಗವಹಿಸಿದ್ದರು. ಮೌನವಾಗಿ ಕಲಾಭವನದಿಂದ ಕೈಯಲ್ಲಿ ಪ್ಲೇಕಾರ್ಡ್ ಹಿಡಿದುಕೊಂಡು ಸುಭಾಸ ರಸ್ತೆ ಮೂಲಕ ನಡೆದು, ವಿವೇಕಾನಂದ ಸರ್ಕಲ್ ಸುತ್ತಿ ಜುಬ್ಲಿ ಸರ್ಕಲ್‌ಗೆ ಬಂದು ಕೆಲಕಾಲ ಸರ್ಕಲ್ ಸುತ್ತುವರಿದು ರಸ್ತೆ ಬಂದ್ ಮಾಡಿದರು.